ಹೂಡಿಕೆಯ ಬಗ್ಗೆ ಸಲಹೆ ನೀಡುವ ಮೋತಿಲಾಲ್ ಓಸ್ವಾಲ್, ಹೂಡಿಕೆದಾರರು ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ (ಎಎಕ್ಸ್‌ಎಸ್‌ಬಿ) ಅನ್ನು ಖರೀದಿ ಮಾಡುವಂತೆ ಸಲಹೆ ನೀಡಿದೆ. ಈ ಬಗ್ಗೆ ನವೆಂಬರ್ 25, 2022ರಂದು ಈ ವರದಿಯನ್ನು ಪ್ರಕಟ ಮಾಡಿದೆ.
ಈ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್, ಪ್ರತಿ ಷೇರಿನ ದರವಾದ 1,050 ರೂಪಾಯಿಗಿಂತ ಸುಮಾರು ಶೇಕಡ 20ರಷ್ಟು ಪ್ರತಿ ಷೇರು ಮೌಲ್ಯ ಅಧಿಕವಾಗುವ ಸಾಧ್ಯತೆಯಿದೆ. ಆದ್ದರಿಂದಾಗಿ ನೀವು ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ (ಎಎಕ್ಸ್‌ಎಸ್‌ಬಿ) ಸ್ಟಾಕ್ ಅನ್ನು ಖರೀದಿ ಮಾಡುವುದು ಉತ್ತಮ ಎಂದು ತಿಳಿಸಿದೆ.
ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಭಾರತದ ಮೂರನೇ ಅತೀ ದೊಡ್ಡ ಬ್ಯಾಂಕ್ ಆಗಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 2,72,497 ಕೋಟಿ ರೂಪಾಯಿ ಆಗಿದೆ. ಟಾಪ್ 10 ಮೌಲ್ಯಯುತ ಷೇರುಗಳ ಪೈಕಿ ಆಕ್ಸಿಸ್ ಬ್ಯಾಂಕ್ ಷೇರು ಕೂಡಾ ಒಂದಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ..
ಸ್ಟಾಕ್ ಮೌಲ್ಯ ಹಾಗೂ ರಿಟರ್ನ್ ಎಷ್ಟಿದೆ?
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಎನ್‌ಎಸ್‌ಇ) ಆಕ್ಸಿಸ್ ಬ್ಯಾಂಕ್ ಸ್ಟಾಕ್‌ನ ಮಾರುಕಟ್ಟೆ ಮೌಲ್ಯ ಪ್ರತಿ ಷೇರಿಗೆ ರೂಪಾಯಿ 889.45 ಆಗಿದೆ. ಆದರೆ ಇದು 52 ವಾರಗಳ ಬಳಿಕ ಇಷ್ಟು ಇಳಿಕೆಯಾಗಿದೆ. ಜೂನ್ 23, 2022ರಂದು ಈ ಸ್ಟಾಕ್ ಮೌಲ್ಯ 618.25 ರೂಪಾಯಿ ಆಗಿತ್ತು. ಇನ್ನು ಅಕ್ಟೋಬರ್ 27, 2022ರಲ್ಲಿ ಈ ಸ್ಟಾಕ್ ಮೌಲ್ಯ ಏರಿಕೆಯಾಗಿ, 919.95 ರೂಪಾಯಿಗೆ ತಲುಪಿತ್ತು. ಕಳೆದ ಒಂದು ವಾರದಲ್ಲಿ ಆಕ್ಸಿಸ್ ಬ್ಯಾಂಕ್ ಸ್ಟಾಕ್ ಸುಮಾರು ಶೇಕಡ 3.43ರಷ್ಟು ಹೆಚ್ಚಳವಾಗಿದೆ. ಆದರೆ ಕಳೆದ ಒಂದು ತಿಂಗಳಿನಲ್ಲಿ ಈ ಸ್ಟಾಕ್ ಶೇಕಡ 1.57ರಷ್ಟು ಇಳಿದಿದೆ. ಆದರೂ ಈ ಸ್ಟಾಕ್ ಕಳೆದ ಮೂರು ತಿಂಗಳಲ್ಲಿ ಶೇಕಡ 19.55ರಷ್ಟು ರಿಟರ್ನ್ ನೀಡಿದೆ. ಕಳೆದ ವರ್ಷದಿಂದ ಈವರೆಗೆ ಈ ಸ್ಟಾಕ್‌ನಲ್ಲಿ 30.7 ಲಾಭವಾಗಿದೆ. ಕಳೆದ ಮೂರು ವರ್ಷದಲ್ಲಿ ಆಕ್ಸಿಸ್ ಬ್ಯಾಂಕ್ ಸ್ಟಾಖ್ ಶೇಕಡ 17.74ರಷ್ಟು ಬೆಳವಣಿಗೆ ಕಂಡಿದೆ. ಕಳೆದ ಐದು ವರ್ಷದಲ್ಲಿ ಈ ಸ್ಟಾಕ್ ಶೇಕಡ 62.91ರಷ್ಟು ಲಾಭವನ್ನು ಗಳಿಸಿದೆ ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದೆ.
ಜಿಪಿಎಸ್ ಕಾರ್ಯತಂತ್ರದ ಮೇಲೆ ಚಿತ್ತ
ಆಕ್ಸಿಸ್ ಬ್ಯಾಂಕ್ ಪ್ರಮುಖವಾಗಿ ತನ್ನ ಜಿಪಿಎಸ್ ಕಾರ್ಯತಂತ್ರದ ಮೇಲೆ ಚಿತ್ತ ಇರಿಸಿದೆ. ಶೇಕಡ 18ರಷ್ಟು ವಾರ್ಷಿಕ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ತನ್ನ (growth, profitability, sustainability strategy) ಜಿಪಿಎಸ್ ಕಾರ್ಯತಂತ್ರವನ್ನು ನಡೆಸುತ್ತಿದೆ. ಹೊಸ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುವ ಕಾರ್ಯವನ್ನು ಆಕ್ಸಿಸ್ ಬ್ಯಾಂಕ್ ಮಾಡುತ್ತಿದೆ. ಪ್ರಮುಖವಾಗಿ ಡಿಜಿಟಲೈಸೇಷನ್ ಸಹಾಯದಿಂದ ಈ ಕಾರ್ಯವನ್ನು ಮಾಡುತ್ತಿದೆ. ಸಿದ್ಧಿ ಹಾಗೂ ಸ್ಪರ್ಶ್ ಎಂಬ ಎರಡು ಪ್ರಮುಖ ಆಪ್‌ಗಳ ಸಹಾಯದ ಮೂಲಕ ತನ್ನ ಗ್ರಾಹಕರನ್ನು ಹಾಗೂ ತನ್ನ ಉದ್ಯೋಗಿಗಳಲ್ಲಿ ಭರವಸೆ ತುಂಬುತ್ತಿದೆ ಎಂದು ಕೂಡಾ ಮೋತಿಲಾಲ್ ಓಸ್ವಾಲ್ ಉಲ್ಲೇಖಿಸಿದೆ.
ಭಾರತ್ ಬ್ಯಾಂಕಿಂಗ್ ಹಾಗೂ ಎಂಎಸ್‌ಎಂಇ
ಆಕ್ಸಿಸ್ ಬ್ಯಾಂಕ್ ಪ್ರಮುಖವಾಗಿ ಗ್ರಾಮೀಣ ಜನರ ಬೆಳವಣಿಗೆಗಾಗಿ ಅವಕಾಶವನ್ನು ನೀಡುತ್ತಿದೆ. ಎಂಎಸ್‌ಎಂಇ ವಿಭಾಗವು ಬ್ಯಾಂಕ್‌ನ ಬೆಳವಣಿಗೆಗೆ ಪ್ರಮುಖ ವಿಭಾಗವಾಗಿ ಉಳಿದಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ, ಸಲಹೆಯನ್ನು ನೀಡುವ ನಿಟ್ಟಿನಲ್ಲಿ ಭಾರತ್ ಬ್ಯಾಂಕಿಂಗ್ ಅನ್ನು ಆರಂಭಿಸಿದೆ. ಆಕ್ಸಿಸ್ ಬ್ಯಾಂಕ್ 659 ಜಿಲ್ಲೆಗಳಲ್ಲಿ 2,065 ಭಾರತ್ ಬ್ಯಾಂಕಿಂಗ್ ಶಾಖೆಗಳನ್ನು ಹೊಂದಿದೆ. ಮುಂದಿನ ನಾಲ್ಕು ವರ್ಷದಲ್ಲಿ ವಿತರಣಾ ವಿಭಾಗದಲ್ಲಿ ಶೇಕಡ 85ರಷ್ಟು ಬೆಳವಣಿಗೆಯನ್ನು ಕಾಣುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಈ ಬ್ಯಾಂಕ್ ಮೇಲೆ ಹೂಡಿಕೆ ಲಾಭದಾಯಕ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.
ಗಮನಿಸಿ
ಬ್ರೋಕರೇಜ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್ ಈ ಸ್ಟಾಕ್ ಅನ್ನು ಖರೀದಿ ಮಾಡಲು ಸಲಹೆಯನ್ನಷ್ಟೇ ನೀಡಿದೆ. ನೀವು ಈ ಲೇಖನದಿಂದ ಪ್ರೇರೆಪಿತರಾಗಿ ಯಾವುದೇ ಸ್ಟಾಕ್ ಮೇಲೆ ಹೂಡಿಕೆ ಮಾಡಿ ನಷ್ಟ ಉಂಟಾದರೆ ಅದಕ್ಕೆ ಗ್ರೇನಿಯಂ ಸಂಸ್ಥೆಯಾಗಲಿ, ಲೇಖಕರಾಗಲಿ ಅಥವಾ ಸಂಬಂಧಪಟ್ಟ ಬ್ರೋಕರೇಜ್ ಸಂಸ್ಥೆಯಾಗಲಿ ಹೊಣೆಯಾಗುವುದಿಲ್ಲ. ಹೂಡಿಕೆದಾದರು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ತಜ್ಞರ ಬಳಿ ಸಲಹೆ ಪಡೆದು ಹೂಡಿಕೆಯನ್ನು ಮಾಡುವುದು ಉತ್ತಮ ಎಂದು ಗುಡ್‌ರಿಟರ್ನ್ಸ್ ಸಲಹೆ ನೀಡುತ್ತದೆ.


Click it and Unblock the Notifications