ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತವಾಗಿ ಆರು ಬಾರಿ ರೆಪೋ ದರವನ್ನು ಏರಿಸಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಆರ್‌ಬಿಐ ರೆಪೋ ದರವನ್ನು ಪರಿಷ್ಕರಣೆ ಮಾಡಲು ಆರಂಭಿಸಿದೆ. ಇದಾದ ಬಳಿಕ ಒಟ್ಟಾಗಿ ಆರು ಬಾರಿ 250 ಮೂಲಾಂಕ ರೆಪೋ ದರವನ್ನು ಏರಿಕೆ ಮಾಡಿದೆ. ಆದರೆ ಕಳೆದ ತಿಂಗಳು ಅಥವಾ ಏಪ್ರಿಲ್‌ನಲ್ಲಿ ರೆಪೋ ದರವನ್ನು ಸ್ಥಿರವಾಗಿರಿಸಿದೆ.
ಸಾಮಾನ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಏರಿಕೆ ಮಾಡಿದ ಬಳಿಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮತ್ತು ಸಾಲದ ಬಡ್ಡಿದರವನ್ನು ಏರಿಕೆ ಮಾಡುತ್ತಾ ಬಂದಿದೆ. ಏಪ್ರಿಲ್‌ನಲ್ಲಿ ರೆಪೋ ದರವನ್ನು ಸ್ಥಿರವಾಗಿರಿಸಿದ ಬಳಿಕವೂ ಮೇ ತಿಂಗಳಿನಲ್ಲಿ ಹಲವಾರು ಹಣಕಾಸು ಸಂಸ್ಥೆಗಳು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಯಾವೆಲ್ಲ ಬ್ಯಾಂಕುಗಳು ಮೇ ತಿಂಗಳಿನಲ್ಲಿ ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ?
ಡಿಸಿಬಿ ಬ್ಯಾಂಕ್: 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಡಿಸಿಬಿ ಬ್ಯಾಂಕ್ ಇಳಿಸಿದೆ. ಮೇ 8, 2023ರಂದು ಈ ನೂತನ ಬಡ್ಡಿದರವು ಜಾರಿಗೆ ಬರಲಿದೆ ಎಂದು ಡಿಸಿಬಿ ಬ್ಯಾಂಕ್ ವೆಬ್‌ಸೈಟ್ ಹೇಳಿದೆ. ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 8ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಡಿಸಿಬಿ ಬ್ಯಾಂಕ್ ಶೇಕಡ 8.5ರಷ್ಟು ಬಡ್ಡಿದರ ನೀಡುತ್ತದೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 1ರಿಂದ 5 ವರ್ಷದ ಅವಧಿಯ ಎಫ್‌ಡಿ ಮೇಲೆ ಬಡ್ಡಿದರವನ್ನು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 49ರಿಂದ 160 ಬಿಪಿಎಸ್ ಪರಿಷ್ಕರಣೆ ಮಾಡಿದೆ. ಮೇ 5, 2023ರಿಂದ ಜಾರಿಗೆ ಬರುವಂತೆ ಬಡ್ಡಿದರವನ್ನು ಬ್ಯಾಂಕ್ ಪರಿಷ್ಕರಣೆ ಮಾಡಿದೆ.
ಈ ಪರಿಷ್ಕರಣೆಯ ಬಳಿಕ ಬ್ಯಾಂಕ್ 7 ದಿನದಿಂದ 10 ವರ್ಷಗಳ 2 ಕೋಟಿ ರೂಪಾಯಿಯ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 4ರಿಂದ ಶೇಕಡ 9.1ರಷ್ಟು ಬಡ್ಡಿದರ ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಅದೇ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 4.5ರಿಂದ ಶೇಕಡ 9.6ರಷ್ಟು ಬಡ್ಡಿದರವನ್ನು ನೀಡುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಮೇ 2, 2023ರಿಂದ ಜಾರಿಗೆ ಬರುವಂತೆ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ವೆಬ್‌ಸೈಟ್ ಪ್ರಕಾರ ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಗರಿಷ್ಠವಾಗಿ 9.5ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 1001 ದಿನಗಳ ಎಫ್‌ಡಿ ಬಡ್ಡಿದರ ಇದಾಗಿದೆ. ಇನ್ನು ಸಾಮಾನ್ಯ ನಾಗರಿಕರಿಗೆ ಬ್ಯಾಂಕ್ ಇದೇ ಅವಧಿಯ ಎಫ್‌ಡಿ ಮೇಲೆ ಶೇಕಡ 9ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್: ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಕೋಟಕ್ ಮಹೀಂದ್ರಾ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಬ್ಯಾಂಕ್ ನಿಗದಿತ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು 50 ಮೂಲಾಂಕ ಏರಿಕೆ ಮಾಡಿದೆ. ಈ ನೂತನ ಬಡ್ಡಿದರವು 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಅನ್ವಯವಾಗುತ್ತದೆ. ಮೇ 11, 2023ರಿಂದ ಈ ನೂತನ ಬಡ್ಡಿದರವು ಜಾರಿಗೆ ಬರಲಿದೆ.


Click it and Unblock the Notifications