ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡಿದರೆ ನಮ್ಮ ಮೊತ್ತ ಸುರಕ್ಷಿತವಾಗಿರುತ್ತದೆ ಎಂದು ನೋಡಿಕೊಳ್ಳುತ್ತೇವೆ. ಹಾಗೆಯೇ ಅದರ ಜೊತೆಗೆ ಅಧಿಕ ರಿಟರ್ನ್ ಕೂಡಾ ಮುಖ್ಯವಾಗುತ್ತದೆ. ಸುರಕ್ಷಿತ ಹೂಡಿಕೆ ಮತ್ತು ಉತ್ತಮ ಆದಾಯಕ್ಕಾಗಿ ನಾವು ಅಂಚೆ ಕಚೇರಿ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಎಂದಿಗೂ ಉತ್ತಮ.
ಪ್ರತಿ ಮೂರು ತಿಂಗಳಿಗೊಮ್ಮೆ ಅಂಚೆ ಕಛೇರಿ ಯೋಜನೆಗಳ ಮೇಲಿನ ಬಡ್ಡಿಯನ್ನು ಸರ್ಕಾರ ಬದಲಾಯಿಸುತ್ತದೆ. ಪ್ರಸ್ತುತ ಅಂತಹ 4 ಯೋಜನೆಗಳಿದ್ದು, ಆಕರ್ಷಕ ಬಡ್ಡಿದರವನ್ನು ನೀಡುತ್ತದೆ. ಇಷ್ಟೇ ಅಲ್ಲ, ನೀವು ಸರಿಯಾಗಿ ಹೂಡಿಕೆ ಮಾಡಿದರೆ ಈ ಯೋಜನೆಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇಕಡ 8ರಷ್ಟು ಬಡ್ಡಿದರವನ್ನು ಪಡೆಯಬಹುದು. ಶ್ರೀಮಂತರಾಗುವ ಕನಸು ನನಸಾಗಿಸುವ ಯೋಜನೆಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಕಿಸಾನ್ ವಿಕಾಸ್ ಪತ್ರ
ಕಿಸಾನ್ ವಿಕಾಸ್ ಪತ್ರ ಯೋಜನೆ (ಕೆವಿಪಿ) ಅಂಚೆ ಕಚೇರಿಯ ಅತ್ಯಂತ ವಿಶೇಷ ಯೋಜನೆಗಳಲ್ಲಿ ಒಂದಾಗಿದೆ. ಹೂಡಿಕೆ ಮಾಡಿದರೆ 115 ತಿಂಗಳಲ್ಲಿ ಹಣ ದುಪ್ಪಟ್ಟಾಗುತ್ತದೆ. ಆದರೆ, ಇದರ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿಲ್ಲ. ಪ್ರಸ್ತುತ ಯೋಜನೆಯಲ್ಲಿ ನಾವು ಹೂಡಿಕೆ ಮಾಡಿದರೆ ನಮ್ಮ ಹೂಡಿಕೆ ಮೇಲೆ ಶೇಕಡ 7.5 ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯೋಜನೆ ಮೇಲಿನ ಬಡ್ಡಿ ದರವು ಪ್ರಸ್ತುತ ಶೇಕಡ 7.70 ಆಗಿದೆ. ಈ ಯೋಜನೆಯು ಐದು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಯೋಜನೆಯಾಗಿದೆ. ಅದಾದ ಬಳಿಕ ನೀವು ನಿಮ್ಮ ಇಷ್ಟಕ್ಕೆ ಅನುಸಾರವಾಗಿ ಹೂಡಿಕೆಯನ್ನು ವಿಸ್ತಾರ ಮಾಡಿಕೊಳ್ಳಬಹುದಾಗಿದೆ. ಸುಮಾರು 10 ವರ್ಷಗಳ ಹೂಡಿಕೆಯು ಎರಡು ಪಟ್ಟು ಲಾಭವನ್ನು ನೀಡುತ್ತದೆ. ನೀವು ಗರಿಷ್ಠವಾಗಿ 1.5 ಲಕ್ಷ ರೂಪಾಯಿ ಹೂಡಿಕೆ ಮಾಡುವ ಅವಕಾಶವಿದೆ.
ಸಾರ್ವಜನಿಕ ಭವಿಷ್ಯ ನಿಧಿ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕೂಡ ಅಂಚೆ ಕಛೇರಿಯ, ನಾವು ನಮ್ಮ ಹಣವನ್ನು ಉಳಿತಾಯ ಮಾಡಲು ಸಹಾಯವಾಗುವ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಗೆ ನೀವು ಶೇಕಡ 7.10 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ನೀವು ಇದರಲ್ಲಿ ಮಾಡಿದ ಹೂಡಿಕೆಯು 10 ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ. ಹೂಡಿಕೆಗೆ ಗರಿಷ್ಠ ಮೊತ್ತ 1.5 ಲಕ್ಷ ರೂಪಾಯಿ ಆಗಿದೆ.
ಟೈಮ್ ಡೆಪಾಸಿಟ್ ಯೋಜನೆ
ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಯೋಜನೆಯು ಉಳಿದ ಬ್ಯಾಂಕ್‌ಗಳಲ್ಲಿ ನೀಡಲಾಗುವ ಫಿಕ್ಸಿಡ್ ಡೆಪಾಸಿಟ್ ಯೋಜನೆಗಳಂತಾಗಿದೆ. ನೀವು ಹೂಡಿಕೆ ಮಾಡಲು ಬೇರೆ ಬೇರೆ ಅವಧಿಗಳ ಆಯ್ಕೆಯಿದೆ. ನೀವು 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ ಹೂಡಿಕೆಯನ್ನು ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ನೀವು ಶೇಕಡ 6.80ರಿಂದ ಶೇಕಡ 7.5ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಆದಾಯವನ್ನು ಪಡೆಯಲು ಇದು ಉತ್ತಮ ಹೂಡಿಕೆ ಆಯ್ಕೆಯಾಗಿದೆ.


Click it and Unblock the Notifications