ಹೂಡಿಕೆಗಳಿಗೆ ಇರುವ ಹಲವಾರು ಆಯ್ಕೆಗಳ ಪೈಕಿ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಅತೀ ಉತ್ತಮ ಆಯ್ಕೆಯಾಗಿದೆ. ನಾವು ಬ್ಯಾಂಕುಗಳಲ್ಲಿ ಮಾಡುವ ಎಫ್‌ಡಿಗಳ ಮೇಲೆ ನಮಗೆ ಬಡ್ಡಿ ಲಭ್ಯವಾಗುವುದು ಮಾತ್ರವಲ್ಲದೆ ಇದು ಸುರಕ್ಷಿತ ಠೇವಣಿ ಆಯ್ಕೆಗಳಲ್ಲಿ ಒಂದಾಗಿದೆ. ಅದಕ್ಕೂ ಮುಖ್ಯವಾಗಿ ಹಿರಿಯ ನಾಗರಿಕರು ಎಫ್‌ಡಿ ಹೂಡಿಕೆಯನ್ನು ಅಧಿಕವಾಗಿ ಮಾಡುತ್ತಾರೆ.
ಇನ್ನು ಹಲವಾರು ಯುವ ಹೂಡಿಕೆದಾರರು ಅಪಾಯಕಾರಿ ಹೂಡಿಕೆ ಆಯ್ಕೆಗಳ ಬದಲಾಗಿ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಎಫ್‌ಡಿಯಿಂದ ಹಲವಾರು ಪ್ರಯೋಜನಗಳು ಇದೆ. ಆದರೆ ಕೆಲವು ಷರತ್ತುಗಳು ಕೂಡಾ ಸರ್ವೇ ಸಾಮಾನ್ಯವಾಗಿ ಇದೆ. ನಾವು ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡಿದಾಗ ತುರ್ತು ಸಂದರ್ಭದಲ್ಲಿ ನಮಗೆ ಬೇಕಾದ ಹಣವನ್ನು ಹಿಂದಕ್ಕೆ ಪಡೆಯುವುದು ಕಷ್ಟವಾಗಲಿದೆ. ಇದುವೇ ಎಫ್‌ಡಿಯ ಪ್ರಮುಖ ತೊಂದರೆಯಾಗಿದೆ.
ಆದರೂ ನಾವು ಮೆಚ್ಯೂರಿಟಿಗೂ ಮುನ್ನ ಎಫ್‌ಡಿ ಹಣವನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಪ್ರಮುಖ ಎಲ್ಲ ಬ್ಯಾಂಕ್‌ಗಳು ಅವಧಿಪೂರ್ವವಾಗಿ ಎಫ್‌ಡಿ ವಿತ್‌ಡ್ರಾ ಮಾಡುವ ಆಯ್ಕೆಯನ್ನು ನಮಗೆ ನೀಡುತ್ತದೆ. ಆದರೆ ಇದಕ್ಕಾಗಿ ನಾವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಮೆಚ್ಯೂರಿಟಿಗೂ ಮುನ್ನ ಎಫ್‌ಡಿಯನ್ನು ವಿತ್‌ಡ್ರಾ ಮಾಡಿದರೆ ನಾವು ಎಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....
ಮೆಚ್ಯೂರಿಟಿ ಮುನ್ನ ಹಣ ಹಿಂಪಡೆದರೆ ಎಷ್ಟು ಶುಲ್ಕ?
ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ ಅನ್ನು ನಾವು ಮೆಚ್ಯೂರಿಟಿ ಆಗುವುದಕ್ಕೂ ಮುನ್ನವೇ ವಾಪಾಸ್ ಪಡೆಯಲು ಬಯಸಿದರೆ ಅದು ಸಾಧ್ಯವಾಗಲಿದೆ. ಆದರೆ ಅದಕ್ಕಾಗಿ ಶುಲ್ಕವನ್ನು ವಿಧಿಸಲಾಗುತ್ತದೆ. ಹೆಚ್ಚಾಗಿ ನಾವು ಅಕಾಲಿಕವಾಗಿ ಎಫ್‌ಡಿಯನ್ನು ಹಿಂದಕ್ಕೆ ಪಡೆದಾಗ ನಾವು ಎಫ್‌ಡಿ ಹೂಡಿಕೆ ಮಾಡಿದ ಬ್ಯಾಂಕುಗಳು ಶೇಕಡ 0.50ರಿಂದ ಶೇಕಡ 1ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಇನ್ನು ಕೆಲವು ಬ್ಯಾಂಕುಗಳಲ್ಲಿ ನಾವು ಮೆಚ್ಯೂರಿಟಿಗೂ ಮುನ್ನ ಎಫ್‌ಡಿಯನ್ನು ವಾಪಸ್ ಪಡೆದಾಗ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ನಾವು ಅಕಾಲಿಕವಾಗಿ ಎಫ್‌ಡಿ ಹಿಂಪಡೆಯಲು ಬಯಸಿದಾಗ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ರೀತಿಯ ನಿಯಮ, ಷರತ್ತು ಅಥವಾ ಶುಲ್ಕಗಳು ಇರುತ್ತದೆ.
ಸಮಯಕ್ಕೂ ಮುನ್ನ ಎಫ್‌ಡಿ ಹಿಂಪಡೆಯುವುದು ಹೇಗೆ?
ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ಅಕಾಲಿಕವಾಗಿ ಹಿಂಪಡೆಯಲು ಎರಡು ಮಾರ್ಗಗಳಿವೆ. ಒಂದು ಆನ್‌ಲೈನ್ ಮತ್ತು ಇನ್ನೊಂದು ಸಾಂಪ್ರಾದಾಯಿಕವಾಗಿ ಆಫ್‌ಲೈನ್ ಮೂಲಕ ಹಿಂಪಡೆಯುವುದು ಆಗಿದೆ. ಆಫ್‌ಲೈನ್ ಮೂಲಕ ಎಂದರೆ ನಾವು ಬ್ಯಾಂಕ್‌ಗಳಿಗೆ ಭೇಟಿ ನೀಡಿ ಫಾರ್ಮ್ ಅನ್ನು ಭರ್ತಿ ಮಾಡುವುದು, ಕೆಲವು ಪ್ರಕ್ರಿಯೆಗಳು ಪೂರ್ಣವಾದ ಬಳಿಕ ಎಫ್‌ಡಿ ರಸೀದಿಯನ್ನು ಹಿಂದಕ್ಕೆ ನೀಡಿ ಹಣ ವಾಪಾಸ್ ಪಡೆಯುವುದು ಸೇರಿರುತ್ತದೆ. ಇನ್ನು ಆನ್‌ಲೈನ್ ಮೂಲಕವಾದರೆ ಮೊದಲು ಇಂಟರ್‌ನೆಟ್ ಬ್ಯಾಂಕಿಂಗ್ ಅನ್ನು ಆಕ್ಟಿವೇಟ್ ಮಾಡಬೇಕಾಗುತ್ತದೆ. ಆದರೆ ಕೆಲವು ಬ್ಯಾಂಕುಗಳಲ್ಲಿ ಹಣವನ್ನು ಅಕಾಲಿಕವಾಗಿ ಹಿಂಪಡೆಯುವ ವಿಚಾರದಲ್ಲಿಯೂ ಕೆಲವು ಷರತ್ತುಗಳು ಇದೆ. ನಾವು ಆನ್‌ಲೈನ್‌ನಲ್ಲಿ ಎಫ್‌ಡಿಯನ್ನು ಮಾಡಿದ್ದರೆ ಮಾತ್ರ ಆನ್‌ಲೈನ್‌ನಲ್ಲಿ ಹಣವನ್ನು ಹಿಂಪಡೆಯಬಹುದು ಎಂಬ ಷರತ್ತು ಇದೆ.
ಮೆಚ್ಯೂರಿಟಿಗೂ ಮುನ್ನ ಹಣ ಹಿಂಪಡೆದರೆ ಏನು ನಷ್ಟ?
ನಾವು ಮೆಚ್ಯೂರಿಟಿಗೂ ಮುನ್ನ ಎಫ್‌ಡಿ ಹಣವನ್ನು ಹಿಂಪಡೆದರೆ ಹಲವಾರು ನಷ್ಟಗಳು ಆಗಲಿದೆ. ಪ್ರಮುಖವಾಗಿ ಬಡ್ಡಿ ನಷ್ಟವಾಗಲಿದೆ. ನಾವು ಮೆಚ್ಯೂರಿಟಿಗೂ ಮುನ್ನ ಅಥವಾ ಅಕಾಲಿಕವಾಗಿ ಎಫ್‌ಡಿಯನ್ನು ಹಿಂದಕ್ಕೆ ಪಡೆದಾಗ ನಾವು ಹೂಡಿಕೆ ಮಾಡಿದ ಹಣಕ್ಕೆ ಲಭ್ಯವಾಗುತ್ತಿದ್ದ ಬಡ್ಡಿ ಲಭ್ಯವಾಗದು. ಮತ್ತೆ ಹೂಡಿಕೆ ಮಾಡಲು ಬಯಸಿದರೆ ಕಡಿಮೆ ಬಡ್ಡಿದರದಿಂದಲೇ ಆರಂಭ ಮಾಡಿ ಬಳಿಕ ಹೆಚ್ಚಿನ ಬಡ್ಡಿದರ ಪಡೆಯಲು ಸಾಧ್ಯವಾಗಲಿದೆ. ಶುಲ್ಕವನ್ನು ಕೂಡಾ ನೀವು ಪಾವತಿ ಮಾಡಬೇಕಾಗುತ್ತದೆ. ನೀವು ಹಣವನ್ನು ಹಿಂಪಡೆದ ಸಮಯದಲ್ಲಿ ನಿಮಗೆ ದಂಡವನ್ನು ವಿಧಿಸಲಾಗುತ್ತದೆ. ಬಹುತೇಕ ಬ್ಯಾಂಕುಗಳು ಶೇಕಡ 0.50ರಿಂದ ಶೇಕಡ 1ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಇವೆರಡು ನಷ್ಟವನ್ನು ಹೊರತುಪಡಿಸಿ ಇನ್ನೊಂದು ನಷ್ಟವೆಂದರೆ ನಮ್ಮ ಆದಾಯ ನಷ್ಟ. ನಮಗೆ ಈ ಹಣದಿಂದ ಲಭ್ಯವಾಗುತ್ತಿದ್ದ ಆದಾಯವು ಎಫ್‌ಡಿ ಹಿಂದಕ್ಕೆ ಪಡೆದ ಬಳಿಕ ಲಭ್ಯವಾಗುವುದಿಲ್ಲ.


Click it and Unblock the Notifications