ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಕಾರ್ಡ್ ಹಾಗೂ ಪಾವತಿ ಸೇವೆಯು ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಈ ಹೊಸ ದರವು ಮಾರ್ಚ್ 17, 2023ರಿಂದ ಜಾರಿಗೆ ಬರಲಿದೆ. ಎಲ್ಲ ಕ್ರೆಡಿಟ್ ಕಾರ್ಡ್‌ದಾರರಿಗೆ ಈ ನೂತನ ಶುಲ್ಕವು ಅನ್ವಯವಾಗಲಿದೆ. ಇದರಿಂದಾಗಿ ಗ್ರಾಹಕರು ತಮ್ಮ ಜೇಬಿನಿಂದ ಅಧಿಕ ಮೊತ್ತ ವ್ಯಯಿಸಬೇಕಾಗುತ್ತದೆ.
ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಕಳುಹಿಸಲಾದ ಎಸ್‌ಎಂಎಸ್ ಹಾಗೂ ಇಮೇಲ್ ಪ್ರಕಾರ ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆಯನ್ನು ಪಾವತಿ ಮಾಡುವವರಿಗೆ ಹೆಚ್ಚುವರಿಯಾಗಿ 199 ರೂಪಾಯಿ ಶುಲ್ಕ ರೂಪದಲ್ಲಿ ವಿಧಿಸಲಾಗುತ್ತದೆ. ಈ ಹಿಂದೆ ಈ ಶುಲ್ಕವು 99 ರೂಪಾಯಿ ಆಗಿತ್ತು. ಆದರೆ ಇದನ್ನು ಈಗ 199 ರೂಪಾಯಿಗೆ ಏರಿಸಲಾಗಿದೆ.
ಎಸ್‌ಬಿಐ ಕಾರ್ಡ್ ಹೊಂದಿರುವವರಿಗೆ ಕಳುಹಿಸಲಾದ ಮೆಸೇಜ್‌ನಲ್ಲಿ, "ಮಾರ್ಚ್ 17, 2023ರಿಂದ ಜಾರಿಗೆ ಬರುವಂತೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಿಂದ ಬಾಡಿಗೆ ಪಾವತಿ ಮಾಡಿದರೆ, ಪಾವತಿ ಮಾಡಬೇಕಾದ ಶುಲ್ಕವನ್ನು ಪರಿಷ್ಕರಣೆ ಮಾಡಲಾಗುತ್ತದೆ," ಎಂದು ಉಲ್ಲೇಖಿಸಲಾಗಿದೆ. ಇನ್ನು ಎಸ್‌ಬಿಐ ಕಾರ್ಡ್ ಹೊಂದಿರುವವರಿಗೆ ಕಳುಹಿಸಲಾದ ಇಮೇಲ್‌ನಲ್ಲಿ, "ನಿಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೇಲೆ ವಿಧಿಸಲಾಗುವ ಶುಲ್ಕವನ್ನು ಪರಿಷ್ಕರಣೆ ಮಾಡಲಾಗುತ್ತದೆ," ಎಂದು ಮಾಹಿತಿ ನೀಡಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ, ಮುಂದೆ ಓದಿ...
ನಿರ್ಬಂಧಗಳನ್ನು ಬದಲಾಯಿಸಿದ ಎಸ್‌ಬಿಐ
ನವೆಂಬರ್ 2022ರಲ್ಲಿ ಎಸ್‌ಬಿಐ, ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ ಪ್ರೋಸೆಸಿಂಗ್ ಶುಲ್ಕವನ್ನು ಏರಿಕೆ ಮಾಡಿದೆ. 99+ 18 ಶೇಕಡ ಜಿಎಸ್‌ಟಿ ಪಾವತಿ ಮಾಡಬೇಕಾಗಿತ್ತು. ಈಗ ಮತ್ತೆ ಏರಿಕೆ ಮಾಡಲಾಗಿದೆ. ಇನ್ನು ಎಸ್‌ಬಿಐ ತನ್ನ SimplyCLICK ಕಾರ್ಡ್‌ದಾರರಿಗೆ ನಿರ್ಬಂಧವನ್ನು ಅಪ್‌ಡೇಟ್ ಮಾಡಿದೆ. ಹೊಸ ವರ್ಷ 2023ರಿಂದ ವೋಚರ್ ರಿಡೀಮ್ ಮಾಡುವುದು ಮತ್ತು ರಿವಾರ್ಡ್ ಪಾಯಿಂಟ್ ರಿಡೀಮ್ ಮಾಡುವುದನ್ನು ಮೋಡಿಫೈ ಮಾಡಲಾಗುತ್ತದೆ ಎಂದು ತಿಳಿಸಿದೆ.
ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಶುಲ್ಕ
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆಯನ್ನು ಪಾವತಿ ಮಾಡಿದರೆ, 2022ರ ಅಕ್ಟೋಬರ್ 20ರಿಂದ ಅನ್ವಯವಾಗುವಂತೆ ಶೇಕಡ 1ರಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಮಾಡುವ ಬಾಡಿಗೆ ಪಾವತಿಗೆ ಶೇಕಡ 1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ತಿಂಗಳ ಎರಡನೇ ಬಾಡಿಗೆ ಪಾವತಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ.
ಕೋಟಕ್, ಬರೋಡಾ ಬ್ಯಾಂಕ್ ಶುಲ್ಕ
ಕೋಟಕ್ ಮಹೀಂದ್ರ ಬ್ಯಾಂಕ್: ಕೋಟಕ್ ಮಹೀದ್ರಾ ಬ್ಯಾಂಕ್ ಪ್ರಕಾರ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಲಾಗುವ ಬಾಡಿಗೆ ಮೊತ್ತದ ಶೇಕಡ 1ರಷ್ಟು + ಜಿಎಸ್‌ಟಿಯನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಫೆಬ್ರವರಿ 15, 2023ರಿಂದ ಈ ಶುಲ್ಕ ಅನ್ವಯವಾಗುತ್ತದೆ. ವೈಟ್ ಮತ್ತು ವೈಟ್ ರಿಸರ್ವ್ ಕ್ರೆಡಿಟ್ ಕಾರ್ಡ್‌ಗೆ ಈ ಶುಲ್ಕ ಅನ್ವಯವಾಗುವುದಿಲ್ಲ.
ಬ್ಯಾಂಕ್ ಆಫ್ ಬರೋಡಾ: "ಈ ಹಿಂದೆ ಮಾಹಿತಿ ನೀಡಿದಂತೆ ಫೆಬ್ರವರಿ 1, 2023ರಿಂದ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಲಾಗುವ ಬಾಡಿಗೆ ಮೇಲೆ ಹೊಸ ಶುಲ್ಕವನ್ನು ವಿಧಿಸಲಾಗುತ್ತದೆ. ಒಟ್ಟು ಪಾವತಿಸಿದ ಮೊತ್ತದ ಶೇಕಡ 1ರಷ್ಟು ಶುಲ್ಕವಾಗಿ ವಿಧಿಸಲಾಗುತ್ತದೆ," ಎಂದು ಬ್ಯಾಂಕ್ ಆಫ್ ಬರೋಡಾ ವೆಬ್‌ಸೈಟ್ ಹೇಳಿದೆ.


Click it and Unblock the Notifications