'ಈಗಷ್ಟೇ ರಿಟೈರ್ಡ್ ಆದೆ. ಕೈಲಿ ಒಂದಿಷ್ಟು ದುಡ್ಡಿದೆ. ಉಳಿದ ಬದುಕಿಗೆ ಅದನ್ನೇ ಆಧಾರ ಮಾಡಿಕೊಂಡು ತಿಂಗಳಿಗಿಷ್ಟು ಕಾಸು ಬರುವಂತೆ ಮಾಡಿಕೊಳ್ಳಬೇಕು ಏನು ಮಾಡಬಹುದು?'
ಚಿಕ್ಕಬಳ್ಳಾಪುರ ತಾಲ್ಲೂಕಿನ ಹಳ್ಳಿಯೊಂದರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಂಗಾಧರಪ್ಪ ಮಗ ರಮೇಶನಿಗೆ ಪಾಯಸದ ಲೋಟ ಕೈಗಿಟ್ಟು ಲೋಕಾಭಿರಾಮವಾಗಿ ವಿಷಯ ಪ್ರಸ್ತಾಪಿಸಿದರು.
'ಇನ್ನೇನ್ ಮಾಡ್ತೀರಿ ಅಂಕಲ್, ಬ್ಯಾಂಕ್‌ನಲ್ಲಿ ಡೆಪಾಸಿಟ್ ಇಟ್ಟು ಬರೋ ಬಡ್ಡಿಯಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸಿ' ಅಂತ ಉಚಿತ ಸಲಹೆ ಕೊಟ್ಟ ರಮೇಶ. 'ಅಲ್ಲೋ ರಮೇಶ ಲಕ್ಷ ರೂಪಾಯಿ ಡೆಪಾಸಿಟ್ ಇಟ್ರೆ ಕೈಗೆ ಸಿಗೋದು ವರ್ಷಕ್ಕೆ 6,700 ರೂಪಾಯಿ ಬಡ್ಡಿ ಬರುತ್ತೆ. ಅಷ್ಟು ಕಡಿಮೆ ಬಡ್ಡಿ ದುಡ್ಡು ತಗೊಂಡು ನೆಮ್ಮದಿಯಾಗಿ ಇರೋಕೆ ಆಗುತ್ತೇನೋ? ಏನೋ ಓದಿರೋನು, ಒಳ್ಳೇ ಐಡಿಯಾ ಕೊಡ್ತೀಯಾ ಅಂತ ಕೇಳಿದ್ರೆ ಹೀಗಾ ಹೇಳೋದು?' ಅಂತ ಗಂಗಾಧರಪ್ಪ ತುಸು ಮುನಿಸಿಕೊಂಡರು.
'ತಾಳಪ್ಪ ನೋಡೋಣ. ಒಳ್ಳೇ ಐಡಿಯಾ ಹುಡುಕ್ತೀನಿ' ಅಂದ ರಮೇಶ ಅವರಿವರ ಹತ್ತಿರ ವಿಚಾರಿಸಿ ನೋಡಿದ. ಹಿರಿಯ ನಾಗರಿಕರ ಹೆಸರಿನಲ್ಲಿ ಠೇವಣಿಯಿಟ್ಟರೂ ಬ್ಯಾಂಕಿನಲ್ಲಿ ಶೇ 7ಕ್ಕಿಂತ ಹೆಚ್ಚು ಬಡ್ಡಿ ಇಲ್ಲ. ಇನ್ನು ಎನ್‌ಸಿಡಿ, ಕಂಪನಿ ಡೆಪಾಸಿಟ್, ಮ್ಯೂಚ್ಯುಯಲ್ ಫಂಡ್‌ಗಳ ವ್ಯವಹಾರ ಅರ್ಥವಾಗೋ ವಯಸ್ಸು ಗಂಗಾಧರಪ್ಪ ಅವರದಲ್ಲ. ಪೋಸ್ಟ್ ಆಫೀಸ್ ವೆಬ್‌ಸೈಟ್ ನೋಡಿದಾಗ ಮಂತ್ಲಿ ಇನ್‌ಕಂ ಸ್ಕೀಮ್ (ಎಂಐಎಸ್) ಆಕರ್ಷಕ ಎನಿಸಿತು.
ಶೇ 7.6ರ ವಾರ್ಷಿಕ ಬಡ್ಡಿದರದ ಈ ಯೋಜನೆಯಲ್ಲಿ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ 629 ರೂಪಾಯಿ ಬಡ್ಡಿ ಬರುತ್ತೆ. ಆದರೆ ಒಬ್ಬರು ಗರಿಷ್ಠ 4.5 ಲಕ್ಷ ರೂಪಾಯಿ ಮಾತ್ರ ತೊಡಗಿಸಲು ಅವಕಾಶವಿದೆ. ಜಂಟಿ ಖಾತೆಯಾದರೆ 9 ಲಕ್ಷ ರೂಪಾಯಿ ಇಡಬಹುದು. ಅಪ್ಪ-ಅಮ್ಮನ ಜಂಟಿ ಖಾತೆ ತೆಗೆಸಿ 9 ಲಕ್ಷ ರೂಪಾಯಿ ಠೇವಣಿ ಇರಿಸಿದರೂ ಅವರಿಗೆ 5661 ರೂಪಾಯಿ ಬರ್ತಿತ್ತು. ಆದರೆ ಈ ಬಡ್ಡಿ ದರವನ್ನು ಸರ್ಕಾರ ಯಾವಾಗ ಬೇಕಾದರೂ ಪರಿಷ್ಕರಿಸಬಹುದು ಎನ್ನುವ ಅಡಿಗೆರೆ ಓದಿದಾಗ ಇದಕ್ಕಿಂತಲೂ ಸೇಫ್ ಆದ ಇನ್ಯಾವುದಾದರೂ ಇದೆಯೇ ಅಂತ ಹುಡುಕಬೇಕು ಎನಿಸಿತು.
ಇಂಥ ಹುಡುಕಾಟದ ವೇಳೆ ಕಣ್ಣಿಗೆ ಬಿದ್ದುದೇ ಪ್ರಧಾನಮಂತ್ರಿ ವಯವಂದನ ಯೋಜನೆ.
ಏನಿದು ಯೋಜನೆ?
ಕೇಂದ್ರ ಸರ್ಕಾರವು 2003ರಿಂದ ಒಂದಲ್ಲ ಒಂದು ರೀತಿ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿ ಸಿಗುವ ಯಜನೆಗಳನ್ನು ಪ್ರಕಟಿಸುತ್ತಿದೆ. 2014ರಲ್ಲಿ ‘ವರಿಷ್ಠ ಪೆನ್ಷನ್ ಬಿಮಾ ಯೋಜನಾ' ಹೆಸರಿನ ಪಾಲಿಸಿಯೊಂದನ್ನು ಘೋಷಿಸಿತ್ತು. ಅದರ ಗರಿಷ್ಠ ಮಿತಿ 7.5 ಲಕ್ಷ ರೂಪಾಯಿ. 2018-19ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಈ ಯೋಜನೆಯ ಗರಿಷ್ಠ ಹೂಡಿಕೆ ಮಿತಿಯನ್ನು 15 ಲಕ್ಷ ರೂಪಾಯಿಗೆ ಹೆಚ್ಚಿಸುವುದರೊಂದಿಗೆ, ಪಾಲಿಸಿಯ ಹೂಡಿಕೆಗೆ ಮಾರ್ಚ್ 2020 ಕೊನೆಯ ಗಡುವು ಎಂದು ಘೋಷಿಸಿದರು. ಶೇ 8ರಿಂದ ಶೇ 8.3ರ ಬಡ್ಡಿ ದರ ಸಿಗುವ ಈ ಯೋಜನೆ ಸದ್ಯದ ಮಟ್ಟಿಗೆ ನಿವೃತ್ತರಿಗೆ ದಿ ಬೆಸ್ಟ್ ಸ್ಕೀಂ.
ಹೂಡಿದ ಹಣಕ್ಕೆ ಭಾರತ ಸರ್ಕಾರದ ಸಂಪೂರ್ಣ ಖಾತ್ರಿ, ಬಡ್ಡಿ ದರವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡುವುದಿಲ್ಲ ಎನ್ನುವ ವಾಗ್ದಾನ ಈ ಯೋಜನೆಯ ಮುಖ್ಯ ಅಂಶಗಳು. ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಈ ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದೆ. ಈ ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಹಣ ತೊಡಗಿಸಬಹುದಾಗಿದೆ. ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಲು www.licindia.in ವೆಬ್‌ಸೈಟ್ ನೋಡಿ. ಆಫ್‌ಲೈನ್‌ನಲ್ಲಿ ಹೂಡಿಕೆ ಮಾಡುವ ಇಚ್ಛೆಯಿದ್ದರೆ ನಿಮ್ಮ ಎಲ್‌ಐಸಿ ಏಜೆಂಟ್ ಭೇಟಿಮಾಡಿ ಅಥವಾ ಎಲ್‌ಐಸಿ ಕಚೇರಿಗೆ ಭೇಟಿ ನೀಡಿ.
ಒಂದು ವಿಚಾರ ಗಮನದಲ್ಲಿರಲಿ. ಕೆಲ ಎಲ್‌ಐಸಿ ಏಜೆಂಟರು ಮತ್ತು ಅಭಿವೃದ್ಧಿ ಅಧಿಕಾರಿಗಳು ‘ವಯವಂದನ ಪ್ರಯೋಜನವಿಲ್ಲ, ಬೇರೆ ಸ್ಕೀಮ್‌ಗಳಿವೆ ನೋಡಿ' ಎಂದು ಉಚಿತ ಸಲಹೆ ಕೊಡ್ತಾರೆ. ಅಂಥವಕ್ಕೆ ಸೊಪ್ಪು ಹಾಕಬೇಡಿ.
ಪಿಂಚಣಿ ಪಾವತಿ
ಈ ಪಾಲಿಸಿಯ ಅವಧಿ 10 ವರ್ಷಗಳು. ಅದಕ್ಕಿಂತಲೂ ಕಡಿಮೆಯೂ ಇಲ್ಲ, ಅದಕ್ಕಿಂತಲೂ ಹೆಚ್ಚೂ ಇಲ್ಲ. ಹೂಡಿಕೆ ಮಾಡಿದ ಹಣಕ್ಕೆ ಪೂರ್ವ ನಿರ್ಧಾರಿತ ಅವಧಿಯಲ್ಲಿ (ಅಂದರೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ) ಪಿಂಚಣಿ ಸ್ವೀಕೃತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಪಿಂಚಣಿಗಾಗಿ ಹಣ ತೊಡಗಿಸಿರುವವರು 10 ವರ್ಷದ ಅವಧಿಯೊಳಗೆ ಮೃತಪಟ್ಟರೆ ನಾಮಿನಿದಾರರಿಗೆ ಪೂರ್ತಿ ಹಣ ಮರುಪಾವತಿ ಮಾಡಲಾಗುವುದು. 10 ವರ್ಷಕ್ಕೆ ಈ ಪಾಲಿಸಿಯ ಅವಧಿ ಅಂತ್ಯಗೊಂಡಾಗ ಪಾಲಿಸಿ ಖರೀದಿಸಲು ತೊಡಗಿಸಿದ್ದ ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುವುದು
ಯಾರು ತೊಡಗಿಸಬಹುದು?
ಇದು ಎಲ್‌ಐಸಿಯ ಇತರ ಪಾಲಿಸಿಗಳಂತೆ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಕನಿಷ್ಠ ವಯೋಮಿತಿ 60 ವರ್ಷ. ಗರಿಷ್ಠ ವಯೋಮಿತಿ ಇಲ್ಲ. ಪಾಲಿಸಿ ಅವಧಿ 10 ವರ್ಷ. ವರ್ಷಕ್ಕೆ ಕನಿಷ್ಠ ಪಿಂಚಣಿ 12,000 ರೂಪಾಯಿ. ಗರಿಷ್ಠ ಪಿಂಚಣಿ 1.20 ಲಕ್ಷ ರೂಪಾಯಿ.
ಪಾಲಿಸಿಯಲ್ಲಿ ಒಮ್ಮೆ ಹಣ ತೊಡಗಿಸಿದ ನಂತರ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ (ತೀವ್ರ ಅನಾರೋಗ್ಯ) ಇತರ ಕಾರಣಗಳಿಗೆ ಹಣ ಹಿಂಪಡೆಯಲು ಅವಕಾಶವಿಲ್ಲ. ಹಾಗೊಂದು ವೇಳೆ ಹಣ ಹಿಂಪಡೆದರೆ ಹೂಡಿಕೆಯ ಶೇ 98ರಷ್ಟು ಮೊತ್ತವನ್ನು ಮಾತ್ರವೇ ಮರುಪಾವತಿಸಲಾಗುತ್ತದೆ.
ಪಾಲಿಸಿ ಮೇಲೆ ಸಾಲ ಸಿಗುತ್ತಾ?
ಪಾಲಿಸಿಯಲ್ಲಿ ಹಣ ಹೂಡಿದ 3 ವರ್ಷಗಳ ನಂತರ ಹೂಡಿಕೆ ಮೊತ್ತದ ಶೇ 75ರಷ್ಟನ್ನು ಸಾಲವಾಗಿ ಪಡೆಯಬಹುದು. ಬಡ್ಡಿಯ ಪ್ರಮಾಣ ನಿರ್ದಿಷ್ಟವಾಗಿ ನಿಗದಿಪಡಿಸಿಲ್ಲ. ಅದು ಆರ್ಥಿಕ ವಿದ್ಯಮಾನಗಳು ಮತ್ತು ಎಲ್‌ಐಸಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
ನಿಮಗೆ ಪಾವತಿಸಬೇಕಾದ ಪಿಂಚಣಿಯ ಮೊತ್ತದಿಂದಲೇ ಬಡ್ಡಿಯನ್ನು ಕಡಿತಗೊಳಿಸುತ್ತಾರೆ. ಮೆಚ್ಯುರಿಟಿ ಅವಧಿಗೆ ಮೊದಲು ಅಸಲು ಮರುಪಾವತಿಸದಿದ್ದರೆ, ಮೆಚ್ಯುರಿಟಿ ಸಂದರ್ಭ ಹೂಡಿಕೆ ಮೊತ್ತದಲ್ಲಿ ಸಾಲದ ಮೊತ್ತ ಮುರಿದುಕೊಂಡು, ಉಳಿಕೆ ಹಣವನ್ನು ಹೂಡಿಕೆದಾರರಿಗೆ ಪಾವತಿ ಮಾಡುತ್ತಾರೆ.
ತೆರಿಗೆ ವಿಚಾರ
ಈ ಪಾಲಿಸಿಯಡಿ ಹೂಡಿಕೆದಾರರಿಗೆ ಪಿಂಚಣಿ ಪಾವತಿಸುವಾಗ ಎಲ್‌ಐಸಿ ಟಿಡಿಎಸ್ ಕಡಿತ ಮಾಡುವುದಿಲ್ಲ. ಆದರೆ ಈ ಮೊತ್ತವನ್ನು ಸರ್ಕಾರ ನಿಮ್ಮ ಆದಾಯವೆಂದು ಪರಿಗಣಿಸುತ್ತದೆ. ನಿಮ್ಮ ಒಟ್ಟಾರೆ ವಾರ್ಷಿಕ ಆದಾಯದ ಭಾಗವಾಗಿ ವಯ ವಂದನದ ಪಿಂಚಣಿಯನ್ನೂ ಲೆಕ್ಕಹಾಕಿ ನೀವು ತೆರಿಗೆ ಪಾವತಿಸಬೇಕಾಗುತ್ತದೆ.
ಎಷ್ಟು ಪಿಂಚಣಿ ಸಿಗುತ್ತೆ?
ಈ ಯೋಜನೆಯು ಹಿರಿಯ ನಾಗರಿಕರು ಹೂಡುವ ಮೊತ್ತಕ್ಕೆ ಶೇ 8ರ ಪ್ರತಿಫಲವನ್ನು ಖಾತ್ರಿಗೊಳಿಸಿದೆ. ಸರಳವಾಗಿ ಹೇಳುವುದಾದರೆ ಪ್ರತಿ 1.5 ಲಕ್ಷ ರೂಪಾಯಿ ಹೂಡಿಕೆಗೆ, ಪ್ರತಿ ತಿಂಗಳಿಗೆ 1 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಕನಿಷ್ಠ ಮೊತ್ತವಾದ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ತಿಂಗಳಿಗೆ 6,667 ರೂಪಾಯಿ, ಗರಿಷ್ಠ ಮೊತ್ತವಾದ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 10 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ.
ಇದೇ ಬೆಸ್ಟ್ ಅಂತ ಹೇಗೆ ಹೇಳ್ತೀರಿ?
ಎಲ್‌ಐಸಿ ಸೇರಿದಂತೆ ಹಲವು ವಿಮಾ ಕಂಪನಿಗಳು ಅನ್ಯುಟಿ ಪಾಲಿಸಿಗಳನ್ನು ಮಾರುತ್ತಿವೆ. ಈ ಎಲ್ಲ ಆನ್ಯುಟಿಗಳ ಸರಾಸರಿ ಪ್ರತಿಫಲ ಶೇ 5ರಿಂದ 7 ಮಾತ್ರ. ಜೊತೆಗೆ ಮಾರುಕಟ್ಟೆಯ ಏರಿಳಿತಗಳು ಅವನ್ನು ಬಾಧಿಸುವ ಸಾಧ್ಯತೆಯೂ ಇದೆ. ಆದರೆ ಪ್ರಧಾನ ಮಂತ್ರಿ ವಯವಂದನ ಯೋಜನೆ 10 ವರ್ಷಕ್ಕೆ ಖಾತ್ರಿಯಾದ ಶೇ 8ರ ಪ್ರತಿಫಲದ ವಾಗ್ದಾನ ನೀಡುತ್ತದೆ. ಹೂಡಿಕೆ ಮೊತ್ತಕ್ಕೆ ಭಾರತ ಸರ್ಕಾರದ ಖಾತ್ರಿ ಇರುತ್ತದೆ. ಹೀಗಾಗಿ ಇದು ಬೆಸ್ಟ್ ಯೋಜನೆ.
ಮಿತಿಗಳೇ ಇಲ್ಲ ಅಂತೀರಾ?
ಭಾರತೀಯರ ಸರಾಸರಿ ಆಯುಷ್ಯ ಪ್ರಮಾಣ 69 ವರ್ಷ ಮುಟ್ಟಿದೆ. ವೈದ್ಯಕೀಯ ಸೇವೆಯಲ್ಲಿ ಆಗಿರುವ ಪ್ರಗತಿಯಿಂದ 80 ವರ್ಷದವರೆಗೆ ಚಟುವಟಿಕೆಯಿಂದ ಇರುವುದು ಸಾಮಾನ್ಯ ಎನಿಸಿದೆ. ಪ್ರಧಾನ ಮಂತ್ರಿ ವಯವಂದನ 10 ವರ್ಷಕ್ಕೆ ಮೆಚ್ಯುರಿಟಿ ಅವಧಿ ಹೊಂದಿದೆ. ನಂತರ ಇದನ್ನು ವಿಸ್ತರಿಸಲು ಆಗುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಆನ್ಯುಟಿ ಯೋಜನೆಗಳು ಜೀವನಪರ್ಯಂತ ಖಾತ್ರಿಯಾದ ಮೊತ್ತಕ್ಕೆ ಪಿಂಚಣಿ ನೀಡುತ್ತವೆ.
ಹೂಡಿಕೆಯ ಗರಿಷ್ಠ ಮೊತ್ತ ಮಿತಿಯನ್ನು ಈ ಹಿಂದಿನ 7.5 ಲಕ್ಷದಿಂದ 15 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಆದರೆ ಇದೂ ಸಹ ಏನೇನೂ ಸಾಲದು ಎನಿಸುತ್ತದೆ. ಕನಿಷ್ಠ 50 ಲಕ್ಷ ಹೂಡಿಕೆ ಸಾಧ್ಯವಿರುಂಥ ಆನ್ಯುಟಿ ಯೋಜನೆಗಳು ಈಗ ನಿವೃತ್ತರ ಆಯ್ಕೆಯಾಗುತ್ತಿವೆ.
ಶೇ 8ರ ಬಡ್ಡಿ ದರ ಬ್ಯಾಂಕ್ ಠೇವಣಿಗಳಿಗೆ ಹೋಲಿಸಿದರೆ ಉತ್ತಮ ಎನಿಸಬಹುದು. ಆದರೆ ಈಕ್ವಿಟಿ ಮತ್ತು ಡೆಟ್ ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್, ಸಿಸ್ಟಮ್ಯಾಟಿಕ್ ಟ್ರಾನ್ಸ್‌ಫರ್ ಮತ್ತು ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಆಟದಲ್ಲಿ ಪಳಗಿದವರು ಈ ಪ್ರತಿಫಲ ಸಪ್ಪೆ ಎನಿಸುವುದು ನಿಜ.
ಗಂಗಾಧರಪ್ಪ ಏನು ಮಾಡಿದರು?
ಷೇರುಪೇಟೆ, ಮ್ಯೂಚ್ಯುವಲ್ ಫಂಡ್ ವಹಿವಾಟಿನ ಅನುಭವವಿಲ್ಲದ ಗಂಗಾಧರಪ್ಪ ತಮಗೆ ಲಾಗಾಯ್ತಿನಿಂದಲೂ ಪಾಲಿಸಿಗಳನ್ನು ಮಾರುತ್ತಿದ್ದ ಎಲ್‌ಐಸಿ ಏಜೆಂಟರ ಬಳಿ ಈ ವಯವಂದನ ಯೋಜನೆ ಬಗ್ಗೆ ಪ್ರಸ್ತಾಪಿಸಿದರು. ಏಜೆಂಟ್ ಅದರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಬೇರೆ ಪಾಲಿಸಿಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡಿದರು. ಸ್ವತಃ ಎಲ್‌ಐಸಿ ಆಫೀಸಿಗೆ ಹೋಗಿ 10 ಲಕ್ಷ ರೂಪಾಯಿಗೆ ವಯವಂದನ ಪಾಲಿಸಿ ಖರೀದಿಸಿದರು.


Click it and Unblock the Notifications