ಭಾರತದಲ್ಲಿ ಪ್ರಸ್ತುತ ಹಲವಾರು ವಸ್ತುಗಳ ದರವು ದಿನದಿಂದ ದಿನಕ್ಕೆ ಏರಿಕೆ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಯು ಗಗನಕ್ಕೆ ಏರಿದೆ. ಟೊಮೆಟೊ, ಮೆಣಸಿನಕಾಯಿ ಶುಂಠಿ, ಅಕ್ಕಿ ದರವು ಈಗಾಗಲೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಕ್ಕಿ ದರವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿರುವಾಗ ಈಗ ಬೇಳೆ ದರವು ಕೂಡಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ.
ಬೇಳೆಕಾಳುಗಳ ಬೆಲೆಯು ಸ್ಥಿರವಾಗಿ ಏರಿಕೆ ಕಾಣುತ್ತಿದೆ. ಈ ವರ್ಷ ಬೇಳೆಕಾಳಯಗಳ ದರವು ಶೇಕಡ 10ಕ್ಕೂ ಅಧಿಕ ಏರಿಕೆಯಾಗಿದೆ. ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಬೇಳೆಕಾಳುಗಳ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಈಗ ಯಾವುದೇ ಕ್ರಮವು ದರ ಏರಿಕೆಗೆ ಪರಿಹಾರ ನೀಡದಂತಾಗಿದೆ. statista.com ನ ದತ್ತಾಂಶದ ಪ್ರಕಾರ, 2012ರಿಂದ ಈವರೆಗೆ ತೊಗರಿ ಬೇಳೆ ದರವು ಶೇಕಡ 88ರಷ್ಟು ಏರಿಕೆಯಾಗಿದೆ.

ಈಗಾಗಲೆ ಟೊಮೆಟೊ ದರವು 150 ರೂಪಾಯಿಯ ಗಡಿಯನ್ನು ದಾಟಿದೆ. ಕೆಜಿಗೆ 80- 90 ರೂಪಾಯಿಯಷ್ಟಿದ್ದ ಶುಂಠಿ ಬೆಲೆಯು ಈಗ ಪ್ರತಿ ಕೆಜಿಗೆ 200 ರೂಪಾಯಿ ದಾಟಿದೆ. ಇನ್ನು ಮೆಣಸಿನಕಾಯಿ ದರವು ಕೂಡಾ ಗಗನಕ್ಕೆ ಏರಿದೆ. ಈ ಎಲ್ಲ ಬೆಳವಣಿಗೆ ನಡುವೆ ಜೂನ್ ತಿಂಗಳ ರಿಟೇಲ್ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ, ಶೇಕಡ 4.81ಕ್ಕೆ ತಲುಪಿದೆ.
ಪ್ರಮುಖವಾಗಿ ನಾವು ನೋಡಿದಾಗ ನಾವು ದಿನನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳ ದರವೇ ಏರಿಕೆಯಾಗಿದೆ. ಈಗಾಗಲೇ ಚಹಾ ಪುಡಿ, ಸಕ್ಕರೆ, ಹಾಲು, ಅಕ್ಕಿ, ಗೋಧಿ, ಟೊಮೆಟೊ, ಈರುಳ್ಳಿ, ಆಲೂಗಡ್ಡೆ ಮೊದಲಾದವುಗಳ ದರವು ಹೆಚ್ಚಳವಾಗಿದೆ. ಈ ನಡುವೆ ಬೇಳೆ ದರವು ಕೂಡಾ ಅಧಿಕವಾಗಿದ್ದು, ದರವು ದಾಖಲೆಯ ಪ್ರಮಾಣಕ್ಕೆ ಏರುವ ಸಾಧ್ಯತೆಯಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣವೇನು?
ಪೂರೈಕೆಯ ಕೊರತೆ, ಕಡಿಮೆ ಉತ್ಪಾದನೆ ಮತ್ತು ರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ವಿಳಂಬವಾದ ಮಾನ್ಸೂನ್ ಕಾರಣ, ಟೊಮೆಟೊ ಬೆಲೆಗಳು ಭಾರತದ ಅನೇಕ ನಗರಗಳಲ್ಲಿ ಪ್ರತಿ ಕೆಜಿಗೆ 100 ರೂಪಾಯಿಯ ಗಡಿಯನ್ನು ಮೀರಿದೆ. ಇದರಂತೆಯೇ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಬೇಳೆ ದರವು ಕೂಡಾ ಏರಿಕೆಯಾಗುವ ಸಾಧ್ಯತೆಯಿದೆ.
ನಮ್ಮ ದಿನನಿತ್ಯದ ಅಡುಗೆಗೆ ಖರ್ಚು ಅಧಿಕ
ಮಾನ್ಸೂನ್ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ತರಕಾರಿಗಳ ದರವು ಏರಿಕೆಯಾಗುತ್ತದೆ. ಆದರೆ ಈ ವರ್ಷ ಬೇಳೆಕಾಳುಗಳ ದರವು ಸುಮಾರು ಶೇಕಡ 10ಕ್ಕೂ ಅಧಿಕ ಹೆಚ್ಚಳ ಕಂಡಿದೆ. ಕ್ರಿಸಿಲ್ ಪ್ರಕಾರ ಕಳೆದ ಕೆಲವು ತಿಂಗಳುಗಳಲ್ಲಿ ಬೇಳೆಕಾಳುಗಳ ಹಣದುಬ್ಬರವು ದುಪ್ಪಟ್ಟಾಗಿದೆ. ಬೇಳೆಕಾಳುಗಳ ಹಣದುಬ್ಬರ (ಬೇಳೆಕಾಳುಗಳ ಕೊರತೆ) ಪ್ರಮುಖವಾಗಿ ದೇಶದಲ್ಲಿ ಎಲ್ಲ ಕುಟುಂಬಗಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಯಾಕೆಂದರೆ ಇದರಿಂದಾಗಿ ಅಕ್ಕಿ ಹಾಗೂ ಗೋಧಿ ಬೆಲೆಯು ಹೆಚ್ಚಾಗಲಿದೆ. ನಮ್ಮ ದಿನನಿತ್ಯದ ಅಡುಗೆಗೆ ತಗುಲುವ ಖರ್ಚು ಅಧಿಕವಾಗುತ್ತದೆ.
ಅಕ್ಕಿ ಬೆಲೆಯು ಈಗಾಗಲೇ ಶೇಕಡ 10ರಷ್ಟು ಹೆಚ್ಚಾಗಿದೆ, ಇನ್ನಷ್ಟು ಏರಿಕೆ ಸಾಧ್ಯತೆಯಿದೆ. ಈ ನಡುವೆ ಕೇಂದ್ರ ಸರ್ಕಾರವು ಅಕ್ಕಿ ರಫ್ತು ಮೇಲೆ ನಿರ್ಬಂಧವನ್ನು ವಿಧಿಸಿದೆ. ಇನ್ನು ಗೋಧಿ ಬೆಲೆಯು ಶೇಕಡ 12ರಷ್ಟು ಹೆಚ್ಚಾಗಿದೆ. ಈ ಹಿಂದೆ ಸರ್ಕಾರ ಗೋಧಿ ರಫ್ತಿನ ಮೇಲೆಯೂ ನಿರ್ಬಂಧವನ್ನು ವಿಧಿಸಿದೆ. ಭಾರತದಲ್ಲಿ ಪ್ರಮುಖವಾಗಿ ಬೇಳೆಕಾಳುಗಳು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದ್ದರಿಂದಾಗಿ ಇನ್ಮುಂದೆ ದಿನನಿತ್ಯದ ಖರ್ಚು ಇನ್ನಷ್ಟು ಹೆಚ್ಚಳವಾಗಲಿದೆ.
ತರಕಾರಿಗಳ ಹಣದುಬ್ಬರವು ತಾತ್ಕಾಲಿಕ ಎಂದು ಪರಿಗಣಿಸಲಾಗುತ್ತದೆ. ಆದರೆ ಬೇಳೆಕಾಳುಗಳ ಹಣದುಬ್ಬರವು ಖಾಯಂ ಆಗುವ ಸಾಧ್ಯತೆಯಿದೆ. ಇನ್ನು ಕಳೆದ ಕೆಲವು ತಿಂಗಳುಗಳಿಂದ ಕುಸಿತ ಕಾಣುತ್ತಿದ್ದ ರಿಟೇಲ್ ಹಣದುಬ್ಬರವು ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಳವಾಗಿದೆ. ಭಾರತದ ರಿಟೇಲ್ ಹಣದುಬ್ಬರವು ಜೂನ್ ತಿಂಗಳಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಮೇ ತಿಂಗಳಿನಲ್ಲಿ ಶೇಕಡ 4.31ರಷ್ಟಿದ್ದ ಹಣದುಬ್ಬರವು ಜೂನ್ ವೇಳೆಗೆ ಶೇಕಡ 4.81ರ ಮಟ್ಟಕ್ಕೆ ಏರಿಕೆಯಾಗಿದೆ.


Click it and Unblock the Notifications