ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಮೇ 28ರಂದು 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಸಂಸತ್ತು ಭವನದ ಉದ್ಘಾಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ 75 ರೂಪಾಯಿಯ ನಾಣ್ಯ ಬಿಡುಗಡೆ ಮಾಡಿದೆ. ಆರ್ಥಿಕ ವಹಿವಾಟುಗಳ ಇಲಾಖೆಯ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಈ ನಾಣ್ಯದ ತೂಕ ಸುಮಾರು 34.65-35.35 ಗ್ರಾಂ ಆಗಿದೆ.
75 ರೂಪಾಯಿಯ ನಾಣ್ಯವನ್ನು ಸರ್ಕಾರ ಆರಂಭಿಸಿದ್ದೇಕೆ?: ಭಾರತದ ಹೊಸ ಸಂಸತ್ತು ಭವನದ ಉದ್ಘಾಟನೆಯ ಭಾಗವಾಗಿ ಕೇಂದ್ರ ಸರ್ಕಾರವು 75 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿದೆ. ಈ ನಾಣ್ಯದ ಒಂದು ಭಾಗದಲ್ಲಿ ಸಂಸತ್ತಿನ ಚಿತ್ರವಿದ್ದು, ಅದರ ಕೆಳಗೆ ಅಂತಾರಾಷ್ಟ್ರೀಯ ಸಂಖ್ಯೆಯಲ್ಲಿ 2023 ಎಂದು ಬರೆಯಲಾಗಿದೆ.

ಈ ನಾಣ್ಯದ ಇನ್ನೊಂದು ಭಾಗದಲ್ಲಿ ಅಶೋಕ ಸ್ತಂಭದ ಸಿಂಹದ ಚಿತ್ರವನ್ನು (ಲಯನ್ ಕ್ಯಾಪಿಟಲ್) ಹೊಂದಿದೆ. ಅದರ ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಭಾರತ್ ಮತ್ತು ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ ಎಂದು ಅದು ಹೇಳಿದೆ. ರೂಪಾಯಿಯ ಸಿಂಬಲ್ ₹ ಮತ್ತು ನಾಣ್ಯದ ಮೌಲ್ಯ 75 ಅಂತಾರಾಷ್ಟ್ರೀಯ ಸಂಖ್ಯೆಯಲ್ಲಿದೆ. ನಾಣ್ಯವನ್ನು ನಾಲ್ಕು ಭಾಗವಾಗಿ ವಿಂಗಡನೆ ಮಾಡಲಾಗಿದೆ. ಶೇಕಡ 50ರಷ್ಟು ಬೆಳ್ಳಿ, ಶೇಕಡ 40ರಷ್ಟು ಥಾಂFಋ, ಶೇಕಡ 5ರಷ್ಟು ನಿಕಲ್ ಮತ್ತು ಶೇಕಡ 5ರಷ್ಟು ಸತು.
ಇದು ಸಾಮಾನ್ಯ ವರ್ಗಾವಣೆಗೆ ಬಳಸಲಾಗುತ್ತದೆಯೇ?
ಸ್ಮರಣಾರ್ಥ ನಾಣ್ಯಗಳು ಎಂದು ಕರೆಯಲ್ಪಡುವ ಈ ನಾಣ್ಯಗಳು ಸಾಮಾನ್ಯ ಚಲಾವಣೆಗಾಗಿ ಇಲ್ಲ. ಬದಲಾಗಿ ಹೆಸರೇ ಹೇಳುವಂತೆ ಇದು ಸ್ಮರಣಾರ್ಥ ನಾಣ್ಯಗಳು ಆಗಿದೆ. ಈ ನಾಣ್ಯಗಳನ್ನು ಎಂದಿಗೂ ಕೂಡಾ ನಾವು ವಹಿವಾಟುಗಳಿಗೆ ಬಳಕೆ ಮಾಡುವಂತಿಲ್ಲ. ಇಂತಹ 150 ಕ್ಕೂ ಹೆಚ್ಚು ಸ್ಮರಣಾರ್ಥ ನಾಣ್ಯಗಳನ್ನು 1964 ರಿಂದ ಪ್ರಾರಂಭಿಸಿ ಈವರೆಗೆ ಬಿಡುಗಡೆ ಮಾಡಲಾಗಿದೆ.
75 ರೂ. ನಾಣ್ಯ ಖರೀದಿಸುವುದು ಹೇಗೆ, ಯಾರು ಖರೀದಿ ಮಾಡಬಹುದು?
ಯಾರು ಬೇಕಾದರೂ ಈ 75 ರೂಪಾಯಿಯ ವಿಶೇಷ ನಾಣ್ಯವನ್ನು ಖರೀದಿ ಮಾಡಬಹುದಾಗಿದೆ. ನೀವು ಸರ್ಕಾರದ ವೆಬ್‌ಸೈಟ್ ಮೂಲಕ ಈ ನಾಣ್ಯವನ್ನು ಖರೀದಿಸಬಹುದಾಗಿದೆ (www.indiagovtmint.in). ನೀವು ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಈ 75 ರೂಪಾಯಿಯ ನಾಣ್ಯವನ್ನು ಖರೀದಿ ಮಾಡಬಹುದಾಗಿದೆ.
ನೀವು ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಈ ವಿಶೇಷ ನಾಣ್ಯವನ್ನು ಖರೀದಿ ಮಾಡಬಹುದಾದರೂ ಕೂಡಾ ನೀವು ನಗದು ಅಥವಾ ಚೆಕ್ ಬಳಕೆ ಮಾಡಿಕೊಂಡು ಈ ವಿಶೇಷ ನಾಣ್ಯವನ್ನು ಖರೀದಿ ಮಾಡುವ ಯಾವುದೇ ಅವಕಾಶವು ನಿಮಗೆ ಇಲ್ಲ. ಇನ್ನು ನೀವು 10ಕ್ಕಿಂತ ಅಧಿಕ ನಾಣ್ಯವನ್ನು ಖರೀದಿ ಮಾಡುವ ಯೋಜನೆಯನ್ನು ಹೊಂದಿದ್ದರೆ ನೀವು ಪ್ಯಾನ್ ಕಾರ್ಡ್ ಅನ್ನು ನೀವು ಪ್ರಸ್ತುತ ಪಡಿಸಬೇಕಾಗುತ್ತದೆ.
75 ರೂಪಾಯಿ ವಿಶೇಷ ನಾಣ್ಯದ ಬೆಲೆ ಎಷ್ಟು?
ಈ 75 ರೂಪಾಯಿಯ ವಿಶೇಷ ನಾಣ್ಯದ ನೈಜ ಮೌಲ್ಯವನ್ನು ಈವರೆಗೂ ತಿಳಿಸಲಾಗಿಲ್ಲ. ಆದರೆ ಮಾಧ್ಯಮಕ್ಕೆ ಈ ಬಗ್ಗೆ ಬುಲ್ಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಯೋಗೇಶ್ ಸಿಂಘಾಲ್ ಮಾಹಿತಿ ನೀಡಿದ್ದಾರೆ. "ವಸ್ತು ಆಧಾರದಲ್ಲಿ ನಾವು ನೋಡಿದಾಗ ಈ 75 ರೂಪಾಯಿಯ ನಾಣ್ಯದ ನೈಜ ಬೆಲೆಯು 1,300 ರೂಪಾಯಿ ಆಗಿದೆ," ಎಂದು ಯೋಗೇಶ್ ಸಿಂಘಾಲ್ ತಿಳಿಸಿದ್ದಾರೆ.
ಈ ನಾಣ್ಯವನ್ನು ನೀವು ಖರೀದಿಸಬಹುದಾದ ನಿಜವಾದ ಬೆಲೆಯನ್ನು ಸರ್ಕಾರವು ಬಿಡುಗಡೆ ಮಾಡುವವರೆಗೂ ನಾವು ಕಾಯಬೇಕಾಗಿದೆ. ಈ 75 ರೂಪಾಯಿಯ ನಾಣ್ಯವನ್ನು ನೈಜ ಬೆಲೆಯನ್ನು ಬಿಡುಗಡೆ ಮಾಡಿದ ಬಳಿಕವಷ್ಟೆ ಖರೀದಿ ಮಾಡಲು ಸಾಧ್ಯವಾಗಲಿದೆ.


Click it and Unblock the Notifications