ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಹಿಂದೆ ಮೇ ತಿಂಗಳಿನಿಂದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿದೆ. ಹಾಗೆಯೇ ಈ ನೋಟುಗಳನ್ನು ಬದಲಾವಣೆ ಮಾಡಲು 4 ತಿಂಗಳಿಗೂ ಅಧಿಕ ಕಾಲವಕಾಶ ನೀಡಿದೆ. ಆದರೆ ಇನ್ನು ಕೂಡಾ ಸುಮಾರು 10,000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟು ಜನರ ಕೈಯಲ್ಲಿದೆ.
ಹೌದು, "2,000 ಮುಖಬೆಲೆಯ ನೋಟುಗಳನ್ನು ಈಗಲೂ ಆರ್‌ಬಿಐಗೆ ವಾಪಾಸ್ ನೀಡಲಾಗುತ್ತಿದೆ. 10,000 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಜನರ ಬಳಿ ಇವೆ," ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ. ಹಾಗೆಯೇ ಈ ನೋಟುಗಳನ್ನು ಸಹ ಹಿಂತಿರುಗಿಸಲಾಗುತ್ತದೆ ಅಥವಾ ಡೆಪಾಸಿಟ್ ಮಾಡಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"2,000 ರೂಪಾಯಿ ನೋಟುಗಳು ವಾಪಸ್ ಬರುತ್ತಿದ್ದು, ಜನರ ಬಳಿ ಕೇವಲ 10,000 ಕೋಟಿ ರೂಪಾಯಿಗಳು ಮಾತ್ರ ಬಾಕಿ ಉಳಿದಿದೆ. ಈ ಮೊತ್ತವೂ ವಾಪಸ್ ಬರುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ 2,000 ರೂಪಾಯಿ ಮುಖಬೆಲೆಯ ಸುಮಾರು ಶೇಕಡ 87 ರಷ್ಟು ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಲಾಗಿದೆ. ಉಳಿದವುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಈಗ ಗವರ್ನರ್ ನೀಡಿರುವ ಲೆಕ್ಕಾಚಾರ ಪ್ರಕಾರ ಇನ್ನೂ ಕೂಡಾ 10,000 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಜನರಲ್ಲಿ ಇದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19 ರಂದು 2000 ರೂಪಾಯಿಯನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ತಿಳಿಸಿದೆ. 2016ರಲ್ಲಿ ಮೋದಿ ಸರ್ಕಾರವು 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ದಿಡೀರ್ ಆಗಿ ಬ್ಯಾನ್ ಮಾಡಿದ ಸಂದರ್ಭದಲ್ಲಿ ಆರ್‌ಬಿಐ ಈ 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ತಂದಿತ್ತು.
2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಹಾಗೆಯೇ ಚಲಾವಣೆಯಲ್ಲಿರುವ ಶೇಕಡ 88 ಕ್ಕಿಂತ ಹೆಚ್ಚು ಕರೆನ್ಸಿಯನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದರು.
ಇನ್ನು 2000 ರೂಪಾಯಿ ನೋಟುಗಳನ್ನು ಆರಂಭಿಕವಾಗಿ ಜನರು ಮತ್ತು ಸಂಸ್ಥೆಗಳು ಸೆಪ್ಟೆಂಬರ್ 30 ರೊಳಗೆ ಬದಲಾವಣೆ ಮಾಡಿಕೊಳ್ಳಲು ಅಥವಾ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡಲು ತಿಳಿಸಲಾಗಿತ್ತು. ಆದರೆ ಗಡುವನ್ನು ಬಳಿಕ ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಅಕ್ಟೋಬರ್ 7 ರಿಂದ ಬ್ಯಾಂಕ್‌ನಲ್ಲಿ 2000 ರೂಪಾಯಿ ನೋಟು ಪಡೆಯುವುದನ್ನು ನಿಲ್ಲಿಸಲಾಗಿದೆ.
ಅಕ್ಟೋಬರ್ 8 ರಿಂದ ಜನರು 19 ಆರ್‌ಬಿಐ ಕಚೇರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ಆರ್‌ಬಿಐ ನೀಡಿದೆ. ಒಂದು ಬಾರಿಗೆ 20 ಸಾವಿರ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ಆರ್‌ಬಿಐ ಕಚೇರಿಗಳಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.


Click it and Unblock the Notifications