ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರವು ಶೇಕಡ 40 ರಷ್ಟು ಸುಂಕವನ್ನು ವಿಧಿಸಿದೆ. ಇದಾದ ಕೆಲವೇ ದಿನಗಳಲ್ಲಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೇಂದ್ರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಸಾಕಷ್ಟು ಪ್ರಮಾಣದ ಈರುಳ್ಳಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಹಿಂದೆ ಭಾರತ ಸರ್ಕಾರ ಬಾಸ್ಮತಿ ಹೊರತುಪಡಿಸಿ ಇತರೆ ಅಕ್ಕಿಗಳ ರಫ್ತಿಗೆ ನಿರ್ಬಂಧವನ್ನು ಹೇರುವ ನಿರ್ಧಾರವನ್ನು ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ. ಬಾಸ್ಮತಿಯೇತರ ಬಿಳಿ ಅಕ್ಕಿಯ (ಸಂಪೂರ್ಣವಾಗಿ ಅಥವಾ ಭಾಗಶಃ ಗಿರಣಿ ಮಾಡಿದ ಅಕ್ಕಿ, ಪಾಲಿಶ್ ಅಥವಾ ಪಾಲಿಶ್ ಮಾಡದ ಅಕ್ಕಿ) ರಫ್ತನ್ನು ನಿರ್ಬಂಧ ಮಾಡಲಾಗುತ್ತದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ತಿಳಿಸಿದೆ. ಈಗ ಈರುಳ್ಳಿ ರಫ್ತಿನ ಮೇಲೆ ಸುಂಕ ವಿಧಿಸಿದ್ದೇಕೆ ಎಂಬ ವಿವರ ಇಲ್ಲಿದೆ....

ಈರುಳ್ಳಿ ಮೇಲಿನ ರಫ್ತು ಸುಂಕದ ಬಗ್ಗೆ ಪಿಯೂಷ್ ಗೋಯಲ್ ಹೇಳಿದ್ದೇನು?
"ಕಳೆದ ಕೆಲವು ದಿನಗಳಲ್ಲಿ, ಭಾರತ ಸರ್ಕಾರದ ಆದೇಶದಂತೆ, ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್ ನಾಸಿಕ್, ಲಾಸಲ್‌ಗಾಂವ್, ಅಹ್ಮದ್‌ನಗರ ಮತ್ತು ಈ ಪ್ರದೇಶದಿಂದ 3 ಲಕ್ಷ ಟನ್ ಈರುಳ್ಳಿ ಖರೀದಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈರುಳ್ಳಿಗೆ ಶೇ.40 ರಫ್ತು ತೆರಿಗೆ ವಿಧಿಸಲಾಗಿದ್ದು, ಇದರಿಂದ ಭಾರತದಲ್ಲಿ ಸಾಕಷ್ಟು ಪ್ರಮಾಣದ ಈರುಳ್ಳಿ ಲಭ್ಯವಾಗಲಿದೆ," ಎಂದು ಹೇಳಿದ್ದಾರೆ.
ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ನಾಸಿಕ್, ಪಿಂಪಲ್‌ಗಾಂವ್, ಲಾಸಲ್‌ಗಾಂವ್, ಅಹ್ಮದ್‌ನಗರ ಮತ್ತು ಇಡೀ ಪ್ರದೇಶದಿಂದ ಇನ್ನೂ 2 ಲಕ್ಷ ಟನ್ ಈರುಳ್ಳಿ ಖರೀದಿಯನ್ನು ಪ್ರಾರಂಭಿಸಲಿದೆ ಎಂದು ಗೋಯಲ್ ಹೇಳಿದರು.
"ಅಗತ್ಯವಿದ್ದಲ್ಲಿ ಭವಿಷ್ಯದಲ್ಲಿ ಹೆಚ್ಚಿನ ಖರೀದಿಗಳನ್ನು ಮಾಡಲಾಗುವುದು. ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಮಧ್ಯಪ್ರದೇಶ ಮತ್ತು ಗುಜರಾತ್ ಈರುಳ್ಳಿ ಬೆಳೆಯುವ ಇತರ ಪ್ರದೇಶಗಳಿಂದ ಈರುಳ್ಳಿಯನ್ನು ಖರೀದಿಸುತ್ತದೆ. ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಪಡೆಯುತ್ತಾರೆ. ಇಂದು ಕ್ವಿಂಟಾಲ್‌ಗೆ 2410 ರೂಪಾಯಿ ನೀಡಲಾಗುತ್ತದೆ," ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.
ಮಹಾರಾಷ್ಟ್ರದ ಕೃಷಿ ಸಚಿವ ಪಿಯೂಷ್ ಗೋಯಲ್ ಭೇಟಿ
ಇದಕ್ಕೂ ಮುನ್ನ ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ್ ಮುಂಡೆ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ರಾಜ್ಯದ ಈರುಳ್ಳಿ ಬೆಳೆಗಾರರಿಗೆ ಸಂಬಂಧಿಸಿದಂತೆ ಮೆಮೊರೆಂಡಮ್ ಅನ್ನು ಹಸ್ತಾಂತರಿಸಿದರು. ಕಳೆದ ವಾರ, ಕೇಂದ್ರ ಸರ್ಕಾರವು ಈರುಳ್ಳಿಯ ರಫ್ತಿನ ಮೇಲೆ ಶೇಕಡ 40 ರಷ್ಟು ಸುಂಕವನ್ನು ವಿಧಿಸಿದೆ. ಡಿಸೆಂಬರ್ 31, 2023 ರವರೆಗೆ ಈ ಸುಂಕ ಇರಲಿದೆ.
ಅಧಿಸೂಚನೆ ಹೊರಡಿಸಿದ ಹಣಕಾಸು ಸಚಿವಾಲಯ
ಈರುಳ್ಳಿಯ ರಫ್ತಿನ ಮೇಲೆ ಶೇಕಡ 40 ರಷ್ಟು ಸುಂಕ ವಿಧಿಸಿ ಹಣಕಾಸು ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿದೆ. ಈರುಳ್ಳಿ ಬೆಲೆಯು ಸೆಪ್ಟೆಂಬರ್‌ನಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ವರದಿಯ ಬಳಿಕ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ.
ಈ ಹಿಂದೆ, ಹಣಕಾಸು ವರ್ಷ 2023-24ರಲ್ಲಿ 3 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಲು ನಿರ್ಧಾರ ಮಾಡಿತ್ತು. ಹಣಕಾಸು ವರ್ಷ 2022-23 ರಲ್ಲಿ ಸರ್ಕಾರವು 2.51 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹ ಮಾಡಿಕೊಂಡಿದೆ.


Click it and Unblock the Notifications