ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ 2022-23ನೇ ಸಾಲಿನ ಬಜೆಟ್ ನಲ್ಲಿ 'ಡಿಜಿಟಲ್ ರೂಪಾಯಿ'ಯನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಸ್ತಾಪ ಪ್ರಕಟಿಸಿದ್ದಾರೆ.
2022-23ರಿಂದ ಅಂದರೆ ಪ್ರಸಕ್ತ ವರ್ಷದಿಂದಲೇ ಆರಂಭವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್, ಡಿಜಿಟಲ್ ರೂಪಾಯಿ ಅನ್ನು ಹಣಕಾಸು ಮಾರುಕಟ್ಟೆಗೆ ಪರಿಚಯಿಸಲಿದೆ. ಕೇಂದ್ರೀಯ ಬ್ಯಾಂಕ್‌ನ ಜಿಡಿಟಲ್ ಕರೆನ್ಸಿ(ಸಿಬಿಡಿಸಿ)ಯು ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸಲಿದೆ. ಡಿಜಿಟಲ್ ಕರೆನ್ಸಿ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗೆ ಕಾರಣವಾಗುತ್ತದೆ. ಡಿಜಿಟಲ್ ಕರೆನ್ಸಿ ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಲಿದೆ ಎಂದು ಸಚಿವರು ತಿಳಿಸಿದರು.
ಡಿಜಿಟಲ್ ಬ್ಯಾಂಕಿಂಗ್:
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಹಣಕಾಸು ತಂತ್ರಜ್ಞಾನ ಆವಿಷ್ಕಾರಗಳು ತ್ವರಿತ ಗತಿಯಲ್ಲಿ ಬೆಳವಣಿಗೆ ಕಾಣುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ ಪ್ರಯೋಜನಗಳು ದೇಶದ ಮೂಲೆ ಮೂಲೆಯನ್ನು ಗ್ರಾಹಕ ಸ್ನೇಹಿಯಾಗಿ ತಲುಪುವಂತೆ ನೋಡಿಕೊಳ್ಳಲು ಸರ್ಕಾರವು ನಿರಂತರವಾಗಿ ಈ ವಲಯಗಳನ್ನು ಪ್ರೋತ್ಸಾಹಿಸುತ್ತಿದೆ. ಈ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ.
ನಾವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ, ದೇಶದ 75 ಜಿಲ್ಲೆಗಳನ್ನು ಆಯ್ಕೆ ಮಾಡಿ, ಅಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳಿಂದ 75 ಡಿಜಿಟಲ್ ಬ್ಯಾಂಕಿಂಗ್ ಶಾಖೆಗಳನ್ನು (ಡಿಬಿಯು) ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹಣಕಾಸು ಸಚಿವವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

ಯಾವುದೇ ಸಮಯ - ಯಾವುದೇ ಸ್ಥಳದಲ್ಲಿ ಅಂಚೆ ಕಚೇರಿ ಉಳಿತಾಯ:
ಮತ್ತೊಂದು ಪ್ರಮುಖ ಪ್ರಸ್ತಾವನೆ ಪ್ರಕಟಿಸಿರುವ ಹಣಕಾಸು ಸಚಿವರು, 2022ರಲ್ಲಿ ಅಂದರೆ ಇದೇ ವರ್ಷ ದೇಶದ 1.5 ಲಕ್ಷ ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಲಾಗುವುದು. ಹಣಕಾಸಿನ ಸೇರ್ಪಡೆ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂಗಳ ಮೂಲಕ ಜನರ ಖಾತೆಗಳನ್ನು ಪ್ರವೇಶ ಸಕ್ರಿಯಗೊಳಿಸಲಾಗುತ್ತದೆ. ಪೋಸ್ಟ್ ಆಫೀಸ್ ಖಾತೆ ಮತ್ತು ಬ್ಯಾಂಕ್ ಖಾತೆ ನಡುವಿನ ಹಣ ಆನ್‌ಲೈನ್ ವರ್ಗಾವಣೆಯನ್ನು ಸಹ ಒದಗಿಸುತ್ತದೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರು ಮತ್ತು ಹಿರಿಯ ನಾಗರಿಕರಿಗೆ ಸಹಕಾರಿಯಾಗಲಿದೆ. ಪರಸ್ಪರ ಕಾರ್ಯಸಾಧ್ಯತೆ ಮತ್ತು ಹಣಕಾಸು ಸೇರ್ಪಡೆಯನ್ನು ಇದು ಸಕ್ರಿಯಗೊಳಿಸುತ್ತದೆ.
ಡಿಜಿಟಲ್ ಪಾವತಿ ವ್ಯವಸ್ಥೆ:
ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾದ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹಣಕಾಸಿನ ನೆರವು ಪ್ರಸ್ತಾವನೆಯನ್ನು ಈ ಬಜೆಟ್ ಅವಧಿಗೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವರು ಪ್ರಕಟಿಸಿದರು. ಇದು ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಅಳವಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಆರ್ಥಿಕ ಮತ್ತು ಬಳಕೆದಾರ ಸ್ನೇಹಿಯಾಗಿರುವ ಪಾವತಿ ವೇದಿಕೆಗಳ ಬಳಕೆಯನ್ನು ಉತ್ತೇಜಿಸಲು ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.
ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ ಆಸ್ತಿ. ಕೈನಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಅದು ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ.
2018ರ ಏಪ್ರಿಲ್ 6ರಂದು ಅಧಿಸೂಚನೆ ಹೊರಡಿಸಿದ ಆರ್ ಬಿಐ, ಕ್ರಿಪ್ಟೋಕರೆನ್ಸಿ ಬಳಕೆ, ವ್ಯವಹಾರ, ಪ್ರಚಾರ ಎಲ್ಲಕ್ಕೂ ನಿಷೇಧ ಹೇರಿತ್ತು. ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿತ್ತು. ಹೀಗಾಗಿ, ಸೂಕ್ತ ಮಾರ್ಗಸೂಚಿ ಮೂಲಕ ಆರ್ ಬಿಐ ಮಾನ್ಯತೆ ಪಡೆದ ಡಿಜಿಟಲ್ ಕರೆನ್ಸಿ ಮಾತ್ರ ಬಳಕೆ ಮಾಡಲು ಅನುಮತಿ ನೀಡಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.
ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಆದರೆ, ಭರ್ಜರಿಯಾಗಿ ವಹಿವಾಟು ಕಾಣುತ್ತಿರುವ ಡಿಜಿಟಲ್ ಕರೆನ್ಸಿ ಬಳಸಲು ಸರಿಯಾದ ಮಾರ್ಗಸೂಚಿಯಾಗಲಿ, ಕಾನೂನಾಗಲಿ ಇಲ್ಲ, ಈ ಹಿನ್ನೆಲೆ ಸರ್ಕಾರವು ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021 ಅನ್ನು ಜಾರಿ ಮಾಡಲು ಮುಂದಾಗಿತ್ತು. ಆದರೆ ಈ ಕ್ರಿಪ್ಟೋಕರೆನ್ಸಿ ಬಿಲ್‌ನ ವಿಷಯವು ಚರ್ಚೆಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಚರ್ಚೆಯಲ್ಲಿ ಮುಖ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಲಿರುವ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಒಂದು ಭಾಗವಾಗಬೇಕೇ ಎಂಬುದನ್ನು ಒಳಗೊಂಡಿರುತ್ತದೆ.(ಹಣಕಾಸು ಸಚಿವಾಲಯ)


Click it and Unblock the Notifications