ಮೇ 2022 ರಲ್ಲಿ ಉದ್ಯೋಗ ಭವಿಷ್ಯ ನಿಧಿ ಡೇಟಾಗೆ 16.82 ಲಕ್ಷ ಚಂದಾದಾರರನ್ನು ಸೇರಿಸಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬುಧವಾರ ತಿಳಿಸಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ಈ ಡೇಟಾದ ಪ್ರಕಾರ ಮೇ 2021 ರಲ್ಲಿ ಪಿಎಫ್ ಚಂದಾದಾರಿಕೆಗೆ ಹೋಲಿಕೆ ಮಾಡಿದಾಗ 2022 ರಲ್ಲಿ 7.62 ಲಕ್ಷ ಚಂದಾದಾರಿಕೆ ಅಧಿಕವಾಗಿದೆ ಎಂದು ಕೇಂದ್ರ ಸಚಿವಾಲಯವು ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ.
ಮೇ 2022 ರಲ್ಲಿ ಒಟ್ಟು 16.82 ಲಕ್ಷ ಮಂದಿ ಪಿಎಫ್ ಚಂದಾದಾರರು ಆಗಿದ್ದಾರೆ. ಈ ಪೈಕಿ ಸುಮಾರು 9.60 ಲಕ್ಷ ಮಂದಿ ಹೊಸದಾಗಿ ಭವಿಷ್ಯ ನಿಧಿ ಚಂದಾದಾರಿಕೆ ಮಾಡಿಕೊಂಡವರು. ಅಂದರೆ ಮೊದಲ ಬಾರಿಗೆ ನೌಕರರ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆ (ಇಪಿಎಫ್ ಮತ್ತು ಎಂಪಿ) ವ್ಯಾಪ್ತಿಗೆ ಒಳಪಟ್ಟಿದ್ದಾರೆ.
ಇನ್ನು ಸುಮಾರು 7.21 ಲಕ್ಷ ಮಂದಿ ಪಿಎಫ್ ಚಂದಾದಾರಿಕೆಯನ್ನು ಈ ಹಿಂದೆ ತೊರೆದಿದ್ದು, ಆದರೆ ಈಗ ಹೊಸ ಉದ್ಯೋಗ ಪಡೆದು ಹೊಸ ಸಂಸ್ಥೆಯ ಮೂಲಕ ಮತ್ತೆ ಪಿಎಫ್ ಚಂದಾದಾರರಾಗಿದ್ದಾರೆ. ಇಪಿಎಫ್ ಯೋಜನೆಯಡಿಯಲ್ಲಿ ಈ 7.21 ಲಕ್ಷ ಮಂದಿ ಚಂದಾದಾರಿಕೆ ಸದಸ್ಯತ್ವವನ್ನು ಮುಂದುವರೆಸುವ ಆಯ್ಕೆ ಮಾಡಿಕೊಂಡಿದ್ದಾರೆ.
ಯಾವ ವಯಸ್ಸಿನವರಿಂದ ಅಧಿಕ ಚಂದಾದಾರಿಕೆ!
ಕಳೆದ ಹಣಕಾಸು ವರ್ಷದಲ್ಲಿ ದಾಖಲಾದ ಮಾಸಿಕ ಸರಾಸರಿಗಿಂತ ಈ ತಿಂಗಳ ಹೊಸ ದಾಖಲಾತಿ ಹೆಚ್ಚಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಇನ್ನು ವಯಸ್ಸಿನ ಆಧಾರದಲ್ಲಿ ಹೋಲಿಕೆ ಮಾಡಿದಾಗ 22 ರಿಂದ 25 ವರ್ಷ ವಯಸ್ಸಿನ ಗುಂಪಿನಿಂದ 4.33 ಲಕ್ಷ ಪಿಎಫ್ ಚಂದಾದಾರರಾಗಿದ್ದಾರೆ. ಮೇ 2022 ರಲ್ಲಿ 22 ರಿಂದ 25 ವರ್ಷ ವಯಸ್ಸಿನ ಗುಂಪಿನವರೇ ಅಧಿಕವಾಗಿ ಪಿಎಫ್ ಚಂದಾದಾರಾಗಿದ್ದಾರೆ. ಅನೇಕ ಮಂದಿ ಮೊದಲ ಬಾರಿಗೆ ಈ ಯೋಜನೆಯ ಪಾಲುದಾರರು ಆಗುತ್ತಿದ್ದಾರೆ.
ಯಾವ ರಾಜ್ಯದಲ್ಲಿ ಅಧಿಕ ಪಿಎಫ್ ಚಂದಾದಾರಿಕೆ?
ಇನ್ನು ನಾವು ರಾಜ್ಯವಾರು ನೋಡುವಾಗ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ, ಗುಜರಾತ್ ಮತ್ತು ದೆಹಲಿ ರಾಜ್ಯಗಳಲ್ಲಿ ಸರಿಸುಮಾರು 11.34 ಲಕ್ಷ ಮಂದಿ ಪಿಎಫ್ ಚಂದಾದಾರಿಕೆ ಮಾಡಿಕೊಂಡಿದ್ದಾರೆ. ಮೇ ತಿಂಗಳಿನಲ್ಲಿ ಆದ ಒಟ್ಟು ಚಂದಾದಾರಿಕೆಯ ಪೈಕಿ ಸುಮಾರು ಶೇಕಡ 67.42ರಷ್ಟು ಚಂದಾದಾರಿಕೆಯು ಈ ಆರು ರಾಜ್ಯದ ಸಂಸ್ಥೆಗಳ ಮೂಲಕ ನಡೆದಿದೆ. ಇಲ್ಲಿ ಎಲ್ಲಾ ವಯಸ್ಸಿನವರ ಲೆಕ್ಕಾಚಾರ ಮಾಡಲಾಗಿದೆ.
ಲಿಂಗಾವಾರು ಹಂಚಿಕೆ ಹೇಗಿದೆ?
ಇನ್ನು ನಾವು ಲಿಂಗಾವಾರು ಹಂಚಿಕೆಯ ವಿಚಾರಕ್ಕೆ ಬಂದಾಗ ಅಧಿಕವಾಗಿ ಪುರುಷರ ಪಿಎಫ್ ಚಂದಾದಾರಿಕೆಯಾಗಿದೆ. ಮೇ ತಿಂಗಳಿನಲ್ಲಿ ಸರಿಸುಮಾರು 3.42 ಲಕ್ಷ ಮಂದಿ ಮಹಿಳೆಯರ ಚಂದಾದಾರಿಕೆಯಾಗಿದೆ. ಅಂದರೆ ಮೇ ತಿಂಗಳಿನಲ್ಲಿ ಒಟ್ಟು ಚಂದಾದಾರಿಕೆ ಶೇಕಡಾ 20.39 ರಷ್ಟು ಮಹಿಳೆಯರ ದಾಖಲಾತಿ ಆಗಿದೆ ಎಂದು ಕೇಂದ್ರ ಸರ್ಕಾರದ ಡೇಟಾವು ಸೂಚಿಸುತ್ತದೆ.
ಉದ್ಯಮವಾರು ಹಂಚಿಕೆ ಹೀಗಿದೆ ನೋಡಿ
ಇನ್ನು ನಾವು ಉದ್ಯಮವಾರು ಆಗಿ ಪಿಎಫ್ ಚಂದಾದಾರಿಕೆಯನ್ನು ನೋಡಿದಾಗ ಮುಖ್ಯವಾಗಿ ಎರಡು ಉದ್ಯಮಗಳಿಂದ ಅಧಿಕ ಮಂದಿಯ ಪಿಎಫ್ ಚಂದಾದಾರಿಕೆಯಾಗಿದೆ. 'ತಜ್ಞ ಸೇವೆಗಳು' (ಮಾನವಶಕ್ತಿ ಏಜೆನ್ಸಿಗಳು, ಖಾಸಗಿ ಭದ್ರತಾ ಏಜೆನ್ಸಿಗಳು ಮತ್ತು ಸಣ್ಣ ಗುತ್ತಿಗೆದಾರರನ್ನು ಒಳಗೊಂಡಿರುತ್ತದೆ.) ಹಾಗೂ ವ್ಯಾಪಾರ-ವಾಣಿಜ್ಯ ಸಂಸ್ಥೆಗಳು' ಒಟ್ಟು ಚಂದಾದಾರರ ಸೇರ್ಪಡೆಯ ಶೇಕಡ 50.51ರಷ್ಟು ಆಗಿದೆ. ಇದರ ಹೊರತಾಗಿ ಕಟ್ಟಡ ಮತ್ತು ನಿರ್ಮಾಣ ಉದ್ಯಮ, ಉಡುಪು ತಯಾರಿಕೆ, ಹಣಕಾಸು ಸಂಸ್ಥೆ, ಹೋಟೆಲ್ ಮತ್ತು ಕಬ್ಬಿಣ ಮತ್ತು ಉಕ್ಕು ಮುಂತಾದ ಇತರ ಉದ್ಯಮಗಳಲ್ಲಿ ಪಿಎಫ್ ಚಂದಾದಾರಿಕೆ ನಡೆದಿದೆ.


Click it and Unblock the Notifications