ಐವಿ ಲೀಗ್ ಹಾರ್ವರ್ಡ್ ವಿಶ್ವವಿದ್ಯಾಲಯವು ಒಂದು ವಿಶ್ವವಿದ್ಯಾನಿಲಯಕ್ಕಿಂತ ದೊಡ್ಡ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಮ್ಯಾಸಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿರುವ ಈ ವಿಶ್ವವಿದ್ಯಾನಿಲಯವು ಐವಿ ಲೀಗ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಹಾಗೂ ಈ ವಿವಿಯಲ್ಲಿ ಅಧ್ಯಯನ ಮಾಡುವುದಕ್ಕೆ ಪ್ರವೇಶ ಪಡೆಯುವುದು ಕೂಡ ಅಷ್ಟೊಂದು ಸುಲಭವಿಲ್ಲ.
ಹಾರ್ವರ್ಡ್ ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಕಲಿತ ಪದವೀಧರರು ಜೀವನದ ವಿವಿಧ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿ ಇತಿಹಾಸದಲ್ಲಿ ತಮ್ಮ ಹೆಸರನ್ನು ರೂಪಿಸಿಕೊಂಡಿದ್ದಾರೆ.

ಈ ವಿಶ್ವವಿದ್ಯಾಲಯವು ವಿಶ್ವ ನಾಯಕರು, ಬಿಲಿಯನೇರ್‌ಗಳು ಮತ್ತು ಪ್ರಸಿದ್ಧ ಕಲಾವಿದರು ಸೇರಿದಂತೆ ಸಾವಿರಾರು ಅದ್ಭುತ ಮನಸ್ಸುಗಳ ನಿವಾಸವಾಗಿದೆ. ಈ ಹಾರ್ವಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡು ಈಗ ಉದ್ಯಮ ರಂಗದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಗಣ್ಯವ್ಯಕ್ತಿಗಳ ಪಟ್ಟಿ ಈ ರೀತಿಯಿದೆ.
ರತನ್ ಟಾಟಾ:
ರತನ್ ಟಾಟಾ ಅವರು ವ್ಯಾಪಾರದ ಪ್ರಪಂಚದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಅವರು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ರಾಗಿದ್ದರು. ಅವರು ಉದ್ಯಮಿ ಹಾಗೂ ಜನೋಪಕಾರಿ ವ್ಯಕ್ತಿಯೂ ಹೌದು. 2021 ರಲ್ಲಿ, ಅವರು 433 ನೇ ಸ್ಥಾನದಲ್ಲಿದ್ದರು ಮತ್ತು 3,500 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದರು. ಅವರು ಎರಡು ಐವಿ ಲೀಗ್ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಿದ್ದು, ಕಾರ್ನೆಲ್ ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಿಂದ ಆರ್ಕಿಟೆಕ್ಚರ್ ಪದವಿಯನ್ನು ಪಡೆದುಕೊಂಡಿದ್ದಾರೆ.
ರಾಹುಲ್ ಬಜಾಜ್:
ಬಜಾಜ್ ಗ್ರೂಪ್‌ನ ಮಾಜಿ ಮುಖ್ಯಸ್ಥರಾಗಿರುವ ರಾಹುಲ್ ಬಜಾಜ್ ಅವರು ಹಾರ್ವರ್ಡ್ ವಿವಿಯಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಜತೆಗೆ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅವರು 1965ರಲ್ಲಿ ಶ್ರೀಮಂತ ಉದ್ಯಮಿಯಾಗಿ ಬಜಾಜ್‌ನ ಚುಕಾಣಿಯನ್ನು ವಹಿಸಿಕೊಂಡಿದ್ದು, ಕಂಪನಿಯೊಂದಿಗೆ ತಮ್ಮ ಐದು ದಶಕಗಳ ಸೇವೆಯಲ್ಲಿ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಬಜಾಜ್ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಮಾಡಲು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದ್ದರು.
ಆನಂದ್ ಮಹೀಂದ್ರಾ:
ಆನಂದ ಮಹೀಂದ್ರ ಅವರು ಕೂಡ ದೇಶದ ಮುಂಚೂಣಿ ಉದ್ಯಮಿಯಾಗಿದ್ದು, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯವು 2.3 ಬಿಲಿಯನ್ ಡಾಲರ್ ಆಗಿರುವುದಾಗಿ ಫೋರ್ಬ್ಸ್ ಅಂದಾಜಿಸಿದೆ. ಮಹೀಂದ್ರಾ ಅವರು 1981 ರಲ್ಲಿ MUSCOಗಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದು, ನಂತರದಲ್ಲಿ ಹಲವಾರು ಪ್ರಮುಖ ಉದ್ಯೋಗಗಳನ್ನು ಮಾಡಿ ಯಶಸ್ಸನ್ನು ಗಳಿಸಿದ್ದಾರೆ.
ಮಹೀಂದ್ರಾ ಅವರು ಎಂಬಿಎ ಪದವಿಯನ್ನು ಗಳಿಸುವ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಹಾಗೂ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದ್ದರು. ಅದು ಅವರನ್ನು ವಿಶ್ವವಿದ್ಯಾಲಯದ ಅತ್ಯಂತ ಪ್ರಸಿದ್ಧ ಪದವೀಧರರಲ್ಲಿ ಒಬ್ಬರನ್ನಾಗಿ ಮಾಡುವುದಕ್ಕೆ ಸಾಧ್ಯವಾಯಿತು.


Click it and Unblock the Notifications