ಹೊಸ ಹಣಕಾಸು ವರ್ಷ ಆರಂಭವಾಗಲು ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಹೊಸ ವರ್ಷ ಆರಂಭವಾಗುವಾಗ ನಾವು ಎಂದಿಗೂ ಕೂಡಾ ಹೊಸ ಹೂಡಿಕೆ, ಹೊಸ ಹಣಕಾಸು ನಿರ್ಧಾರಗಳನ್ನು ಮಾಡುವುದು ಉತ್ತಮ. ಇದು ನಮ್ಮ ಹಣಕಾಸು ಸ್ಥಿತಿಯ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಮಾರ್ಚ್ ತಿಂಗಳ ಮೊದಲ ದಿನದಂದು ಪರಿಷ್ಕರಣೆ ಮಾಡಿ ದರ ಏರಿಕೆ ಮಾಡಲಾಗಿದೆ. ಈ ತಿಂಗಳು ಕೂಡಾ ದರ ಏರಿಕೆ ಮಾಡಿದರೆ ಇನ್ನಷ್ಟು ನಮ್ಮ ಮಾಸಿಕ ಬಜೆಟ್ ಲೆಕ್ಕಾಚಾರದ ಮೇಲೆ ಪ್ರಭಾವ ಬೀರಲಿದೆ.
ನೀವು ಸಾಲವನ್ನು ಈಗಾಗಲೇ ಪಡೆದಿದ್ದರೆ ಅಥವಾ ನೀವು ಸಾಲವನ್ನು ಪಡೆಯುವ ನಿರ್ಧಾರವನ್ನು ಮಾಡಿದ್ದರೆ, ಮುಂದಿನ ತಿಂಗಳಿನಲ್ಲಿ ನಡೆಯುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾನೆಟರಿ ಪಾಲಿಸಿ ಕಮೀಟಿ ಸಭೆಯ ಮೇಲೆ ಗಮನಹರಿಸುವುದು ಮುಖ್ಯವಾಗುತ್ತದೆ. ಯಾಕೆಂದರೆ ಆರ್‌ಬಿಐ ಸಭೆ ಬಳಿಕ ಮತ್ತೆ ರೆಪೋ ದರ ಏರಿಕೆ ಮಾಡುವ ಸಾಧ್ಯತೆಯಿದೆ. ಇದನ್ನು ಹೊರತುಪಡಿಸಿ ಎನ್‌ಪಿಎಸ್, ಅಂಚೆ ಕಚೇರಿ ಮೊದಲಾದ ಹೂಡಿಕೆ ನಿಯಮಗಳು ಬದಲಾವಣೆಯಾಗುತ್ತದೆ. ಮುಂದಿನ ತಿಂಗಳಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

1. ಹಣಕಾಸು ವರ್ಷ 2023-24ರ ಆದಾಯ ತೆರಿಗೆ ನಿಯಮ ಬದಲಾವಣೆ
ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತೆರಿಗೆ ಸಂಬಂಧಿತ ಹಲವಾರು ಬದಲಾವಣೆಗಳು ಆಗಲಿದೆ. ಪ್ರಮುಖವಾಗಿ ಬಜೆಟ್‌ನಲ್ಲಿ ಮಂಡಿಸಲಾದ ತೆರಿಗೆ ಬಗ್ಗೆಗಿನ ಘೋಷಣೆಗಳು ಜಾರಿಗೆ ಬರಲಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದ್ದು ಅದು ಮುಂದಿನ ಹಣಕಾಸು ವರ್ಷ ಅಂದರೆ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಸಾಂಪ್ರಾದಾಯಿಕ ಎಂಡೊಮೆಂಟ್ ಜೀವ ವಿಮಾ ಪಾಲಿಸಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.
2. ಡೆಬ್ಟ್ ಮ್ಯೂಚುವಲ್ ಫಂಡ್‌ಗಿಲ್ಲ ಎಲ್‌ಟಿಸಿಜಿ ತೆರಿಗೆ ಪ್ರಯೋಜನ
ಫಿಕ್ಸಿಡ್ ಡೆಪಾಸಿಟ್‌ನಿಂದ ತಾವು ಪಡೆಯುತ್ತಿದ್ದ ಪ್ರಯೋಜನವನ್ನು ಡೆಬ್ಟ್ ಮ್ಯೂಚುವಲ್ ಫಂಡ್‌ದಾರರು ಕಳೆದುಕೊಳ್ಳಲಿದ್ದಾರೆ. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಡೆಬ್ಟ್ ಮ್ಯೂಚುವಲ್ ಫಂಡ್ ಯೋಜನೆ ಹೂಡಿಕೆಯಲ್ಲಿ ಲಭ್ಯವಾಗುವ ಲಾಭವನ್ನು ನಿಮ್ಮ ಆದಾಯ ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತೆರಿಗೆಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಅಂದರೆ ಮಾರ್ಚ್ 31ರರೆಗೆ ದೀರ್ಘ ಅವಧಿಯ ಅಂದರೆ 3 ವರ್ಷಕ್ಕಿಂತ ಅಧಿಕ ಸಮಯದ ಡೆಬ್ಟ್ ಫಂಡ್‌ನ ಲಾಭದ ಮೇಲೆ ಎಲ್ಲ ಲೆಕ್ಕಾಚಾರದ ಬಳಿಕ ಶೇಕಡ 20ರಷ್ಟು ತೆರಿಗೆ ವಿಧಿಸಲಾಗುತ್ತದೆ, ಅದು ಹೊಸ ತೆರಿಗೆಗಿಂತ ಕಡಿಮೆಯಾಗಿದೆ. ಆದರೆ ಏಪ್ರಿಲ್ 1ರಿಂದ ಈ ಪ್ರಯೋಜನ ಇರಲಾರದು.

3. ಎಸ್‌ಸಿಎಸ್‌ಎಸ್, ಪಿಒಎಂಐಎಸ್ ಹೂಡಿಕೆ ಮಿತಿ ಏರಿಕೆ
2023ರ ಬಜೆಟ್‌ನಲ್ಲಿ 2 ಪ್ರಮುಖ ಯೋಜನೆಗಳ ಹೂಡಿಕೆ ಮಿತಿ ಏರಿಕೆ ಮಾಡಲಾಗಿದ್ದು ಇದು ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಕನಿಷ್ಟ ಹೂಡಿಕೆ ಮಿತಿಯನ್ನು 15 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಈ ಯೋಜನೆಗೆ ಶೇಕಡ 8ರಷ್ಟು ಬಡ್ಡಿದರ ನೀಡಲಾಗುತ್ತದೆ. ಬಡ್ಡಿದರ ತ್ರೈಮಾಸಿಕವಾಗಿ ಪಾವತಿಸಲಾಗುತ್ತದೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಹೂಡಿಕೆ ಮಿತಿಯನ್ನು 4.5 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಜಾಯಿಂಟ್ ಖಾತೆಯ ಹೂಡಿಕೆ ಮಿತಿಯನ್ನು 9 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಯೋಜನೆಗೆ ಮಾಸಿಕವಾಗಿ ಶೇಕಡ 7.1ರಷ್ಟು ಬಡ್ಡಿದರ ಜಮೆ ಮಾಡಲಾಗುತ್ತದೆ.
4. ಹೊಸ ಎನ್‌ಪಿಎಸ್ ನಿಯಮ
ವಾರ್ಷಿಕ ಆನ್ಯೂಟಿ ಪಾವತಿ ಶೀರ್ಘ ಹಾಗೂ ಸರಳವಾಗಿ ಆಗಬೇಕಾದರೆ ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡುವುದನ್ನು ಪಿಎಫ್‌ಆರ್‌ಡಿಎ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಿದೆ. ಎನ್‌ಪಿಎಸ್‌ನ ಟೈರ್ 1 ಖಾತೆಯಲ್ಲಿ ನೀವು 5 ವರ್ಷಗಳ ಬಳಿಕ ಶೇಕಡ 25ರಷ್ಟು ಕೊಡುಗೆಯನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಚಿಕಿತ್ಸೆ, ಉನ್ನತ ಶಿಕ್ಷಣ, ಮಕ್ಕಳ ವಿವಾಹ, ಆಸ್ತಿ ಖರೀದಿಗೆ ಮೊತ್ತ ವಿತ್‌ಡ್ರಾ ಮಾಡುವ ಅವಕಾಶವಿದೆ. ಹೂಡಿಕೆಯ ಸಂಪೂರ್ಣ ಅವಧಿಯಲ್ಲಿ 3 ಬಾರಿ ಮಾತ್ರ ವಿತ್‌ಡ್ರಾ ಮಾಡುವ ಅವಕಾಶ ನೀಡಲಾಗುತ್ತದೆ.
5. ಮತ್ತೆ ರೆಪೋ ದರ ಹೆಚ್ಚಾಗುತ್ತಾ?
ಆರ್‌ಬಿಐ ಎಂಪಿಸಿ ಸಭೆಯು ಫೆಬ್ರವರಿ 6ರಿಂದ ನಡೆಯಲಿದೆ. ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2022ರ ಮೇ ತಿಂಗಳಿನಿಂದ ಈವರೆಗೆ ನಡೆದ ಪ್ರತಿ ಎಂಪಿಸಿ ಸಭೆಯ ಬಳಿಕ ಆರ್‌ಬಿಐ ರೆಪೋ ದರ ಹೆಚ್ಚಿಸಿದೆ. ಈವರೆಗೆ 250 ಬಿಪಿಎಸ್ ಏರಿದೆ, ದರ ಶೇಖಡ 6.50ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ಆರ್‌ಬಿಐ ಮತ್ತೆ 25 ಬಿಪಿಎಸ್ ರೆಪೋ ದರ ಹೆಚ್ಚಿಸಲಿದೆ. ಆ ಬಳಿಕ ದರ ಏರಿಕೆ ಮಾಡದು ಎಂಬುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಏಪ್ರಿಲ್‌ನಲ್ಲಿ ಮತ್ತೆ ರೆಪೋ ದರ ಏರಿಕೆ ಮಾಡಿದರೆ ಬ್ಯಾಂಕುಗಳು ಕೂಡಾ ಸಾಲದ ಬಡ್ಡಿದರ, ಎಫ್‌ಡಿ ದರ ಹೆಚ್ಚಳ ಮಾಡಲಿದೆ. ಸಾಲದ ಬಡ್ಡಿದರ ಏರಿಕೆ ಜನರಿಗೆ ಪ್ರಭಾವ ಬೀರಲಿದೆ.
6. ಚಿನ್ನ ಆಭರಣದ ಮೇಲೆ ಎಚ್‌ಯುಐಡಿ ನಂಬರ್
ಭಾರತದಲ್ಲಿ ಏಪ್ರಿಲ್ 1ರಿಂದ ಹಾಲ್‌ಮಾರ್ಕ್ ಮಾಡಲಾದ ಹಾಲ್‌ಮಾರ್ಕ್ ಯುನಿಕ್ ಐಡೆಂಟಿಫಿಕೇಷನ್ (ಎಚ್‌ಯುಐಡಿ) ಇರುವ ಬಂಗಾರದ ಜ್ಯುವೆಲ್ಲರಿಗಳನ್ನು ಮಾತ್ರ ಮಾರಾಟ ಮಾಡುವ ಅವಕಾಶವಿದೆ. ಎಚ್‌ಯುಐಡಿ ಆರು ಡಿಜಿಟ್‌ನ ಅಂಕಿ ಸಂಖ್ಯೆಗಳನ್ನು ಒಳಗೊಂಡ ಕೋಡ್ ಆಗಿದೆ.
7. ಖಾತೆಯ ತೆರಿಗೆ ರಚನೆ ಬದಲಾಯಿಸಿದ ಆಕ್ಸಿಸ್ ಬ್ಯಾಂಕ್
ಉಳಿತಾಯ ಹಾಗೂ ವೇತನ ಖಾತೆಯ ಮೇಲಿನ ತೆರಿಗೆ ರಚನೆಯನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆಕ್ಸಿಸ್ ಬ್ಯಾಂಕ್ ಬದಲಾವಣೆ ಮಾಡಿದೆ. ಪ್ರೆಸ್ಟಿಜ್ ಸೇವಿಂಗ್ ಅಕೌಂಟ್‌ನಲ್ಲಿ ಕನಿಷ್ಠ ಠೇವಣಿ ಮೊತ್ತವನ್ನು ಏರಿಸಿದೆ. ತ್ರೈಮಾಸಿಕವಾಗಿ ಖಾತೆಯಲ್ಲಿ 75,000 ರೂಪಾಯಿ ಇರುವುದು ಮುಖ್ಯವಾಗಿದೆ. ಇನ್ನು ಮಿನಿಮಮ್ ಬ್ಯಾಲೆನ್ಸ್ ಶುಲ್ಕ ಪರಿಷ್ಕರಿಸಿದೆ. ಈ ಹಿಂದೆ ಶೂನ್ಯದಿಂದ 600 ರೂಪಾಯಿವರೆಗೆ ಶುಲ್ಕವಿತ್ತು. ಆದರೆ ಅದನ್ನು 50 ರೂಪಾಯಿಯಿಂದ 600 ರೂಪಾಯಿವರೆಗೆ ಎಂದು ನಿಗದಿ ಮಾಡಲಾಗಿದೆ.


Click it and Unblock the Notifications