ಪರ್ಸನಲ್ ಲೋನ್ ರೂಪದಲ್ಲಿ ಇರುವ ಓವರ್ ಡ್ರಾಫ್ಟ್ ಖಾತೆ ಹೊಂದಿರುವ ಸಾಲಗಾರರಿಗೆ ಎಲೆಕ್ಟ್ರಾನಿಕ್ ಕಾರ್ಡ್ಸ್ ಗಳನ್ನು ವಿತರಿಸುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಅನುಮತಿ ನೀಡಿದೆ. ಈಗ ಉಳಿತಾಯ ಖಾತೆ ಇರುವವರಿಗೆ ಹೇಗೆ ಡೆಬಿಟ್ ಕಾರ್ಡ್ ಕೊಡಲಾಗುತ್ತದೋ ಅದೇ ರೀತಿಯ ಕಾರ್ಡ್ ಇದು.
ಓವರ್ ಡ್ರಾಫ್ಟ್ ಖಾತೆದಾರರು ಆನ್ ಲೈನ್ ಮತ್ತು ನಗದು ಹೊರತಾದ ವ್ಯವಹಾರಗಳನ್ನು ಮಾಡುವುದಕ್ಕೆ ಈ ಕಾರ್ಡ್ ಬಳಸಬಹುದು. ಇದರರ್ಥ ನಗದು ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ ಪ್ರಧಾನ ಮಂತ್ರಿ ಜನ್ ಧನ್ ಯೋಜನಾ (PMJDY) ಖಾತೆಗಳಿಗೆ ಇರುವ ಓವರ್ ಡ್ರಾಫ್ಟ್ ವ್ಯವಸ್ಥೆಗೆ ಈ ನಗದು ನಿರ್ಬಂಧವು ಅನ್ವಯಿಸುವುದಿಲ್ಲ.
ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ, ಓವರ್ ಡ್ರಾಫ್ಟ್ ಖಾತೆಯಲ್ಲಿ ಸಾಲ ಪಡೆದವರಿಗೆ ಮಾತ್ರ ಈ ಕಾರ್ಡ್ ನೀಡಲಾಗುತ್ತದೆ. ಓವರ್ ಡ್ರಾಪ್ಟ್ ಅಂದರೆ ಅದರ ಸ್ವರೂಪ ಪರ್ಸನಲ್ ಲೋನ್ ರೂಪದಲ್ಲಿ ಇರುತ್ತದೆ. ಹಾಗಂತ ನಿರ್ದಿಷ್ಟವಾಗಿ ಪರ್ಸನಲ್ ಲೋನ್ ಇರುವವರಿಗೆ ಈ ಕಾರ್ಡ್ ನೀಡುವುದಿಲ್ಲ.
ಪರ್ಸನಲ್ ಲೋನ್ ಗೂ ಓ.ಡಿ.ಗೂ ವ್ಯತ್ಯಾಸ ಏನು?
ಪರ್ಸನಲ್ ಲೋನ್ ಅನ್ನು ಬ್ಯಾಂಕ್ ಗಳು ನಿರ್ದಿಷ್ಟ ಅವಧಿಗೆ, ಇಂತಿಷ್ಟು ಬಡ್ಡಿ ದರ ಎಂದು ಇಎಂಐ ಆಧಾರದಲ್ಲಿ ಲೆಕ್ಕಾಚಾರ ಮಾಡಿ, ನೀಡುತ್ತವೆ. ಸಾಲ ಪಡೆದವರು ಅವಧಿಯ ಕೊನೆ ತನಕ ಇಎಂಐ ಪಾವತಿಸುತ್ತಾರೆ. ಓ.ಡಿ. ಖಾತೆಯಲ್ಲಿ ಸಾಲದ ಮೊತ್ತವನ್ನು ಬಳಸಿಕೊಂಡಾಗ ಮಾತ್ರ ಬಡ್ಡಿ ಪಾವತಿಸುತ್ತಾರೆ. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಓ.ಡಿ. ಮಿತಿ ಎರಡು ಲಕ್ಷ ರುಪಾಯಿ ಇರುತ್ತದೆ ಅಂದುಕೊಳ್ಳಿ. ಆತ ಅದರಿಂದ 25 ಸಾವಿರ ರುಪಾಯಿ ಮಾತ್ರ ಬಳಸುತ್ತಾರೆ. ಆಗ ಬಡ್ಡಿಯನ್ನು 25 ಸಾವಿರ ರುಪಾಯಿ ಮೇಲೆ ಮಾತ್ರ ಪಾವತಿಸಬೇಕು, ಬಡ್ಡಿಯನ್ನು ದಿನದ ಆಧಾರದಲ್ಲಿ ವಿಧಿಸಲಾಗುತ್ತದೆ. ಪ್ರತಿ ತಿಂಗಳು ಪಾವತಿಸಬೇಕು.
ಏನಿದು ಓ.ಡಿ. ವ್ಯವಸ್ಥೆ?
ಓ.ಡಿ. ಸಾಲದಲ್ಲಿ ಬಳಕೆ ಮೇಲೆ ಯಾವುದೇ ನಿರ್ಬಂಧ ಇಲ್ಲ. ಮಾಮೂಲಿ ಪರ್ಸನಲ್ ಲೋನ್ ನಲ್ಲಿ ಸಾಲ ಮಂಜೂರು ಆಗುವ ಮುಂಚೆ ಯಾವುದಕ್ಕೆ ಆ ಸಾಲ ಪಡೆಯುತ್ತಿರುವುದು ಎಂಬ ಕಾರಣವನ್ನು ತಿಳಿಸಬೇಕಾಗುತ್ತದೆ. ಇನ್ನು ಓ.ಡಿ. ಸಾಲಕ್ಕೆ ಎಲೆಕ್ಟ್ರಾನಿಕ್ ಕಾರ್ಡ್ ವಿತರಣೆ ಮಾಡಿದರೆ ಆ ಅವಧಿ ಮುಗಿಯುವ ತನಕ ದೇಶೀಯ ವ್ಯವಹಾರಗಳಿಗೆ ಮಾತ್ರ ಅದನ್ನು ಬಳಸಬೇಕು. ಮೊದಲೇ ಹೇಳಿದ ಹಾಗೆ ಓವರ್ ಡ್ರಾಫ್ಟ್ ಎಂಬುದು ಪರ್ಸನಲ್ ಲೋನ್ ಸ್ವರೂಪದ್ದಾಗಿರುತ್ತದೆ. ಬ್ಯಾಂಕ್ ಗಳು ಸಂಬಳದ ಓವರ್ ಡ್ರಾಫ್ಟ್, ಹೋಮ್ ಲೋನ್ ಓ.ಡಿ. ಅಥವಾ ಅಗತ್ಯ ಇರುವವರಿಗೆ ಮಾಮೂಲಿಯಾಗಿ ಕೂಡ ಓವರ್ ಡ್ರಾಫ್ಟ್ ವ್ಯವಸ್ಥೆ ಮಾಡಿಕೊಡುತ್ತವೆ.
ಪರ್ಸನಲ್ ಲೋನ್ ಗಿಂತ ಉತ್ತಮವೇ?
ಅಂಥ ಓ.ಡಿ. ಸಾಲಕ್ಕೆ ಪ್ರೊಸೆಸಿಂಗ್ ಫೀ ಇರುತ್ತದೆ. ಅದರ ಬಡ್ಡಿ ದರವು ಪರ್ಸನಲ್ ಲೋನ್ ಗಳಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಈಗ ಹೊಸ ನಿಯಮದಿಂದ ಗ್ರಾಹಕರಿಗೆ ಅಗತ್ಯ ಇರುವ ನಗದು ಪ್ರಮಾಣ ದೊರೆಯುವುದಕ್ಕೆ ಅನುಕೂಲ ಆಗುತ್ತದೆ. ಇನ್ನು ಈಗ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಆಗಿರುವ ವೇಳೆ ಕಷ್ಟವನ್ನು ಎದುರಿಸಲು ನೆರವಾಗುತ್ತದೆ. ಅಲ್ಪಾವಧಿಯಲ್ಲಿ ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಆತಂಕಗೊಂಡಿರುವವರು ಪರ್ಸನಲ್ ಲೋನ್ ಪ್ರಯತ್ನಿಸಿ, ಅವಧಿಯ ಕೊನೆ ತನಕ ಬಡ್ಡಿ ಪಾವತಿಸುವ ಬದಲಿಗೆ ಓವರ್ ಡ್ರಾಫ್ಟ್ ಸಾಲವನ್ನು ಆಯ್ಕೆ ಮಾಡಿಕೊಳ್ಳಬಹುದು.


Click it and Unblock the Notifications