ತಂತ್ರಜ್ಞಾನ ಆಧುನಿಕತೆ ಬೆಳೆದಂತೆ ಸೌಲಭ್ಯಗಳು ಸಿಗುವ ಮಾದರಿಯು ಅತಿ ಸುಲಭವಾಗಿ ಬಿಟ್ಟಿದೆ. ಅದರಲ್ಲೂ ಬ್ಯಾಂಕಿಂಗ್ ವಹಿವಾಟು ಕೆಲವೇ ಸೆಕೆಂಡ್‌ಗಳಲ್ಲಿ ಆಗಿ ಬಿಡುತ್ತದೆ. ಇಂತಹ ಆಧುನಿಕತೆಯ ಜೀವನದಲ್ಲಿ ನೀವು ಎಲ್ಲೆಂದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಂಚಿಕೊಂಡರೆ ಸೈಬರ್ ಕಳ್ಳರಿಗೆ ಆಹ್ವಾನ ಮಾಡಿಕೊಡಬಹುದು. ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ನಿಮ್ಮ ಅಕೌಂಟ್‌ನಿಂದ ಹಣ ಖಾಲಿ ಆಗಿಬಿಡುವ ಸಾಧ್ಯತೆ ಹೆಚ್ಚಿದೆ.
ನಿಮ್ಮ ಅಕೌಂಟ್‌ಗೆ ಕನ್ನ ಬೀಳಬಾರದು ಎಂದಾದರೆ ಈ ಕೆಳಗಿನ ನಾಲ್ಕು ಕ್ರಮಗಳನ್ನು ಗಮನವಿಟ್ಟು ಓದಿ
ಅಂಗಡಿ ಅಥವಾ ಮಾಲ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಹಂಚಿಕೊಳ್ಳದಿರಿ
ನೀವು ಏನನ್ನಾದರೂ ಖರೀದಿಸಲು ಶಾಪಿಂಗ್ ಮಾಲ್, ಅಂಗಡಿ ಅಥವಾ ಇನ್ನಿತರ ಕಡೆಗಳಲ್ಲಿ ತೆರಳುತ್ತೀರಿ. ಯಾವುದಾದರೂ ದೊಡ್ಡ ಮಳಿಗೆಗಳಲ್ಲಿ ನೀವು ವಸ್ತುವನ್ನು ಖರೀದಿಸಿದಾಗ , ಇಲ್ಲ ಯಾವುದೇ ಸೇವೆಯನ್ನು ಪಡೆದರೆ ಬಿಲ್ಲಿಂಗ್ ವೇಳೆ ನಿಮ್ಮ ಮೊಬೈಲ್ ನಂಬರ್ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ.
ಆದರೆ ಎಲ್ಲೆಂದರಲ್ಲಿ ನೀವು ಮೊಬೈಲ್ ನಂಬರ್ ಹಂಚಿಕೊಂಡರೆ ಅದನ್ನು ಅವರು ಮಾರಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಸೈಬರ್ ಅಪರಾದಕ್ಕೆ ಹಾಗೂ ನಿಮ್ಮ ಅಕೌಂಟ್‌ಗೆ ಕನ್ನ ಹಾಕಲು ಈ ಹೆಜ್ಜೆಯೇ ಮೊದಲ ಬಾಗಿಲು ತೆರೆದಂತೆ ಆಗಲಿದೆ.
ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಜಾಗ್ರತೆ ವಹಿಸಿ
ನೀವು ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತೆ ವಹಿಸಬೇಕಿದೆ. ಸೈಬರ್ ಕಳ್ಳರ ಮೋಸದ ಜಾಲಕ್ಕೆ ಬೀಳುವುದು ನಿಮ್ಮ ಕೈನಲ್ಲಿರುತ್ತದೆ. ಯಾವುದಾದರೂ ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ಕರೆ ಮಾಡಿ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಆಧಾರ್, ಪಾನ್‌ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡುತ್ತೇವೆ ಎಂದು ಹೇಳಬಹುದು ಅಥವಾ ಕ್ರೆಡಿಟ್ ಕಾರ್ಡ್ ಮೊತ್ತವನ್ನು ಹೆಚ್ಚಿಸುತ್ತೇವೆ, ನಿಮ್ಮ ಕಾರ್ಡ್ ಬ್ಲಾಕ್ ಆಗಿದೆ ಎಂದೆಲ್ಲಾ ಹೇಳುತ್ತಾರೆ.
ಈ ರೀತಿಯ ಅನಾಮಿಕ ಕರೆಗಳಿಗೆ ಉತ್ತರಿಸದಿರಿ. ಯಾವುದೇ ಬ್ಯಾಂಕ್ ಖಾತೆಯ ವಿವರಗಳನ್ನು ಅವರೊಂದಿಗೆ ಹಂಚಿಕೊಳ್ಳದಿರಿ. ಅಲ್ಲದೆ ಯಾವುದಾದರೂ ಅನಾಮಿಕ ಇ-ಮೇಲ್ ಬಂದು ನಿಮಗೆ ಲಾಟರಿ ಬಹುಮಾನ ಬಂದಿದೆ, ಕೂಪನ್ ಸಿಕ್ಕಿದೆ ಎಂದೆಲ್ಲಾ ಮೇಲ್ ಮಾಡಿದರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡದಿರಿ. ಈ ಮೂಲಕ ನೀವು ಸೈಬರ್ ಕಳ್ಳರ ಮೋಸದ ಜಾಲದಿಂದ ತಪ್ಪಿಸಿಕೊಳ್ಳಬಹುದು.
ಅನಗತ್ಯ ಕಡೆ ನಂಬರ್ ಹಂಚಿಕೊಂಡರೆ ಸೈಬರ್ ಅಪರಾಧಕ್ಕೆ ಆಹ್ವಾನ
ನೀವು ಮಾಲ್‌ನಲ್ಲಿ ಅಥವಾ ಯಾವುದೇ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸಿದಾಗ ಬಿಲ್‌ಗೂ ಮುನ್ನ ನಂಬರ್ ಕೇಳುತ್ತಾರೆ. ನಂಬರ್ ಕೊಡದಿದ್ದರೆ ಬಿಲ್ ಜನರೇಟ್ ಆಗುವುದಿಲ್ಲ ಎಂದೆಲ್ಲಾ ಸಿಬ್ಬಂದಿಗಳು ಸಬೂಬು ನೀಡುತ್ತಾರೆ.
ನೀವು ಒಂದು ವೇಳೆ ನಂಬರ್ ನೀಡಿದರೆ ಅದು ಅಷ್ಟಕ್ಕೆ ಮುಗಿಯುವುದಿಲ್ಲ. ಪದೇ ಪದೇ ನಿಮ್ಮ ಮೊಬೈಲ್‌ಗೆ ಜಾಹೀರಾತು ಸಂದೇಶವನ್ನು ಕಳುಹಿಸುತ್ತಾರೆ. ಇಷ್ಟಲ್ಲದೆ ನಿಮ್ಮ ಡೇಟಾವನ್ನು ಇತರರಿಗೆ ಮಾರಾಟ ಮಾಡುವ ಸಾಧ್ಯತೆ ಇದೆ. ಈ ಹಂತದಲ್ಲಿ ಸೈಬರ್ ಕಳ್ಳರಿಗೂ ನಿಮ್ಮ ಅಮೂಲ್ಯ ಮಾಹಿತಿಗಳು ಸಿಗಬಹುದು. ಹೀಗಾಗಿ ಎಲ್ಲೆಂದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಂಚಿಕೊಳ್ಳದಿರಿ
ನಿಮ್ಮ ಮೊಬೈಲ್ ನಂಬರ್‌ಗೆ ಅಕೌಂಟ್ ಲಿಂಕ್ ಆಗಿರುತ್ತದೆ
ಎಲ್ಲೆಂದರಲ್ಲಿ ಮೊಬೈಲ್ ನಂಬರ್ ಹಂಚಿಕೊಳ್ಳದಿರುವುದು ಬಹುತೇಕ ಒಳಿತು. ಏಕೆಂದರೆ ನಿಮ್ಮ ಮೊಬೈಲ್ ನಂಬರ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಅನೇಕ ಹಣಕಾಸು ವಹಿವಾಟು ಆ್ಯಪ್‌ಗಳಲ್ಲಿ ಲಿಂಕ್ ಆಗಿರುತ್ತದೆ. ಕೇವಲ ಮೊಬೈಲ್ ನಂಬರ್ ದಾಖಲಿಸಿ ಹಣ ವಹಿವಾಟು ಮಾಡಬಹುದು. ಸೈಬರ್ ಕಳ್ಳರಿಗೆ ನಿಮ್ಮ ಮೊಬೈಲ್ ನಂಬರ್ ಮತ್ತು ಅದಕ್ಕೆ ಬರುವ OTP ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ನೀವು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಂಚಿಕೊಳ್ಳದೇ ಇರುವುದು ಒಳಿತು.


Click it and Unblock the Notifications