ಕೇಂದ್ರ ಬಜೆಟ್ ಕಣ್ಣೆದುರು ಇರುವಾಗ ಹೀಗಂದರೆ ಏನು, ಹಾಗಂದರೆ ಏನು ಎಂಬ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಅಂತಿಟ್ಟುಕೊಳ್ಳಿ. ಆ ನಂತರ ನಮಗೆ ಇವುಗಳಲ್ಲಿ ಅನ್ವಯಿಸುವುದು ಯಾವುವು, ಅವುಗಳಿಂದ ಏನು ಪ್ರಯೋಜನ ಆಗಬಹುದು ಎಂಬ ನಿರೀಕ್ಷೆ ಶುರುವಾಗುತ್ತದೆ. ಈ ಲೇಖನದಲ್ಲಿ ಅಂಥ ಮುಖ್ಯವಾದ ನಿರೀಕ್ಷೆ ಬಗ್ಗೆ ತಿಳಿಸಲಾಗುತ್ತಿದೆ.
ಮೊದಲಿಗೆ ಆದಾಯ ತೆರಿಗೆ ಅಂದರೇನು ಅನ್ನೋದು ತಿಳಿದುಕೊಳ್ಳಿ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಆದಾಯ ಅಥವಾ ಲಾಭದ ಮೇಲೆ ಪಾವತಿಸುವ ತೆರಿಗೆಗೆ ಆದಾಯ ತೆರಿಗೆ ಎನ್ನಲಾಗುತ್ತದೆ. ಕಾನೂನಿನ ಪ್ರಕಾರ, ವ್ಯಕ್ತಿಗಳು ಅಥವಾ ಉದ್ಯಮಗಳು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕು.
ಆ ಮೂಲಕ ಸರ್ಕಾರಕ್ಕೆ ಏನಾದರೂ ತೆರಿಗೆ ಪಾವತಿಸಬೇಕೇ ಎಂಬುದು ಗೊತ್ತಾಗುತ್ತದೆ. ಜತೆಗೆ ತೆರಿಗೆ ರೀಫಂಡ್ ಆಗಬೇಕೆ ಎಂಬ ವಿಚಾರವೂ ಆ ಮೂಲಕವೇ ಗೊತ್ತಾಗುತ್ತದೆ. ಆದಾಯ ತೆರಿಗೆ ರೂಪದಲ್ಲಿ ಸಂಗ್ರಹ ಆಗುವ ಹಣವನ್ನು ಸರ್ಕಾರವು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುತ್ತದೆ.
ಭಾರತದಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅಂದರೇನು?
ಆದಾಯ ತೆರಿಗೆ ಎಂಬ ಪ್ರಸ್ತಾವ ಬಂದಾಕ್ಷಣ ನೆನಪಾಗುವುದು ಸ್ಟ್ಯಾಂಡರ್ಡ್ ಡಿಡಕ್ಷನ್. ಒಬ್ಬ ವ್ಯಕ್ತಿ ಎಷ್ಟು ಖರ್ಚು ಮಾಡಿದ್ದಾರೆ ಅಥವಾ ಹೂಡಿಕೆ ಎಷ್ಟು ಮಾಡಿದ್ದಾರೆ ಎಂಬಿತ್ಯಾದಿ ಕ್ಯಾಲ್ಕುಲೇಟರ್ ಕೆಲಸ ಇಲ್ಲದೆ ಆದಾಯ ತೆರಿಗೆ ಲೆಕ್ಕ ಹಾಕುವ ಸಮಯದಲ್ಲಿ ಇಂತಿಷ್ಟು ಮೊತ್ತವನ್ನು ಕಡಿತ ಮಾಡಿ ಲೆಕ್ಕ ತೋರಿಸಲು ಅವಕಾಶ ನೀಡಲಾಗುತ್ತದೆ. ಅದನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನಲಾಗುತ್ತದೆ. ಸರ್ಕಾರ ನಿಗದಿ ಮಾಡುವ ಈ ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತಕ್ಕೆ ಯಾವುದೇ ಹೂಡಿಕೆಯ ದಾಖಲೆಗಳು, ಖರ್ಚಿನ ರಸೀದಿಯನ್ನು ನೀಡಬೇಕಿಲ್ಲ. ನಿಗದಿತವಾದ ಮೊತ್ತವನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಎಂದು ಆದಾಯದ ಒಟ್ಟು ಲೆಕ್ಕಾಚಾರದಲ್ಲಿ ಕಡಿತ ತೋರಿಸಲು ಅವಕಾಶ ನೀಡಲಾಗುತ್ತದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಅರ್ಥ ಏನು?
ಯಾವುದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ, ಯಾವುದೇ ಹುದ್ದೆಯಲ್ಲಿ ಇರುವ ವ್ಯಕ್ತಿಯ ವಾರ್ಷಿಕ ವೇತನದಿಂದ ತೋರಿಸಬಹುದಾದ ನಿಶ್ಚಿತ ಕಡಿತ. ಯಾವಾಗ ವಾರ್ಷಿಕ ವೇತನದಿಂದ ಇಷ್ಟು ಮೊತ್ತವನ್ನು ಕಡಿಮೆ ಮಾಡಲಾಗುತ್ತದೋ ಆಗ ತೆರಿಗೆ ಬೀಳುಬಹುದಾದ ಆದಾಯದಲ್ಲಿ ಒಂದಿಷ್ಟು ಕಡಿಮೆ ಆಗುತ್ತದೆ. ಆ ಮೂಲಕ ತೆರಿಗೆ ಪಾವತಿಯ ಮೊತ್ತವೂ ಕಡಿಮೆಯಾಗುತ್ತದೆ. ವೇತನ ಪಡೆಯುವ ಉದ್ಯೋಗಿ ಮತ್ತು ಪಿಂಚಣಿದಾರರು ಸ್ಟ್ಯಾಂಡರ್ಡ್ ಡಿಡಕ್ಷನ್ ಗೆ ಕ್ಲೇಮ್ ಮಾಡಬಹುದು.
ಸ್ಟ್ಯಾಂಡರ್ಡ್ ಡಿಡಕ್ಷನ್ ಲೆಕ್ಕಾಚಾರದ ಉದ್ದೇಶಕ್ಕೆ ವೇತನ ಎಂದು ವೇತನ, ವಾರ್ಷಿಕ ಭತ್ಯೆ, ರಜೆಯ ಭತ್ಯೆ, ಪಿಂಚಣಿ, ಶುಲ್ಕಗಳು, ಕಮಿಷನ್ ಮುಂಚಿತವಾಗಿ ಪಡೆದ ಸಂಬಳವನ್ನು ಪರಿಗಣಿಸಲಾಗುತ್ತದೆ. ಇದರಲ್ಲಿ ಆದಾಯ ತೆರಿಗೆ ಕಾಯಿದೆಯ ನಿಯಮ 10ರಡಿ ಸಿಗುವ ವಿನಾಯಿತಿಗಳಾದ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆಗಳನ್ನು ಹೊರತುಪಡಿಸಲಾಗಿರುತ್ತದೆ.
ಭಾರತದಲ್ಲಿ ಬಾಡಿಗೆ ಮೂಲಕ ಬರುವ ಆದಾಯಕ್ಕೆ ಕೂಡ ಶೇಕಡಾ ಮೂವತ್ತರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಲಾಗುತ್ತದೆ. ಬಾಡಿಗೆ ಆದಾಯವು ಇನ್ ಕಮ್ ಫ್ರಂ ಹೌಸ್ ಪ್ರಾಪರ್ಟಿ ಅಡಿಯಲ್ಲಿ ಬರುತ್ತದೆ. ಮನೆಯ ದುರಸ್ತಿ, ತೆರಿಗೆ ಪಾವತಿ ಇತ್ಯಾದಿಗಾಗಿ ಶೇಕಡಾ ಮೂವತ್ತರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಇದೆ.
ವಿವಿಧ ಉಳಿತಾಯಗಳು
ಈ ಹಿಂದೆ ವೇತನದಾರರು ಸ್ಟ್ಯಾಂಡರ್ಡ್ ಡಿಡಕ್ಷನ್ ಗೆ ಅರ್ಹರಾಗಿದ್ದರು. ಆದರೆ ಈಗ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಈಗಿನ ನಿಯಮ ಮತ್ತು ಕಾಯ್ದೆಗಳ ಪ್ರಕಾರ, ವೇತನ ಪಡೆಯುವ ಉದ್ಯೋಗಿಗಳಿಗೆ ಇತರ ತೆರಿಗೆ ವಿನಾಯಿತಿಗಳನ್ನು ಒದಗಿಸಲಾಗಿದೆ. ಮನರಂಜನಾ ಭತ್ಯೆ ಮತ್ತು ವೃತ್ತಿಪರ ತೆರಿಗೆಗಳನ್ನು ನಿಗದಿತ ಕಡಿತದಡಿ ಪಡೆದುಕೊಳ್ಳಬಹುದು.
ಇದಲ್ಲದೆ ಈ ಕೆಳಗಿನ ವಿಭಾಗಗಳಿಗೂ ವಿನಾಯಿತಿಗಳು ಸಿಗುತ್ತವೆ:
ಪಿಪಿಎಫ್ ಹೂಡಿಕೆ
ಇಕ್ವಿಟಿ ಹೂಡಿಕೆ
ಮ್ಯೂಚುವಲ್ ಫಂಡ್ ಗಳು
5 ವರ್ಷದ ತೆರಿಗೆ ರಹಿತ ಉಳಿತಾಯ
ನಿರ್ದಿಷ್ಟ ಅವಧಿಯ ಠೇವಣಿಗಳು
ಪಿಂಚಣಿ ಯೋಜನೆಗಳು
ಭವಿಷ್ಯನಿಧಿಗೆ ನೀಡುವ ದೇಣಿಗೆ
ಜೀವ ವಿಮಾ ಪಾಲಿಸಿ
ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ)
ಶೈಕ್ಷಣಿಕ ಸಾಲದ ಮರುಪಾವತಿ
ಆರೋಗ್ಯ ವಿಮೆ ಪ್ರೀಮಿಯಂ ಪಾವತಿ
ಹೆಚ್ಚುವರಿ ವಿನಾಯಿತಿ
ಅಂದ ಹಾಗೆ, ಉಳಿತಾಯವನ್ನು ಉತ್ತೇಜಿಸಬೇಕು ಎಂಬ ಕಾರಣಕ್ಕೆ ಸರ್ಕಾರವು ಆದಾಯ ತೆರಿಗೆ ಕಾಯ್ದೆಯ ಅನೇಕ ನಿಯಮಗಳಡಿ ವಿನಾಯಿತಿಗಳನ್ನು ಒದಗಿಸುತ್ತದೆ. 80ಸಿ, 80ಸಿಸಿಸಿ, 80ಸಿಸಿಡಿ ಇತ್ಯಾದಿ ನಿಯಮಗಳಡಿ ಮಾಡಿದ ಉಳಿತಾಯಗಳ ರಸೀದಿಗಳನ್ನು ನೀಡಿ ಆ ಉಳಿತಾಯದ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.
ಹೂಡಿಕೆ ಮತ್ತು ಉಳಿತಾಯ ಯೋಜನೆಗಳಡಿ ಸಿಗುವ ಒಟ್ಟು ವಿನಾಯಿತಿಯ ಮೊತ್ತ ವರ್ಷಕ್ಕೆ 1,50,000 ರುಪಾಯಿ ಆಗಿರುತ್ತದೆ. ಇದರ ಜೊತೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ಅಡಿ ಮಾಡುವ ಉಳಿತಾಯಕ್ಕೆ ವರ್ಷಕ್ಕೆ ರು. 50,000 ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. 2015ರ ಹಣಕಾಸು ಕಾಯ್ದೆಯಡಿ ಈ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗಿದೆ.
ಕಳೆದ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ವರ್ಷಕ್ಕೆ ನಲವತ್ತರಿಂದ ಐವತ್ತು ಸಾವಿರಕ್ಕೆ ಏರಿಕೆ ಮಾಡಿತ್ತು. ಇದರಿಂದ ಮಧ್ಯಮ ವರ್ಗದವರಿಗೆ ಭಾರೀ ಅನುಕೂಲ ಆಗಿತ್ತು.


Click it and Unblock the Notifications