ಯುಪಿಐ ವಹಿವಾಟಿನ ಮೇಲೆ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ, ಪೇಮೆಂಟ್ ಮೇಲೆ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂಬ ಸುದ್ದಿಗಳ ಬಗ್ಗೆ ಸರ್ಕಾರವು ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದೆ. ಯುಪಿಐ ವಹಿವಾಟು ಈ ಹಿಂದಿನಂತೆ ಉಚಿತವೇ ಆಗಿರಲಿದೆ. ಯಾವುದೇ ಶುಲ್ಕವನ್ನು ವಿಧಿಸುವ ಬಗ್ಗೆ ನಿರ್ಧಾರವಾಗಿಲ್ಲ ಎಂದು ಸರ್ಕಾರ ತಿಳಿಸಿದೆ.
"ಯುಪಿಐ ಎಂಬುವುದು ಜನರಿಗೆ ಸಹಾಯಕವಾದ ವ್ಯವಸ್ಥೆಯಾಗಿದೆ. ಹಾಗೆಯೇ ಆರ್ಥಿಕ ವ್ಯವಸ್ಥೆಗೂ ಸಹಾಯಕವಾಗಿದೆ. ಯುಪಿಐ ಸೇವೆಗೆ ಸರ್ಕಾರ ಶುಲ್ಕವನ್ನು ವಿಧಿಸುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ," ಎಂದು ಕೇಂದ್ರ ಹಣಕಾಸು ಸಚಿವಾಲಯವು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
"ಕಳೆದ ವರ್ಷ ಸರ್ಕಾರವು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಆರ್ಥಿಕ ಸಹಾಯವನ್ನು ಮಾಡಿದೆ. ಹಾಗೆಯೇ ಈ ವರ್ಷವೂ ಕೂಡಾ ಅದೇ ಘೋಷಣೆಯನ್ನು ಮಾಡಿದೆ. ಡಿಜಿಟಲ್ ಪೇಮೆಂಟ್ ಅನ್ನು ಅಧಿಕ ಮಾಡುವ ನಿಟ್ಟಿನಲ್ಲಿ ಹಾಗೂ ಆರ್ಥಿಕತೆಗೆ ಸಹಾಯಕವಾಗಿ, ಬಳಕೆದಾರರಿಗೆ ಸಹಾಯಕವಾಗುವ ಈ ಡಿಜಿಟಲ್ ಪೇಮೆಂಟ್‌ನ ಪ್ರಚಾರ ಅಧಿಕ ಮಾಡುವ ನಿಟ್ಟಿನಲ್ಲಿ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವು ಈ ಆರ್ಥಿಕ ಸಹಾಯವನ್ನು ಘೋಷಣೆ ಮಾಡಿದೆ," ಎಂದು ಕೇಂದ್ರ ಹಣಕಾಸು ಸಚಿವಾಲಯವು ಇನ್ನೊಂದು ಟ್ವೀಟ್‌ನಲ್ಲಿ ತಿಳಿಸಿದೆ.

ಸರ್ಕಾರ ಯಾಕಾಗಿ ಸ್ಪಷ್ಟಣೆ ನೀಡಿದೆ?
ತ್ವರಿತ ಪಾವತಿ ಸೇವೆ (IMPS), ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿಗಳ ವರ್ಗಾವಣೆ (NEFT) ವ್ಯವಸ್ಥೆ, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ವ್ಯವಸ್ಥೆ ಮತ್ತು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮತ್ತು ವಿವಿಧ ಪಾವತಿ ಸಾಧನಗಳಂತಹ ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಚರ್ಚೆಗೊಳಪಡಿಸಲಾಗುತ್ತಿದೆ ಎಂದು ಈ ಹಿಂದೆ ವರದಿಯಾಗಿದೆ.
'ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳು' ಕುರಿತ ಚರ್ಚೆಯನ್ನು ಆರ್ ಬಿ ಐ ಆರಂಭಿಸಿದೆ. ಸಾರ್ವಜನಿಕರ ಅಭಿಪ್ರಾಯದ ಆಧಾರ ಮೇಲೆ ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ ಹೆಚ್ಚಳದ ಬಗ್ಗೆ ಆರ್ ಬಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಅಕ್ಟೋಬರ್ 3 ರೊಳಗೆ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸಾರ್ವಜನಿಕರು ನೀಡಬಹುದಾಗಿದೆ ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ.
ಈ ಎಲ್ಲ ವರದಿಗಳ ಬೆನ್ನಲ್ಲೇ ಸರ್ಕಾರವು ಸ್ಪಷ್ಟಣೆಯನ್ನು ನೀಡಿದೆ. ಯುಪಿಐ ವಹಿವಾಟು ಈ ಹಿಂದಿನಂತೆ ಉಚಿತವೇ ಆಗಿರಲಿದೆ. ಯಾವುದೇ ಶುಲ್ಕವನ್ನು ವಿಧಿಸುವ ಬಗ್ಗೆ ನಿರ್ಧಾರವಾಗಿಲ್ಲ ಎಂದು ಸರ್ಕಾರ ತಿಳಿಸಿದೆ.


Click it and Unblock the Notifications