ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಜನವರಿ- ಮಾರ್ಚ್ ತ್ರೈ ಮಾಸಿಕಕ್ಕೆ ಸರ್ಕಾರವು ಬದಲಾವಣೆ ಮಾಡದೆ ಹಾಗೇ ಉಳಿಸಿಕೊಂಡಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಸರ್ಕಾರಿ ಸೆಕ್ಯೂರಿಟೀಸ್ ಗಳ ಮೇಲೆ ಇರುವ ಪ್ರತಿಫಲವನ್ನು ಆಧಾರವಾಗಿಟ್ಟುಕೊಂಡು ಬಡ್ಡಿ ದರ ನಿಗದಿ ಮಾಡಲಾಗುತ್ತದೆ.
ಆದ್ದರಿಂದ ಪಿಪಿಎಫ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್ ಎಸ್ ಸಿ) ವಾರ್ಷಿಕ ಬಡ್ಡಿ ದರವು ಜನವರಿ- ಮಾರ್ಚ್ ತ್ರೈ ಮಾಸಿಕಕ್ಕೆ 7.9 ಪರ್ಸೆಂಟ್ ಇರಲಿದೆ. ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರವು ಹೆಚ್ಚಿರಲಿದೆ.
ಹೆಣ್ಣುಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ ಖಾತೆಗೆ 8.4% (ವಾರ್ಷಿಕವಾಗಿ ಬಡ್ಡಿ ಜಮೆಯಾಗಿ), ಐದು ವರ್ಷಗಳ ಅವಧಿಗೆ ಹಿರಿಯ ನಾಗರಿಕರ ಉಳಿತಾಯ ಖಾತೆಗೆ 8.6% ಬಡ್ಡಿ ದೊರೆಯಲಿದೆ. ತಜ್ಞರ ಪ್ರಕಾರ, ಸಾಂಪ್ರದಾಯಿಕ ಹೂಡಿಕೆದಾರರು ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಹಾಗೂ ಹಿರಿಯ ನಾಗರಿಕರ ಉಳಿತಾಯ ಖಾತೆ ಯೋಜನೆಗಳಿಗೆ ಹಣ ಹೂಡಿ, ಉತ್ತಮ ರಿಟರ್ನ್ಸ್ ಪಡೆಯಬಹುದು.

ಇನ್ನು ಕಿಸಾನ್ ವಿಕಾಸ್ ಪತ್ರಕ್ಕೆ 7.6 ಪರ್ಸೆಂಟ್ ಬಡ್ಡಿ (ವಾರ್ಷಿಕ ಬಡ್ಡಿ ಸೇರುತ್ತಾ ಹೋಗುತ್ತದೆ) ದೊರೆಯಲಿದ್ದು, 113 ತಿಂಗಳಿಗೆ ಮೆಚ್ಯೂರ್ ಆಗುತ್ತದೆ. ಅರ್ಥಾತ್ 113 ತಿಂಗಳಿಗೆ ಹೂಡಿಕೆ ಮೊತ್ತ ದ್ವಿಗುಣ ಆಗುತ್ತದೆ.
5 ವರ್ಷದ್ ಪೋಸ್ಟ್ ಆಫೀಸ್ ಮಂಥ್ಲಿ ಇನ್ ಕಮ್ ಸ್ಕೀಮ್ (ಎಂಐಎಸ್)ನಲ್ಲಿ ಬಡ್ಡಿಯು ತಿಂಗಳು ತಿಂಗಳು ಪಾವತಿಸಲಿದ್ದು, 7.6 ಪರ್ಸೆಂಟ್ ಬಡ್ಡಿ ದೊರೆಯಲಿದೆ. ಪೋಸ್ಟ್ ಆಫೀಸ್ ನ ಟರ್ಮ್ ಡೆಪಾಸಿಟ್ಸ್ ಒಂದರಿಂದ ಮೂರು ವರ್ಷದ ಅವಧಿಗೆ ಬಡ್ಡಿ ದರವು 6.9 ಪರ್ಸೆಂಟ್ ಇದ್ದರೆ, ಐದು ವರ್ಷಕ್ಕೆ 7.7 ಪರ್ಸೆಂಟ್ ಸಿಗಲಿದೆ. ಇನ್ನು 5 ರೆಕರಿಂಗ್ ಡೆಪಾಸಿಟ್ ಗೆ 7.2 ಪರ್ಸೆಂಟ್ ಬಡ್ಡಿ ದೊರೆಯಲಿದೆ.


Click it and Unblock the Notifications