ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಎಲ್ಲ ಬ್ರ್ಯಾಂಚ್‌ಗಳಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಮುಖ್ಯವಾಗಿ ಯಾವುದೇ ಮನವಿ ಪತ್ರವನ್ನು ಸಲ್ಲಿಸದೆ ಮತ್ತು ಯಾವುದೇ ಗುರುತು ಪುರಾವೆಯನ್ನು ನೀಡದೆಯೇ ಎಸ್‌ಬಿಐನಲ್ಲಿ 2000 ರೂಪಾಯಿ ನೋಟು ಬದಲಾಯಿಸಬಹುದಾಗಿದೆ.
ಇನ್ನು ಈ ಹಿಂದೆ ಆರ್‌ಬಿಐ ಹೇಳಿದಂತೆಯೇ ಒಂದು ಬಾರಿಗೆ ಎಷ್ಟು ನಗದನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂಬುವುದಕ್ಕೆ ಮಿತಿ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಎಲ್ಲ ಬ್ರ್ಯಾಂಚ್‌ಗಳಲ್ಲಿ 2000 ರೂಪಾಯಿ ಮುಖಬೆಲೆಯ 20,000 ರೂಪಾಯಿ ಮೌಲ್ಯದ ನೋಟುಗಳನ್ನು ಒಂದು ಬಾರಿಗೆ ಬದಲಾವಣೆ ಮಾಡಿಕೊಳ್ಳುವ ಅವಕಾಶವಿದೆ. ಒಂದು ಬಾರಿಗೆ ಅದಕ್ಕೂ ಅಧಿಕ ಮೊತ್ತದ ನೋಟುಗಳನ್ನು ಬದಲಾಯಿಸುವ ಅವಕಾಶವಿಲ್ಲ.

ಇನ್ನು ಎಸ್‌ಬಿಐನಲ್ಲಿ ನೋಟು ಬದಲಾವಣೆಗೆ ಯಾವುದೇ ಪುರಾವೆ ಇಲ್ಲ ಎಂದಾಕ್ಷಣ ಇಂದೇ ಬ್ಯಾಂಕ್ ಬ್ರ್ಯಾಂಚ್‌ಗೆ ತೆರಳಿ ನೋಟು ಬದಲಾವಣೆ ಮಾಡಿಸಿಕೊಳ್ಳಲು ಮುಂದಾಗಬೇಡಿ. ದೇಶದಾದ್ಯಂತ ಎಲ್ಲ ಬ್ಯಾಂಕ್‌ಗಳಲ್ಲಿ ನಾಳೆ ಅಂದರೆ ಮೇ 23ರಂದು ನೋಟು ಬದಲಾವಣೆ ಪ್ರಕ್ರಿಯೆಯನ್ನು ಆರಂಭ ಮಾಡಲಾಗುತ್ತದೆ. ನಾಳೆಯಿಂದ ಯಾರಲ್ಲಿ 2000 ರೂಪಾಯಿ ನೋಟು ಇದೆಯೋ ಅವರು ಬ್ಯಾಂಕ್ ಬ್ರ್ಯಾಂಚ್‌ಗೆ ಭೇಟಿ ನೀಡಿ ಬದಲಾವಣೆ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ನಾವು ಯಾವುದೇ ನಗದನ್ನು ನಮ್ಮ ಖಾತೆಗೆ ಹೇಗೆ ಜಮೆ ಮಾಡಿಕೊಳ್ಳುತ್ತೇವೆಯೋ ಅದೇ ರೀತಿಯಲ್ಲಿ ನಮ್ಮ ಬ್ಯಾಂಕ್ ಖಾತೆಗೆ ನಾವು 2000 ರೂಪಾಯಿ ನೋಟನ್ನು ಜಮೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಬದಲಾವಣೆ ಮಾಡಿಕೊಳ್ಳಲು ಕೂಡಾ ಬೇರೆಯೇ ನಿಯಮವೇನಿಲ್ಲ ಎಂದು ಆರ್‌ಬಿಐ ಈಗಾಗಲೇ ತಿಳಿಸಿದೆ.
ನಮ್ಮಲ್ಲಿರುವ 2000 ರೂಪಾಯಿ ನೋಟನ್ನು ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30, 2023ರವರೆಗೆ ಅವಕಾಶ ನೀಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಲು ನಿರ್ಧಾರ ಮಾಡಿದೆ.
ಹಾಗೆಯೇ 2000 ರೂಪಾಯಿ ನೋಟನ್ನು ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆದೇಶಿಸಿದೆ. ಆದರೆ ಈ ಬ್ಯಾಂಕ್ ನೋಟುಗಳ ಕಾನೂನುಬದ್ಧ ಟೆಂಡರ್ ಮುಂದುವರಿಯಲಿದೆ. ಆದರೆ ನಿಗದಿತ ದಿನಕ್ಕೂ ಮುನ್ನ ಬ್ಯಾಂಕ್ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
2000 ರೂಪಾಯಿ ನೋಟು ಬದಲಾವಣೆ ಎಲ್ಲಿ, ಹೇಗೆ ಮಾಡುವುದು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19, 2023ರಂದು ಹೊರಡಿಸಿದ ಸುತ್ತೋಲೆಯಲ್ಲಿ, "ಸೆಪ್ಟೆಂಬರ್ 30, 2023ರವರೆಗೆ ಸಾರ್ವಜನಿಕರು 2000 ರೂಪಾಯಿ ನೋಟನ್ನು ಜಮೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ," ಎಂದು ಉಲ್ಲೇಖಿಸಲಾಗಿದೆ.
"ಎಲ್ಲಾ ಬ್ಯಾಂಕ್‌ಗಳಲ್ಲಿ ಇರುವ ನಮ್ಮ ಖಾತೆಗಳಿಗೆ ನಾವು 2000 ರೂಪಾಯಿಯ ಬ್ಯಾಂಕ್ ನೋಟುಗಳನ್ನು ಜಮೆ ಮಾಡಬಹುದಾಗಿದೆ. ನಾವು ಸಾಮಾನ್ಯ ರೀತಿಯಲ್ಲಿಯೇ ಅಂದರೆ ಯಾವುದೇ ನಿರ್ಬಂಧಗಳಿಲ್ಲದೆ, ನಾವು ಯಾವಾಗಲೂ ಹೇಗೆ ನಗದನ್ನು ನಮ್ಮ ಖಾತೆಗೆ ಜಮೆ ಮಾಡುತ್ತೇವೆಯೋ ಹಾಗೆಯೆ ಜಮೆ ಮಾಡಬಹುದಾಗಿದೆ," ಎಂದು ಆರ್‌ಬಿಐ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಒಂದು ಬಾರಿಗೆ ಎಷ್ಟು ನೋಟುಗಳನ್ನು ಬದಲಾಯಿಸಬಹುದು?
ಇನ್ನು ಜನರು ತಮ್ಮ ಖಾತೆಯಿರುವ ಬ್ಯಾಂಕ್‌ನ ಬ್ರ್ಯಾಂಚ್‌ಗಳಲ್ಲಿ 2000 ರೂಪಾಯಿ ಬ್ಯಾಂಕ್ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ಬ್ಯಾಂಕ್‌ಗಳಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿಗೆ 20,000 ರೂಪಾಯಿ ಮಿತಿಯವರೆಗೆ 2000 ರೂಪಾಯಿಯ ಬ್ಯಾಂಕ್‌ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಇನ್ನು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು, ಕಾರ್ಯಾಚರಣೆ ವೇಳೆ ಅನುಕೂಲಕರ ಸ್ಥಿತಿ ಸೃಷ್ಟಿ ಮಾಡಲು ಮತ್ತು ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಈ ನಿರ್ಬಂಧ ಜಾರಿ ಮಾಡಲಾಗಿದೆ.


Click it and Unblock the Notifications