ಸವರನ್ ಗೋಲ್ಡ್ ಬಾಂಡ್ ಗೆ ಪ್ರತಿ ಗ್ರಾಮ್ ಗೆ 5,051 ರುಪಾಯಿ ನಿಗದಿ ಮಾಡಲಾಗಿದೆ ಎಂದು ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2020- 21- ಸಿರೀಸ್ VII ಚಂದಾದಾರರಾಗಲು ಅಕ್ಟೋಬರ್ 12ನೇ ತಾರೀಕಿನಿಂದ 16ರ ತನಕ ಅವಕಾಶ ಇದೆ.
ಬಾಂಡ್ ಬೆಲೆಯನ್ನು ನಿರ್ಧರಿಸುವುದು ಹೇಗೆಂದರೆ, ಸಬ್ ಸ್ಕ್ರಿಪ್ಷನ್ ಅವಧಿಯ ಹಿಂದಿನ ವಾರದಲ್ಲಿ ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವಾಗಿನ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ 999 ಶುದ್ಧತೆಯ ಚಿನ್ನದ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು. ಅದು ಪ್ರತಿ ಗ್ರಾಮ್ ಗೆ 5,051 ರುಪಾಯಿ ಬಂದಿದೆ.
50 ರುಪಾಯಿ ರಿಯಾಯಿತಿ
ಯಾವ ಹೂಡಿಕೆದಾರರು ಆನ್ ಲೈನ್ ಮೂಲಕ ಅಪ್ಲೈ ಮಾಡಿ, ಡಿಜಿಟಲ್ ಪಾವತಿ ಮಾಡುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್ ಗೆ 50 ರುಪಾಯಿ ರಿಯಾಯಿತಿ ದೊರೆಯುತ್ತದೆ. ಅಂಥ ಹೂಡಿಕೆದಾರರಿಗೆ ಗೋಲ್ಡ್ ಬಾಂಡ್ ದರವು 5001 ರುಪಾಯಿ ಆಗುತ್ತದೆ. ಸಿರೀಸ್ VIರ ಸಬ್ ಸ್ಕ್ರಿಪ್ಷನ್ ಆಗಸ್ಟ್ 31ರಿಂದ ಸೆಪ್ಟೆಂಬರ್ 4ರ ವರೆಗೆ ಪ್ರತಿ ಗ್ರಾಮ್ ಗೆ 5117 ರುಪಾಯಿಯಂತೆ ಆಗಿತ್ತು.
ಭಾರತ ಸರ್ಕಾರದ ಪರವಾಗಿ ಆರ್ ಬಿಐ
ಸಿರೀಸ್ VIIIರ ಸಬ್ ಸ್ಕ್ರಿಪ್ಷನ್ ನವೆಂಬರ್ 9ರಿಂದ 13ರ ತನಕ ಇರುತ್ತದೆ. ಅದರ ವಿತರಣೆ ಬೆಲೆಯನ್ನು ಸಬ್ ಸ್ಕ್ರಿಪ್ಷನ್ ಆರಂಭ ಆಗುವ ಕೆಲ ದಿನಗಳ ಮುಂಚೆ ಘೋಷಣೆ ಮಾಡಲಾಗುತ್ತದೆ. ಸವರನ್ ಗೋಲ್ಡ್ ಬಾಂಡ್ 2020- 21 ಅನ್ನು ಭಾರತ ಸರ್ಕಾರದ ಪರವಾಗಿ ಆರ್ ಬಿಐ ವಿತರಿಸುತ್ತದೆ.
ಎಲ್ಲೆಲ್ಲಿ ಸವರನ್ ಗೋಲ್ಡ್ ಬಾಂಡ್ ಖರೀದಿಸಬಹುದು?
ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್ ಇ, ಎನ್‌ಎಸ್ ಇ ಮತ್ತು ನ್ಯಾಷನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ನಲ್ಲಿ ಎಸ್ ಜಿಬಿಗಳನ್ನು ಖರೀದಿಸಬಹುದು. ವ್ಯಕ್ತಿಗತವಾಗಿ, ಟ್ರಸ್ಟ್ ಗಳು, ಸಾಮಾಜಿಕ ಸಂಘಟನೆಗಳು, ಹಿಂದೂ ಅವಿಭಕ್ತ ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಸವರನ್ ಗೋಲ್ಡ್ ಬಾಂಡ್ ಖರೀದಿಸುವ ಅವಕಾಶವಿದೆ.
ಗರಿಷ್ಠ ಹಾಗೂ ಕನಿಷ್ಠ ಪ್ರಮಾಣ ಎಷ್ಟು?
ಕನಿಷ್ಠ 1 ಬಾಂಡ್ ಆದರೂ ಖರೀದಿಸಬೇಕು. ಇದು 8 ವರ್ಷದ ನಂತರ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೆ ಮುಕ್ತಾಯಗೊಳಿಸಬಹುದು. ಇನ್ನು ಗರಿಷ್ಠ ಅಂದರೆ 4 ಕೇಜಿ ಮೌಲ್ಯದ ಎಸ್ ಜಿಬಿಯನ್ನು ವ್ಯಕ್ತಿಗತವಾಗಿ ಅಥವಾ ಹಿಂದೂ ಅವಿಭಕ್ತ ಕುಟುಂಬಗಳು ಖರೀದಿಸಬಹುದು. ಇನ್ನು ಟ್ರಸ್ಟ್ ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೇಜಿ ಮೌಲ್ಯದ ಎಸ್ ಜಿಬಿ ಖರೀದಿಸಬಹುದು.


Click it and Unblock the Notifications