ಹಬ್ಬದ ಸೀಸನ್ ಸಂತೋಷ ಮತ್ತು ಆಚರಣೆಯ ಸಮಯವಾಗಿದೆ. ಈ ಸೀಸನ್‌ನಲ್ಲಿ ರಿಯಾಯಿತಿ, ಆಫರ್‌ಗಳು ಇರುವ ಕಾರಣದಿಂದಾಗಿ ನಾವು ಪ್ಲ್ಯಾನ್ ಮಾಡದ ಖರ್ಚುಗಳಣ್ನು ಮಾಡಬೇಕಾಗುತ್ತದೆ. ಈ ರಿಯಾಯಿತಿಗಳು ಅನಿರೀಕ್ಷಿತ ಹೆಚ್ಚಿನ ಖರ್ಚಿಗೆ ಕಾರಣವಾಗಬಹುದು. ಆದರೆ ಈ ಸಂದರ್ಭದಲ್ಲಿ ಏನು ಮಾಡುವುದು?.
ಖರೀದಿಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು, ತಯಾರಕರು ಸಾಮಾನ್ಯವಾಗಿ ಸಾಲ ನೀಡುತ್ತದೆ. ಅಂದರೆ ಯಾವುದೇ-ವೆಚ್ಚವಿಲ್ಲದ ಇಎಂಐ ಆಯ್ಕೆಗಳನ್ನು ನೀಡುತ್ತದೆ. ಇದು ಅನೇಕ ಗ್ರಾಹಕರಿಗೆ ಜೀವರಕ್ಷಕವಾಗಿದೆ. ಈ ನೋ-ಕಾಸ್ಟ್ ಇಎಂಐ ಬಗ್ಗೆ ಇಲ್ಲಿದೆ ವಿವರ ಮಂದೆ ಓದಿ...

ನೋ-ಕಾಸ್ಟ್ ಇಎಂಐ ಎಂದರೇನು?
ಶೂನ್ಯ-ಬಡ್ಡಿ ಇಎಂಐ ಎಂದೂ ಕರೆಯಲ್ಪಡುವ ಯಾವುದೇ-ವೆಚ್ಚವಿಲ್ಲದ ಇಎಂಐ ಮರುಪಾವತಿ ಪ್ರಕ್ರಿಯೆಯಾಗಿದ್ದು ಅದು ಯಾವುದೇ ಬಡ್ಡಿ ಶುಲ್ಕಗಳನ್ನು ಪಾವತಿಸದೆ ಕಂತುಗಳಲ್ಲಿ ನೀವು ಮಾಡಿದ ಖರೀದಿಗೆ ಪಾವತಿ ಮಾಡಲು ಅವಕಾಶ ನೀಡುತ್ತದೆ. ಸಾಮಾನ್ಯ ಇಎಂಐಗಳಲ್ಲಿ ನಿರ್ದಿಷ್ಟ ಅವಧಿಯ ಮೇಲೆ ನೀವು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಇದು ಹಾಗಲ್ಲ. ಉತ್ಪನ್ನದ ನಿಜವಾದ ಬೆಲೆಗೆ ಸಮಾನ ಕಂತುಗಳಲ್ಲಿ ಪಾವತಿಸಿದರೆ ಸಾಕಾಗುತ್ತದೆ.
ಉದಾಹರಣೆಗೆ, ನೀವು 24,000 ರೂಪಾಯಿ ಮೌಲ್ಯದ ವಾಷಿಂಗ್ ಮೆಷಿನ್ ಅಥವಾ ಮೊಬೈಲ್ ಫೋನ್ ಅನ್ನು ಖರೀದಿಸಿದರೆ, ಸಂಪೂರ್ಣ ಮೊತ್ತವನ್ನು ಪಾವತಿಸಲು ಬಯಸಿದಿದ್ದರೆ, ನೀವು ನೋ-ಕಾಸ್ಟ್ ಇಎಂಐ ಅನ್ನು ಆಯ್ಕೆ ಮಾಡಬಹುದು. ಇದರಲ್ಲಿ ನೀವು 12 ತಿಂಗಳವರೆಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಈ ಮೂಲಕ ನೀವು ಬಡ್ಡಿಯನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ಮೇಲ್ನೋಟಕ್ಕೆ, ನೊ-ಕಾಸ್ಟ್ ಇಎಂಐ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಏಕೆಂದರೆ ಇದು ಬಡ್ಡಿ ಶುಲ್ಕಗಳನ್ನು ಪಾವತಿಸದೆ ಇಎಂಐ ಆಯ್ಕೆಯಾಗಿದೆ. ಆದರೆ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದಿರುವುದು ಅತೀ ಮುಖ್ಯವಾಗಿದೆ. ನಿಮಗೆ ನಾಮಿನೇಷನ್ ಶುಲ್ಕ ಇರಬಹುದು. ಸಾಲ ನೀಡುವ ಸಂಸ್ಥೆಗೆ ಅವಲಂಬಿಸಿರುತ್ತದೆ. ಇನ್ನು ನೋ ಕಾಸ್ಟ್ ಇಎಂಐ ಆಯ್ಕೆ ಮಾಡಿದರೆ, ಆಫರ್, ರಿಯಾಯಿತಿ ಲಭ್ಯವಾಗದು.
ಅಂದರೆ ಮೊಬೈಲ್ ಫೋನ್‌ನ ನೈಜ ಬೆಲೆ 20,000 ರೂಪಾಯಿ ಆಗಿದ್ದರೆ, ಶೇಕಡ 10 ರಷ್ಟು ರಿಯಾಯಿತಿಯೊಂದಿಗೆ ಒಂದು ಬಾರಿ ಪಾವತಿ ಮಾಡುವುದಾದರೆ 18,000 ರೂಪಾಯಿ ಈ ಮೊಬೈಲ್‌ನ ಬೆಲೆಯಾಗುತ್ತದೆ. ಆದರೆ ಅದೇ ಉತ್ಪನ್ನದ ಮೇಲೆ ನೋ ಕಾಸ್ಟ್ ಇಎಂಐ ಅನ್ನು ಆಯ್ಕೆಮಾಡುವುದರಿಂದ ನೀವು ಸಂಪೂರ್ಣವಾಗಿ 20 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ.
ನೀವು ನೋ-ಕಾಸ್ಟ್ ಇಎಂಐ ಅನ್ನು ಆರಿಸಬೇಕೇ?
ನೋ-ಕಾಸ್ಟ್ ಇಎಂಐ ಅನ್ನು ಆಯ್ಕೆ ಮಾಡುವ ನಿರ್ಧಾರವು ನಿಮ್ಮ ಅವಶ್ಯಕತೆಗಳು ಮತ್ತು ನೀವು ಖರೀದಿಸಲು ಉದ್ದೇಶಿಸಿರುವ ಉತ್ಪನ್ನದ ಬೆಲೆಯನ್ನು ಆಧರಿಸಿರಬೇಕು. ಈ ಬಗ್ಗೆ ಮಾಹಿತಿ ನೀಡಿರುವ ಬ್ಯಾಂಕ್‌ಬಜಾರ್ ಡಾಟ್ ಕಾಮ್‌ನ ಅಧಿಲ್ ಶೆಟ್ಟಿ, "ಉಪಕರಣಗಳು, ಗ್ಯಾಜೆಟ್‌ಗಳು ಅಥವಾ ಪೀಠೋಪಕರಣಗಳಂತಹ ಹೆಚ್ಚಿನ-ಮೌಲ್ಯದ ಉತ್ಪನ್ನಗಳನ್ನು ಖರೀದಿಸಲು ನೀವು ಮುಂದಾಗಿದ್ದರೆ, ನೋ ಕಾಸ್ಟ್ ಇಎಂಐ ಪ್ರಯೋಜನಕಾರಿಯಾಗಲಿದೆ. ಇದು ನಿಮ್ಮ ಹಣಕಾಸು ಹೊರೆಯನ್ನು ಕಡಿಮೆ ಮಾಡುತ್ತದೆ," ಎಂದು ತಿಳಿಸಿದರು.
ನೋ-ಕಾಸ್ಟ್ ಇಎಂಐ ಯಾವಾಗ ಉತ್ತಮ?
1. ಹೆಚ್ಚಿನ ಬೆಲೆ: ಉತ್ಪನ್ನದ ಬೆಲೆ ಗಣನೀಯವಾಗಿ ಹೆಚ್ಚಿದ್ದರೆ, ಅದನ್ನು ಒಮ್ಮೆಲೆ ಪಾವತಿಸಿದರೆ ನಿಮಗೆ ಹಲವಾರು ತಿಂಗಳುಗಳವರೆಗೆ ಹಣಕಾಸಿನ ಒತ್ತಡ ಉಂಟಾಗುತ್ತದೆ. ಹಾಗಿದ್ದಾಗ ನೋ-ಕಾಸ್ಟ್ ಇಎಂಐ ಅನ್ನು ಆಯ್ಕೆ ಮಾಡುವುದು ಬುದ್ಧಿವಂತ ಆಯ್ಕೆಯಾಗಿದೆ.
2. ಅಧಿಕ ಖರೀದಿ: ನೀವು ಕಡಿಮೆ ವೆಚ್ಚದಲ್ಲಿ ಆದರೆ ಹೆಚ್ಚು ಉತ್ಪನ್ನಗಳನ್ನು ಖರೀದಿಸಲು ಬಯಸಿದರೆ, ಅನಗತ್ಯ ಹೊರೆಯಿಲ್ಲದೆ ನಿಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಲು ನೋ-ಕಾಸ್ಟ್ ಇಎಂಐ ನಿಮಗೆ ಸಹಾಯ ಮಾಡುತ್ತದೆ.
3. ಹಣದುಬ್ಬರ: ಹಣದುಬ್ಬರದ ಸಮಯದಲ್ಲಿ ದೀರ್ಘಾವಧಿಯಲ್ಲಿ ನೋ ಕಾಸ್ಟ್ ಇಎಂಐ ನಿಮಗೆ ಹಣ ಉಳಿತಾಯ ಮಾಡಲು ಸಹಕಾರಿಯಾಗಿದೆ. ನೀವು 24,000 ರೂಪಾಯಿ ಮೌಲ್ಯದ ಉತ್ಪನ್ನಕ್ಕೆ ತಲಾ 2,000 ರೂಪಾಯಿಗಳ 12 ಇಎಂಐಗಳನ್ನು ಪಾವತಿಮಾಡಬಹುದು. ಮುಂದಿನ ವರ್ಷದಲ್ಲಿ ಉತ್ಪನ್ನದ ಬೆಲೆ ಹೆಚ್ಚಾಗುವ ಸಾಧ್ಯತೆಯಿರಬಹುದು, ಇದು ವೆಚ್ಚ ಉಳಿತಾಯಕ್ಕೆ ಕಾರಣವಾಗುತ್ತದೆ.
ನೋ-ಕಾಸ್ಟ್ ಇಎಂಐ ಯಾವಾಗ ಉತ್ತಮವಲ್ಲ?
1. ಕೈಗೆಟುಕುವ ಅಡ್ವಾನ್ಸ್: ನಿಮ್ಮ ಹಣಕಾಸಿಗೆ ತೊಂದರೆಯಾಗದಂತೆ ಉತ್ಪನ್ನವನ್ನು ಒಂದೇ ಬಾರಿಗೆ ಪಾವತಿಸಲು ನೀವು ಶಕ್ತರಾಗಿದ್ದರೆ, ನೋ-ಕಾಸ್ಟ್ ಇಎಂಐ ಅನ್ನು ಆಯ್ಕೆ ಮಾಡದಿರುವುದು ಒಳ್ಳೆಯದು. ಈ ರೀತಿಯಾಗಿ, ನೀವು ಉತ್ಪನ್ನವನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು. ಹಾಗೆಯೇ ಭವಿಷ್ಯದ ಕಂತುಗಳ ಒತ್ತಡವನ್ನು ತಪ್ಪಿಸಬಹುದು.
2. ಬಹು ಮರುಪಾವತಿ: ನೀವು ಖರೀದಿಸುವ ಎಲ್ಲ ಉತ್ಪನ್ನಗಳಿಗೆ ನೋ-ಕಾಸ್ಟ್ ಇಎಂಐಗಳನ್ನು ಪಡೆಯುವುದು ನಿಮ್ಮ ಮಾಸಿಕ ಇಎಂಐ ಹೊರೆ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾಯಕ್ಕೆ ತಳ್ಳಬಹುದು. ನೀವು ಗಳಿಸಿದ ಮೊತ್ತದಲ್ಲಿ ಬಹುಪಾಲು ಇಎಂಐಗೆ ಹೋದರೆ, ಮನೆಯ ವೆಚ್ಚ ಹೇಗೆ ನಿಭಾಯಿಸುವುದು ಅಲ್ಲವೇ?.
3. ಉಚಿತ ಉತ್ಪನ್ನವಲ್ಲ: ಯಾವುದೇ ನೋ ಕಾಸ್ಟ್ ಇಎಂಐ ಎಂದರೆ ನೀವು ಉಚಿತವಾಗಿ ಉತ್ಪನ್ನವನ್ನು ಪಡೆಯುತ್ತಿರುವಿರಿ ಎಂದಲ್ಲ. ನೀವು ಸಂಪೂರ್ಣ ವೆಚ್ಚವನ್ನು ಪಾವತಿಸುತ್ತಿದ್ದೀರಿ, ಆದರೆ ಹಲವಾರು ತಿಂಗಳುಗಳಲ್ಲಿ ಪಾವತಿ ಮಾಡುತ್ತೀರಿ ಎಂದರ್ಥವಷ್ಟೇ. ನಿಮ್ಮ ಭವಿಷ್ಯದ ಆರ್ಥಿಕ ಹೊಣೆ ಬಗ್ಗೆ ಚಿಂತನೆ ನಡೆಸಿ ಬಳಿಕ ನೋ ಕಾಸ್ಟ್ ಇಎಂಐ ಆಯ್ಕೆ ಮಾಡಬಹುದೇ, ಇಲ್ಲವೆ ನೋಡಿ.


Click it and Unblock the Notifications