ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಒಟ್ಟಾಗಿ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ನಂತರ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಏರಿಸಿದೆ. ಅದಾದ ಬಳಿಕ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲೆ ಸಾಮಾನ್ಯ ನಾಗರಿಕರ, ಹಿರಿಯ ನಾಗರಿಕರ ಗಮನ ಅಧಿಕವಾಗಿದೆ. ಈ ನಡುವೆ ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಶೇಷ ಫಿಕ್ಸಿಡ್ ಡೆಪಾಸಿಟ್ ಯೋಜನೆಗಳು ಮಾರ್ಚ್ 31ಕ್ಕೆ ಕೊನೆಯಾಗಲಿದೆ. ಅದಾದ ಬಳಿಕ ಈ ಯೋಜನೆಗಳು ಜಾರಿಯಲ್ಲಿ ಇರುವುದಿಲ್ಲ. ಆದ್ದರಿಂದಾಗಿ ಈ ಯೋಜನೆಗಳ ಬಗ್ಗೆ ತಿಳಿಯಿರಿ.
ಸಾಮಾನ್ಯವಾಗಿ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಯು ಹಣವನ್ನು ಉಳಿತಾಯ ಮಾಡಲು ಅತೀ ಉತ್ತಮವಾದ ಆಯ್ಕೆಯಾಗಿದೆ. ಜನರು ಎಂದಿಗೂ ಕೂಡಾ ಹಣ ಉಳಿತಾಯ ಮಾಡಲು ಎಫ್‌ಡಿಯನ್ನು ಆಯ್ಕೆ ಮಾಡುತ್ತಾರೆ ಮತ್ತು ಈ ಎಫ್‌ಡಿ ಯೋಜನೆಗಳು ಸುರಕ್ಷಿತವೂ ಹೌದು. ಬಡ್ಡಿದರವು ಅತೀ ಹೆಚ್ಚು ಇಳಿಕೆಯಾಗುವ ಸಾಧ್ಯತೆ ಇಲ್ಲ. ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ರೆಪೋ ದರವನ್ನು ಏರಿಸಿದೆ, ಅದಾದ ಬಳಿಕ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಬ್ಯಾಂಕ್‌ಗಳ ಸ್ಥಗಿತಗೊಳ್ಳಲಿರುವ ವಿಶೇಷ ಎಫ್‌ಡಿಯ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಎಸ್‌ಬಿಐ ಅಮೃತ ಕಳಶ ಎಫ್‌ಡಿ - 31 ಮಾರ್ಚ್ 2023ರಂದು ಅಂತ್ಯ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿಶೇಷ ಅಮೃತ ಕಳಶ ಯೋಜನೆಯನ್ನು ಹೊಂದಿದೆ. ಇದು ನಿಗದಿತ 400 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಯೋಜನೆಯಾಗಿದ್ದು, ಫೆಬ್ರವರಿ 15, 2023ರಿಂದ ಜಾರಿಗೆ ಬರುವಂತೆ ಸಾಮಾನ್ಯ ಜನರಿಗೆ ಶೇಕಡ 7.10ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರು ಈ 400 ದಿನಗಳ ಅವಧಿಯ ಎಸ್‌ಬಿಐ ಎಫ್‌ಡಿ ಯೋಜನೆಯಲ್ಲಿ ಶೇಕಡ 7.60ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು ಮಾರ್ಚ್ 31, 2023ರವರೆಗೆ ಮಾತ್ರ ಚಾಲ್ತಿಯಲ್ಲಿ ಇರಲಿದೆ.
ಫೆಬ್ರವರಿ 15, 2023ರಿಂದ ಎಸ್‌ಬಿಐ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಅದಾದ ಬಳಿಕ 7 ದಿನದಿಂದ 10 ದಿನದ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 3.00ರಿಂದ ಶೇಕಡ 6.50ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಅದೇ ಅವಧಿಯ ಎಫ್‌ಡಿ ಮೇಲೆ ಎಸ್‌ಬಿಐ ಶೇಕಡ 3.50ರಿಂದ ಶೇಕಡ 7.50ರಷ್ಟು ಬಡ್ಡಿದರವನ್ನು ನೀಡುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರ ಎಫ್‌ಡಿ- 31 ಮಾರ್ಚ್ 2023ರಂದು ಅಂತ್ಯ
ಭಾರತದ ಅತೀ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ವಿಶೇಷ ಫಿಕ್ಸಿಡ್ ಡೆಪಾಸಿಟ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯನ್ನು ಹಲವಾರು ಬಾರಿ ವಿಸ್ತರಣೆ ಮಾಡಲಾಗಿದೆ. ಈಗ ಕೊನೆಯ ಗಡುವು ಮಾರ್ಚ್ 31, 2023 ಆಗಿದೆ.
ವೆಬ್‌ಸೈಟ್ ಪ್ರಕಾರ, "ಹೆಚ್ಚುವರಿಯಾಗಿ ಶೇಕಡ 0.25ರಷ್ಟು ಪ್ರೀಮಿಯಂ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. 5 ವರ್ಷ ಒಂದು ದಿನದಿಂದ 10 ವರ್ಷ ಅವಧಿಯ 5 ಕೋಟಿ ರೂಪಾಯಿಗೂ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರಿಗೆ ಈ ಹೆಚ್ಚುವರಿ ಬಡ್ಡಿದರವನ್ನು ನೀಡಲಾಗುತ್ತದೆ. ಮೇ 18, 2022ರಿಂದ ಮಾರ್ಚ್ 31,2023ರವೆರೆಗೂ ಚಾಲ್ತಿಯಲ್ಲಿರುವ ವಿಶೇಷ ಎಫ್‌ಡಿ ಬಡ್ಡಿದರವು ಜಾರಿಯಲ್ಲಿರುತ್ತದೆ. ಈ ಆಫರ್ ನಾನ್-ರೆಸಿಡೆಂಟ್ ಇಂಡಿಯನ್‌ಗೆ (ಎನ್‌ಆರ್‌ಇ) ಅನ್ವಯವಾಗುವುದಿಲ್ಲ," ಎಂದು ಉಲ್ಲೇಖ ಮಾಡಲಾಗಿದೆ.


Click it and Unblock the Notifications