ಸರ್ಕಾರವು ಜನರಿಗೆ ಹಣ ಉಳಿತಾಯ ಮಾಡಲು ಸಹಾಯವಾಗುವಂತೆ ಹಲವಾರು ಯೋಜನೆಗಳನ್ನು ಹೊಂದಿದೆ. ಈ ಯೋಜನೆಗಳಲ್ಲಿ ನಾವು ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತವಾಗಿದೆ. ಯಾಕೆಂದರೆ ಇದಕ್ಕೆ ಸರ್ಕಾರ ಬೆಂಬಲಿತವಾದ ಯೋಜನೆಯಾಗಿದೆ. ಅಂತಹ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಕೂಡಾ ಒಂದಾಗಿದೆ.
60 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಕೂಡಾ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲೆ ಹೂಡಿಕೆ ಮಾಡಬಹುದಾಗಿದೆ. ಈ ಐದು ವರ್ಷದ ಯೋಜನೆಯಲ್ಲಿ ವಾರ್ಷಿಕವಾಗಿ ಶೇಕಡ 8.2ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ನಿಗದಿತ ಮೊತ್ತದ ಹೂಡಿಕೆ ಮೇಲೆ ಎಸ್‌ಸಿಎಸ್‌ಎಸ್‌ನಲ್ಲಿ ಸುರಕ್ಷತೆ ಇದೆ. ಯಾವುದೇ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದಾಗಿ ಪ್ರಯೋಜನ, ಅನಾನುಕೂಲತೆ ಎರಡು ಇದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದಾಗಿ ನಮಗೆ ಅನುಕೂಲ ಹೇಗೆ ಇದೆಯೋ ಹಾಗೆಯೇ ಅನಾನುಕೂಲತೆ ಕೂಡಾ ಇದೆ. ಅದಕ್ಕಾಗಿ ನಾವು ಹೂಡಿಕೆ ಮಾಡುವಾಗ ಎರಡನ್ನು ಕೂಡಾ ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..
ಎಸ್‌ಸಿಎಸ್‌ಎಸ್ ಯೋಜನೆಯ ಪ್ರಯೋಜಗಳು
ತೆರಿಗೆ ಪ್ರಯೋಜನ: ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದಾಗಿ ಹೂಡಿಕೆದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಸೆಕ್ಷನ್ 80ಸಿ ಅಡಿಯಲ್ಲಿ ಹೂಡಿಕೆದಾರರು 1.5 ಲಕ್ಷ ರೂಪಾಯಿಯಷ್ಟು ಕಡಿತವನ್ನು ಪಡೆಯಬಹುದು.
ಹೂಡಿಕೆ ಮಾಡುವುದು ಸುರಕ್ಷಿತ: ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಸರ್ಕಾರ ಬೆಂಬಲಿತ ಯೋಜನೆಯಾಗಿದೆ. ಆದ್ದರಿಂದಾಗಿ ಈ ಯೋಜನೆಯಲ್ಲಿ ನಾವು ಹೂಡಿಕೆ ಮಾಡುವುದು ಎಂದಿಗೂ ಕೂಡಾ ಸುರಕ್ಷಿತವಾಗಿದೆ. ಎಸ್‌ಸಿಎಸ್‌ಎಸ್ ಯೋಜನೆಯಲ್ಲಿ ಮಾಡಿದ ಹೂಡಿಕೆ ಎಂದಿಗೂ ಕೂಡಾ ನಷ್ಟಕ್ಕೆ ಒಳಗಾಗುವುದಿಲ್ಲ. ಜನರು ಈ ಯೋಜನೆಯಲ್ಲಿ ಸುಮಾರು 30 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ.
ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ: ಖಾತೆಯನ್ನು ತೆರೆದ ಒಂದು ವರ್ಷದ ಬಳಿಕ ಜಮೆ ಮಾಡಿದ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಯಾವುದೇ ವ್ಯಕ್ತಿಯು ಹೂಡಿಕೆ ಆರಂಭಿಸಿದ ಒಂದು ವರ್ಷದೊಳಗಾಗಿ ಮೊತ್ತವನ್ನು ವಿತ್‌ಡ್ರಾ ಮಾಡಲು ಬಯಸಿದರೆ, ಬಡ್ಡಿದರ ಲಭ್ಯವಾಗುವುದಿಲ್ಲ. ಬರೀ ಹೂಡಿಕೆ ಮಾಡಿದ ಮೊತ್ತ ಲಭ್ಯವಾಗುತ್ತದೆ.
ಖಾತೆಯನ್ನು ದೇಶದಾದ್ಯಂತ ವರ್ಗಾಯಿಸಬಹುದು: ಹೂಡಿಕೆದಾರರು ಇನ್ನೊಂದು ಕಡೆಗೆ ವರ್ಗಾವಣೆಯಾದರೆ ಅವರು ಸರಳವಾಗಿ ಸುಲಭವಾಗಿ ಎಸ್‌ಸಿಎಸ್‌ಎಸ್ ಖಾತೆಯನ್ನು ಒಂದು ಬ್ಯಾಂಕ್ ಅಥವಾ ಅಂಚೆ ಕಚೇರಿ ಬ್ರ್ಯಾಂಚ್‌ನಿಂದ ಇನ್ನೊಂದು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ವರ್ಗಾವಣೆ ಮಾಡಬಹುದಾಗಿದೆ.
ಎಸ್‌ಸಿಎಸ್‌ಎಸ್ ಯೋಜನೆಯ ಅನಾನುಕೂಲತೆ
ಕ್ಲೈಮ್ ಮಾಡದ ಬಡ್ಡಿ ಆದಾಯದ ಮೇಲೆ ಯಾವುದೇ ಬಡ್ಡಿ ಇಲ್ಲ: ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ. ಖಾತೆದಾರರಿಂದ ಬಡ್ಡಿಯನ್ನು ಕ್ಲೈಮ್ ಮಾಡದಿದ್ದರೆ, ಅದರ ಮೇಲೆ ಯಾವುದೇ ಹೆಚ್ಚುವರಿ ಹಣವನ್ನು ನೀಡಲಾಗುವುದಿಲ್ಲ.
ಎಸ್‌ಸಿಎಸ್‌ಎಸ್ ಮೇಲೆ ಟಿಡಿಎಸ್: ಒಂದು ಹಣಕಾಸು ವರ್ಷದಲ್ಲಿ ಒಟ್ಟು ಬಡ್ಡಿಯು 50,000 ರೂಪಾಯಿಗಳನ್ನು ಮೀರಿದರೆ ಎಸ್‌ಸಿಎಸ್‌ಎಸ್ ಖಾತೆಯಲ್ಲಿ ಸಂಗ್ರಹವಾದ ಬಡ್ಡಿಯಿಂದ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.
ನಿಗದಿತ ಬಡ್ಡಿದರ: ಈ ಯೋಜನೆಯಲ್ಲಿ ಬಡ್ಡಿದರವು ಫಿಕ್ಸಿಡ್ ಅಥವಾ ಸ್ಥಿರವಾಗಿರುತ್ತದೆ. ಅಂದರೆ ಈ ಯೋಜನೆಯನ್ನು ತೆರೆಯುವಾಗ ಎಷ್ಟು ಬಡ್ಡಿದರ ಇತ್ತೋ ಅಷ್ಟೇ ಬಡ್ಡಿದರವು ಮೆಚ್ಯೂರಿಟಿವರೆಗೂ ಇರುತ್ತದೆ. ಬಡ್ಡಿದರ ಏರಿಕೆಯಾದಾಗ ಅದರ ಪ್ರಯೋಜನವನ್ನು ಪಡೆಯಲು ಇನ್ನೊಂದು ಖಾತೆಯನ್ನು ತೆರೆಯಬೇಕಾಗುತ್ತದೆ. ಆದರೆ ಅದಕ್ಕೆ ಕೆಲವು ಶುಲ್ಕಗಳನ್ನು ವಿಧಿಸಲಾಗುತ್ತದೆ.
ವಯೋಮಿತಿಗಳು ಇದೆ: ಈ ಯೋಜನೆಯ ಪ್ರಯೋಜನವನ್ನು 60 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. 50ರಿಂದ 60 ವರ್ಷದವರು ಅಥವಾ 55ರಿಂದ 60 ವರ್ಷದವರು ವಿಆರ್‌ಎಸ್ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. 30ರಿಂದ 40 ವರ್ಷ ಪ್ರಾಯದವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.


Click it and Unblock the Notifications