ದುಬೈ ಎಂಬ ಕನಸು ಈಗ ಕಾಸು ಮಾಡಬೇಕು ಎಂದಿರುವವರಿಗೆ ಮುಂಚಿನಂತೆ 'ಡಾರ್ಲಿಂಗ್' ಆಗಿಲ್ಲ. ಆ ಕಾರಣದಿಂದಲೇ ದಶಕಗಳ ಕಾಲ ದುಬೈನಲ್ಲೇ ಬದುಕು ಕಟ್ಟಿಕೊಂಡಿದ್ದ ವಲಸಿಗರು ನಿಧಾನಕ್ಕೆ ಟೆಂಟ್ ಖಾಲಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ? ದುಬೈನಲ್ಲಿ ಜೀವನ ನಡೆಸುವುದು ವಿಪರೀತ ದುಬಾರಿ.
ಒಂದು ಕಾಲಕ್ಕೆ ತೆರಿಗೆ ಸ್ವರ್ಗ ಎನಿಸಿಕೊಂಡಿದ್ದ ದುಬೈ, ವ್ಯಾಪಾರ- ವ್ಯವಹಾರ ನಡೆಸುವವರಿಗೆ ಹಾಗೂ ಅಲ್ಲಿಯೇ ನೆಲೆಸಿರುವವರಿಗೆ ದುಬಾರಿಯಾಗಿ ಪರಿಣಮಿಸಿದೆ. ವಲಸಿಗರ ಪಾಲಿನ ದುಬಾರಿ ಸ್ಥಳ ಎಂಬ ಪಟ್ಟಿಯಲ್ಲಿ 2013ನೇ ಇಸವಿಯಲ್ಲಿ 90ನೇ ಸ್ಥಾನದಲ್ಲಿ ಇದ್ದ ದುಬೈ, ಸದ್ಯಕ್ಕೆ 23ನೇ ಸ್ಥಾನದಲ್ಲಿದೆ. ಮಧ್ಯಪ್ರಾಚ್ಯದ ದುಬಾರಿ ನಗರ ಎನಿಸಿದೆ. ಕಳೆದ ವರ್ಷ, 2019ರಲ್ಲಿ ದುಬಾರಿ ಸ್ಥಳಗಳ ಪಟ್ಟಿಯಲ್ಲಿ ದುಬೈ 21ನೇ ಸ್ಥಾನದಲ್ಲಿ ಇತ್ತು. ರಿಯಲ್ ಎಸ್ಟೇಟ್ ಸಿಕ್ಕಾಪಟ್ಟೆ ಬೆಳೆದಿದ್ದರಿಂದ ಬಾಡಿಗೆ ಪ್ರಮಾಣದಲ್ಲಿ ಕಡಿಮೆ ಆಗಿದೆ.
ಶಿಕ್ಷಣ ಸಿಕ್ಕಾಪಟ್ಟೆ ದುಬಾರಿ
ದುಬೈನಲ್ಲಿ ಇರುವ ಕುಟುಂಬಗಳಿಗೆ ಅತಿ ದೊಡ್ಡ ಪ್ರಶ್ನೆ ಆಗಿರುವುದು ಶಿಕ್ಷಣ. ಉದ್ಯೋಗದಾತರ ಪೈಕಿ ಬಹುತೇಕರು ಟ್ಯೂಷನ್ ವೆಚ್ಚ ನೋಡಿಕೊಂಡರೂ ಶಿಕ್ಷಣ ವೆಚ್ಚ ಸವಾಲಾಗಿಯೇ ಉಳಿದಿದೆ. ವಿವಿಧ ಶ್ರೇಣಿಯ ಶಾಲೆಗಳು ಇದ್ದರೂ ಈ ಭಾಗದಲ್ಲಿ ಕಳೆದ ವರ್ಷ ದಾಖಲಾಗಿರುವ ಅತಿ ಹೆಚ್ಚು ಶಾಲೆ ವೆಚ್ಚ 11,402 ಅಮೆರಿಕನ್ ಡಾಲರ್ (ಇವತ್ತಿನ ಭಾರತೀಯ ರುಪಾಯಿಗಳಲ್ಲಿ 8,50,000ಕ್ಕೂ ಹೆಚ್ಚು). ಸಾರಾ ಅಜ್ಬಾ ಎಂಬ ಶಿಕ್ಷಕಿಗೆ ಕೊರೊನಾ ನಂತರ ಕೆಲಸ ಹೋಗಿದೆ. ಆನ್ ಲೈನ್ ಶಿಕ್ಷಣ ಕಡ್ಡಾಯವಾದ ಮೇಲೆ ಆಗಿರುವ ಬೆಳವಣಿಗೆ ಇದು. ಆಕೆಯ ಮಗನಿಗೆ ಅದೇ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ದೊರೆಯುತ್ತಿತ್ತು. ಈಗ ಮಗನ ಜತೆಗೆ ಯು.ಎಸ್.ಗೆ ತೆರಳುತ್ತಿದ್ದಾರೆ. ಅಲ್ಲಿ ಆಕೆಯ ಒಬ್ಬ ಮಗ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದು, ಮಗಳು ಕಾಲೇಜಿನಲ್ಲಿ ಓದುತ್ತಿದ್ದಾರೆ. ಆಕೆಯ ಗಂಡ ಕಡಿಮೆ ಬಾಡಿಗೆಯ ಸಣ್ಣ ಮನೆಯಲ್ಲಿ ವಾಸವಿದ್ದಾರೆ.
2020ಕ್ಕೂ ಮುಂಚೆಯೇ ಒತ್ತಡ ಶುರುವಾಯಿತು
ದಶಕಗಳ ಕಾಲ ದುಬೈ ಬಗ್ಗೆ ದೊಡ್ಡ ಆಲೋಚನೆಗಳೇ ಇದ್ದವು. ಜಗತ್ತಿನ ದುಬಾರಿ ಮಾಲ್ ಗಳು, ದೊಡ್ಡ ಕಟ್ಟಡಗಳು ಹೀಗೆ. ವಲಸಿಗ ಕುಟುಂಬಗಳಿಗೆ ಸೊಗಸಾದ ಕಟ್ಟಡಗಳು. ತೆರಿಗೆ ಇಲ್ಲದ ಸಂಬಳ. ವಿಶ್ವವಿಖ್ಯಾತ ಬಾಣಸಿಗರಿಂದ ಅಂತರರಾಷ್ಟ್ರೀಯ ಮಟ್ಟದ ವಲಸಿಗರಿಗೆ ಆಹಾರ. ಹೀಗೆಲ್ಲ ಇದ್ದ ದುಬೈನಲ್ಲಿ 2020ಕ್ಕೂ ಮುಂಚೆಯೇ ಒತ್ತಡ ಶುರುವಾಯಿತು. ಮಾಲ್ ಗಳಲ್ಲಿ ಗಿಜಿಗುಡುವ ಜನ. ಆದರೆ ಖರ್ಚು ಮಾಡುವವರಿಲ್ಲ. ವಸತಿ ಕಟ್ಟಡಗಳ ನಿರ್ಮಾಣವಾದರೂ ಖರೀದಿ ಮಾಡುವವರು ವಿರಳ. ಹೊಸ ರೆಸ್ಟೋರೆಂಟ್ ಗಳು ವ್ಯಾಪಾರವನ್ನೇ ಬದಲಿಸಿಕೊಂಡಿವೆ. 2008ರ ಆರ್ಥಿಕ ಬಿಕ್ಕಟ್ಟಿಗೂ ಮುಂಚೆ ದುಬೈ ಇದ್ದ ಸ್ಥಿತಿಗೆ ಮರಳಲೇ ಇಲ್ಲ. 2014ರಲ್ಲಿ ತೈಲ ಬೆಲೆ ಕುಸಿದ ಮೇಲೆ ಬೆಳವಣಿಗೆಗೆ ಮತ್ತೆ ಹಿನ್ನಡೆಯಾಯಿತು. ಆರು ತಿಂಗಳ ಕಾಲ ನಡೆಯಬೇಕಿದ್ದ ಎಕ್ಸ್ ಪೋ- 2020ಗೆ 2.5 ಕೋಟಿ ಜನರನ್ನು ಆಕರ್ಷಿಸುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಕಾರಣಕ್ಕೆ ಮುಂದೂಡಿರುವುದರಿಂದ ಆ ಸಂಖ್ಯೆಯನ್ನು ಪರಿಷ್ಕರಿಸಲಾಗಿದೆ.
ವೇತನ- ಉದ್ಯೋಗ ಕಡಿತ
ಬೇಡಿಕೆ ಕುಸಿದಿದೆ ಅಂದರೆ ಚೇತರಿಕೆಗೆ ಸಮಯ ಬೇಕಾಗುತ್ತದೆ. ಮಧ್ಯಪ್ರಾಚ್ಯದ ಇತರ ದೇಶಗಳಿಗೆ ಹೋಲಿಸಿದರೆ ಕೊರೊನಾದಿಂದ ಇನ್ನೂ ಚೇತರಿಕೆ ಕಂಡಿಲ್ಲ. ಆದರೆ ಆರ್ಥಿಕ ಚಟುವಟಿಕೆ ಪುನರಾರಂಭ ಆಗಿದೆ. ಜಾಗತಿಕವಾಗಿ ಜನರಾಗಲೀ ಸರಕಾಗಲೀ ಹರಿದುಬರುತ್ತಿಲ್ಲ. ಎಮಿರೇಟ್ಸ್ ಗ್ರೂಪ್ ಏರ್ ಲೈನ್ಸ್ ನಿಂದ ಮೂವತ್ತು ಸಾವಿರದಷ್ಟು ಉದ್ಯೋಗ ಕಡಿತ ಮಾಡಿದೆ. ದುಬೈ ಹೋಟೆಲ್ ಗಳು 30 ಪರ್ಸೆಂಟ್ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಇದೆ. ದುಬೈನ ಮಾನವ ನಿರ್ಮಿತ ದ್ವೀಪ ಸೃಷ್ಟಿಸಿದವರು, ಅತಿ ದೊಡ್ಡ ಟವರ್ ಗಳನ್ನು ನಿರ್ಮಿಸಿದವರು ವೇತನ ಕಡಿತ ಮಾಡಿದ್ದಾರೆ. ಉಬರ್ ಗೆ ಸೇರಿದ ಮಧ್ಯ ಪ್ರಾಚ್ಯದ ಕರೀಂನಿಂದ ಮೇ ತಿಂಗಳಲ್ಲಿ ಶೇಕಡಾ 33ರಷ್ಟು ಉದ್ಯೋಗ ಕಡಿತ ಮಾಡಲಾಗಿದೆ. ಆದರೆ ಈ ವಾರ ವ್ಯವಹಾರ ಸುಧಾರಿಸಿಕೊಂಡಿದೆ ಎನ್ನಲಾಗಿದೆ. ದುಬೈನ ಪ್ಯಾಕೇಜಿಂಗ್ ಮತ್ತು ಕಾರ್ಗೋಗೆ ದಿನಕ್ಕೆ ಏಳರಂತೆ ಕರೆ ಬರುತ್ತಿದೆಯಂತೆ. ಸ್ವದೇಶಗಳಿಗೆ ವಸ್ತುಗಳನ್ನು ಸಾಗಾಟ ನಡೆಸಲು ಮಾಡುತ್ತಿರುವ ಕರೆ ಇದು. ಕಳೆದ ವರ್ಷ ಈ ಅವಧಿಯಲ್ಲಿ ವಾರಕ್ಕೆ ಎರಡರಿಂದ ಮೂರು ಕರೆ ಬರುತ್ತಿತ್ತಂತೆ. ಅದೇ ಸಂದರ್ಭದಲ್ಲಿ ಬರುವವರ ಸಂಖ್ಯೆಯೂ ಇರುತ್ತಿತ್ತು. ಆದರೆ ಈಗ ಏನಿದ್ದರೂ ಹೊರಗೆ ಹೋಗುತ್ತಿರುವವರೇ ಇದ್ದಾರೆ ಎನ್ನುತ್ತಾರೆ ಈ ವ್ಯವಹಾರ ನಡೆಸುವವರು.
9 ಲಕ್ಷ ಉದ್ಯೋಗ ನಷ್ಟವಾಗಬಹುದು
ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ವಲಸಿಗರ ಸಂಖ್ಯೆಯೇ ಹೆಚ್ಚು. ವಿವಿಧ ಹಂತದ ಕೆಲಸ- ಕಾರ್ಯಗಳಿಗೆ ವಲಸಿಗ ಕಾರ್ಮಿಕರು- ಉದ್ಯೋಗಿಗಳ ಮೇಲೆ ಅವಲಂಬನೆ ಹೆಚ್ಚು. ಕೊರೊನಾ ವ್ಯಾಪಿಸಿದ ನಂತರ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಪ್ರಮಾಣ ದುಬೈನಲ್ಲಿ ಹೆಚ್ಚು. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 90ರಷ್ಟು ವಿದೇಶಿಗರು. ಆಕ್ಸ್ ಫರ್ಡ್ ಎಕನಾಮಿಕ್ಸ್ ಅಂದಾಜು ಮಾಡಿರುವಂತೆ, ಯುನೈಟೆಡ್ ಎಮಿರೇಟ್ಸ್ ಭಾಗಿವಾಗಿರುವ ದುಬೈನಲ್ಲಿ 9 ಲಕ್ಷ ಉದ್ಯೋಗ ನಷ್ಟವಾಗಬಹುದು ಎನ್ನಲಾಗುತ್ತಿದೆ. ಯುಎಇ ಒಟ್ಟು ಜನಸಂಖ್ಯೆ 96 ಲಕ್ಷ. ಇನ್ನು ವಲಸಿಗರು ದುಬೈ ತೊರೆಯುತ್ತಿದ್ದಾರೆ. ಭಾರತೀಯರು, ಪಾಕಿಸ್ತಾನೀಯರು ಮತ್ತು ಆಫ್ಗನ್ನರು ದೇಶ ಸ್ವದೇಶಗಳಿಗೆ ಮರಳುತ್ತಿದ್ದಾರೆ. ಪ್ರಮುಖ ಹುದ್ದೆಗಳಲ್ಲಿ ಇರುವವರು ದುಬೈ ತೊರೆಯುತ್ತಿರುವುದರಿಂದ ಅಲ್ಲಿನ ಬೆಳವಣಿಗೆಗೂ ಸವಾಲು ಎದುರಾಗಿದೆ. ಹೀಗೆ ದೇಶ ಬಿಡುತ್ತಿರುವುದರಿಂದ ರೆಸ್ಟೋರೆಂಟ್ ಗಳು, ವಿಲಾಸಿ ವಸ್ತುಗಳು, ಶಾಲೆಗಳು ಮತ್ತು ಕ್ಲಿನಿಕ್ ಗಳಿಗೆ ಹಿನ್ನಡೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.


Click it and Unblock the Notifications