ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕ್‌ಗಳಲ್ಲಿ 2000 ರೂಪಾಯಿ ಕರೆನ್ಸಿ ನೋಟುಗಳನ್ನು ಬದಲಾವಣೆ ಮಾಡುವ ಅಥವಾ ಡೆಪಾಸಿಟ್ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿ. ವರದಿಯ ಪ್ರಕಾರ, ಅಂತಹ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದಿರುಗಿಸಲು ಸೆಂಟ್ರಲ್ ಬ್ಯಾಂಕ್ ಅಕ್ಟೋಬರ್ ಅಂತ್ಯದವರೆಗೆ ಸಮಯವನ್ನು ನೀಡುವ ನಿರೀಕ್ಷೆಯಿದೆ.
ಪ್ರಸ್ತುತ 2000 ರೂಪಾಯಿ ನೋಟುಗಳನ್ನು ಬದಲಾವಣೆ ಅಥವಾ ಡೆಪಾಸಿಟ್ ಮಾಡಲು ಸೆಪ್ಟೆಂಬರ್ 30 ರವರೆಗೆ ಅವಕಾಶ ಇದೆ. ಈ ಗಡುವು ಸಮೀಪಿಸಲು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಈ ನಡುವೆ ಹಿರಿಯ ಅಧಿಕಾರಿಯೊಬ್ಬರು ಆರ್‌ಬಿಐ ಈ ನೋಟು ಬದಲಾವಣೆ ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ಮನಿಕಂಟ್ರೋಲ್‌ನ ವರದಿ ಮಾಡಿದೆ.

ಶೇಕಡ 100 ರಷ್ಟು 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಈಗ ಈ ನೋಟುಗಳ ಬದಲಾವಣೆಗೆ ಇನ್ನಷ್ಟು ಸಮಯವನ್ನು ನೀಡಲು ಮುಂದಾಗುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಇನ್ನು ಈವರೆಗೆ ಚಲಾವಣೆಯಿಂದ ತೆಗೆದುಹಾಕಲಾದ ಒಟ್ಟು 2,000 ರೂಪಾಯಿ ಮೌಲ್ಯದ ನೋಟುಗಳಲ್ಲಿ ಶೇಕಡ 93 ರಷ್ಟು ನೋಟುಗಳನ್ನು ಬ್ಯಾಂಕ್‌ಗೆ ವಾಪಾಸ್ ನೀಡಲಾಗಿದೆ.
"ಯಾರು 2000 ರೂಪಾಯಿ ನೋಟನ್ನು ಬದಲಾವಣೆ ಮಾಡಲು ಈವರೆಗೂ ಸಾಧ್ಯವಾಗಿಲ್ಲವೋ, ಅವರಿಗೆ ಆರ್‌ಬಿಐ ಈ ಅವಕಾಶವನ್ನು ನೀಡಲು ಮುಂದಾಗಿದೆ. ನೋಟು ಬದಲಾವಣೆಗೆ ಅವಕಾಶ ನೀಡದ ಸಂದರ್ಭದಲ್ಲಿ ಕೆಲವರು ವಿದೇಶದಲ್ಲಿದ್ದರು, ಇನ್ನು ಕೆಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ, ಮೊದಲಾದ ತೊಂದರೆ ಉಂಟಾಗಿದೆ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ವಿಶೇಷ ಅವಕಾಶ ನೀಡಬಹುದು," ಎಂದು ಸೌತ್ ಇಂಡಿಯನ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
"ಬಹುಶಃ ಇಷ್ಟು ತಿಂಗಳಗಳ ಕಾಲ ವಿದೇಶದಲ್ಲಿ ಇದ್ದವರಿಗೆ ಆರ್‌ಬಿಐ ಅವಕಾಶವನ್ನು ನೀಡಬಹುದು," ಎಂದು ಆರ್‌ಬಿಐ ಮಾಜಿ ಡೆಪ್ಯೂಟಿ ಗವರ್ನರ್ ಆರ್ ಗಾಂಧಿ ಹೇಳಿದ್ದಾರೆ. "ಎರಡು ಸಾವಿರ ರೂಪಾಯಿ ನೋಟನ್ನು ಇನ್ನಷ್ಟು ವಾಪಾಸ್ ಪಡೆಯುವ ನಿಟ್ಟಿನಲ್ಲಿ ಆರ್‌ಬಿಐ ಗಡುವನ್ನು ವಿಸ್ತರಿಸುತ್ತದೆ ಎಂಬುದು ನನ್ನ ಭಾವನೆ," ಎಂದು ಆರ್‌ಬಿಐನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಚಂದನ್ ಸಿನ್ಹಾ ಹೇಳಿದ್ದಾರೆ.
ಆರ್‌ಬಿಐ ಮೇ 19, 2023 ರಂದು ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ವಾಪಾಸ್ ಪಡೆಯುವ ಬಗ್ಗೆ ಘೋಷಣೆ ಮಾಡಿದೆ. ಕ್ಲೀನ್-ನೋಟ್ ನೀತಿಯ ಭಾಗವಾಗಿ ಇದನ್ನು ಮಾಡಲಾಗುತ್ತದೆ ಎಂದು ಕೂಡಾ ಉಲ್ಲೇಖಿಸಿದೆ. ತಕ್ಷಣವೇ ಜಾರಿಗೆ ಬರುವಂತೆ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಬ್ಯಾಂಕುಗಳಿಗೆ ಸಲಹೆ ನೀಡಿತು.
ಆರ್‌ಬಿಐ ಹೇಳಿಕೆಯ ಪ್ರಕಾರ, ಆಗಸ್ಟ್ 31, 2023 ರಂತೆ ಬ್ಯಾಂಕ್‌ಗಳಲ್ಲಿ ಒಟ್ಟು 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳನ್ನು ಡೆಪಾಸಿಟ್ ಮಾಡಲಾಗಿದೆ. ಆಗಸ್ಟ್ 31 ರಂದು ಕೇವಲ 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು.


Click it and Unblock the Notifications