10 ವರ್ಷಗಳಲ್ಲಿ ಹೂಡಿಕೆ ಮೊತ್ತ ಡಬಲ್ ಆಗುವ ಸಣ್ಣ ಉಳಿತಾಯ ಯೋಜನೆಗಳಿವು
ಭಾರತದಲ್ಲಿ ಸಣ್ಣ ಉಳಿತಾಯ ಯೋಜನೆಗಳು ದೀರ್ಘಾವಧಿಗೆ ಸುರಕ್ಷಿತವಾದವು. ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗಳಲ್ಲಿ ಈ ಉಳಿತಾಯ ಯೋಜನೆಯನ್ನು ಶುರು ಮಾಡಬಹುದು. ಈ ಉಳಿತಾಯ ಯೋಜನೆಗಳಿಗೆ ಸರ್ಕಾರದಿಂದಲೇ ಖಾತ್ರಿ ಇದೆ. ಜತೆಗೆ ವರ್ಷಕ್ಕೆ 500 ರುಪಾಯಿ ಕೂಡ ಹೂಡಿಕೆ ಮಾಡಬಹುದು ಮತ್ತು ಇದಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ಕೂಡ ದೊರೆಯುತ್ತದೆ.
ಬ್ಯಾಂಕ್ ಠೇವಣಿಗೆ ಹೋಲಿಸಿದಲ್ಲಿ ಈ ಉಳಿತಾಯ ಯೋಜನೆಗಳಿಗೆ ಬಡ್ಡಿ ದರ ಉತ್ತಮವಾಗಿಯೇ ಇದೆ. ಆದರೆ ದೀರ್ಘಕಾಲಕ್ಕೆ ಹೂಡಿಕೆ ಮಾಡಿದಲ್ಲಿ ಒಳ್ಳೆ ರಿಟರ್ನ್ಸ್ ನಿರೀಕ್ಷೆ ಮಾಡಬಹುದು. ಒಂದು ಸಣ್ಣ ಉದಾಹರಣೆ ಅಂದುಕೊಳ್ಳುವುದಾದರೆ, 1000 ರುಪಾಯಿಯನ್ನು 7 ಪರ್ಸೆಂಟ್ ಬಡ್ದಿ ದರಕ್ಕೆ ಹೂಡಿಕೆ ಮಾಡಿದಲ್ಲಿ ಒಂದು ವರ್ಷಕ್ಕೆ 70 ರುಪಾಯಿ ಬರುತ್ತದೆ. ಅದರ ಮುಂದಿನ ವರ್ಷದ ಬಡ್ಡಿ ಲೆಕ್ಕಾಚಾರ 1070 ರುಪಾಯಿ ಮೇಲೆ 7 ಪರ್ಸೆಂಟ್ ಆಗುತ್ತದೆ.
ಹೂಡಿಕೆಗಾಗಿ ಚಿನ್ನದ ಗಟ್ಟಿ ಖರೀದಿಸುತ್ತಿದ್ದಲ್ಲಿ ಈ 5 ಅಂಶ ಗಮನದಲ್ಲಿರಲಿ
ಹೀಗೆ ಹತ್ತು ವರ್ಷದ ಅವಧಿಯೊಳಗೆ ಹೂಡಿಕೆ ಮೊತ್ತ ಡಬಲ್ ಆಗುವಂಥ ಮೂರು ಸಣ್ಣ ಉಳಿತಾಯ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಮೇಲೆ ಸದ್ಯಕ್ಕೆ 7.10 ಪರ್ಸೆಂಟ್ ಬಡ್ಡಿ ನೀಡಲಾಗುತ್ತಿದೆ. ಇದು ಪ್ರತಿ ವರ್ಷ ಸೇರಿಕೊಳ್ಳುತ್ತಾ ಹೋಗುತ್ತದೆ. ಹತ್ತು ವರ್ಷಗಳ ಅವಧಿಗೆ ಒಂದೇ ಸಲಕ್ಕೆ 10,000 ರುಪಾಯಿ ಹೂಡಿಕೆ ಮಾಡಿದಲ್ಲಿ 10,214 ರುಪಾಯಿ ಬರುತ್ತದೆ. ಆಗ PPF ಮೊತ್ತವು 10 ವರ್ಷದ ಕೊನೆಗೆ 20,214 ರುಪಾಯಿ ಆಗಿರುತ್ತದೆ.
* ಈ ಯೋಜನೆಯ ಮೆಚ್ಯೂರಿಟಿ ಅವಧಿ 15 ವರ್ಷ. ಆದ್ದರಿಂದ ಹದಿನೈದು ವರ್ಷಗಳ ಅವಧಿಗೆ ಹಣ ತೆಗೆಯಲು ಸಾಧ್ಯವಿಲ್ಲ.
* ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 500 ರುಪಾಯಿ ಹಾಗೂ ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದು. ಹೀಗೆ ಒಂದು ವರ್ಷದಲ್ಲಿ ಹನ್ನೆರಡು ಸಲ ಠೇವಣಿ ಇಡಬಹುದು.
* ಹದಿನೈದು ವರ್ಷದ ಅವಧಿ ಪೂರ್ಣಗೊಂಡ ನಂತರ ಅದರ ಆಚೆಗೆ ಐದು ವರ್ಷಕ್ಕೆ ಅವಧಿ ವಿಸ್ತರಣೆ ಮಾಡಿಸಬಹುದು. ರಿನೀವಲ್ ಮಾಡಿಸುವ ಸಂದರ್ಭದಲ್ಲಿ ಬಡ್ದಿ ದರ ಎಷ್ಟಿರುತ್ತದೋ ಅಷ್ಟನ್ನು ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ
ಈ ಯೋಜನೆ ಅಡಿಯಲ್ಲಿ ನೀಡುವ ಬಡ್ಡಿ ದರ 7.60 ಪರ್ಸೆಂಟ್. ಪ್ರತಿ ವರ್ಷ ಬಡ್ಡಿ ದರ ಸೇರಿಕೊಳ್ಳುತ್ತಾ ಹೋಗುತ್ತದೆ. ಒಂದು ಸಲಕ್ಕೆ 10,000 ಠೇವಣಿ ಮಾಡಿದಲ್ಲಿ 10 ವರ್ಷದ ನಂತರ 11,231 ರುಪಾಯಿ ಸೇರಿಕೊಂಡು, ಒಟ್ಟು 21,231 ರುಪಾಯಿ ಬರುತ್ತದೆ.
* ಈ ಯೋಜನೆಯನ್ನು ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ ಆರಂಭಿಸಲು ಸಾಧ್ಯ.
* ಈ ಯೋಜನೆಯ ಮೆಚ್ಯೂರಿಟಿ ಅವಧಿ ಹದಿನೈದು ವರ್ಷ. ಅಂದರೆ ಹದಿನೈದು ವರ್ಷ ನಿಮ್ಮ ಹಣ ತೆಗೆದುಕೊಳ್ಳಲು ಆಗಲ್ಲ.
* ಒಂದು ವರ್ಷದಲ್ಲಿ ಕನಿಷ್ಠ 250 ರುಪಾಯಿ ಹಾಗೂ ಗರಿಷ್ಠ 1.5 ಲಕ್ಷ ರುಪಾಯಿ ಠೇವಣಿ ಮಾಡಬಹುದು. ಒಂದು ತಿಂಗಳಲ್ಲಿ ಅಥವಾ ಒಂದು ಆರ್ಥಿಕ ವರ್ಷದಲ್ಲಿ ಎಷ್ಟು ಸಲ ಬೇಕಾದರೂ ಠೇವಣಿ ಮಾಡಬಹುದು.
* ಹಣ ಇಟ್ಟಾಗಿನಿಂದ ಗರಿಷ್ಠ ಹದಿನೈದು ವರ್ಷಕ್ಕೆ ಠೇವಣಿ ಮಾಡಬಹುದು.
* ಹೆಣ್ಣುಮಗುವಿಗೆ 18 ವರ್ಷ ತುಂಬಿದ ಮೇಲೆ (ಮದುವೆಗೆ ಒಂದು ತಿಂಗಳು ಅಥವಾ ಮದುವೆಯ ಮೂರು ತಿಂಗಳ ನಂತರ) ಅಥವಾ ಖಾತೆ ತೆರೆದ ಇಪ್ಪತ್ತೊಂದು ವರ್ಷದ ನಂತರ ಸ್ಥಗಿತ ಮಾಡಬಹುದು.
* ಹೆಣ್ಣು ಮಗುವಿಗೆ ಹದಿನೆಂಟು ವರ್ಷ ವಯಸ್ಸು ಅಥವಾ ಹತ್ತನೇ ತರಗತಿ ಉತ್ತೀರ್ಣ ಆದ ಮೇಲೆ ಹಣ ವಿಥ್ ಡ್ರಾ ಮಾಡಬಹುದು.
* ಒಂದು ಉದಾಹರಣೆ: ಈಗ ವಾರ್ಷಿಕ ಹೂಡಿಕೆ 10,000 ರುಪಾಯಿಯಂತೆ ಒಂದು ವರ್ಷದ ಮಗುವಿನ ಹೆಸರಲ್ಲಿ 2020ರಲ್ಲಿ ಶುರು ಮಾಡಿದರೆ 2041ನೇ ಇಸವಿ ಹೊತ್ತಿಗೆ ಒಟ್ಟಾರೆ ಹೂಡಿಕೆ 135000 ಆಗುತ್ತದೆ. ಅದಕ್ಕೆ ಬಡ್ಡಿ 2,46,009 ರುಪಾಯಿ ಸೇರಿಕೊಂಡು, ಮೆಚ್ಯೂರಿಟಿ ಮೊತ್ತ 3,81,009 ರುಪಾಯಿ ಬರುತ್ತದೆ.

ಕಿಸಾನ್ ವಿಕಾಸ್ ಪತ್ರ
ಸದ್ಯಕ್ಕೆ ಕಿಸಾನ್ ವಿಕಾಸ್ ಪತ್ರಕ್ಕೆ ನೀಡುತ್ತಿರುವ ಬಡ್ಡಿ ದರ 6.90%. ಪ್ರತಿ ವರ್ಷ ಬಡ್ಡಿ ಸೇರ್ಪಡೆ ಆಗುತ್ತಾ ಸಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದ ಮೊತ್ತವು ಸದ್ಯದ ಬಡ್ದಿ ದರಕ್ಕೆ 10 ವರ್ಷ 4 ತಿಂಗಳಿಗೆ ದುಪ್ಪಟ್ಟಾಗುತ್ತದೆ. ಈಗಿನ ಬಡ್ಡಿ ದರದಲ್ಲಿ ಹೇಳುವುದಾದರೆ, ಒಂದು ವೇಳೆ 10,000 ಹೂಡಿಕೆ ಮಾಡಿದ್ದಲ್ಲಿ 10 ವರ್ಷ 4 ತಿಂಗಳ ನಂತರ 19,926.74 ಆಗುತ್ತದೆ. ಕೆವಿಪಿ ಖಾತೆಯನ್ನು ಕನಿಷ್ಠ 1000 ರುಪಾಯಿಗೆ ಅರಂಭಿಸಬೇಕು. ಅದರ ಮೇಲೆ 100 ರುಪಾಯಿಯಂತೆ ಹೆಚ್ಚಿಸಬಹುದು. ಹೂಡಿಕೆಗೆ ಗರಿಷ್ಠ ಮಿತಿ ಎಂಬುದಿಲ್ಲ. ಹಣಕಾಸು ಸಚಿವಾಲಯವು ಮೆಚ್ಯೂರಿಟಿ ಅವಧಿಯನ್ನು ಆಗಿಂದಾಗ ಬದಲಾಯಿಸುತ್ತಿರುತ್ತದೆ.