ಭಾರತದಲ್ಲಿ ಆಗಸ್ಟ್ ತಿಂಗಳಿನಲ್ಲಿ ಯುಪಿಐ ವಹಿವಾಟು ದಾಖಲೆ ಮಟ್ಟವನ್ನು ತಲುಪಿದೆ. ಆಗಸ್ಟ್‌ನಲ್ಲಿ ಮೊದಲ ಬಾರಿಗೆ 10 ಬಿಲಿಯನ್‌ಗೂ ಅಧಿಕ ಯುಪಿಐ ವಹಿವಾಟು ನಡೆದಿದ್ದು, ಇದೇ ಮೊದಲ ಬಾರಿಗೆ 10 ಬಿಲಿಯನ್ ಗಡಿ ದಾಟಿ ವಹಿವಾಟು ನಡೆದಿದೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಆಗಸ್ಟ್‌ನಲ್ಲಿ 15,700 ಬಿಲಿಯನ್ ರೂಪಾಯಿ ಮೌಲ್ಯದ ಯುಪಿಐ ವಹಿವಾಟು ಆಗಸ್ಟ್ ತಿಂಗಳಿನಲ್ಲಿ ನಡೆದಿದೆ.
ಕಳೆದ ಏಳು ವರ್ಷಗಳಲ್ಲಿ ಭಾರತದ ಡಿಜಿಟಲ್ ಪ್ರಯಾಣದಲ್ಲಿ ಇದು ಗಮನಾರ್ಹ ಮೈಲಿಗಲ್ಲು ಆಗಿದೆ. 135 ಕೋಟಿ ಜನರಿರುವ ದೇಶದಲ್ಲಿ ಆಗಸ್ಟ್‌ನಲ್ಲಿ, ಯುಪಿಐ ಮೂಲಕ ಒಟ್ಟು 10.58 ಶತಕೋಟಿ ವಹಿವಾಟುಗಳನ್ನು ಮಾಡಲಾಗಿದೆ. 15,760 ಶತಕೋಟಿ (183 ಶತಕೋಟಿ ಡಾಲರ್‌ಗಿಂತ ಅಧಿಕ) ಮೌಲ್ಯದ ವಹಿವಾಟು ಮಾಡಲಾಗಿದೆ.

ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ ಮಾಹಿತಿಯ ಪ್ರಕಾರ ಆಗಸ್ಟ್ ಲೆಕ್ಕಕ್ಕೆ ಸೇರಿಸಲು ಇನ್ನೂ ಒಂದು ದಿನದ ಲೆಕ್ಕಾಚಾರವಿದೆ. 10.58 ಶತಕೋಟಿ ಅಂಕಿ ಅಂಶವು ಒಟ್ಟು ವಿಶ್ವ ಜನಸಂಖ್ಯೆಗಿಂತ ಸುಮಾರು ಎರಡು ಶತಕೋಟಿ ಹೆಚ್ಚಾಗಿದೆ. ಯುಪಿಐ ಮೂಲಕ 9.96 ಶತಕೋಟಿ ವಹಿವಾಟುಗಳನ್ನು ಜುಲೈನಲ್ಲಿ ನಡೆಸಲಾಗಿದ್ದು, ಇದು ಈ ಹಿಂದಿನ ದಾಖಲೆಯ ವಹಿವಾಟಾಗಿದೆ.
ಆಗಸ್ಟ್ 2022 ರಿಂದ ದೇಶದಲ್ಲಿ ಸುಮಾರು 6.5 ಬಿಲಿಯನ್ ಯುಪಿಐ ವಹಿವಾಟುಗಳನ್ನು ನಡೆಸಲಾಗಿದೆ. ಆಗಸ್ಟ್ ಅಂಕಿಅಂಶವು ವರ್ಷದಿಂದ ವರ್ಷಕ್ಕೆ ಸುಮಾರು ಶೇಕಡ 61ರಷ್ಟು ಬೆಳವಣಿಗೆಯಾಗಿದೆ. ಆಗಸ್ಟ್ 2021 ರಲ್ಲಿ ಕೇವಲ 3.5 ಶತಕೋಟಿ ಯುಪಿಐ ವಹಿವಾಟು ನಡೆದಿದೆ. ಎರಡು ವರ್ಷಗಳಲ್ಲಿ ಸುಮಾರು ಮೂರು ಪಟ್ಟು ಯುಪಿಐ ವಹಿವಾಟು ಬೆಳವಣಿಗೆ ಕಂಡು ಬಂದಿದೆ.
ನೂತನ ದಾಖಲೆ ಸೃಷ್ಟಿ
ಆಗಸ್ಟ್‌ನಲ್ಲಿ ನಡೆದಿರುವ 10 ಶತಕೋಟಿ ಯುಪಿಐ ವಹಿವಾಟು ಯುಪಿಐ ಬಳಕೆಯಲ್ಲಿ ಹೊಸ ಗರಿಷ್ಠ ಮಟ್ಟವಾಗಿದೆ. ಅಥವಾ ಹೊಸ ದಾಖಲೆಯಾಗಿದೆ. ಹಾಗೆಯೇ ಭಾರತವು ಇತರ ರಾಷ್ಟ್ರಗಳಿಗೆ ನೀಡುತ್ತಿರುವ ತಂತ್ರಜ್ಞಾನ ಇದಾಗಿದೆ. ಜನರು ಪ್ರಸ್ತುತ ಪ್ರತಿನಿತ್ಯದ ಸಣ್ಣ ಪುಟ್ಟ ವಹಿವಾಟಿಗೂ ಕೂಡಾ ಯುಪಿಐ ಬಳಕೆ ಮಾಡುತ್ತಾರೆ. ಪ್ರತಿ ಸಣ್ಣ ಪುಟ್ಟ ಅಂಗಡಿಗಳಲ್ಲಿಯೂ ಆನ್‌ಲೈನ್ ವಹಿವಾಟಿಗೆ ಆದ್ಯತೆ ನೀಡಲಾಗುತ್ತದೆ.
ಜಾಗತಿಕವಾಗಿ ಡಿಜಿಟಲೀಕರಣದ ಹಾದಿಯಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಪಡೆಯಲು ಮುಂದಾಗಿದೆ. ಪ್ರಸ್ತುತ 35 ಕ್ಕೂ ಹೆಚ್ಚು ದೇಶಗಳು ಭಾರತದ ಯುಪಿಐ ತಂತ್ರಜ್ಞಾನವನ್ನು ತಮ್ಮ ದೇಶದಲ್ಲಿಯೂ ಅಳವಡಿಸಿಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಇತ್ತೀಚೆಗೆ ಯುಪಿಐ ಅಳವಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ ರಾಷ್ಟ್ರಗಳಲ್ಲಿ ಜಪಾನ್ ಕೂಡ ಸೇರಿದೆ.
ಫ್ರಾನ್ಸ್‌ನಲ್ಲಿ ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅನ್ನು ಆರಂಭ ಮಾಡುವ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. "ಭಾರತದ ಯುಪಿಐ ದೇಶದಲ್ಲಿ ದೊಡ್ಡ ಸಾಮಾಜಿಕ ಪರಿವರ್ತನೆ ತಂದಿದೆ. ಈಗ ಭಾರತ ಮತ್ತು ಫ್ರಾನ್ಸ್ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಮುಂದಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ಯಾರಿಸ್‌ನಲ್ಲಿ ಹೇಳಿದ್ದರು.


Click it and Unblock the Notifications