ಬ್ಯಾಂಕ್ ವಂಚನೆಗಳನ್ನು ತಡೆಯುವ ಉದ್ದೇಶದಿಂದ ಜನವರಿ 1, 2021ರಿಂದ ಹೊಸ ಚೆಕ್ ಪಾವತಿಗೆ 'ಪಾಸಿಟಿವ್ ಪೇ ಸಿಸ್ಟಮ್' ಪರಿಚಯಿಸಲು ನಿರ್ಧಾರ ಮಾಡಿದೆ. 50,000 ರುಪಾಯಿ ಮೇಲ್ಪಟ್ಟ ಮೊತ್ತದ ಚೆಕ್ ಗೆ ಪ್ರಮುಖ ಮಾಹಿತಿಗಳನ್ನು ಮತ್ತೊಮ್ಮೆ ಖಾತ್ರಿ ಮಾಡಬೇಕಾಗುತ್ತದೆ.
ಈ ನಿಯಮವನ್ನು ಆರಿಸಿಕೊಳ್ಳುವುದು ಖಾತೆದಾರರ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ. ಐದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ನಿಯಮವನ್ನು ಕಡ್ಡಾಯ ಮಾಡುವ ಬಗ್ಗೆ ಬ್ಯಾಂಕ್ ನಿಂದಲೇ ಆಲೋಚನೆ ಮಾಡಬಹುದು. ಪಾಸಿಟಿವ್ ಪೇ ಸಿಸ್ಟಮ್ ಅಡಿಯಲ್ಲಿ ಚೆಕ್ ವಿತರಣೆ ಮಾಡುವವರು ಎಸ್ಸೆಮ್ಮೆಸ್, ಮೊಬೈಲ್ ಆಪ್, ಇಂಟರ್ ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ಮೂಲಕ ಕೆಲವು ಮಾಹಿತಿ ಎಲೆಕ್ಟ್ರಾನಿಕ್ ಆಗಿ ಸಲ್ಲಿಸಬೇಕು.
ಬ್ಯಾಂಕ್ ಗಳಿಗೆ ಚೆಕ್ ಬಗ್ಗೆ ಮಾಹಿತಿ
ಚೆಕ್ ನೀಡುವಾಗಲೇ ಆ ಖಾತೆದಾರರ ಬ್ಯಾಂಕ್ ಗೆ ಮಾಹಿತಿ ನೀಡಬೇಕು. ಚೆಕ್ ಸಂಖ್ಯೆ ಏನು, ದಿನಾಂಕ, ಯಾರ ಹೆಸರಿಗೆ ಚೆಕ್ ನೀಡಲಾಗುತ್ತಿದೆ, ಖಾತೆ ಸಂಖ್ಯೆ, ಮೊತ್ತ ಇತ್ಯಾದಿಯನ್ನು ಒದಗಿಸಬೇಕು. ಮೊತ್ತ ನಗದು ಮಾಡಿಕೊಳ್ಳಲು ನೀಡುವ ಮುನ್ನ ಮಾಹಿತಿಯನ್ನು ಪುನರ್ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಚೆಕ್ ಟ್ರಂಕೇಷನ್ ವ್ಯವಸ್ಥೆಯಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ ಚೆಕ್ ಅನ್ನು ಸಲ್ಲಿಸುವ ಹಾಗೂ ಸ್ವೀಕರಿಸುವ ಎರಡೂ ಬ್ಯಾಂಕ್ ನಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರ್ ಬಿಐ ತಿಳಿಸಿದೆ.
ಜನವರಿ 1ರಿಂದ ಜಾರಿಗೆ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಸಿಟಿಎಸ್ ನಲ್ಲಿ ಪಾಸಿಟಿವ್ ಪೇ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗುತ್ತದೆ. ಆ ನಂತರ ಬ್ಯಾಂಕ್ ಗಳಲ್ಲಿ ದೊರೆಯುವಂತೆ ಮಾಡಲಾಗುತ್ತದೆ. ಪಾಸಿಟಿವ್ ಪೇ ಸಿಸ್ಟಮ್ ಅನ್ನು ಮುಂದಿನ ಜನವರಿ 1ರಿಂದ ಜಾರಿಗೆ ತರಲಾಗುವುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. "ಅಗತ್ಯ ಇರುವ ಜಾಗೃತಿಯನ್ನು ಗ್ರಾಹಕರಲ್ಲಿ ಬ್ಯಾಂಕ್ ಗಳಿಗೆ ಸಲಹೆ ನೀಡಲಾಗಿದೆ. ಪಾಸಿಟಿವ್ ಪೇ ಫೀಚರ್ಸ್ ಬಗ್ಗೆ ಎಸ್ಸೆಮ್ಮೆಸ್ ಅಲರ್ಟ್ಸ್, ಎಟಿಎಂ, ಶಾಖೆಗಳಲ್ಲಿ, ವೆಬ್ ಸೈಟ್ ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಪ್ರದರ್ಶನ ಮಾಡಿ," ಎಂದು ಸೂಚಿಸಲಾಗಿದೆ.
ವಂಚನೆ ತಡೆಯುವ ಉದ್ದೇಶ
ಯಾವ ಚೆಕ್ ಗಳು ಪಾಸಿಟಿವ್ ಪೇ ಸಿಸ್ಟಮ್ ಸೂಚನೆಗಳಿಗೆ ಒಳಪಟ್ಟಿರುತ್ತವೋ ಅಂಥವನ್ನು ಮಾತ್ರ ಸಿಟಿಎಸ್ ಗ್ರಿಡ್, ಬ್ಯಾಂಕ್ ಗಳಲ್ಲಿ ವ್ಯಾಜ್ಯ ಪರಿಹಾರಕ್ಕಾಗಿ ಸ್ವೀಕರಿಸಲಾಗುವುದು. ಸಿಟಿಎಸ್ ಹೊರಗೆ ಚೆಕ್ ಕ್ಲಿಯರ್ ಮಾಡುವುದು ಹಾಗೂ ಸಂಗ್ರಹ ಮಾಡುವ ವ್ಯವಸ್ಥೆ ಉಚಿತವಾಗಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. ಚೆಕ್ ವಿತರಣೆಯ ನಂತರ ಬ್ಯಾಂಕ್ ಗಳಲ್ಲಿ ನಡೆಯುವ ವಂಚನೆ ತಪ್ಪಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.


Click it and Unblock the Notifications