ಆಗಸ್ಟ್ ತಿಂಗಳು ಕೊನೆಯಾಗುತ್ತಿದ್ದು, ಇನ್ನು ಎರಡು ದಿನಗಳಲ್ಲಿ ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಕೂಡಾ ಭಾರತದಲ್ಲಿ ವ್ಯಾಪಾರ ಅಭಿವೃದ್ಧಿಗೆ ಸೆಪ್ಟೆಂಬರ್ ತಿಂಗಳು ಮಹತ್ವವಾದ ಕೊಡುಗೆಯನ್ನು ನೀಡುತ್ತದೆ. ಹಬ್ಬಗಳ ಸೀಸನ್ ಇದಾದ ಕಾರಣ ದೇಶದಲ್ಲಿ ವ್ಯಾಪಾರಿಗಳಿಗೂ ಇದು ಹಬ್ಬದ ತಿಂಗಳು ಅಂದರೆ ತಪ್ಪಾಗಲಾರದು!
ಸೆಪ್ಟೆಂಬರ್ ತಿಂಗಳಿನಲ್ಲಿ ಮುಖ್ಯವಾಗಿ ಹಲವಾರು ಹಿಂದೂ ಧಾರ್ಮಿಕ ಹಬ್ಬಗಳು ಇದೆ. ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಆಚರಣೆ ಮಾಡಲಾಗುತ್ತದೆ. ಹಬ್ಬವೆಂದರೆ ಸಾಮಾನ್ಯವಾಗಿಯೇ ಎಲ್ಲ ಮನೆಗಳಲ್ಲಿ ಖರ್ಚು ಹೆಚ್ಚು. ಜನರ ಖರ್ಚು ಹೆಚ್ಚಾದಾಗ, ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗುವುದು ಕೂಡಾ ಸಾಮಾನ್ಯ.

ಪ್ರತಿ ವರ್ಷವೂ ಕೂಡಾ ಹಬ್ಬದ ಸೀಸನ್‌ನಲ್ಲಿ ದೇಶದಲ್ಲಿ ವ್ಯಾಪಾರವು ಹೆಚ್ಚಳವಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಹಲವಾರು ನಿರ್ಬಂಧಗಳು ಇದ್ದು, ಕಳೆದ ವರ್ಷ ಯಾವುದೇ ನಿರ್ಬಂಧಗಳಿಲ್ಲದೆಯೇ ಹಬ್ಬವನ್ನು ಆಚರಣೆ ಮಾಡಲಾಗಿದೆ. ಈ ವೇಳೆ ವ್ಯಾಪಾರವು ಭರ್ಜರಿಯಾಗಿದೆ. ಅದರಲ್ಲೂ ಕೆಲವೊಂದು ಸಂಸ್ಥೆಗಳಲ್ಲಿ ಅತೀ ಅಧಿಕ ವ್ಯಾಪಾರವಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿರುವ ಹಬ್ಬಗಳಿವು
ಸೆಪ್ಟೆಂಬರ್ 2, 2023: ಕಜರಿ ತೀಜ್
ಸೆಪ್ಟೆಂಬರ್ 3, 2023: ಸಂಕಷ್ಟ ಚತುರ್ಥಿ
ಸೆಪ್ಟೆಂಬರ್ 7, 2023: ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 10, 2023: ಅಜ ಏಕಾದಶಿ
ಸೆಪ್ಟೆಂಬರ್ 12, 2023: ಪ್ರದೋಷ ವ್ರತ
ಸೆಪ್ಟೆಂಬರ್ 13, 2023: ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 14, 2023: ಭಾದ್ರಪದ ಅಮವಾಸ್ಯೆ
ಸೆಪ್ಟೆಂಬರ್ 18, 2023: ಹರ್ತಾಲಿಕಾ ತೀಜ್
ಸೆಪ್ಟೆಂಬರ್ 19, 2023: ಗಣೇಶ ಚತುರ್ಥಿ
ಸೆಪ್ಟೆಂಬರ್ 25, 2023: ಪರಿವರ್ತಿನಿ ಏಕಾದಶಿ
ಸೆಪ್ಟೆಂಬರ್ 27, 2023: ಪ್ರದೋಷ ವ್ರತ
ಸೆಪ್ಟೆಂಬರ್ 28, 2023: ಅನಂತ ಚತುರ್ದಶಿ
ಸೆಪ್ಟೆಂಬರ್ 29, 2023: ಭಾದ್ರಪದ ಪೂರ್ಣಿಮಾ ವ್ರತ
ಕಳೆದ ವರ್ಷ ವ್ಯಾಪಾರ ಎಷ್ಟು ಹೆಚ್ಚಳ, ಈ ವರ್ಷ ಹೇಗೆ?
ಕಳೆದ ವರ್ಷ ಹಬ್ಬದ ಸೀಸನ್ ಆರಂಭವಾದ ಬಳಿಕ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಬಹುತೇಕ ಎಲ್ಲ ವ್ಯಾಪಾರಗಳು ಹೆಚ್ಚಳವಾಗಿದೆ. ಕಾರು, ಮನೆ, ಟಿವಿ, ಪ್ರವಾಸೋದ್ಯಮ, ಜ್ಯುವೆಲ್ಲರಿ ವಲಯದಲ್ಲಿ ಬೆಳವಣಿಗೆ ಕಳೆದ ವರ್ಷ ಕಂಡು ಬಂದಿದ್ದು, ಈ ವರ್ಷವೂ ಕೂಡಾ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಆನ್‌ಲೈನ್‌ನಲ್ಲಿ ಆಗಲಿ ಅಥವಾ ಆಫ್‌ಲೈನ್‌ನಲ್ಲಿ ಆಗಲಿ ಈ ಹಬ್ಬದ ಸೀಸನ್‌ನಲ್ಲಿ ವ್ಯಾಪಾರವು ಅಧಿಕವಾಗುತ್ತದೆ.
ಸಾಮಾನ್ಯವಾಗಿಯೇ ಸೆಪ್ಟೆಂಬರ್, ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ದೇಶದಲ್ಲಿ ರಿಟೇಲ್ ಮಾರಾಟವು ಹೆಚ್ಚಾಗಿರುತ್ತದೆ. ಪ್ರಮುಖವಾಗಿ ದೇಶದಲ್ಲಿ ಸುಮಾರು 1.4 ಬಿಲಿಯನ್ ಜನರು ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ, ದಸರಾ, ದೀಪಾವಳಿ ಹಬ್ಬವನ್ನು ಆಚರಣೆ ಮಾಡುವ ತಿಂಗಳುಗಳು ಇದಾಗಿದೆ. ಹಾಗೆಯೇ ವಿವಾಹ ನಡೆಸಲು ಈ ತಿಂಗಳುಗಳು ಪವಿತ್ರ ಎಂಬ ನಂಬಿಕೆ ಇರುವ ಕಾರಣದಿಂದಾಗಿ, ವಿವಾಹಗಳು ಕೂಡಾ ಹೆಚ್ಚಾಗಿ ನಡೆಯುತ್ತದೆ.
ಕಳೆದ ವರ್ಷ ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ವಾಹನಗಳ ಮಾರಾಟವು ಶೇಕಡ 57ರಷ್ಟು ಏರಿಕೆಯಾಗಿದೆ. ಭಾರತದ ಪ್ರಮುಖ 7 ನಗರಗಳಲ್ಲಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮನೆ ಮಾರಾಟವು ಶೇಕಡ 70ರಷ್ಟು ಏರಿಕೆಯಾಗಿದೆ. ಇನ್ನು 2022ರ ಸೆಪ್ಟೆಂಬರ್‌ನಲ್ಲಿ ರಿಟೇಲ್ ಮಾರಾಟವು ಕೋವಿಡ್ ಸಾಂಕ್ರಾಮಿಕ ಪೂರ್ವಕ್ಕಿಂತ (2019ಕ್ಕೆ ಹೋಲಿಕೆ) ಶೇಕಡ 21ರಷ್ಟು ಏರಿಕೆಯಾಗಿದೆ. ಈ ವರ್ಷವೂ ಕೂಡಾ ಹೆಚ್ಚಳವಾಗುವ ನಿರೀಕ್ಷೆಯಿದೆ.
ಅದರಲ್ಲೂ ಮುಖ್ಯವಾಗಿ ಕಳೆದ ವರ್ಷ ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ರಿಟೇಲ್ ಮಾರಾಟವು ಹೆಚ್ಚಳವಾಗಿದೆ. ಕರ್ನಾಟಕ, ಕೇರಳ ಒಳಗೊಂಡ ದಕ್ಷಿಣ ಭಾರತದಲ್ಲಿ ಕಳೆದ ವರ್ಷ ಶೇಕಡ 23ರಷ್ಟು ರಿಟೇಲ್ ಮಾರಾಟ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಭಾರತದಲ್ಲಿ 2021ಕ್ಕೆ ಹೋಲಿಕೆ ಮಾಡಿದಾಗ 2022ರಲ್ಲಿ ರಿಟೇಲ್ ಮಾರಾಟವು ಶೇಕಡ 17ರಷ್ಟು ಏರಿಕೆಯಾಗಿದೆ. 2023ರಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.


Click it and Unblock the Notifications