ದೈನಂದಿನ ಅಡುಗೆಗೆ ಹೆಚ್ಚುಕಮ್ಮಿ ಎಲ್ಲಾ ಮನೆಯಲ್ಲೂ ಬಳಸುವ ಈರುಳ್ಳಿ, ಟೊಮೆಟೋ ಮತ್ತು ಆಲೂಗೆಡ್ಡೆ ದರದಲ್ಲಿ ಏರಿಕೆಯಾದರೆ ಜನರ ರಿಯಾಕ್ಷನ್ ತುಸು ಖಾರವಾಗಿಯೇ ಇರುತ್ತದೆ. ದೇಶದೆಲ್ಲೆಡೆ ಟೊಮೆಟೋ ದರ ಶತಕದ ಮೇಲೆ ಸಾಗುತ್ತಿದೆ.
ಕೋಲ್ಕತ್ತಾದಲ್ಲಿ ಮಂಗಳವಾರ (ಜುಲೈ 4)ಇದರ ಬೆಲೆ 150 ರೂಪಾಯಿಯನ್ನು ದಾಟಿತ್ತು. ಇನ್ನು, ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಕಡಿಮೆ ಬೆಲೆಗೆ ಟೊಮೆಟೋ ಮಾರಲು ಕೆಲವು ವ್ಯಾಪಾರಸ್ಥರು ಸಜ್ಜಾಗಿದ್ದಾರೆ. ಆದರೆ, ಒಬ್ಬರಿಗೆ ಒಂದು ಕೆಜಿ ಮಾತ್ರ ಎನ್ನುವ ಕಂಡೀಷನ್ ನೊಂದಿಗೆ.

ಒಂದು ಕೆಜಿ ತೂಕದ ಬಟ್ಟಲಿಗೆ ಒಂದೆರಡು ಟೊಮೆಟೋ ಜಾಸ್ತಿ ಹೋದರೂ, ಈಗಿನ ಪರಿಸ್ಥಿತಿಯಲ್ಲಿ ವ್ಯಾಪರಸ್ಥನಿಗೆ ದೊಡ್ಡ ಲಾಸ್. ಇನ್ನು, ವ್ಯಾಪಾರ ಮಾಡುವ ನೆಪದಲ್ಲಿ ಹಾಗೇ ಒಂದೆರಡು ಪೀಸ್ ಅನ್ನು ಬ್ಯಾಗಿಗೆ ತುಂಬಿ ಕೊಳ್ಳುವವರೂ ಇರುತ್ತಾರೆ, ಇಲ್ಲದಿದ್ದರೆ ಟೊಮೆಟೋ ಕಳ್ಳರ ಕಾಟ.
ಇದಕ್ಕೆ ಹುಬ್ಬಳ್ಳಿ - ಧಾರವಾಡ ಜಿಲ್ಲೆಯ ವ್ಯಾಪಾರಸ್ಥನ ತಲೆಗೆ ಒಂದು ಐಡಿಯಾ ಹೊಳೆದಿದೆ, ಕೂಡಲೇ ಅದನ್ನು ಇಂಪ್ಲಿಮೆಂಟ್ ಮಾಡಿಬಿಟ್ಟ. ಅದು ಟೊಮೆಟೋ ಮೇಲೆ ಹದ್ದಿನ ಕಣ್ಣು ಇಡಲು ಸಿಸಿಟಿವಿಯನ್ನು ಫಿಕ್ಸ್ ಮಾಡಿಬಿಟ್ಟಿದ್ದಾನೆ.
ಟೊಮೆಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಟೊಮೆಟೋದ್ದೇ ಮಾತು. ಶತಕ ಬಾರಿಸಿದ ಟೊಮೆಟೋ ಹಣ್ಣಿಗೆ ಈಗ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಟೊಮೆಟೋ ಕಳ್ಳತನ ಆಗದಂತೆ ವ್ಯಾಪಾರಿಯೊಬ್ಬ ಎಚ್ಚರಿಕೆ ವಹಿಸಿದ್ದಾನೆ.
ಹೌದು.. ಸಂತೆಯಲ್ಲಿ ಟೊಮೆಟೋ ಹಣ್ಣಿಗಾಗಿಯೇ ಸಿಸಿ ಟಿವಿ ಹಾಕಿರುವ ದೃಶ್ಯ ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ. ಸಿಸಿ ಟಿವಿ ಕಾವಲಿನಲ್ಲಿ ಟೊಮೆಟೋ ವ್ಯಾಪಾರ ನಡೆದಿದೆ. 1 ಕೆ.ಜಿ ಟೊಮೆಟೋ ಬೆಲೆ 150 ರೂಪಾಯಿ ಹಿನ್ನಲೆ, ಖರೀದಿ ಮಾಡುವ ನೆಪದಲ್ಲಿ ಜನ ಟೊಮೆಟೋ ಕಳ್ಳತನ ಮಾಡಬಾರದು ಎಂಬ ಕಾರಣಕ್ಕೆ ಸಿ.ಸಿ ಕ್ಯಾಮೆರಾ ಇಟ್ಟಿದ್ದಾನೆ.
ಕುಂದಗೋಳ ತಾಲೂಕು ಸಂಶಿ ಗ್ರಾಮದಲ್ಲಿ ಟೊಮೆಟೋ ವ್ಯಾಪಾರಸ್ಥ ಕೃಷ್ಣಪ್ಪ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದು, ಒಂದು ಎರಡು ಟೊಮ್ಯಾಟೋ ಕದ್ದರೂ ನಷ್ಟವಾಗುತ್ತೇ ಹೀಗಾಗಿ ಸಿ.ಸಿ ಟಿವಿ ಇಟ್ಟಿದ್ದೀನಿ ಎಂದು ವ್ಯಾಪಾರಸ್ಥ ಕೃಷ್ಣಪ್ಪ ಅಭಿಪ್ರಾಯ ಪಡುತ್ತಾರೆ. ವ್ಯಾಪಾರಸ್ಥನ ಐಡಿಯಾಗೆ ಸಂತೆಯಲ್ಲಿ ಜನ ಬೆರಗಾಗಿದ್ದಾರೆ.


Click it and Unblock the Notifications