ಪಾಕೆಟ್ ಮನಿಯೇ ವಿದ್ಯಾರ್ಥಿಗಳ ಎಲ್ಲ ಖರ್ಚಿಗೆ ಆಧಾರವಾಗಿರುತ್ತದೆ. ಎಲ್ಲ ಖರ್ಚನ್ನು ನಿರ್ವಹಣೆ ಮಾಡಬೇಕಾದರೆ ಪಾಕೆಟ್ ಮನಿಯನ್ನು ಉಳಿಸುವುದು ವಿದ್ಯಾರ್ಥಿಗಳಿಗೆ ಬಹುಮುಖ್ಯವಾಗಿದೆ. ಹಣವನ್ನು ಉಳಿತಾಯ ಮಾಡುವುದನ್ನು ಈಗಲೇ ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ಆರ್ಥಿಕ ಶಿಸ್ತು ಮತ್ತು ಜವಾಬ್ದಾರಿಯನ್ನು ಹುಟ್ಟುಹಾಕುತ್ತದೆ. ಹಾಗೆಯೇ ಹಣದ ಮೌಲ್ಯ ಕಲಿಸುತ್ತದೆ.
ಹಣವನ್ನು ಉಳಿತಾಯ ಮಾಡುವುದರಿಂದ ಅನಿರೀಕ್ಷಿತ ವೆಚ್ಚಗಳು ಅಥವಾ ತುರ್ತು ಪರಿಸ್ಥಿತಿಯ ವೇಳೆ ಸರಿದೂಗಿಸಲು ಸಾಧ್ಯವಾಗುತ್ತದೆ. ಪಾಕೆಟ್ ಮನಿಯನ್ನು ಉಳಿತಾಯ ಮಾಡುವುದರಿಂದಾಗಿ ವಿದ್ಯಾರ್ಥಿಗಳು ಇತರರ ಮೇಲೆ ಅವಲಂಭಿಸದೆ, ಸಾಲವನ್ನು ಮಾಡದೆ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.

ಇದಲ್ಲದೆ ಪಾಕೆಟ್ ಮನಿಯನ್ನು ಉಳಿತಾಯ ಮಾಡುವುದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ, ರಜೆಯ ವೇಳೆ ಸಣ್ಣ ಟ್ರಿಪ್ ಹೋಗಲು, ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗಲಿದೆ. ಹಾಗಾದರೆ ನೀವು ನಿಮ್ಮ ಪಾಕೆಟ್ ಮನಿಯನ್ನು ನೀವು ಹೇಗೆ ಉಳಿತಾಯ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಹಣ ಉಳಿತಾಯ ಮಾಡಲು ವಿದ್ಯಾರ್ಥಿಗಳಿಗೆ ಟಿಪ್ಸ್ ಇಲ್ಲಿದೆ
1. ಬಜೆಟ್ ಮಾಡಿಕೊಳ್ಳಿ: ಮೊದಲನೆಯದಾಗಿ ನಿಮ್ಮ ಪಾಕೆಟ್ ಮನಿಯ ಬಳಕೆಗೆ ಬಜೆಟ್ ಅನ್ನು ಮಾಡಿಕೊಳ್ಳಿ. ಇದರಿಂದಾಗಿ ನೀವು ನಿಮ್ಮ ಖರ್ಚಿನ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತದೆ.
2. ನಿಮ್ಮ ಖರ್ಚಿನ ಮೇಲೆ ಗಮನವಿರಲಿ: ನೀವು ಹಣವನ್ನು ಒಟ್ಟಾರೆಯಾಗಿ ಖರ್ಚು ಮಾಡದಿರಿ. ಎಲ್ಲ ಖರ್ಚಿಗೂ ಲೆಕ್ಕ ಹಾಕಿ, ಗಮನವಿರಲಿ. ಇತಿಮಿತಿಯೊಂದಿಗೆ ಖರ್ಚು ಮಾಡಿ. ಅದಕ್ಕಾಗಿ ಬಜೆಟ್ ಮುಖ್ಯವಾಗಿರುತ್ತದೆ.
3. ಖರ್ಚಿನ ಪಟ್ಟಿಯನ್ನು ಮಾಡಿ: ನೀವು ಎಷ್ಟು ಮೊತ್ತವನ್ನು ಖರ್ಚು ಮಾಡಬಹುದು ಎಂದು ನಿಗದಿಪಡಿಸಿದ ಬಳಿಕ ಯಾವೆಲ್ಲ ಕಾರ್ಯಕ್ಕಾಗಿ ಖರ್ಚು ಮಾಡಬಹುದು ಎಂಬ ಪಟ್ಟಿಯನ್ನು ಮಾಡಿ. ಇದರಿಂದಾಗಿ ನೀವು ಹಣವನ್ನು ಎಲ್ಲಿ ಖರ್ಚು ಮಾಡುತ್ತಿದ್ದೀರಿ ಎಂದು ನೋಡಿಕೊಳ್ಳಬಹುದಾಗಿದೆ.
4. ಮನೆಯಲ್ಲಿಯೇ ಅಡುಗೆ ಮಾಡಿ: ನೀವು ಮನೆಯಿಂದ ದೂರ ರೂಮ್‌ನಲ್ಲಿ ಇರುವುದಾದರೆ ಪಾಕೆಟ್ ಮನಿಯನ್ನು ಉಳಿಸಿಕೊಳ್ಳಲು ಉತ್ತಮ ಆಯ್ಕೆ ಮನೆಯಲ್ಲಿಯೇ ಅಡುಗೆ ಮಾಡುವುದು ಆಗಿದೆ. ಇದರಿಂದ ನಿಮ್ಮ ಹಣ ಉಳಿತಾಯವಾಗುವುದು ಮಾತ್ರವಲ್ಲ ಆರೋಗ್ಯವು ಉತ್ತಮವಾಗಿರುತ್ತದೆ. ಫುಡ್ ಆಪ್ ಅನ್ನು ತೆರೆಯುವ ಮುನ್ನ ಹಣದ ಬಗ್ಗೆ ಆಲೋಚನೆ ಮಾಡಿ.
5. ಖರ್ಚುಗಳನ್ನು ಹಂಚಿಕೊಳ್ಳಿ: ನೀವು ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದರೆ, ವೆಚ್ಚಗಳನ್ನು ಹಂಚಿಕೊಳ್ಳುವುದು ಉತ್ತಮ. ಉದಾಹರಣೆಗೆ, ನೀವು ಸಾರಿಗೆ, ಚಲನಚಿತ್ರ ಟಿಕೆಟ್‌ಗಳು ಅಥವಾ ಊಟದ ವೆಚ್ಚವನ್ನು ಶೇರ್ ಮಾಡಿಕೊಳ್ಳಿ. ನೀವಾಗಿಯೇ ಎಲ್ಲದ್ದಕ್ಕೂ ಖರ್ಚು ಮಾಡಿದರೆ, ನಿಮ್ಮ ಪಾಕೆಟ್ ಮನಿ ಖಾಲಿಯಾಗುತ್ತದೆ.
6. ಅಗತ್ಯವಿಲ್ಲದೆ ಖರೀದಿ ಮಾಡದಿರಿ: ನೀವು ಯಾವುದೇ ವಸ್ತುವನ್ನು ಖರೀದಿ ಮಾಡುವಾಗ ಆ ವಸ್ತು ನಿಮಗೆ ತೀರಾ ಅಗತ್ಯವೇ ಎಂದು ನೋಡಿಕೊಳ್ಳಿ. ಒಟ್ಟಾರೆಯಾಗಿ ಖರ್ಚು ಮಾಡುವ ಮುನ್ನ ವಸ್ತುವಿನ ಅಗತ್ಯದ ಬಗ್ಗೆ ಆಲೋಚನೆ ಮಾಡಿ.
7. ಭವಿಷ್ಯಕ್ಕಾಗಿ ಉಳಿತಾಯ ಮಾಡಿ: ನೀವು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಮಾತ್ರ ಉಳಿತಾಯ ಮಾಡುವುದಾರೂ ಕೂಡಾ ಅದು ಕಾಲ ಕಳೆದಂತೆ ಅಧಿಕವಾಗುತ್ತದೆ. ಅದಕ್ಕಾಗಿ ಉಳಿತಾಯ ಖಾತೆಯನ್ನು ತೆರೆದು ಪ್ರತಿ ತಿಂಗಳು ಹಣವನ್ನು ಅದಕ್ಕೆ ಜಮೆ ಮಾಡುವ ರೂಢೀ ಮಾಡಿಕೊಳ್ಳಿ.
8. ನಿಮ್ಮ ಮೇಲೆ ನೀವು ಖರ್ಚು ಮಾಡಿ: ನಿಮ್ಮ ಮೇಲೆಯೇ ನಿಮ್ಮ ಪಾಕೆಟ್ ಮನಿಯನ್ನು ನೀವು ಹೂಡಿಕೆ ಮಾಡಬಹುದು. ಆಶ್ಚರ್ಯವಾಯಿತೇ?.. ಹೌದು ನೀವು ಆನ್‌ಲೈನ್ ಕ್ಲಾಸ್ ಹಾಜರಾಗುವುದು, ಪುಸ್ತಕವನ್ನು ಖರೀದಿಸುವುದು ಅಥವಾ ಕ್ಲಬ್‌ಗೆ ಸೇರುವುದು ಆಗಿದೆ. ನಿಮ್ಮ ಮೇಲೆ ನೀವು ಹೂಡಿಕೆ ಮಾಡುವುದರಿಂದ ನೀವು ಬೆಳೆಯಲು ಸಾಧ್ಯವಾಗುತ್ತದೆ.
9. ಹಣಕಾಸಿನ ಗುರಿ: ಮನಸ್ಸಿನಲ್ಲಿ ಹಣಕಾಸಿನ ಗುರಿಗಳನ್ನು ಹೊಂದಿರುವುದು ನಿಮಗೆ ಸಹಾಯಕವಾಗಲಿದೆ. ಯಾವುದೇ ಕಾರ್ಯವನ್ನು ಮಾಡಲು ಗುರಿ ಎಷ್ಟು ಮುಖ್ಯವೋ ಹಾಗೆಯೆ ಹಣಕಾಸಿನ ಒಂದು ನಿರ್ದಿಷ್ಟ ಗುರಿ ಮುಖ್ಯವಾಗುತ್ತದೆ.
10. ನಿಮಗೆ ಅಗತ್ಯವಿದ್ದರೆ ಸಹಾಯ ಕೇಳಿ: ನಿಮ್ಮ ಪಾಕೆಟ್ ಮನಿಯನ್ನು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಪೋಷಕರು, ಶಿಕ್ಷಕರು ಅಥವಾ ಆರ್ಥಿಕ ಸಲಹೆಗಾರರಿಂದ ಸಹಾಯವನ್ನು ಪಡೆಯಿರಿ.


Click it and Unblock the Notifications