ಕಳೆದ ಕೆಲವು ತಿಂಗಳುಗಳಿಂದ ಅಗತ್ಯ ವಸ್ತುಗಳು, ಆಹಾರ ಸಾಮಾಗ್ರಿಗಳ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಬೆಲೆಗಳು ಹೆಚ್ಚಳವಾಗಿ ನಮ್ಮ ದಿನನಿತ್ಯದ ಊಟದ ಖರ್ಚು ಏರಿಕೆಯಾಗಿದೆ. ಈ ನಡುವೆ ಈಗ ತೊಗರಿ ಬೇಳೆ ಬೆಲೆಯು ಕೂಡಾ ಗಗನಕ್ಕೇರಿದೆ.
ಕಳೆದ ಆರು ತಿಂಗಳಲ್ಲಿ ಮೂರನೇ ಬಾರಿಗೆ ತೊಗರಿ ಬೇಳೆ ಬೆಲೆಯು ಏರಿಕೆಯಾಗಿದೆ. ಅಕ್ಟೋಬರ್‌ನಲ್ಲಿ ರಿಟೇಲ್ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 120-160 ರೂಪಾಯಿ ಆಗಿತ್ತು. ಆದರೆ ಈಗ ಪ್ರಮುಖ ಭಾರತೀಯ ಆಹಾರ ಸಾಮಾಗ್ರಿಯಾದ ತೊಗರಿ ಬೇಳೆ ಬೆಲೆಯು ಕೆಜಿಗೆ 160-210 ರೂಪಾಯಿಗೆ ತಲುಪಿದೆ.

ಹಾಗಾದರೆ ಈ ಬೆಲೆ ಏರಿಕೆಗೆ ಕಾರಣವೇನು?
ಬಹುತೇಕ ಎಲ್ಲ ಬೆಲೆ ಏರಿಕೆಗಳಿಗೆ ಪ್ರಮುಖ ಕಾರಣವು ಹವಾಮಾನವಾಗಿದೆ. ಹೌದು, ಮಧ್ಯಸ್ಥಗಾರರು ಬೆಲೆಯಲ್ಲಿ ಮೂರನೇ ಒಂದು ಭಾಗದಷ್ಟು ಏರಿಕೆಗೆ ಅನಿಯಮಿತ ಮಳೆ ಮತ್ತು ಮಣ್ಣಿನ ತೇವಾಂಶದ ಸವಕಳಿ ಕಾರಣವೆಂದು ಹೇಳಿದ್ದಾರೆ. ಈ ಅನಿರೀಕ್ಷಿತ ಮಳೆಯು ಉತ್ಪಾದನೆಯ ಮೇಲೆ ಪ್ರಭಾವ ಬೀರಿದೆ ಎಂದು ಹೇಳುತ್ತಾರೆ.
ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ರಾಯಚೂರು ರಾಜ್ಯದ ಪ್ರಮುಖವಾಗಿ ತೊಗರಿ ಬೇಳೆಯನ್ನು ಬೆಳೆಯುವ ಜಿಲ್ಲೆಗಳಾಗಿವೆ. ಈ ಬೇಳೆಯು ರಾಬಿ ಬೆಳೆಯಾಗಿದೆ, ಆದರೆ ಚಳಿಗಾಲದಲ್ಲಿ ಅಕಾಲಿಕ ಮಳೆಯು ಕೊಯ್ಲಿನ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಶೇಕಡ 50ರಷ್ಟು ಬೆಳೆ ನಷ್ಟವಾಗಿದೆ ಎನ್ನುತ್ತಾರೆ ರೈತರು.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ತೊಗರಿ ಬೇಳೆ ಬೆಳೆಗಾರ ಭಾಸ್ಕರ್ ರಾವ್, "ಮೊದಲು ಮಳೆ ಬಾರದೇ ಇದ್ದುದರಿಂದ ಹೂ ಬಿಡುವುದು ತುಂಬಾ ತಡವಾಯಿತು. ನಂತರ ಅತಿವೃಷ್ಟಿ ಸುರಿದು ಸಣ್ಣಪುಟ್ಟ ಹೂವಿನ ಗಿಡಗಳಿಗೆ ಹಾನಿಯಾಗಿದೆ. ಈ ಬಾರಿ ಶೇಕಡ 50 ರಷ್ಟು ಬೆಳೆ ನಷ್ಟವಾಗಿದೆ," ಎಂದು ಹೇಳಿದ್ದಾರೆ.
ಜನವರಿ ವೇಳೆಗೆ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಆರ್ಗೋ ಅರ್ಥಶಾಸ್ತ್ರಜ್ಞ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, "ಬರ, ರೋಗಗಳು ಮತ್ತು ಅತಿವೃಷ್ಟಿಯಂತಹ ಅಂಶಗಳು ಒಟ್ಟಾರೆಯಾಗಿ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಿವೆ," ಎಂದು ತಿಳಿಸಿದ್ದಾರೆ.
"ತೊಗರಿ ಬೇಳೆ ಸತತವಾಗಿ ಹೆಚ್ಚಿನ ಬೇಡಿಕೆಯಲ್ಲಿರುವ ಬೇಳೆಗಳಲ್ಲಿ ಒಂದಾಗಿದೆ. ಎರಡನೆಯದಾಗಿ ಮಾರುಕಟ್ಟೆಯನ್ನು ಕುಶಲತೆಯಿಂದ ನಿರ್ವಹಿಸುವ ಮಧ್ಯವರ್ತಿಗಳ ಪ್ರಭಾವ ಮತ್ತು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಲು ಸರ್ಕಾರದ ಅಸಮರ್ಥತೆಯು ಕೂಡಾ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಗುತ್ತದೆ," ಎಂದು ಅಭಿಪ್ರಾಯಿಸಿದ್ದಾರೆ.
ನಿರಂತರ ಬೆಲೆ ಏರಿಕೆ
ಕಲಬುರಗಿಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಮಣ್ಣೂರ ಡಿಎಂ ಅವರು, ಸಾಕಷ್ಟು ಮಳೆಯಿಂದಾಗಿ ಹಿಂದಿನ ವರ್ಷದ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ತೊಗರಿ ಬೇಳೆ ಉತ್ಪಾದನೆ ಕಾಣಬಹುದು ಎಂದು ಒತ್ತಿ ಹೇಳಿದ್ದಾರೆ. "ಪ್ರಸ್ತುತ ಸ್ಟಾಕ್, ಪ್ರತಿ ಕ್ವಿಂಟಲ್‌ಗೆ 5,000 ರೂಪಾಯಿಗೆ ಸಂಗ್ರಹಿಸಲಾಗಿದೆ, ಈಗ 12,000 ರೂಪಾಯಿಗೆ ಸಂಗ್ರಹಿಸಬೇಕಾಗುತ್ತಿದೆ. ಜನವರಿ ಅಂತ್ಯದ ವೇಳೆಗೆ 15,000 ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆಯಿದೆ," ಎಂದರು.
ಧಾನ್ಯಗಳ ವ್ಯಾಪಾರಿಗಳ ಸಂಘ ಮತ್ತು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ ಚಂದ್ರ ಲಾಹೋಟಿ, ಕಲಬುರಗಿ ಸಗಟು ಮಾರುಕಟ್ಟೆಗೆ ಬರುವ ಹೊಸ ಬೆಳೆಗೆ ಈಗಾಗಲೇ ಕೆಜಿಗೆ 100 ರೂಪಾಯಿ ಆಗಿದೆ. ಜನವರಿ 15ರ ವೇಳೆಗೆ ಯಶವಂತಪುರ ಮಾರುಕಟ್ಟೆಯಲ್ಲಿ ಸಗಟು ಬೆಲೆ ಕೆಜಿಗೆ 200 ರೂಪಾಯಿಗೆ ತಲುಪಬಹುದು ಎಂದು ಅಭಿಪ್ರಾಯಿಸಿದ್ದಾರೆ.
ಒಟ್ಟಾರೆಯಾಗಿ ತೊಗರಿ ಬೇಳೆ ಬೆಲೆ ಏರಿಕೆಯಿಂದ ದಿನನಿತ್ಯದ ಖರ್ಚು ಹೆಚ್ಚಾಗುತ್ತಾ ಸಾಗುತ್ತಿದೆ. ಈಗಾಗಲೇ ಮನೆಯಲ್ಲಿ ತಯಾರಿಸುವ ಒಂದು ಪ್ಲೇಟ್ ಊಟದ ವೆಚ್ಚವು ಅಧಿಕವಾಗಿದೆ. ಈಗ ಬೇಳೆ ಬೆಲೆ ಏರಿಕೆಯಿಂದಾಗಿ ಮತ್ತಷ್ಟು ಅಧಿಕವಾಗಲಿದೆ.


Click it and Unblock the Notifications