ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಿ ಅಧಿಕ ಬಡ್ಡಿದರಗಳನ್ನು ಗಳಿಸಲು ಅವಕಾಶ ನೀಡುವ 'ವಿ ಕೇರ್' ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಯೋಜನೆಯ ಗಡುವನ್ನು ಮತ್ತೆ ವಿಸ್ತರಣೆ ಮಾಡಿದೆ.
ಮೇ 2020 ರಲ್ಲಿ ಎಸ್‌ಬಿಐ ಹಿರಿಯ ನಾಗರಿಕರಿಗಾಗಿ 'ವಿ ಕೇರ್' ಎಫ್‌ಡಿ ಯೋಜನೆಯನ್ನು ಪ್ರಾರಂಭ ಮಾಡಿದೆ. ಈ ಎಫ್‌ಡಿ ಸೆಪ್ಟೆಂಬರ್ 2020 ರವರೆಗೆ ಲಭ್ಯವಿತ್ತು. ಅದಾದ ಬಳಿಕ ಹಲವಾರು ಬಾರಿ ಈ ಯೋಜನೆಯ ಅವಧಿಯನ್ನು ವಿಸ್ತರಣೆ ಮಾಡುತ್ತಾ ಬರಲಾಗಿದೆ.

ಈ ಹಿಂದೆ ಮಾಡಿದ ವಿಸ್ತರಣೆ ಪ್ರಕಾರ ಸೆಪ್ಟೆಂಬರ್ 2023 ರವರೆಗೆ ಈ ಎಫ್‌ಡಿ ಯೋಜನೆಯಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡುವ ಅವಕಾಶವಿತ್ತು. ಆದರೆ ಈಗ ಈ ಯೋಜನೆಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಯೋಜನೆಯನ್ನು 31 ಮಾರ್ಚ್ 2024 ರವರೆಗೆ ವಿಸ್ತರಿಸಲಾಗಿದೆ.
ಅಂದರೆ ಹಿರಿಯ ನಾಗರಿಕರು ಈ ಹಣಕಾಸು ವರ್ಷದ ಕೊನೆಯ ದಿನದವರೆಗೆ ಈ ಎಫ್‌ಡಿ ಸೌಲಭ್ಯದಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಎಫ್‌ಡಿ ಮೂಲಕ ಉತ್ತಮ ಬಡ್ಡಿದರವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಈಗ ಹೊಸದಾಗಿ ಹೂಡಿಕೆ ಮಾಡಬಹುದು ಮತ್ತು 5 ವರ್ಷದಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ರಿನಿವಲ್ ಕೂಡಾ ಮಾಡಬಹುದಾಗಿದೆ.
ಎಸ್‌ಬಿಐ ಹಿರಿಯ ನಾಗರಿಕರ ಎಫ್‌ಡಿ ದರಗಳು:
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಭಾರತೀಯ ಹಿರಿಯ ನಾಗರಿಕರ ಡೆಪಾಸಿಟ್‌ಗಳಿಗೆ ಎಸ್‌ಬಿಐ 45 ದಿನಗಳಿಗಿಂತ ಕಡಿಮೆ ಅವಧಿಗೆ ಶೇಕಡ 3.5 ಬಡ್ಡಿಯನ್ನು ನೀಡುತ್ತದೆ. ಆದರೆ 46 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 5 ರಿಂದ ಶೇಕಡ 6.25 ರವರೆಗೆ ಬಡ್ಡಿದರ ನೀಡುತ್ತದೆ.
ಒಂದು ವರ್ಷದಿಂದ 3 ವರ್ಷಗಳ ನಡುವಿನ ಡೆಪಾಸಿಟ್‌ಗೆ ಸುಮಾರು ಶೇಕಡ 7 ರಿಂದ ಶೇಕಡ 7.3 ಬಡ್ಡಿದರ ನೀಡುತ್ತದೆ. 5 ರಿಂದ 10 ವರ್ಷಗಳ ನಡುವಿನ ಡೆಪಾಸಿಟ್‌ಗಳಿಗೆ ಶೇಕಡ 7.5 ಬಡ್ಡಿಯನ್ನು ಬ್ಯಾಂಕ್ ನೀಡುತ್ತದೆ.
60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ 'ವೀಕೇರ್' ಎಫ್‌ಡಿ ಯೋಜನೆ ಅಡಿಯಲ್ಲಿ ಸಾಮಾನ್ಯ ಎಫ್‌ಡಿ ದರಕ್ಕಿಂತ ಸುಮಾರು 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ. ವಿಕೇರ್ ಎಫ್‌ಡಿ ವಿಭಾಗದಲ್ಲಿನ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಡೆಪಾಸಿಟ್‌ಗೆ ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರ ನೀಡಲಾಗುತ್ತದೆ.
ಅಂದರೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಡೆಪಾಸಿಟ್‌ಗೆ ಹಿರಿಯ ನಾಗರಿಕರಿಗೆ 50 ಬಿಪಿಎಸ್ ಹೆಚ್ಚುವರಿ ಬಡ್ಡಿದರದ ಜೊತೆಗೆ 50 ಬಿಪಿಎಸ್ ಪ್ರೀಮಿಯಂ ಬಡ್ಡಿಯನ್ನು ಈ ವಿಶೇಷ ಎಫ್‌ಡಿ ಯೋಜನೆಯಲ್ಲಿ ನೀಡಲಾಗುತ್ತೆ. ಅಂದರೆ ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಶೇಕಡ 1 ರಷ್ಟು ಅಧಿಕ ಬಡ್ಡಿದರವನ್ನು ಪಡೆಯಲು ಅವಕಾಶವಿದೆ.
ಖಾತೆದಾರರು ತಮಗೆ ಲಭ್ಯವಾಗುವ ಬಡ್ಡಿಯನ್ನು ಆ ಹೂಡಿಕೆಗೆ ಮರು ಹೂಡಿಕೆ ಮಾಡಬಹುದು. ಅಥವಾ ಪ್ರತಿ ತ್ರೈಮಾಸಿಕದಲ್ಲಿ ಮತ್ತೊಂದು ಖಾತೆಗೆ ಪಾವತಿಯನ್ನು ಪಡೆಯಬಹುದು. ಈ ನಿರ್ದಿಷ್ಟ ಎಫ್‌ಡಿ ಯೋಜನೆಯ ಬಡ್ಡಿ ದರಗಳು 7 ದಿನಗಳಿಂದ 10 ವರ್ಷಗಳ ನಡುವಿನ ಅವಧಿಯಲ್ಲಿ ಶೇಕಡ 3.5ರಿಂದ ಶೇಕಡ 7.5 ರವರೆಗೆ ಇದೆ.
ಇನ್ನು ಐದು ವರ್ಷಕ್ಕಿಂತ ಅಧಿಕ ಅವಧಿಯ ಎಫ್‌ಡಿ ಯೋಜನೆಯು ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ. ಆದಾಯ ತೆರಿಗೆ ಕಾಯ್ದೆಯ 80ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿಯಷ್ಟು ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.
ಆಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಪೋಸ್ಟ್ ಆಫೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿಯೂ ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಗಳಿದೆ. ಹಾಗೆಯೇ ಸಾಮಾನ್ಯ ನಾಗರಿಕರಿಗೆ ನೀಡುವ ಬಡ್ಡಿದರಕ್ಕಿಂತ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ.


Click it and Unblock the Notifications