ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಲಾಭವನ್ನು ಪಡೆಯುತ್ತಿರುವ ರೈತರಿಗೆ ಸಿಹಿಸುದ್ದಿ ಒಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಇಕೆವೈಸಿ ಮಾಡಿಕೊಳ್ಳದವರಿಗೆ ಇನ್ನೂ ಕೊಂಚ ಸಮಯಾವಾಕಾಶವಿದೆ. ಹೌದು ಕೆವೈಸಿ ಗಡುವನ್ನು ಸರ್ಕಾರವು ಮತ್ತೆ ವಿಸ್ತರಣೆ ಮಾಡಿದೆ.
ಈ ಹಿಂದೆ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಅನ್ನು ಪೂರ್ಣಗೊಳಿಸುವ ಗಡುವನ್ನು ಜುಲೈ 31, 2022ರವರೆಗೆ ವಿಸ್ತರಣೆ ಮಾಡಲಾಗಿತ್ತು. ಅದಕ್ಕೂ ಮೊದಲು ಗಡುವನ್ನು ಮೇ 31, 2022 ಕ್ಕೆ ನಿಗದಿಪಡಿಸಲಾಗಿತ್ತು. ಈಗ ಹಲವಾರು ರೈತರು ಇನ್ನೂ ಕೂಡಾ ಇಕೆವೈಸಿ ಮಾಡಿಸಿಕೊಳ್ಳದ ಕಾರಣದಿಂದಾಗಿ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಅಡಿಯಲ್ಲಿ 11 ನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು 12ನೇ ಕಂತು ಇನ್ನು ಕೊಂಚ ದಿನಗಳಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳಿನ ಒಳಗೆ ಪಿಎಂ ಇಕೆವೈಸಿ ಕಂತು ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮೊದಲೇ ನೀವು ಇಕೆವೈಸಿ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ಖಾತೆಗೆ ಹಣ ಜಮೆ ಆಗದೆ ಇರಬಹುದು. ಏನಿದು ಯೋಜನೆ, ಇಕೆವೈಸಿ ಹೇಗೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಏನಿದು ಕಿಸಾನ್ ಯೋಜನೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2018ರಲ್ಲಿ ಪ್ರಧಾನಿ ಮೋದಿಯವರು ಪ್ರಾರಂಭಿಸಿದರು. ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿಯೋಗ್ಯ ಭೂಮಿಯೊಂದಿಗೆ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಯೋಜನೆಯಡಿಯಲ್ಲಿ, ಪ್ರತಿ ವರ್ಷಕ್ಕೆ ರೂ 6000 ಮೊತ್ತವನ್ನು ಮೂರು ನಾಲ್ಕು ಮಾಸಿಕ ಕಂತುಗಳಲ್ಲಿ ತಲಾ ರೂ 2000 ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ, ಪಿಎಂ ಕಿಸಾನ್ ಕಂತು ಮೂರು ಬಾರಿ ಲಭಿಸುತ್ತದೆ. ಅವಧಿ 1 ರಿಂದ ಏಪ್ರಿಲ್-ಜುಲೈ; ಅವಧಿ 2 ಆಗಸ್ಟ್ ನಿಂದ ನವೆಂಬರ್‌ವರೆಗೆ; ಮತ್ತು ಅವಧಿ 3 ಡಿಸೆಂಬರ್ ನಿಂದ ಮಾರ್ಚ್‌ವರೆಗೆ ಆಗಿರುತ್ತದೆ.
ಇಕೆವೈಸಿ ಹೇಗೆ ಮಾಡುವುದು?
* ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ
* ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
* ಫಾರ್ಮರ್ಸ್ ಕಾರ್ನರ್‌ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
* ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ
* ಆಧಾರ್ Ekyc ಯ ಪುಟ ತೆರೆಯಲಿದೆ
* ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
* ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
* ಬಳಿಕ search ಬಟನ್ ಕ್ಲಿಕ್ ಮಾಡಬೇಕು
* ಅದರ ನಂತರ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
* ಬಳಿಕ Get OTP ಅನ್ನು ಕ್ಲಿಕ್ ಮಾಡಿ
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
* ಒಟಿಪಿಯನ್ನು ನಮೂದಿಸಿ, Submit ಮಾಡಿ
* ನೀವು Submit ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ
ಸಣ್ಣ ರೈತ ಕುಟುಂಬಕ್ಕೆ ಮಾತ್ರ ಹಣ ಲಭ್ಯವಾಗುತ್ತದೆಯೇ?
2019ರ ಫೆಬ್ರವರಿಯಲ್ಲಿ ಪಿಎಂ ಕಿಸಾನ್ ಯೋಜನೆ ಆರಂಭವಾದಾಗ ಸಣ್ಣ ರೈತ ಕುಟುಂಬ ಅಂದರೆ ಕಡಿಮೆ ಜಮೀನು ಹೊಂದಿರುವವರಿಗೆ ಮಾತ್ರವೇ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿತ್ತು. ಸುಮಾರು ಎರಡು ಎಕರೆಯಷ್ಟು ಜಮೀನು ಹೊಂದಿರುವವರು ಈ ಯೋಜನೆಯ ಲಾಭ ಪಡೆಯುತ್ತಿದ್ದರು. ಆದರೆ ಬಳಿಕ 2019ರ ಜೂನ್ ತಿಂಗಳಿನಲ್ಲಿ ಈ ಯೋಜನೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈಗ ಎಷ್ಟು ಎಕರೆ ಜಮೀನು ಇದ್ದರೂ ಕೂಡಾ ಈ ಯೋಜನೆಯ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಹಣ ಬಂದಿದೆಯೇ ನೋಡಿ
* ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ
* ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ
* ನಂತರ Beneficiary Status ಮೇಲೆ ಕ್ಲಿಕ್ ಮಾಡಿ
* ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ
* ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ


Click it and Unblock the Notifications