ಒಂದು ಸರ್ಕಾರವು ಸರಿಯಾದ ರೀತಿಯಲ್ಲಿ ನಡೆಯಬೇಕಾದರೆ ಹಣಕಾಸು ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಯಾವುದೇ ದೇಶವಾಗಲಿ, ರಾಜ್ಯವಾಗಲಿ ಹಣವಿಲ್ಲದೆ ನಡೆಯಲಾರದು. ಸರ್ಕಾರದ ಬೊಕ್ಕಸಕ್ಕೆ ಪ್ರಮುಖ ಕೊಡುಗೆಯನ್ನು ನೀಡುವುದು ಜನರು ಪಾವತಿಸುವ ಆದಾಯ ತೆರಿಗೆಯಾಗಿದೆ. ಆದರೆ ಈ ರಾಜ್ಯವೊಂದರಲ್ಲಿ ಜನರಿಗೆ ಆದಾಯ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ.
ಹೌದು, ಸರ್ಕಾರವು ಮೂಲವಾಗಿ ಆದಾಯ ತೆರಿಗೆ, ಇತರೆ ತೆರಿಗೆಗಳಿಂದಲೇ ನಡೆಯುವಾಗ, ಈ ಒಂದು ರಾಜ್ಯದಲ್ಲಿ ಜನರಿಗೆ ಆದಾಯ ತೆರಿಗೆ ಮೇಲೆ ವಿನಾಯಿತಿಯನ್ನು ನೀಡಲಾಗಿದೆ. ಇದಕ್ಕೆ ಕಾರಣವನ್ನು ಕೂಡಾ ನೀಡಲಾಗಿದೆ.
ಭಾರತದ ಈಶಾನ್ಯ ರಾಜ್ಯವಾದ ಸಿಕ್ಕಿಂನಲ್ಲಿ ಮೂಲ ನಿವಾಸಿಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 10(26AAA) ಅಡಿಯಲ್ಲಿ ಈ ರಾಜ್ಯದ ಮೂಲ ನಿವಾಸಿಗಳಿಗೆ ತೆರಿಗೆ ಪಾವತಿ ಮಾಡುವುದರಿಂದ ವಿನಾಯಿತಿಯನ್ನು ನೀಡಲಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಈ ರಾಜ್ಯದಲ್ಲೇಕೆ ವಿಶೇಷ ತೆರಿಗೆ ವಿನಾಯಿತಿ
ಸಿಕ್ಕಿಂ ರಾಜ್ಯವು ಹಿಂದೆ ಹಲವಾರು ಷರತ್ತುಗಳ ಆಧಾರದಲ್ಲಿ ಭಾರತದೊಂದಿಗೆ ವಿಲೀನವಾಗಿ ಉಳಿದುಕೊಂಡಿದೆ. ಸಿಕ್ಕಿಂ ರಾಜ್ಯದಲ್ಲಿ ಈ ಹಿಂದೆ ಇದಂತೆ ವಿಶೇಷ ಸ್ಥಾನಮಾನ ಇರಲಿದೆ, ಭಾರತದ ಸಂವಿಧಾನದ ಆರ್ಟಿಕಲ್ 371(f) ಅಡಿಯಲ್ಲಿ ಹಳೆಯ ಕಾನೂನು ಇಲ್ಲಿ ಇರಲಿದೆ ಎಂಬುವುದು ಷರತ್ತುಗಳಾಗಿದೆ. ಆದ್ದರಿಂದಾಗಿ ಸಿಕ್ಕಿಂ ತನ್ನದೇ ಆದ ತೆರಿಗೆ ಕಾನೂನನ್ನು ಹೊಂದಿದೆ. ಈ ತೆರಿಗೆ ರೆಗ್ಯೂಲೇಷನ್ 1948ರಲ್ಲಿ ಜಾರಿಯಾಗಿರುವಂತದ್ದು ಆಗಿದೆ. ಸಿಕ್ಕಿಂ 1975ರಿಂದ ಈ ತೆರಿಗೆ ಕಾನೂನನ್ನೇ ಪಾಲನೆ ಮಾಡುತ್ತಾ ಬಂದಿದೆ.
ಪ್ಯಾನ್ ಕಾರ್ಡ್ ಅಗತ್ಯವಿಲ್ಲ!
ದೇಶದಲ್ಲಿ ಪ್ಯಾನ್ ಕಾರ್ಡ್ ಪ್ರಸ್ತುತ ಪ್ರಮುಖ ದಾಖಲೆಯಾಗಿದೆ. ಎಲ್ಲ ನಾಗರಿಕರು ಪ್ಯಾನ್ ಕಾರ್ಡ್ ಹೊಂದಿರಬೇಕಾಗಿದೆ. ಬ್ಯಾಂಕ್ ಖಾತೆ ತೆರೆಯುವಾಗ, ಯಾವುದೇ ಹೂಡಿಕೆಯನ್ನು ಮಾಡುವಾಗ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸು ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಸಿಕ್ಕಿಂ ರಾಜ್ಯದಲ್ಲಿ ಪ್ಯಾನ್ ಕಾರ್ಡ್ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಅಂದರೆ ಸಿಕ್ಕಿಂನಲ್ಲಿ ಪ್ಯಾನ್ ಕಾರ್ಡ್ ಅಗತ್ಯವಿಲ್ಲ. ಇದರಲ್ಲೂ ವಿನಾಯಿತಿ ಲಭ್ಯವಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ, ಮ್ಯೂಚುವಲ್ ಫಂಡ್, ಮೊದಲಾದವುಗಳಲ್ಲಿ ಹೂಡಿಕೆ ಮಾಡಬೇಕಾದರೆ ಸೆಬಿಯಿಂದ ಸಿಕ್ಕಿಂ ಜನರು ಪ್ಯಾನ್ ಕಾರ್ಡ್ ವಿನಾಯಿತಿ ಪಡೆಯುತ್ತಾರೆ.
ಯಾರು ಈ ತೆರಿಗೆ ವಿನಾಯಿತಿಗೆ ಅರ್ಹರು
ಸಿಕ್ಕಿಂ ಭಾರತದೊಂದಿಗೆ ವಿಲೀನವಾಗಿ ಉಳಿದಾಗ ಅಂದರೆ 1975ಕ್ಕೂ ಮುನ್ನವೇ ಸಿಕ್ಕಿಂನಲ್ಲಿ ನೆಲೆಸಿದವರಿಗೆ ಈ ತೆರಿಗೆ ವಿನಾಯಿತಿಯು ಲಭ್ಯವಾಗುತ್ತದೆ. ಈ ಮೇಲೆ ಹೇಳಿದಂತೆ ಮೂಲ ನಿವಾಸಿಗಳಿಗೆ ತೆರಿಗೆ ವಿನಾಯಿತಿ ಇದೆ. ಆಸೋಸಿಯೇಷನ್ ಆಫ್ ಓಲ್ಡ್ ಸೆಟ್ಲರ್ಸ್ ಆಫ್ ಸಿಕ್ಕಿಂ (AOSS) ಈ ಬಗ್ಗೆ ಅರ್ಜಿಯನ್ನು ಕೂಡಾ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸುಪ್ರೀಂ ಕೋರ್ಟ್ ವಿವರಣೆಯನ್ನು ಸೆಕ್ಷನ್ 10 (26AAA) ಗೆ ಬದಲಾಯಿಸಲು ರಾಜ್ಯಕ್ಕೆ ಆದೇಶಿಸಿತ್ತು. ಏಪ್ರಿಲ್ 26, 1975 ರಂದು ಅಥವಾ ಅದಕ್ಕೂ ಮೊದಲು ಸಿಕ್ಕಿಂನಲ್ಲಿ ನೆಲೆಯಾಗಿರುವ ಎಲ್ಲಾ ಭಾರತೀಯ ನಾಗರಿಕರಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿಯನ್ನು ವಿಸ್ತರಿಸುವ ಷರತ್ತನ್ನು ಸಂಯೋಜಿಸಲು ರಾಜ್ಯಕ್ಕೆ ಸೂಚನೆ ನೀಡಲಾಯಿತು.


Click it and Unblock the Notifications