ಜೂನ್ ತಿಂಗಳು ಕೊನೆಗೊಳ್ಳುತ್ತಿದ್ದು, ಇನ್ನು ಎರಡು ದಿನಗಳಲ್ಲಿ ಜುಲೈ ತಿಂಗಳು ಆರಂಭವಾಗಲಿದೆ. ಸಾಮಾನ್ಯವಾಗಿ ಹೊಸ ತಿಂಗಳಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ. ಅದರಂತೆಯೇ ಜುಲೈನಲ್ಲಿಯೂ ಕೂಡಾ ಹಲವಾರು ಬದಲಾವಣೆಗಳು ಆಗಲಿದೆ. ಪ್ರತಿ ತಿಂಗಳು ಕೂಡಾ ಮೊದಲ ದಿನದಂದು ಅಡುಗೆ ಅನಿಲ, ವಾಣಿಜ್ಯ ಅನಿಲ, ಸಿಎನ್‌ಜಿ-ಪಿಎನ್‌ಜಿ ಮೊದಲಾದವುಗಳು ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಇದು ಖಂಡಿತವಾಗಿ ನಿಮ್ಮ ಹಣಕಾಸು ಸ್ಥಿತಿಯ ಮೇಲೆ ಪ್ರಭಾವ ಉಂಟು ಮಾಡುತ್ತದೆ.
ಸಾಮಾನ್ಯವಾಗಿ ಯಾವುದೇ ಹಣಕಾಸು ಬದಲಾವಣೆಗಳು ಕೂಡಾ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಅದರಂತೆಯೇ ಜುಲೈ ತಿಂಗಳಿನಲ್ಲಿ ಆಗುವ ಹಣಕಾಸು ಬದಲಾವಣೆಗಳು ಖಂಡಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಹಣಕಾಸಿನ ಮೇಲೆ ಉಂಟಾಗುವ ಪ್ರಭಾವವನ್ನು ನೀವು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಾದರೆ ನೀವು ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದಿರುವುದು ಮುಖ್ಯವಾಗುತ್ತದೆ. ಜುಲೈನಲ್ಲಿ ಆಗುವ ಬದಲಾವಣೆಗಳ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೆವೆ ಮುಂದೆ ಓದಿ...

ಎಲ್‌ಪಿಜಿ ದರ ಬದಲಾವಣೆ ಸಾಧ್ಯತೆ
ಎಲ್‌ಪಿಜಿ ದರವನ್ನು ಪ್ರತಿ ತಿಂಗಳು ಕೂಡಾ ಪರಿಷ್ಕರಣೆ ಮಾಡಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಈ ಬಾರಿ ಜುಲೈ 1 ರಂದು ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಯು ಮೇ ಮತ್ತು ಏಪ್ರಿಲ್‌ನಲ್ಲಿ ಇಳಿಕೆ ಮಾಡಲಾಗಿದೆ. 14 ಕೆಜಿ ಗ್ಯಾಸ್ ಸಿಲಿಂಡರ್‌ನ ಬೆಲೆ ಮಾತ್ರ ಹಲವಾರು ತಿಂಗಳುಗಳಿಂದ ಬದಲಾವಣೆಯಾಗದೆ ಉಳಿದಿದೆ. ಆದ್ದರಿಂದಾಗಿ ಈ ಬಾರಿ ಎಲ್‌ಪಿಜಿ ದರ ಇಳಿಕೆಯಾಗುವ ಸಾಧ್ಯತೆ ಇದೆ.
ಕ್ರೆಡಿಟ್ ಕಾರ್ಡ್ ವೆಚ್ಚಗಳ ಮೇಲೆ ಶೇಕಡ 20ರಷ್ಟು ಟಿಸಿಎಸ್
ಜುಲೈ 1, 2023 ರಿಂದ, ಹೊಸ ನಿಬಂಧನೆಯನ್ನು ಜಾರಿಗೊಳಿಸಲಾಗುವುದು, ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ವೆಚ್ಚಗಳನ್ನು ಟಿಸಿಎಸ್‌ಗೆ ಒಳಪಡಿಸಲಾಗುತ್ತದೆ. ಇದರರ್ಥ 7 ಲಕ್ಷ ರೂಪಾಯಿಗಿಂತ ಹೆಚ್ಚಿನ ವೆಚ್ಚಗಳಿಗೆ ಶೇಕಡ 20ರಷ್ಟು ಟಿಸಿಎಸ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳಿಗೆ ಈ ಶುಲ್ಕವನ್ನು ಶೇಕಡ 5ಕ್ಕೆ ಇಳಿಕೆ ಮಾಡಲಾಗುತ್ತದೆ. ಇದಲ್ಲದೆ, ನೀವು ವಿದೇಶದಲ್ಲಿ ಶಿಕ್ಷಣ ಪಡೆಯಲು ಶಿಕ್ಷಣ ಸಾಲವನ್ನು ಪಡೆಯುತ್ತಿದ್ದರೆ, ಟಿಸಿಎಸ್ ಶುಲ್ಕವನ್ನು ಶೇಕಡ 0.5ಕ್ಕೆ ಇಳಿಕೆ ಮಾಡಲಾಗುತ್ತದೆ.
ಸಿಎನ್‌ಜಿ ಮತ್ತು ಪಿಎನ್‌ಜಿ ಬೆಳಗಳಲ್ಲಿ ಏರಿಳಿತ
ಈ ಹಿಂದಿನ ತಿಂಗಳುಗಂತೆಯೇ ಜುಲೈನಲ್ಲಿಯೂ ಸಿಎನ್‌ಜಿ ಮತ್ತು ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬೆಲೆಯಲ್ಲಿ ಬದಲಾವಣೆಗಳಾಗಬಹುದು. ದೆಹಲಿ ಮತ್ತು ಮುಂಬೈನಲ್ಲಿನ ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಬೆಲೆಗಳನ್ನು ನಿಯಮಿತವಾಗಿ ಪರಿಷ್ಕರಣೆ ಮಾಡುತ್ತದೆ. ಮುಂದಿನ ತಿಂಗಳು ಕೂಡಾ ಈ ಪರಿಷ್ಕರಣೆಯನ್ನು ಮಾಡುವ ಸಾಧ್ಯತೆ ಇದೆ.
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಗಡುವು
ಪ್ರತಿಯೊಬ್ಬ ತೆರಿಗೆದಾರರು ಕೂಡಾ ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಕೆ ಮಾಡುವುದು ಅಗತ್ಯವಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವು ಜುಲೈನಲ್ಲಿ ಸಮೀಪಿಸುತ್ತಿದೆ. ನೀವು ಇನ್ನೂ ಕೂಡಾ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡದಿದ್ದರೆ, ಜುಲೈ 31ರೊಳಗೆ ಅದನ್ನು ಪೂರ್ಣಗೊಳಿಸುವುದು ಅತೀ ಮುಖ್ಯವಾಗಿದೆ. ನೀವು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸದಿದ್ದರೆ, ನೀವು ಅಧಿಕ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.


Click it and Unblock the Notifications