ಸಾಲದ ಬಡ್ಡಿದರ ಏರಿಸಿದೆ ಈ 3 ಬ್ಯಾಂಕ್, ನಿಮ್ಮ ಮೇಲೆ ಹೇಗೆ ಪ್ರಭಾವ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ತಿಂಗಳ 5ರಿಂದ 7ರವರೆಗೆ ಎಂಪಿಸಿ ಸಭೆಯನ್ನು ನಡೆಸಲಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಕಳೆದ ಹಲವಾರು ತಿಂಗಳುಗಳಿಂದ ಆರ್‌ಬಿಐ ಕೈಗೊಂಡ ಕ್ರಮವನ್ನು ಈ ಸಭೆಯ ಬಳಿಕ ಕೂಡಾ ಕೈಗೊಳ್ಳುವ ಸಾಧ್ಯತೆ ಇದೆ. ಅಂದರೆ ರೆಪೋ ದರ ಮತ್ತೆ ಹೆಚ್ಚಿಸುವ ನಿರೀಕ್ಷೆಯಿದೆ. ಈ ನಡುವೆ ಪ್ರಮುಖ ಮೂರು ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಹೌದು, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಐಸಿಐಸಿಐ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 1, 2022ರಿಂದ ಜಾರಿಗೆ ಬರುವಂತೆ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಎಂಸಿಎಲ್‌ಆರ್ ಆಧಾರದಲ್ಲಿ ಈ ಪ್ರಮುಖ ಬ್ಯಾಂಕ್‌ಗಳು ತಮ್ಮ ಸಾಲದ ದರವನ್ನು ಏರಿಸಿದೆ.
ಆರ್‌ಬಿಐ ಸಭೆಯನ್ನು ನಡೆಸಿ ಮತ್ತೆ ರೆಪೋ ದರವನ್ನು ಅಧಿಕ ಮಾಡುವ ಮುನ್ನವೇ ಈ ಮೂರು ಬ್ಯಾಂಕ್‌ಗಳು ಸಾಲದ ಬಡ್ಡಿದರ ಹೆಚ್ಚಿಸಿದೆ. ಕಳೆದ ಬಾರಿ ಸೆಪ್ಟೆಂಬರ್ 30ರಂದು ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಿದ್ದು ಪ್ರಸ್ತುತ ದರ ಶೇಕಡ 5.90ಕ್ಕೆ ತಲುಪಿದೆ. ಕಳೆದ ಮೇ ತಿಂಗಳಿನಿಂದ ಒಟ್ಟು ನಾಲ್ಕು ಬಾರಿ ಆರ್‌ಬಿಐ ರೆಪೋ ದರ ಪರಿಷ್ಕರಿಸಿದೆ. ಯಾವ ತಿಂಗಳು ಆರ್‌ಬಿಐ ಎಷ್ಟು ರೆಪೋ ದರ ಹೆಚ್ಚಿಸಿದೆ, ಪ್ರಸ್ತುತ ಯಾವೆಲ್ಲ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಅಧಿಕ ಮಾಡಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಮುಂದಿನ ಎಂಪಿಸಿ ಸಭೆಯಲ್ಲಿ ಮತ್ತೆ ದರ ಏರಿಕೆ?
ಮೇ ತಿಂಗಳಿನಲ್ಲಿ 40 ಬಿಪಿಎಸ್ ಹಾಗೂ ಜೂನ್, ಆಗಸ್ಟ್, ಸೆಪ್ಟೆಂಬರ್‌ನಲ್ಲಿ 50 ಬಿಪಿಎಸ್ ಹೆಚ್ಚಿಸಿದೆ. ಮೇ ತಿಂಗಳಿನಿಂದ ಆರ್‌ಬಿಐ ಒಟ್ಟಾಗಿ ಶೇಕಡ 1.90ರಷ್ಟು ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಅಂದರೆ 190 ಮೂಲಾಂಕ ಅಧಿಕ ಮಾಡಿದೆ. ಮಾನೆಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯಲ್ಲಿನ ಆರು ಜನ ಸದಸ್ಯರು ಕೂಡಾ ಒಪ್ಪಿಗೆ ಸೂಚಿಸಿದ ಬಳಿಕ ರೆಪೋ ದರ ಏರಿಕೆ ಘೋಷಣೆಯನ್ನು ಆರ್‌ಬಿಐ ಮಾಡಿದೆ. ಈ ಸಭೆಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಹಿಸಿದ್ದರು. ಇನ್ನು ಈಗಾಗಲೇ ಆರ್‌ಬಿಐ ವಾರ್ಷಿಕ ನಿಗದಿತ ಆರು ಸಭೆಯನ್ನು ಹೊರತುಪಡಿಸಿ ಅಧಿಕ ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ಚರ್ಚಿಸಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ. ಈ ವರದಿಯಲ್ಲಿ ಹಣದುಬ್ಬರದ ನಿಯಂತ್ರಣಕ್ಕೆ ಸಂಬಂಧಿಸಿದ ಸಲಹೆ, ಸೂಚನೆಗಳು ಇರಲಿದೆ. ಇನ್ನು ಮುಂದಿನ ಸಭೆಯಲ್ಲಿ ಆರ್‌ಬಿಐ 30 ಬಿಪಿಎಸ್‌ನಷ್ಟು ರೆಪೋ ದರ ಹೆಚ್ಚಿಸಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಎಲ್ಲ ಅವಧಿಯ ಸಾಲದ ಮೇಲಿನ ಬಡ್ಡಿದರವನ್ನು 5 ಮೂಲಾಂಕ ಹೆಚ್ಚಳ ಮಾಡಿದೆ. ಈ ಪರಿಷ್ಕರಣೆಯ ಬಳಿಕ ಒಂದು ವರ್ಷದ ಎಂಸಿಎಲ್‌ಆರ್ ಪ್ರಸ್ತುತ ಶೇಕಡ 8.10 ಆಗಿದೆ. ಈ ಹಿಂದೆ ಶೇಕಡ 8.05 ಆಗಿತ್ತು. ಇನ್ನು ಆರು ತಿಂಗಳ ಎಂಸಿಎಲ್‌ಆರ್ ಶೇಕಡ 7.80ಕ್ಕೆ ಏರಿಕೆಯಾಗಿದೆ. ಈ ಹಿಂದೆ ಶೇಕಡ 7.75 ಆಗಿತ್ತು.

ಐಸಿಐಸಿಐ ಬ್ಯಾಂಕ್
ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಎಂಸಿಎಲ್‌ಆರ್ ಅನ್ನು 10 ಮೂಲಾಂಕ ಹೆಚ್ಚಳ ಮಾಡಿದೆ. (100 ಮೂಲಾಂಕ ಶೇಕಡ 1ಕ್ಕೆ ಸಮ). ಈ ಪರಿಷ್ಕರಣೆಯ ಬಳಿಕ ಓವರ್‌ನೈಟ್, ಒಂದು ತಿಂಗಳ ಎಂಸಿಎಲ್‌ಆರ್ ಶೇಕಡ 8.15ಕ್ಕೆ ಏರಿಕೆಯಾಗಿದೆ. ಈ ಹಿಂದೆ ಶೇಕಡ 8.05 ಆಗಿತ್ತು. ಇನ್ನು ಮೂರು ತಿಂಗಳು ಹಾಗೂ ಆರು ತಿಂಗಳ ಎಂಸಿಎಲ್‌ಆರ್ ಶೇಕಡ 8.20ರಿಂದ ಶೇಕಡ 8.35ಕ್ಕೆ ಹೆಚ್ಚಳವಾಗಿದೆ. ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.40ಕ್ಕೆ ಹೆಚ್ಚಾಗಲಿದೆ.

ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಇಂಡಿಯಾ ಎಲ್ಲ ಅವಧಿಯ ಎಂಸಿಎಲ್‌ಆರ್ ಅನ್ನು 25 ಮೂಲಾಂಕ ಹೆಚ್ಚಿಸಿದೆ. ಈ ಪರಿಷ್ಕರಣೆಯ ಬಳಿಕ ಬ್ಯಾಂಕ್ ಆಫ್ ಇಂಡಿಯಾದ ಒಂದು ವರ್ಷದ ಹಾಗೂ ಆರು ತಿಂಗಳ ಎಂಸಿಎಲ್‌ಆರ್ ಕ್ರಮವಾಗಿ ಶೇಕಡ 8.15 ಹಾಗೂ ಶೇಕಡ 7.90 ಆಗಿದೆ. ಈ ಹಿಂದೆ ಒಂದು ವರ್ಷ ಹಾಗೂ ಆರು ತಿಂಗಳ ಎಂಸಿಎಲ್‌ಆರ್ ಕ್ರಮವಾಗಿ ಶೇಕಡ 7.95 ಹಾಗೂ ಶೇಕಡ 7.65 ಆಗಿತ್ತು.

ನಿಮ್ಮ ಮೇಲೆ ಏನು ಪ್ರಭಾವ?
ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು ಅಧಿಕ ಮಾಡುವುದರಿಂದಾಗಿ ನೀವು ಸಾಲ ಪಡೆಯುವುದು ದುಬಾರಿಯಾಗಲಿದೆ. ಅಷ್ಟು ಮಾತ್ರವಲ್ಲದೆ ಈಗಾಗಲೇ ಈ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವವರಿಗೆ ಇಎಂಐ ಹೊರೆ ಅಧಿಕವಾಗಲಿದೆ. ಇದರಿಂದಾಗಿ ನಿಮ್ಮ ಮಾಸಿಕ ಬಜೆಟ್ ಮೇಲೆ ಪರಿಣಾಮ ಉಂಟಾಗಲಿದೆ. ಮಾಸಿಕ ಬಜೆಟ್ ಬುಡಮೇಲು ಆಗುವ ಸಾಧ್ಯತೆಯೂ ಇದೆ.