ಆಗಸ್ಟ್ ತಿಂಗಳು ಕೊನೆಯಾಗುತ್ತಿದ್ದು, ಸೆಪ್ಟೆಂಬರ್ ತಿಂಗಳು ಆರಂಭಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಪ್ರತಿ ವರ್ಷವೂ ಕೂಡಾ ಸೆಪ್ಟೆಂಬರ್ ತಿಂಗಳೆಂದರೆ ಹಬ್ಬದ ಸೀಸನ್ ಆರಂಭವೆಂದೇ ಅರ್ಥವಾಗಿದೆ. ಸೆಪ್ಟೆಂಬರ್‌ನಲ್ಲಿ ಆರಂಭವಾಗುವ ಹಬ್ಬಗಳು ಡಿಸೆಂಬರ್‌ವರೆಗೂ ನಿರಂತರವಾಗಿ ಇರಲಿದೆ. ಹಾಗೆಯೇ ಪ್ರತಿ ತಿಂಗಳಲ್ಲಿ ಆಗುವ ಹಣಕಾಸು ಬದಲಾವಣೆಗಳು ಈ ತಿಂಗಳಿನಲ್ಲಿಯೂ ಆಗಲಿದೆ.
ನೀವು ಈಗಲೇ ಮಾಡಿಮುಗಿಸಬೇಕಾದ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಆಗುವ ಹಣಕಾಸು ಬದಲಾವಣೆಗಳ ಬಗ್ಗೆ ನೀವು ಈಗಲೇ ತಿಳಿದಿದ್ದರೆ ಸಹಾಯಕವಾಗಬಹುದು. ಏಕೆಂದರೆ ಪ್ರತಿ ಹಣಕಾಸು ಬದಲಾವಣೆಗಳು ಕೂಡಾ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುವುದು ಖಚಿತ. ಸೆಪ್ಟೆಂಬರ್‌ನಲ್ಲಿ ಹಲವಾರು ಹಣಕಾಸು ಬದಲಾವಣೆಗಳಾಗಲಿದೆ. ಇಲ್ಲಿದೆ ವಿವರ.

ಆಕ್ಸಿಸ್ ಬ್ಯಾಂಕ್ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ
ಆಕ್ಸಿಸ್ ಬ್ಯಾಂಕ್ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳು ಸೆಪ್ಟೆಂಬರ್ 1, 2023 ರಂದು ಬದಲಾಗುತ್ತವೆ. ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ನಿರ್ದಿಷ್ಟ ವಹಿವಾಟುಗಳು ಇನ್ನು ಮುಂದೆ ಇಡಿಜಿಇ ಪ್ರಶಸ್ತಿಗಳಿಗೆ ಅಥವಾ ವಾರ್ಷಿಕ ಶುಲ್ಕ ವಿನಾಯಿತಿಗಳಿಗೆ ಸೆಪ್ಟೆಂಬರ್ 1 ರಿಂದ ಅರ್ಹವಾಗಿರುವುದಿಲ್ಲ.
ಆಕ್ಸಿಸ್ ಬ್ಯಾಂಕ್ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್ ಕ್ಲೈಂಟ್‌ಗಳು ಸೆಪ್ಟೆಂಬರ್ 1, 2023 ರಿಂದ ಪ್ರಾರಂಭವಾಗುವಂತೆ 1,50,000 ರೂಪಾಯಿವರೆಗಿನ ಒಟ್ಟು ಮಾಸಿಕ ವೆಚ್ಚದಲ್ಲಿ ಖರ್ಚು ಮಾಡಿದ ಪ್ರತಿ 200 ರೂಪಾಯಿಗೆ 12 ಎಡ್ಜ್ ರಿವಾರ್ಡ್ ಪಾಯಿಂಟ್‌ಗಳನ್ನು ಸ್ವೀಕರಬಹುದು. ಸೆಪ್ಟೆಂಬರ್ 1 ರಿಂದ, ಹೊಸ ಕಾರ್ಡುದಾರರಿಗೆ ವಾರ್ಷಿಕ ಶುಲ್ಕವನ್ನು 12,500 ರೂಪಾಯಿ + ಜಿಎಸ್‌ಟಿಗೆ ಏರಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ವಾರ್ಷಿಕ ಶುಲ್ಕವು 10,000 ರೂಪಾಯಿ + ಜಿಎಸ್‌ಟಿ ಆಗಿರಲಿದೆ.
ಎಲ್‌ಪಿಜಿ ದರ ಬದಲಾವಣೆ ಸಾಧ್ಯತೆ
ಎಲ್‌ಪಿಜಿ ದರವನ್ನು ಪ್ರತಿ ತಿಂಗಳು ಕೂಡಾ ಪರಿಷ್ಕರಣೆ ಮಾಡಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಈ ಬಾರಿ ಸೆಪ್ಟೆಂಬರ್ 1 ರಂದು ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. ವಾಣಿಜ್ಯ ಅನಿಲ ಬೆಲೆ ಇಳಿಕೆ ಮಾಡಲಾಗಿದೆ. ಆದರೆ 14 ಕೆಜಿ ಗ್ಯಾಸ್ ಸಿಲಿಂಡರ್‌ನ ಬೆಲೆ ಮಾತ್ರ ಹಲವಾರು ತಿಂಗಳುಗಳಿಂದ ಬದಲಾವಣೆಯಾಗದೆ ಉಳಿದಿದೆ. ಆದ್ದರಿಂದಾಗಿ ಈ ಬಾರಿ ಎಲ್‌ಪಿಜಿ ದರ ಇಳಿಕೆಯಾಗುವ ಸಾಧ್ಯತೆ ಇದೆ.
ಸಂಬಳ ಪಡೆಯುವವರಿಗೆ ನಿಯಮ ಬದಲಾವಣೆ
ನೀವು ಕೆಲಸ ಮಾಡುವವರಾದರೆ, ನಿಮ್ಮ ಕಂಪನಿಯಿಂದ ಮನೆ ಪಡೆದಿದ್ದರೆ ಅಥವಾ ನಿಮಗೆ ಕಂಪನಿ ಬಾಡಿಗೆ ಪಾವತಿಸುವುದಾರೆ ನಿಮ್ಮ ಒಳ್ಳೆಯ ಸುದ್ದಿ ಇಲ್ಲಿದೆ. ಸಿಬಿಡಿಟಿ ಪರ್ಕ್ವಿಸೈಟ್ ಮೌಲ್ಯಮಾಪನದ ಮಿತಿಯನ್ನು ಕಡಿಮೆ ಮಾಡಿದೆ. ಅಂದರೆ ಈಗ ಕಚೇರಿಯಿಂದ ಪಡೆದ ಮನೆಗೆ ಬದಲಾಗಿ ಸಂಬಳದಲ್ಲಿ ಕಡಿಮೆ ತೆರಿಗೆ ಕಡಿತ ಇರುತ್ತದೆ. ಅಂದರೆ ನಿಮ್ಮ ಕೈಗೆ ಹೆಚ್ಚು ಸಂಬಳ ಬರುತ್ತದೆ. ಈ ನಿಯಮವನ್ನು ಮುಂದಿನ ತಿಂಗಳಿನಿಂದಲೇ ಅಂದರೆ ಸೆಪ್ಟೆಂಬರ್‌ನಿಂದಲೇ ಜಾರಿಗೆ ತರಲಾಗುತ್ತಿದೆ.
ಆಧಾರ್ ಅಪ್‌ಡೇಟ್ ಉಚಿತ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಉಚಿತ ಆಧಾರ್ ಅಪ್‌ಡೇಟ್ ಗಡುವನ್ನು ಜೂನ್ 14 ರಿಂದ ಸೆಪ್ಟೆಂಬರ್ 14, 2023 ರವರೆಗೆ 3 ತಿಂಗಳವರೆಗೆ ವಿಸ್ತರಿಸಿದೆ. ನಿಮ್ಮ ಆಧಾರ್ ಕಾರ್ಡ್ ಅಪ್‌ಡೇಟ್ ಆಗಿ 10 ವರ್ಷಗಳಾಗಿದ್ದರೆ, ನೀವು ಈಗ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.
2,000 ರೂಪಾಯಿ ವಿನಿಮಯ ಮಾಡಿಕೊಳ್ಳಲು ಕೊನೆಯ ದಿನ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಮೇ ತಿಂಗಳಲ್ಲಿ 2000 ರೂಪಾಯಿ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಹಾಗೆಯೇ ಈ ನೋಟುಗಳನ್ನು ಡೆಪಾಸಿಟ್ ಮಾಡಲು ಅಥವ ಬದಲಾವಣೆ ಮಾಡಿಕೊಳ್ಳಲು ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಅದರಂತೆ ಸೆಪ್ಟೆಂಬರ್ 30ರ ಒಳಗಾಗಿ ಈ ನೋಟುಗಳ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಈ ನೋಟುಗಳ ಬದಲಾವಣೆ ಮಾಡಿಕೊಳ್ಳಲು ಇನ್ನು ಒಂದು ತಿಂಗಳ ಅವಕಾಶ ಮಾತ್ರವಿದೆ. ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ರಜಾದಿನಗನ್ನು ಪರಿಶೀಲಿಸಲು ಮರೆಯಬೇಡಿ.
ಸಣ್ಣ ಉಳಿತಾಯ ಯೋಜನೆಗಾಗಿ ಪ್ಯಾನ್-ಆಧಾರ್ ಲಿಂಕ್
ಸೆಪ್ಟೆಂಬರ್ 30, 2023 ರೊಳಗೆ ಆಧಾರ್ ಸಂಖ್ಯೆಯನ್ನು ಸಲ್ಲಿಸದಿದ್ದರೆ ಪ್ರಸ್ತುತ ಗ್ರಾಹಕರ ಬ್ಯಾಂಕ್ ಖಾತೆಗಳನ್ನು ಅಕ್ಟೋಬರ್ 1, 2023 ರಂದು ಅಮಾನತುಗೊಳಿಸಲಾಗುತ್ತದೆ. ತಮ್ಮ ಖಾತೆಯನ್ನು ಪ್ರಾರಂಭಿಸಿದ ಆರು ತಿಂಗಳೊಳಗೆ, ಹೂಡಿಕೆ ಮಾಡಲು ಅಥವಾ ಸಣ್ಣ ಉಳಿತಾಯ ಯೋಜನೆಯನ್ನು ಪ್ರಾರಂಭಿಸಲು ಬಯಸುವ ಹೊಸ ಬಳಕೆದಾರರು ಆಧಾರ್ ಮಾಹಿತಿಯನ್ನು ಸಲ್ಲಿಸಬೇಕು.
ಡಿಮ್ಯಾಟ್ ನಾಮಿನೇಷನ್
ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನೇಷನ್‌ಗಳನ್ನು ಮಾಡಲು ಅಥವಾ ನಾಮಿನೇಷನ್ ಮಾಡದೆ ಹೊರಗುಳಿಯಲು ಸಮಯವನ್ನು ವಿಸ್ತರಿಸಿದೆ. ಪರಿಷ್ಕೃತ ಗಡುವು ಸೆಪ್ಟೆಂಬರ್ 30, 2023 ಆಗಿದೆ.
ಬ್ಯಾಂಕ್ ಎಫ್‌ಡಿ ಗಡುವು
ಹಿರಿಯ ನಾಗರಿಕರಿಗಾಗಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನ ವಿಶೇಷ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಸೆಪ್ಟೆಂಬರ್ 30, 2023 ರವರೆಗೆ ಇರಲಿದೆ. ಕೇವಲ ಹಿರಿಯ ನಾಗರಿಕರು ಮಾತ್ರ ಹೆಚ್ಚಿನ ಎಫ್‌ಡಿ ಬಡ್ಡಿದರವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ. ಇನ್ನು ಹಿರಿಯ ನಾಗರಿಕರಿಗಾಗಿ ಇರುವ ಐಡಿಬಿಐ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯ ಗಡುವು ಕೂಡಾ ಸೆಪ್ಟೆಂಬರ್ 30ಕ್ಕೆ ಕೊನೆಯಾಗಲಿದೆ. ಈ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಲು ಒಂದು ತಿಂಗಳ ಅವಕಾಶ ಮಾತ್ರ ನಿಮಗಿದೆ.


Click it and Unblock the Notifications