ಕಾರು ಉದ್ಯಮದ ಮಾರುಕಟ್ಟೆಯ ಅಂಕಿ ಅಂಶಗಳ ಪ್ರಕಾರ 2023ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಪೈಕಿ ಮಾರುತಿ ಸುಜುಕಿ ಅಗ್ರಗಣ್ಯ ಸ್ಥಾನದಲ್ಲಿದ್ದು, ಇದರ ನಾಲ್ಕು ಮಾದರಿ ಕಾರುಗಳು ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಆಲ್ಟೋ 21,411 ಯುನಿಟ್ ಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಸ್ಥಾನವನ್ನು ಹಿಂಪಡೆದುಕೊಂಡಿದೆ.
ಮಾತ್ರವಲ್ಲ ಇದು 72 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ. ಈ ಮದ್ಯೆ ಮಾರುತಿ ಸುಜುಕಿ ವ್ಯಾಗನ್ ಆರ್ 2022 ಡಿಸೆಂಬರ್ ನಲ್ಲಿ 10ನೇ ಸ್ಥಾನದಿಂದ 2023ರ ಜನವರಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮಾರುತಿ ಸುಜುಕಿ ಸ್ವಿಫ್ಟ್ ಮೂರನೇ ಸ್ಥಾನದಲ್ಲಿ ಉಳಿಸಿಕೊಂಡಿದ್ದು, ಮಾರುತಿ ಸುಜುಕಿ ಬಲೆನೊ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಅಗ್ರ 5ರ ಸ್ಥಾನದಲ್ಲಿ ಟಾಟಾ ನೆಕ್ಸನ್ ಇದ್ದು ಇದು ಮಾರುತಿ ಸುಜುಕಿಯೇತರ ಕಾರು ಆಗಿದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ.

1. ಮಾರುತಿ ಸುಜುಕಿ ಆಲ್ಟೋ: ಒಂದು ಕಾಲದಲ್ಲಿ ಭಾರತದಲ್ಲಿ ಬಹುಜನಪ್ರಿಯವಾಗಿದ್ದ ಮಾರುತಿ 800 ಉತ್ತರಾಧಿಕಾರಿಯಂತೆ ಬಿಂಬಿತವಾಗಿರುವ ಹೊಸ ಮಾರುತಿ ಸುಜುಕಿ ಆಲ್ಟೋ ಕಾರು ಭಾರತದಲ್ಲಿ ಕೈಗೆಟಕುವ ಹಾಗೂ ಬಜೆಟ್ ಸ್ನೇಹಿಯಾಗಿರುವುದರಿಂದ ಖರೀದಿದಾರರ ಆದ್ಯತೆಯ ಆಯ್ಕೆಯಾಗಿದೆ. ಒಂದು ವೇಳೆ ಸಿಎನ್‌ಜಿ ಕಿಟ್ ಅಳವಡಿಸಲಾಗಿರುವ ಕಾರು ಕೊಳ್ಳುವುದಾದರೆ ಬೆಲೆ ಕೊಂಚ ಹೆಚ್ಚಾಗುತ್ತದೆ. ಮಾರುತಿ ಸುಜುಕಿ ಆಲ್ಟೋ 2023 ಜನವರಿಯಲ್ಲಿ 21,411 ಯುನಿಟ್ ಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ 73% ದಷ್ಟು ಹೆಚ್ಚಳ ಕಂಡಿದೆ.
2. ಮಾರುತಿ ಸುಜುಕಿ ವ್ಯಾಗನ್ ಆರ್: 2023 ಜನವರಿಯಲ್ಲಿ ಮಾರುತಿ ಸುಜುಕಿ ವ್ಯಾಗನ್ ಆರ್ 20,466 ಯುನಿಟ್ ಮಾರಾಟವಾಗಿದ್ದು, ಈ ಮೂಲಕ 10ನೇ ಸ್ಥಾನದಿಂದ ಇದೀಗ ಟಾಪ್ 2 ಸ್ಥಾನಕ್ಕೆ ಜಿಗಿದಿದೆ. ವ್ಯಾಗನ್ ಆರ್ ಇಂಧನ ದಕ್ಷತೆ ಮತ್ತು ಪ್ರಾಕ್ಟಿಕ್ಯಾಲಿಟಿಯಿಂದ ಜನಪ್ರಿಯವಾಗಿದ್ದು ಒಂದು ಲೀಟರ್ ಮತ್ತು 1.2 ಲೀಟರ್ ನ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದಲ್ಲದೆ ಸಿಎನ್‌ಜಿ ಕಿಟ್ ನೊಂದಿಗೂ ದೊರಕುತ್ತದೆ.
3. ಮಾರುತಿ ಸುಜುಕಿ ಸ್ವಿಫ್ಟ್: ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಸ್ವಿಫ್ಟ್ ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. 2023 ಜನವರಿಯಲ್ಲಿ ಇದು 16,440 ಯುನಿಟ್ ಮಾರಾಟವಾಗಿದೆ. ಇದು 1.2 ಲೀಟರ್ ಡ್ಯುಯೆಲ್ ಜೆಟ್ ಪೆಟ್ರೋಲ್ ಇಂಜಿನ್ ಉಳ್ಳ, ಪೆಟ್ರೋಲ್ 22.38 ಕಿ.ಮೀ./ಲೀ. ಮತ್ತು ಸಿಎನ್‌ಜಿ 30.90ಕಿ.ಮೀ./ಲೀ.ಅತ್ಯುತ್ತಮ ಇಂಜಿನ್ ದಕ್ಷತೆ ನೀಡುವ ವಿಶಾಲವಾದ 5 ಸೀಟರ್ ಕಾರು ಇದಾಗಿದೆ.
4. ಮಾರುತಿ ಸುಜುಕಿ ಬಲೆನೊ: ಇದು ತನ್ನ ಅಗ್ರ ಸ್ಥಾನವನ್ನು ಕಳೆದುಕೊಂಡರೂ, ಖರೀದಿದಾರರ ಜನಪ್ರಿಯ ಆಯ್ಕೆಯಾಗಿ ಮುಂದುವರಿದಿದೆ. 2023 ಜನವರಿಯಲ್ಲಿ ಇದು 16,357 ಯುನಿಟ್ ಮಾರಾಟ ಕಂಡಿದೆ. ಇದು 141 ಪ್ರತಿಶತ ಬೆಳವಣಿಗೆಯಾಗಿದೆ. ಸಿಎನ್‌ಜಿ ಅವೃತ್ತಿ ಕಾರಿನ ಬಿಡುಗಡೆಯೂ ಇದರ ಮಾರಾಟ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದೆ. ಮಾರುತಿ ಸುಜುಕಿ ಬಲೆನೊ ಸೆಕೆಂಡ್ ಜನರೇಷನ್ ನಲ್ಲಿದ್ದು ಸುಧಾರಿತಾ ಸುರಕ್ಷತಾ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.
5. ಟಾಟಾ ನೆಕ್ಸನ್: ಅಗ್ರ 5ರ ಸ್ಥಾನದಲ್ಲಿ ಮಾರುತಿ ಸುಜುಕಿಯೇತರವಾಗಿರುವ ಟಾಟಾ ನೆಕ್ಸಾನ್, ಕಾಂಪ್ಯಾಕ್ಟ್ ಎಸ್‌ಯುವಿ ಜನವರಿಯಲ್ಲಿ15,567 ಯುನಿಟ್ ಗಳು ಮಾರಾಟವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಪೆಟ್ರೋಲ್, ಡಿಸೇಲ್ ಮತ್ತು ವಿದ್ಯುತ್ ಚಾಲಿತ ರೂಪದಲ್ಲಿ ಲಭ್ಯವಿರುವ ನೆಕ್ಸನ್ ಭಾರತದಲ್ಲಿ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.


Click it and Unblock the Notifications