Personal Finance: ಗಮನಿಸಿ ಆಗಸ್ಟ್‌ನಲ್ಲಿ ಈ ಹಣಕಾಸು ನಿಯಮಗಳು ಬದಲಾವಣೆ

ಜುಲೈ ತಿಂಗಳು ಕೊನೆಯಾಗುತ್ತಿದೆ. ಆಗಸ್ಟ್ ತಿಂಗಳು ಆರಂಭವಾಗಲು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಅದಕ್ಕೂ ಮುನ್ನ ನಾವು ಮಾಡಿಮುಗಿಸಬೇಕಾದ ಹಲವಾರು ಕಾರ್ಯಗಳು ಇದೆ. ಇನ್ನು ಆಗಸ್ಟ್‌ ತಿಂಗಳಿನಲ್ಲಿ ನಮ್ಮ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುವ ಹಲವಾರು ಬದಲಾವಣೆಗಳು ಕೂಡಾ ಇದೆ.

ಪ್ರತಿ ತಿಂಗಳಿನಲ್ಲಿ ಆಗುವ ಬದಲಾವಣೆಗಳು ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಅದರಂತೆಯೇ ಆಗಸ್ಟ್ ತಿಂಗಳಲ್ಲಿಯೂ ನಿಮ್ಮ ಉಳಿತಾಯ ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರುವ ಬದಲಾವಣೆಗಳು ಉಂಟಾಗಲಿದೆ. ಹಲವಾರು ಬ್ಯಾಂಕ್‌ಗಳಲ್ಲಿ ಎಫ್‌ಡಿ ಅವಧಿಯು ಕೊನೆಯಾಗುತ್ತಿದೆ. ನೀವು ಗಮನಿಸಬೇಕಾದ ಕೆಲವು ಬದಲಾವಣೆಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ ಮುಂದೆ ಓದಿ...

 ಗಮನಿಸಿ ಆಗಸ್ಟ್‌ನಲ್ಲಿ ಈ ಹಣಕಾಸು ನಿಯಮಗಳು ಬದಲಾವಣೆ

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ

ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ನಿಮಗೆ ಇಲ್ಲೊಂದು ಕೆಟ್ಟ ಸುದ್ದಿ ಇದೆ. ಖಾಸಗಿ ವಲಯದ ಬ್ಯಾಂಕ್ ಆಗಸ್ಟ್ 12, 2023 ರಿಂದ ಜಾರಿಗೆ ಬರುವಂತೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಕೆಲವು ಕ್ಯಾಶ್‌ಬ್ಯಾಕ್ ಮತ್ತು ಪಾಯಿಂಟ್‌ಗಳನ್ನು ಕಡಿಮೆ ಮಾಡಿದೆ. ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಆಗಸ್ಟ್ 12, 2023 ರಿಂದ, ಫ್ಲಿಪ್‌ಕಾರ್ಟ್‌ನಲ್ಲಿ ಪ್ರಯಾಣ-ಸಂಬಂಧಿತ ವೆಚ್ಚಗಳನ್ನು ಪಾವತಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ಶೇಕಡ 1.5ರಷ್ಟು ಕ್ಯಾಶ್‌ಬ್ಯಾಕ್‌ ನೀಡಲಾಗುತ್ತದೆ.

ಬ್ಯಾಂಕ್ ಪ್ರಕಾರ, ಸರ್ಕಾರಿ ಸೇವೆಗಳಿಗೆ ಪಾವತಿ ಮಾಡಲು ಟ್ರಾವೆಲ್ ಕೋಡ್ (MCC) 9399 ಅನ್ನು ಬಳಸುವುದರಿಂದ ನಿಮಗೆ ಯಾವುದೇ ಕ್ಯಾಶ್‌ಬ್ಯಾಕ್ ದೊರೆಯುವುದಿಲ್ಲ. ಹೆಚ್ಚುವರಿಯಾಗಿ, ನೀವು ಇಂಧನ ಖರೀದಿ, ಗಿಫ್ಟ್ ಕಾರ್ಡ್ ಮೂಲಕ ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾದಲ್ಲಿ ಮಾಡಿದ ಖರೀದಿಗಳು, ಇಎಂಐ ವಹಿವಾಟುಗಳು ಇತ್ಯಾದಿಗಳ ಮೇಲಿನ ಕ್ಯಾಶ್‌ಬ್ಯಾಕ್‌ ಪಡೆಯಲು ಸಾಧ್ಯವಾಗುವುದಿಲ್ಲ.

ಎಸ್‌ಬಿಐ ಅಮೃತ ಕಳಶ

ಎಸ್‌ಬಿಐನ ಅಮೃತ ಕಳಶ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ಆಗಸ್ಟ್ 15, 2023 ಆಗಿದೆ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಈ 400-ದಿನಗಳ ಅವಧಿಯ ಡೆಪಾಸಿಟ್ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇಕಡ 7.1ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇಕಡ 7.6ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ವಿಶೇಷ ಎಫ್‌ಡಿ ಯೋಜನೆಯಲ್ಲಿ ನಮಗೆ ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಆಯ್ಕೆ ಇರುತ್ತದೆ. ಇನ್ನು ನಾವು ಎಫ್‌ಡಿ ಮೇಲೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಇಂಡಿಯನ್ ಬ್ಯಾಂಕ್ ಇಂಡ್ ಸೂಪರ್ 400 ಡೇಸ್

ಮಾರ್ಚ್ 6, 2023 ರಿಂದ ಜಾರಿಗೆ ಬರುವಂತೆ, ಇಂಡಿಯನ್ ಬ್ಯಾಂಕ್ ಇಂಡ್ ಸೂಪರ್ 400 ಡೇಸ್ ಎಂಬ ವಿಶೇಷ ಡೆಪಾಸಿಟ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 400 ದಿನಗಳ ಅವಧಿಯ ಹೂಡಿಕೆಗಳಿಗೆ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. 10000 ರೂಪಾಯಿಯಿಂದ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರು ಶೇಕಡ 7.25ರಷ್ಟು, ಹಿರಿಯ ನಾಗರಿಕರು ಶೇಕಡ 7.75ರಷ್ಟು ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳು ಶೇಕಡ 8ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಈ ಯೋಜನೆಯು ಆಗಸ್ಟ್ 31, 2023ಕ್ಕೆ ಕೊನೆಯಾಗಲಿದೆ.

ಇಂಡಿಯನ್ ಬ್ಯಾಂಕ್ ಇಂಡ್ ಸೂಪರ್ 300 ಡೇಸ್

ವೆಬ್‌ಸೈಟ್‌ನ ಪ್ರಕಾರ, "ವಿಶೇಷ 300 ದಿನಗಳ ಅವಧಿಯ ವಿಶೇಷ ಡೆಪಾಸಿಟ್ ಇಂಡ್ ಸೂಪರ್ 300 ಡೇಸ್ ಅನ್ನು 01.07.2023 ರಿಂದ ಪ್ರಾರಂಭಿಸಿದೆ. 5000 ರೂಪಾಯಿಯಿಂದ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ 300 ದಿನಗಳ ಎಫ್‌ಡಿ ಆಯ್ಕೆಯನ್ನು ಬ್ಯಾಆಂಕ್ ನೀಡುತ್ತದೆ." ಈ ಯೋಜನೆಯು ಆಗಸ್ಟ್ 31, 2023 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇಂಡಿಯನ್ ಬ್ಯಾಂಕ್ ಈಗ ಸಾಮಾನ್ಯ ಜನರಿಗೆ ಶೇಕಡ 7.05, ಹಿರಿಯ ನಾಗರಿಕರಿಗೆ ಶೇಕಡ 7.55ರಷ್ಟು ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಶೇಕಡ 7.80ರಷ್ಟು ಬಡ್ಡಿದರಗಳನ್ನು ನೀಡುತ್ತದೆ.

ತಡವಾಗಿ ಆದಾಯ ತೆರಿಗೆ ರಿಟರ್ನ್‌ ಫೈಲಿಂಗ್‌ಗೆ ದಂಡ

ಜುಲೈ 31, 2023 ರೊಳಗೆ ತೆರಿಗೆ ಪಾವತಿದಾರರು ತಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಸಲ್ಲಿಸದಿದ್ದರೆ, ದಂಡಗಳು ಅನ್ವಯಿಸುತ್ತವೆ. ಈ ದಿನಾಂಕದ ಬಳಿಕ ನೀವು ಐಟಿಆರ್ ಅನ್ನು ಸಲ್ಲಿಸಿದರೆ ನಿಮಗೆ ಆಗಸ್ಟ್ 1, 2023 ರಿಂದ 5,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಗಡುವಿನೊಳಗೆ ನೀವು ನಿಮ್ಮ ಐಟಿಆರ್ ಸಲ್ಲಿಸಲು ವಿಫಲವಾದರೆ, ನೀವು ಡಿಸೆಂಬರ್ 31, 2023 ರವರೆಗೆ ರಿಟರ್ನ್ ಸಲ್ಲಿಸಬಹುದು. ಆದರೆ ದಂಡ ಪಾವತಿಸಬೇಕಾಗುತ್ತದೆ. ವಾರ್ಷಿಕ ಒಟ್ಟು ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವ ತೆರಿಗೆದಾರರಿಗೆ ಕೇವಲ 1,000 ರೂಪಾಯಿ ದಂಡವಾಗಿದೆ.

ಐಡಿಎಫ್‌ಸಿ ಬ್ಯಾಂಕ್ ಅಮೃತ ಮಹೋತ್ಸವ ಎಫ್‌ಡಿ

ಐಡಿಬಿಐ ಬ್ಯಾಂಕ್ 375 ದಿನಗಳವರೆಗಿನ ವಿಶೇಷ ಅಮೃತ ಮಹೋತ್ಸವ ಎಫ್‌ಡಿ ಮೇಲೆ ಗರಿಷ್ಠವಾಗಿ ಶೇಕಡ 7.60ರಷ್ಟು ಬಡ್ಡಿದರವನ್ನು ನೀಡುತ್ತದೆ. ಆಗಸ್ಟ್ 15, 2023 ರವರೆಗೆ ಈ ಎಫ್‌ಡಿ ಅವಧಿಯಾಗಿದೆ. ಇದರ ಹೊರತಾಗಿ, ಅಸ್ತಿತ್ವದಲ್ಲಿರುವ 444 ದಿನಗಳವರೆಗಿನ ಅಮೃತ ಮಹೋತ್ಸವ ಎಫ್‌ಡಿಯಡಿಯಲ್ಲಿ ಕಾಲೇಬಲ್ ಆಯ್ಕೆಯಡಿಯಲ್ಲಿ ಗರಿಷ್ಠವಾಗಿ ಶೇಕಡ 7.65ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ನಾನ್ ಕಾಲೇಬಲ್ ಆಯ್ಕೆಯಡಿಯಲ್ಲಿ ಗರಿಷ್ಠವಾಗಿ ಶೇಕಡ 7.75ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. 375 ದಿನಗಳ ಮತ್ತೊಂದು ಹೊಸ ಯೋಜನೆಯು ಜುಲೈ 14, 2023 ರಿಂದ ಜಾರಿಗೆ ಬರುತ್ತದೆ. ಆಗಸ್ಟ್ 15, 2023 ರವರೆಗೆ ಮಾನ್ಯವಾಗಿರುತ್ತದೆ.

ಎಲ್‌ಪಿಜಿ ದರ ಬದಲಾವಣೆ ಸಾಧ್ಯತೆ

ಎಲ್‌ಪಿಜಿ ದರವನ್ನು ಪ್ರತಿ ತಿಂಗಳು ಕೂಡಾ ಪರಿಷ್ಕರಣೆ ಮಾಡಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಈ ಬಾರಿ ಆಗಸ್ಟ್ 1 ರಂದು ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯು ಮೇ ಮತ್ತು ಏಪ್ರಿಲ್‌ನಲ್ಲಿ ಇಳಿಕೆ ಮಾಡಲಾಗಿದೆ. 14 ಕೆಜಿ ಗ್ಯಾಸ್ ಸಿಲಿಂಡರ್‌ನ ಬೆಲೆ ಮಾತ್ರ ಹಲವಾರು ತಿಂಗಳುಗಳಿಂದ ಬದಲಾವಣೆಯಾಗದೆ ಉಳಿದಿದೆ. ಆದ್ದರಿಂದಾಗಿ ಈ ಬಾರಿ ಎಲ್‌ಪಿಜಿ ದರ ಇಳಿಕೆಯಾಗುವ ಸಾಧ್ಯತೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+