ಒಬ್ಬ ವ್ಯಕ್ತಿಯ ಸಾಲ ಮರುಪಾವತಿ ಸಾಮರ್ಥ್ಯ ನಿರ್ಧಾರ ಮಾಡುವಲ್ಲಿ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾದದ್ದು. ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲದ ಮೇಲಿನ ಬಡ್ಡಿ ದರ ಕೂಡ ನಿರ್ಧಾರ ಆಗುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದಲ್ಲಿ ಸಾಲ ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಸಾಲ ವಿತರಿಸುವಾಗ ಇತರ ಮುಖ್ಯ ಅಂಶಗಳನ್ನು ಸಹ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್ ಗಳು ಗಮನಿಸುತ್ತವೆ.
"ನನ್ನ ಕ್ರೆಡಿಟ್ ಸ್ಕೋರ್ ತುಂಬ ಚೆನ್ನಾಗಿದೆ. ಆದರೂ ನನಗೆ ಸಾಲ ನೀಡುವುದಕ್ಕೆ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಹಿಂದೆ- ಮುಂದೆ ಆಲೋಚಿಸುತ್ತಿವೆ" ಎಂಬುದು ನಿಮ್ಮ ದೂರು ಎಂದಾದಲ್ಲಿ, ಯಾಕಾಗಿ ಸಾಲ ಸಿಗುವುದು ಸಮಸ್ಯೆ ಆಗುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಸಾಲ ಪಡೆಯುವವರ ವಯಸ್ಸು
ಸಾಲ ಪಡೆಯುವವರಿಗೆ ಈಗ ವಯಸ್ಸು ಎಷ್ಟು ಎಂಬುದನ್ನು ಸಂಸ್ಥೆಗಳು ಮುಖ್ಯವಾಗಿ ಗಮನಿಸುತ್ತವೆ. ಅದರ ಜತೆಗೆ ಆ ಸಾಲ ಕಟ್ಟಿ, ಮುಗಿಸುವ ಹೊತ್ತಿಗೆ ಎಷ್ಟು ವಯಸ್ಸಾಗಿರುತ್ತದೆ ಎಂಬುದನ್ನು ಸಹ ಗಮನಿಸಲಾಗುತ್ತದೆ. ಯಾರು ಕನಿಷ್ಠ ಹಾಗೂ ಗರಿಷ್ಠ ವಯಸ್ಸಿನ ಬ್ರಾಕೆಟ್ ನಲ್ಲಿ (ಆವರಣದಲ್ಲಿ) ಬರುವುದಿಲ್ಲವೋ ಅಂಥವರಿಗೆ ಸಾಲವನ್ನು ನಿರಾಕರಿಸಲಾಗುತ್ತದೆ. ಯಾರು ನಿವೃತ್ತಿಗೆ ಹತ್ತಿರದಲ್ಲಿ ಇರುತ್ತಾರೋ ಅಂಥವರ ಅರ್ಜಿ ಮಂಜೂರಾಗುವುದು ಕಷ್ಟ. ಸಾಮಾನ್ಯವಾಗಿ ಸಂಸ್ಥೆಗಳು ಲೆಕ್ಕ ಹಾಕುವುದು ಹೇಗೆಂದರೆ, ನಿವೃತ್ತರಾಗುವ ಹೊತ್ತಿಗೆ ಆ ಸಾಲ ತೀರಿರಬೇಕು. ಇಂಥ ಸನ್ನಿವೇಶದಲ್ಲಿ ಕೋ- ಅಪ್ಲಿಕೆಂಟ್ ಅನ್ನು ಜತೆಯಲ್ಲಿ ಸೇರಿಸಿಕೊಂಡು, ಸಾಲ ಪಡೆಯುವ ಒಟ್ಟು ಅರ್ಹತೆ ಹಾಗೂ ಮಂಜೂರಾಗಬಹುದಾದ ಸಾಧ್ಯತೆಯನ್ನು ಹೆಚ್ಚು ಮಾಡಿಕೊಳ್ಳಬೇಕು.
ಕನಿಷ್ಠ ಆದಾಯ ಅರ್ಹತೆ
ಸಾಲ ನೀಡುವ ಸಂಸ್ಥೆಗಳು ನಿಗದಿ ಮಾಡಿರುವ ಕನಿಷ್ಠ ಆದಾಯ ಮಟ್ಟವನ್ನು ಮುಟ್ಟದಿದ್ದಲ್ಲಿ ಆದ ಕೂಡ ಸಾಲ ಸಿಗುವ ಸಾಧ್ಯತೆ ಇಲ್ಲ. ಸಾಲ ಪಡೆಯುವ ವ್ಯಕ್ತಿ ಎಲ್ಲಿ ವಾಸವಿದ್ದಾರೆ ಎಂಬುದರ ಆಧಾರದಲ್ಲಿ ಕನಿಷ್ಠ ಆದಾಯ ಎಷ್ಟಿರಬೇಕು ಎಂಬುದು ತೀರ್ಮಾನ ಆಗುತ್ತದೆ. ಉದಾಹರಣೆಗೆ: ಮೆಟ್ರೋ ನಗರಗಳು, ಪಟ್ಟಣ, ಅರೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಹೀಗೆ. ಅದೇ ರೀತಿ ಸಾಲ ನೀಡುವ ಸಂಸ್ಥೆ ಯಾವುದು ಎಂಬುದರ ಮೇಲೂ ಕನಿಷ್ಠ ಆದಾಯ ಎಷ್ಟಿರಬೇಕು ಎಂಬ ತೀರ್ಮಾನ ಆಗುತ್ತದೆ. ಆನ್ ಲೈನ್ ಮೂಲಕವಾಗಿ ಈ ಅರ್ಹತೆಯನ್ನು ಪರೀಕ್ಷೆ ಮಾಡಿಕೊಳ್ಳಬಹುದು.
ಉದ್ಯೋಗದ ಹಾಗೂ ಸ್ಥಿರತೆ
ಆದಾಯವನ್ನು ಹೊರತುಪಡಿಸಿದಂತೆ ಸಾಲ ನೀಡುವ ಸಂಸ್ಥೆಗಳು ಗಮನಿಸುವ ಮತ್ತೂ ಮುಖ್ಯವಾದ ಅಂಶವೆಂದರೆ, ಉದ್ಯೋಗದ ಪ್ರೊಫೈಲ್ ಮತ್ತು ಸ್ಥಿರತೆ ಹಾಗೂ ಉದ್ಯೋಗದಾತರ ಪ್ರೊಫೈಲ್. ಸರ್ಕಾರಿ ಉದ್ಯೋಗಿಗಳು, ಕಾರ್ಪೊರೇಟ್ ಅಥವಾ ಬಹುರಾಷ್ಟ್ರೀಯ ಕಂಪೆನಿಗಳ ಸಿಬ್ಬಂದಿಗೆ ಹಣಕಾಸು ಸಂಸ್ಥೆಗಳು ಸಲೀಸಾಗಿ ಸಾಲ ನೀಡುತ್ತವೆ. ಅಪಾಯಕಾರಿಯಾದ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಸಾಲ ಮಂಜೂರಾಗುವ ಅವಕಾಶ ಕಡಿಮೆ. ಪದೇ ಪದೇ ಉದ್ಯೋಗ ಬದಲಾವಣೆ ಮಾಡುವವರಿಗೂ ಸಾಲ ಮಂಜೂರಾಗುವ ಅವಕಾಶ ಕಡಿಮೆ ಇರುತ್ತದೆ. ಅಂಥವರದು ಅನಿಶ್ಚಿತ ಉದ್ಯೋಗ ಹಾಗೂ ಅಸ್ಥಿರ ಆದಾಯ ಎಂದು ಪರಿಗಣಿಸಲಾಗುತ್ತದೆ.
ಆದಾಯಕ್ಕಿಂತ ಜವಾಬ್ದಾರಿ ಹೆಚ್ಚಿರುವ ಅನುಪಾತ (FOIR ರೇಷಿಯೋ)
ಫಿಕ್ಸೆಡ್ ಆಬ್ಲಿಗೇಷನ್ ಟು ಇನ್ ಕಮ್ ರೇಷಿಯೋ (FOIR) ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹಾಗಂದರೆ, ಆ ವ್ಯಕ್ತಿಯ ಒಟ್ಟು ಆದಾಯ ಹಾಗೂ ಇಎಂಐ, ಕ್ರೆಡಿಟ್ ಕಾರ್ಡ್ ಸೇರಿದಂತೆ ಇತರ ಸಾಲಗಳಿಗೆ ಆತ ಕಟ್ಟಬೇಕಾದ ಮೊತ್ತ ಎಷ್ಟು ಎಂಬುದು. ಈ FOIR ರೇಷಿಯೋ 40ರಿಂದ 50%ನೊಳಗೆ ಇರಬೇಕು. ಇದನ್ನು ದಾಟಿದಲ್ಲಿ ಅಂಥ ಅರ್ಜಿದಾರರ ಸಾಲ ತಿರಸ್ಕೃತವಾಗಬಹುದು. ಒಂದು ವೇಳೆ FOIR ಈ ಮಿತಿಯನ್ನು ಮೀರಿದಲ್ಲಿ ಈಗಾಗಲೇ ಮಾಡಿದ ಸಾಲದ ಅಲ್ಪ ಅಥವಾ ಪೂರ್ತಿ ಭಾಗವನ್ನು ತೀರಿಸುವುದು ಉತ್ತಮ. ಅಥವಾ ಈಗ ಹೊಸದಾಗಿ ಪಡೆಯುವ ಸಾಲದ ಮರುಪಾವತಿ ಇಎಂಐ ಸಣ್ಣ ಮೊತ್ತದ ಆಗಿರುವಂತೆ ಎಚ್ಚರಿಕೆ ವಹಿಸಬಹುದು. ಅಥವಾ ಸಾಲ ಪಡೆಯುವವರ ಅರ್ಹತೆ ಎಷ್ಟು ಎಂಬುದರ ಅಂದಾಜು ಮಾಡಿ, ಆ ನಂತರ ಮುಂದುವರಿಯಬಹುದು.
ಮತ್ತೊಬ್ಬರಿಗೆ ಜಾಮೀನು ನಿಲ್ಲುವ ಮುನ್ನ ತಿಳಿದುಕೊಳ್ಳಬೇಕಾದ ಸಂಗತಿ
ಮತ್ತೊಬ್ಬರ ಸಾಲಕ್ಕೆ ಜಾಮೀನಾಗಿ ನಿಲ್ಲುವುದರಿಂದ ಸಾಲ ಮತ್ತೆ ಕಟ್ಟುವುದರಲ್ಲಿ ನೀವು ಕೂಡ ಅಷ್ಟೇ ಜವಾಬ್ದಾರರು. ಒಂದು ವೇಳೆ ಸಾಲ ಪಡೆದವರು ಮರುಪಾವತಿಸಲು ವಿಫಲರಾದಲ್ಲಿ ಆ ಹೊಣೆ ನಿಮ್ಮ ಮೇಲೆ ಬರುತ್ತದೆ. ಖಾತ್ರಿ ಆಗಿ ಮತ್ತೊಬ್ಬರಿಗೆ ನೀಡಿದ ಜಾಮೀನನ್ನು ಸಾಲ ನೀಡುವ ಸಂಸ್ಥೆಗಳು ಅರ್ಜಿದಾರರ ಕಂಟಿಂಜೆಂಟ್ ಲಯಬಿಲಿಟಿ (ಭವಿಷ್ಯದಲ್ಲಿ ಕಟ್ಟಿ ಕೊಡಬೇಕಾದ ಪರಿಸ್ಥಿತಿ ಉದ್ಭವಿಸಬಹುದು) ಎಂದು ಪರಿಗಣಿಸುತ್ತವೆ. ಆದ್ದರಿಂದ ಮತ್ತೊಬ್ಬರ ಸಾಲಕ್ಕೆ ಗ್ಯಾರಂಟರ್ ಆಗಿ ನಿಲ್ಲುವ ಮುನ್ನ ಮಧ್ಯಮಾವಧಿಯಲ್ಲೋ, ಅಲ್ಪಾವಧಿಯಲ್ಲೋ ನೀವೇನಾದರೂ ಸಾಲ ತೆಗೆದುಕೊಳ್ಳುವ ಉದ್ದೇಶ ಇರಿಸಿಕೊಂಡಿದ್ದೀರಾ ಎಂಬ ಕಡೆಗೆ ಗಮನ ಇರಲಿ. ಯಾರಿಗಾದರೂ ಗ್ಯಾರಂಟರ್ ಆಗಿದ್ದಲ್ಲಿ ಅವರು ಸಾಲ ಮರುಪಾವತಿ ಸರಿಯಾಗಿ ಮಾಡುತ್ತಿದ್ದಾರಾ ಎಂಬುದನ್ನು ನಿಯಮಿತವಾಗಿ ಗಮನಿಸಬೇಕು. ಅವರು ಕಟ್ಟದಿದ್ದಲ್ಲಿ ಅದರ ನಕಾರಾತ್ಮಕ ಪರಿಣಾಮ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಆಗುತ್ತದೆ.


Click it and Unblock the Notifications