ಉಳಿತಾಯ ಖಾತೆಯು ನೀವು ಬ್ಯಾಂಕ್‌ನಲ್ಲಿ ನಿಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಲು ತೆರೆಯಬಹುದಾದ ಒಂದು ರೀತಿಯ ಹಣಕಾಸು ಖಾತೆಯಾಗಿದೆ. ಉಳಿತಾಯ ಖಾತೆಗಳು ನಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಮತ್ತು ಅಗತ್ಯವಿರುವಂತೆ ಹಿಂಪಡೆಯಲು ಸಹಾಯಕವಾಗಿದೆ. ಬ್ಯಾಂಕ್‌ಗಳಲ್ಲಿ ಯಾವು ಖಾತೆಯನ್ನು ತೆರೆಯುವುದು ಎಂಬ ವಿಚಾರದಲ್ಲಿ ಗ್ರಾಹಕರು ಗೊಂದಲಕ್ಕೊಳಗಾಗಬಹುದು. ಅದಕ್ಕಾಗಿ ನೀವು ಸರಿಯಾದ ಮಾಹಿತಿಯನ್ನು ಹೊಂದುವುದು ಮುಖ್ಯವಾಗುತ್ತದೆ.
ಹೌದು ನಾವು ಬ್ಯಾಂಕ್‌ನಲ್ಲಿ ಯಾವ ಖಾತೆಯನ್ನು ತೆರೆಯುವುದು ಸೂಕ್ತ ಮತ್ತು ಯಾವ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರಯುವುದು ಸೂಕ್ತ ಎಂದು ತಿಳಿಯಲು ಈ ಬಗ್ಗೆ ಬಲ್ಲವರಿಂದ ಮಾಹಿತಿ ಪಡೆಯುವುದು ಮುಖ್ಯವಾಗುತ್ತದೆ. ಸರಿಯಾಗಿ ಮಾಹಿತಿ ಪಡೆದ ಬಳಿಕವೇ ಉಳಿತಾಯ ಖಾತೆಯನ್ನು ತೆರೆದರೆ ಉತ್ತಮ. ಹಾಗಿರುವಾಗ ನೀವು ಅಧಿಕ ಲಾಭವನ್ನು ಪಡೆಯಬೇಕಾದರೆ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆಯಬಹುದು. ನೀವು ಹೊಂದಿರಬಹುದಾದ ಖಾತೆಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲವಾದರೂ ಒಬ್ಬ ವ್ಯಕ್ತಿ 3ಕ್ಕಿಂತ ಅಧಿಕ ಖಾತೆಗಳನ್ನು ಹೊಂದುವುದು ಬೇಡ ಎಂಬುವುದು ನಮ್ಮ ಸಲಹೆ. ಇದು ನಿರ್ವಹಣೆಗೆ ಕಷ್ಟವಾಗಬಹುದು.

ಒಂದಕ್ಕಿಂತ ಅಧಿಕ ಉಳಿತಾಯ ಖಾತೆಯಿಂದಾಗುವ ಪ್ರಯೋಜನಗಳು?
* ಹಣ ನಿರ್ವಹಣೆ: ಸಾಮಾನ್ಯ ವೆಚ್ಚಗಳು, ತುರ್ತು ನಿಧಿ, ನಿಮ್ಮ ಮಗುವಿನ ಶಿಕ್ಷಣ ಮತ್ತು ಇತರ ವಿಷಯಗಳಿಗೆ ಹಣವನ್ನು ನೀವು ಉಳಿತಾಯ ಮಾಡಲು ಬಯಸಬಹುದು. ಇಂತಹ ಸಂದರ್ಭದಲ್ಲಿ ಪ್ರತಿಯೊಂದಕ್ಕೂ ವಿಭಿನ್ನ ಖಾತೆಗಳನ್ನು ಹೊಂದಿದ್ದರೆ ಸಹಾಯವಾಗುತ್ತದೆ. ಬೇರೆ ಬೇರೆ ಉದ್ದೇಶಗಳಿಗಾಗಿ ನಿಮ್ಮ ಉಳಿತಾಯವನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಹಾಗೆಯೇ ಒಂದು ನಿರ್ದಿಷ್ಟ ಉದ್ದೇಶಕ್ಕೆ ಹಣ ಎಷ್ಟು ಉಳಿತಾಯ ಮಾಡಲಾಗಿದೆ ಎಂದು ತಿಳಿಯಲು ಸಹಕಾರಿಯಾಗಲಿದೆ. ಹಾಗೆಯೇ ನೀವು ಹಣ ದುಂದು ವೆಚ್ಚ ಮಾಡುವುದಕ್ಕೆ ಕಡಿವಾಣ ಹಾಕಿದ್ದಂತಾಗುತ್ತದೆ.
* ಸ್ವಯಂಚಾಲಿತ ಉಳಿತಾಯ ಮಾಡುವ ಗುರಿ: ಪ್ರತಿ ಒಂದು ಉದ್ದೇಶಕ್ಕಾಗಿ ನೀವು ಪ್ರತ್ಯೇಕ ಖಾತೆಗಳನ್ನು ರಚಿಸಿದ ನಂತರ, ನಿಮ್ಮ ಪ್ರಾಥಮಿಕ ಖಾತೆಯಿಂದ ಇತರ ಖಾತೆಗಳಿಗೆ ನೀವು ಹಣ ವರ್ಗಾವಣೆ ಮಾಡಿ, ಆ ಖಾತೆಯಲ್ಲಿ ಉಳಿಸಬಹುದು. ಆದರೆ ಮೊದಲು ಖರ್ಚಿಗೆ ಉಳಿಸಿಕೊಂಡು ಉಳಿತಾಯ ಮಾಡಿ.
* ಒಂದೇ ಬ್ಯಾಂಕ್‌ನಲ್ಲಿ ಎಲ್ಲ ಖಾತೆಯನ್ನು ತೆರೆಯದಿರಿ. ನಿಮ್ಮ ಬ್ಯಾಂಕ್ ಖಾತೆಯನ್ನು ಆನ್‌ಲೈನ್‌ನಲ್ಲಿ ನಿರ್ವಹಣೆ ಮಾಡಲು ಕಷ್ಟವಾಗುವ ಸರ್ವರ್ ಡೌನ್ ಸಮಸ್ಯೆಗೆ ನೀವು ಒಳಗಾಗಿದ್ದೀರಾ?. ಒಂದು ಸಣ್ಣ ತಾಂತ್ರಿಕ ಸಮಸ್ಯೆಯು ನೀವು ಗಂಟೆಗಟ್ಟಲೆ ಕಾಯುವಂತೆ ಮಾಡುತ್ತದೆ. ಇಂತಹ ಕಷ್ಟಗಳು ಇರುವಾಗ ನೀವು ಒಂದೇ ಬ್ಯಾಂಕ್‌ನಲ್ಲಿ ಹಲವಾರು ಖಾತೆಯನ್ನು ಹೊಂದಿದ್ದರೆ, ಯಾವುದೇ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಲು, ಅಥವಾ ಹಣಕಾಸು ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದಾಗಿ ಬೇರೆ ಬೇರೆ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದುವುದು ಉತ್ತಮ.
* ಹಣ ಉಳಿತಾಯ: ಪ್ರಸ್ತುತ ನಾವು ಎಷ್ಟು ಹಣವನ್ನು ಉಳಿತಾಯ ಮಾಡುತ್ತೇವೋ ಅಷ್ಟು ಉತ್ತಮ. ಹಾಗಿರುವಾಗ ನಮಗೆ ಹಣವನ್ನು ಉಳಿತಾಯ ಮಾಡಲು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯನ್ನು ಹೊಂದುವುದು ಸಹಾಯಕವಾಗಲಿದೆ. ನಿಮ್ಮ ಹಣಕಾಸಿನ ನಿರ್ವಹಣೆ, ಮೇಲ್ವಿಚಾರಣೆ ಮತ್ತು ಟ್ರ್ಯಾಕ್ ಅನ್ನು ಕೂಡಾ ಸರಳಗೊಳಿಸಲಿದೆ.
* ಡೆಬಿಟ್ ಕಾರ್ಡ್ ಪ್ರಯೋಜನಗಳು: ಡೆಬಿಟ್ ಕಾರ್ಡ್‌ಗಳು ಪೂರ್ವನಿಧರಿತವಾಗಿ ಹಣವನ್ನು ಹಿಂಪಡೆಯುವ ಮಿತಿಗಳನ್ನು ಹೊಂದಿರುವ ಕಾರಣದಿಂದಾಗಿ ನೀವು ತುರ್ತು ಸಂದರ್ಭದಲ್ಲಿ ಮಾತ್ರ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಾಗದೆ ಇರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಹಲವಾರು ಉಳಿತಾಯ ಖಾತೆಗಳಿಂದ ಡೆಬಿಟ್ ಕಾರ್ಡ್ ಮೂಲಕ ಹಣ ವಿತ್‌ಡ್ರಾ ಮಾಡಬಹುದು.


Click it and Unblock the Notifications