ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟುಗಳನ್ನು ಮೇ ತಿಂಗಳಿನಲ್ಲಿಯೇ ಚಲಾವಣೆಯಿಂದ ಹಿಂದಕ್ಕೆ ಪಡೆದಿದೆ. ಈಗಾಗಲೇ 2000 ರೂಪಾಯಿ ನೋಟುಗಳನ್ನು ವಾಪಾಸ್ ನೀಡುವ ಗಡುವು ಕೊನೆಯಾಗಿದೆ. ಆದರೂ ಕೂಡಾ ಇಂದಿಗೂ ಸುಮಾರು 9,760 ಕೋಟಿ ರೂಪಾಯಿ ನೋಟುಗಳು ಜನರ ಕೈಯಲ್ಲಿದೆ ಎಂದರೆ ನೀವು ನಂಬುತ್ತೀರಾ?
ಹೌದು ಸುಮಾರು ಶೇಕಡ 97.26 ರಷ್ಟು 2,000 ರೂಪಾಯಿ ಬ್ಯಾಂಕ್ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಆದರೆ ಈಗಲೂ 9,760 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಜನರಲ್ಲಿಯೇ ಇದೆ. ಈ ಬಗ್ಗೆ ಆರ್‌ಬಿಐ ಮಾಹಿತಿಯನ್ನು ನೀಡಿದೆ.

"2,000 ರೂಪಾಯಿ ಬ್ಯಾಂಕ್ ನೋಟುಗಳನ್ನು ಮೇ 19, 2023 ರಂದು ಆರ್‌ಬಿಐ ಚಲಾವಣೆಯಿಂದ ವಾಪಾಸ್ ಪಡೆಯುವ ಘೋಷಣೆ ಮಾಡಿದೆ. ಅದಾದ ಸಂದರ್ಭದಲ್ಲಿ 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಜನರ ಬಳಿ ಇದ್ದವು. ನವೆಂಬರ್ 30, 2023 ರ ಲೆಕ್ಕಾಚಾರದ ಪ್ರಕಾರ ಜನರ ಬಳಿ 9,760 ಕೋಟಿ ರೂಪಾಯಿಯ 2000 ರೂಪಾಯಿ ನೋಟುಗಳಿದೆ," ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ 2016 ರಲ್ಲಿ ಚಾಲ್ತಿಯಲ್ಲಿದ್ದ 1,000 ರೂಪಾಯಿ ಮತ್ತು 500 ರೂಪಾಯಿ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆದು, ನಂತರ 2000 ರೂಪಾಯಿ ಬ್ಯಾಂಕ್ ನೋಟುಗಳನ್ನು ಪರಿಚಯಿಸಲಾಗಿದೆ. 2,000 ರೂಪಾಯಿ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಮೇ 19 ರಂದು ಆರ್‌ಬಿಐ ಘೋಷಿಸಿದೆ.
2,000 ರೂಪಾಯಿಯ ಬ್ಯಾಂಕ್ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿರುತ್ತದೆ. ಜನರು ದೇಶಾದ್ಯಂತ 19 ಆರ್‌ಬಿಐ ಕಛೇರಿಗಳಲ್ಲಿ 2,000 ರೂಪಾಯಿ ಬ್ಯಾಂಕ್ ನೋಟುಗಳನ್ನು ಡೆಪಾಸಿಟ್ ಮಾಡಬಹುದು ಮತ್ತು/ಅಥವಾ ಬದಲಾಯಿಸಬಹುದು. ಜನರು ಯಾವುದೇ ಪೋಸ್ಟ್ ಆಫೀಸ್‌ನಿಂದ ಎರಡು ಸಾವಿರ ರೂಪಾಯಿ ನೋಟುಗಳನ್ನು ಆರ್‌ಬಿಐಗೆ ಕಳುಹಿಸಬಹುದು. ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಅಂತಹ ನೋಟುಗಳನ್ನು ಹೊಂದಿರುವ ಸಾರ್ವಜನಿಕರು ಮತ್ತು ಘಟಕಗಳು ಆರಂಭದಲ್ಲಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್ ಖಾತೆಗಳಿಗೆ ಸೆಪ್ಟೆಂಬರ್ 30 ರೊಳಗೆ ಡೆಪಾಸಿಟ್ ಮಾಡಲು ತಿಳಿಸಲಾಗಿತ್ತು. ನಂತರ ಗಡುವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಬ್ಯಾಂಕ್ ಶಾಖೆಗಳಲ್ಲಿ ಡೆಪಾಸಿಟ್ ಮತ್ತು ವಿನಿಮಯ ಸೇವೆಗಳನ್ನು ಅಕ್ಟೋಬರ್ 7 ರಂದು ನಿಲ್ಲಿಸಲಾಯಿತು.
ಅಕ್ಟೋಬರ್ 8 ರಿಂದ, ಆರ್‌ಬಿಐನ 19 ಕಚೇರಿಗಳಲ್ಲಿ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳುವ ಅಥವಾ ಸಮಾನವಾದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಆಯ್ಕೆಯನ್ನು ಜನರಿಗೆ ಒದಗಿಸಲಾಗಿದೆ. ಈ ನಡುವೆ ಆರ್‌ಬಿಐ ಕಚೇರಿಗಳಲ್ಲಿ 2,000 ರೂಪಾಯಿ ನೋಟುಗಳ ಡೆಪಾಸಿಟ್, ವಿನಿಮಯಕ್ಕಾಗಿ ಸರತಿ ಸಾಲುಗಳು ಕಂಡು ಬಂದಿದ್ದವು.
ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ನೋಟುಗಳನ್ನು ನೀವು ಡೆಪಾಸಿಟ್ ಮಾಡಬಹುದು ಅಥವಾ ಬದಲಾವಣೆ ಮಾಡಿಕೊಳ್ಳಬಹುದು. ಅಥವಾ ಪೋಸ್ಟ್ ಮೂಲಕ ನೋಟುಗಳನ್ನು ಕಳುಹಿಸಬಹುದು. ಅದನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.


Click it and Unblock the Notifications