ಬೆಂಗಳೂರು, ಜುಲೈ 26: ಇನ್ಕಮ್ ಟ್ಯಾಕ್ಸ್ ರಿಟರ್ನ್ ಅಥವಾ ಐಟಿಆರ್ ಫೈಲ್ ಮಾಡುವುದು ಹಣಕಾಸು ವರ್ಷದಲ್ಲಿ ಮಾಡಬೇಕಾದ ಅತ್ಯಂತ ಪ್ರಮುಖ ಕೆಲಸ. ಇನ್ ಕಂ ಟ್ಯಾಕ್ಸ್ ಫೈಲಿಂಗ್ ಅಂತಿಮ ದಿನಾಂಕ ಹತ್ತಿರ ಬರುತ್ತಿದೆ. ಐಟಿಆರ್ ಫೈಲ್ ಮಾಡುವುದಕ್ಕೆ ಮುನ್ನ ಕೆಲವು ದಾಖಲೆಗಳನ್ನ ಪರಿಶೀಲಿಸೋದು ಮುಖ್ಯ. ಇವುಗಳ ನಿರ್ಲಕ್ಷ್ಯ ಮಾಡಿದರೆ ನೀವು ರಿಟರ್ನ್ ನಲ್ಲಿ ತಪ್ಪುಗಳನ್ನು ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಇದರಿಂದಾಗಿ ನಿಮಗೆ ಆದಾಯ ತೆರಿಗೆ ಇಲಾಖೆ, ನೋಟಿಸ್ ಕೊಡೋ ಸಾಧ್ಯತೆ ಇದೆ.
ಇಂತಹ ಒಂದು ದಾಖಲೆ ಎಂದರೆ ಆನ್ಯುಯಲ್ ಇನ್ಫರ್ ಮೇಷನ್ ಸ್ಟೇಟ್ಮೆಂಟ್ ಅಥವಾ ಎಐಎಸ್. ಈಗ ಎಐಎಸ್ ಎಂದರೇನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಐಟಿಆರ್ ಫೈಲಿಂಗ್ ಮಾಡುವಾಗ ಅದರ ಅಗತ್ಯ ಏನು ಎನ್ನುವುದನ್ನು ತಿಳಿದುಕೊಳ್ಳೋಣ. ನಿಮ್ಮ ಐಟಿಆರ್ ನ ತಪ್ಪುಗಳನ್ನ ಯಾಕೆ ತಿದ್ದುಪಡಿ ಮಾಡಬೇಕು ಮತ್ತು ಹೇಗೆ ತಿದ್ದುಪಡಿ ಮಾಡಬೇಕು ಎನ್ನುವುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಈ ಎಐಎಸ್ ಎನ್ನುವುದು ವಿಸ್ತೃತ ಮತ್ತು ಪ್ರಮುಖ ಫೈನ್ಯಾನ್ಷಿಯಲ್ ಡಾಕ್ಯುಮೆಂಟ್ ಆಗಿದೆ. ಇದರಲ್ಲಿ ಒಂದು ವರ್ಷದಲ್ಲಿ ನೀವು ಮಾಡಿರುವ ಹಣಕಾಸು ವಹಿವಾಟುಗಳ ಮಾಹಿತಿ ಇರುತ್ತದೆ. ಇದು ಫಾರಂ-26ಎಎಸ್ ನ ಇನ್ನಷ್ಟು ಸಮಗ್ರ ರೂಪ ಅಥವಾ ಕಾಂಪ್ರಹೆನ್ಸೀವ್ ಫಾರಂ ಆಗಿದೆ. ನೀವು ಆ ವರ್ಷದಲ್ಲಿ ಖರೀದಿಸಿರುವ ಆಸ್ತಿಯ ವಿವರಗಳು, ಹಾಗೇ ನೀವು ಆ ವರ್ಷದಲ್ಲಿ ಮಾಡಿರೋ ಹೆಚ್ಚಿನ ಮೌಲ್ಯದ ಹೂಡಿಕೆಗಳು - ಹೈ-ವ್ಯಾಲ್ಯೂ ಇನ್ವೆಸ್ಟ್ ಮೆಂಟ್ ಗಳ ಮಾಹಿತಿ ಇರುತ್ತದೆ.
ಇದರ ಜೊತೆಗೆ ಮೂಲದಲ್ಲೇ ತೆರಿಗೆ ಕಡಿತ - ಟಿಡಿಎಸ್ ಹಾಗೂ ಮೂಲದಲ್ಲೇ ತೆರಿಗೆ ಸಂಗ್ರಹ - ಟಿಸಿಎಸ್ ವಿವರ ಎಲ್ಲವೂ ಇರುತ್ತದೆ. ಫಾರಂ - 26ಎಎಸ್ ನಲ್ಲಿ ನಮೂದಿಸಲಾಗಿರುವ ವಿವರಗಳ ಜೊತೆಗೆ ಎಐಎಸ್ ನಲ್ಲಿ ಮುಂಗಡ ತೆರಿಗೆ (ಅಡ್ವಾನ್ಸ್ ಟ್ಯಾಕ್ಸ್), ಸ್ವ ಮೌಲ್ಯಮಾಪನದ ತೆರಿಗೆ (ಸೆಲ್ಫ ಅಸೆಸ್ಮೆಂಟ್ ಟ್ಯಾಕ್ಸ್), ನಿಶ್ಚಿತ ಠೇವಣಿ ಮೇಲಿನ ಬಡ್ಡಿ, ಉಳಿತಾಯ ಖಾತೆಯಲ್ಲಿ ದೊರೆತಿರುವ ಬಡ್ಡಿ, ಡಿವಿಡೆಂಡ್, ಸೆಕ್ಯುರಿಟೀಸ್ ಗಳ ಖರೀದಿ ಮತ್ತು ಮಾರಾಟ ಮತ್ತು ಇತರ ಇನ್ ಟ್ಯಾಂಜಿಬಲ್ ಪ್ರಾಪರ್ಟಿ, ಫಾರಿನ್ ರೆಮಿಟೆನ್ಸಸ್, ರೀಫಂಡ್, ಜಿ ಎಸ್ ಟಿ ಟರ್ನ್ ಓವರ್ ಇತ್ಯಾದಿ ವಿವರಗಳಿರುತ್ತದೆ.
ಒಟ್ಟಿನಲ್ಲಿ, ಎಐಎಸ್ ನಲ್ಲಿ ತೆರಿಗೆಪಾವತಿದಾರರ ಒಂದು ವರ್ಷದ ಹಣಕಾಸು ವಹಿವಾಟುಗಳ ಸಮಗ್ರ ವಿವರಗಳಿರುತ್ತವೆ. ಅಲ್ಲದೆ ನಿಮಗೆ ಎಐಎಸ್ ನಲ್ಲಿ ಏನಾದರೂ ತಪ್ಪುಗಳಿವೆ ಅಥವಾ ಇರ್ ರೆಗ್ಯುಲಾರಿಟಿಗಳಿವೆ ಅಂತಾ ಅನ್ನಿಸಿದರೆ, ನೀವು ಅದರ ಬಗ್ಗೆ ಫೀಡ್ ಬ್ಯಾಕ್ ಕೊಟ್ಟು, ಅದನ್ನ ಸರಿಪಡಿಸಿಕೊಳ್ಳುವುದಕ್ಕೂ ಅವಕಾಶ ಇದೆ.
ಹಾಗಿದ್ದರೆ ಈ ಎಐಎಸ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ? ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://eportal.incometax.gov.in ನಲ್ಲಿ ಎಐಎಸ್ ಡೌನ್ ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಪ್ಯಾನ್ ಮತ್ತು ಪಾಸ್ ವರ್ಡ್ ಹಾಕಿ ಇನ್ಕಮ್ ಟ್ಯಾಕ್ ಪೋರ್ಟಲ್ ಗೆ ಲಾಗಿನ್ ಆದರೆ, ಮೆನು ಆಪ್ಷನ್ ನಲ್ಲಿ ಎಐಎಸ್ ಕ್ಲಿಕ್ ಮಾಡಿ. ಆಗ ನಿಮಗೆ ಕಂಪ್ಲಯನ್ಸ್ ಪೋರ್ಟಲ್ ತೆರೆಯುತ್ತದೆ. ಅಲ್ಲಿ ಎಐಎಸ್ ಸೆಲೆಕ್ಟ್ ಮಾಡಿ, ಡೌನ್ ಲೋಡ್ ಮಾಡಿ. ನೀವು ಎಐಎಸ್ ಆಪ್ ಅನ್ನ ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದು.
ಒಂದು ವೇಳೆ ಈ ವರ್ಷದ ಐಟಿಆರ್ ಫೈಲ್ ಮಾಡೋವಾಗ ಎಐಎಸ್ ನೋಡೋದು ಮರೆತಿದ್ದೀರಿ ಅಂತಿಟ್ಕೋಳೋಣ. ಅಲ್ಲದೆ ನಿಮ್ಮ ಎಐಎಸ್ ನಲ್ಲಿ ತಪ್ಪುಗಳಿರುತ್ತವೆ. ಉದಾಹರಣೆಗೆ ಎರಡು ವರ್ಷಗಳ ಹಿಂದೆ ನೀವು ಕ್ಲೋಸ್ ಮಾಡಿದ್ದ ನಿಮ್ಮ ಬ್ಯಾಂಕ್ ಖಾತೆಗೆ ಬಡ್ಡಿ ಜಮೆ ಆಗಿದೆ ಅಂತಾ ಎಐಎಸ್ ನಲ್ಲಿ ನಮೂದಾಗಿದ್ದರೆ ಐಟಿ ಡಿಪಾರ್ಟ್ ಮೆಂಟ್ ನಿಮಗೆ ನೋಟಿಸ್ ಕಳುಹಿಸಬಹುದು. ನಿಮ್ಮ ಖಾತೆ ಕ್ಲೋಸ್ ಆಗಿದ್ದರೆ, ನಿಮಗೆ ಬಡ್ಡಿ ಹಣ ಸಿಕ್ಕಿರಲ್ಲ. ಹೀಗಾಗಿ ನೀವು ಅದನ್ನ ಐಟಿಆರ್ ನಲ್ಲಿ ನಮೂದಿಸಿರಲ್ಲ.
ಆದರೆ ನಿಮ್ಮ ಎಐಎಸ್ ನಲ್ಲಿ ಬಡ್ಡಿ ಹಣ ನಿಮಗೆ ಸಿಕ್ಕಿದೆ ಅಂತಾ ತೋರಿಸುವುದರಿಂದ ಆದಾಯ ತೆರಿಗೆ ಇಲಾಖೆ, ಹೆಚ್ಚುವರಿ ತೆರಿಗೆ ಪಾವತಿಸಬೇಕು ಎಂದು ನಿಮಗೆ ನೋಟಿಸ್ ಕಳುಹಿಸಬಹುದು. ಹೀಗಾಗಿ ನಿಮ್ಮ ಎಐಎಸ್ ಪರಿಶೀಲಿಸಿ, ಅದನ್ನ ಸರಿಪಡಿಸಿಕೊಳ್ಳೋದು ತುಂಬಾನೇ ಮುಖ್ಯ. ನಿಮ್ಮ ಎಐಎಸ್ ನಲ್ಲಿ ತಪ್ಪುಗಳು ಕಂಡುಬಂದರೆ ಇ-ಫೈಲಿಂಗ್ ಪೋರ್ಟಲ್ ಗೆ ಮತ್ತೆ ಲಾಗಿನ್ ಆಗಿ, ಎಐಎಸ್ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ. ಅದರ ಮೇಲೆ ಕ್ಲಿಕ್ ಮಾಡುತ್ತಿದ್ದ ಹಾಗೆ ನಿಮಗೆ ಎರಡು ಆಪ್ಷನ್ ಕಾಣಿಸುತ್ತದೆ.
ಒಂದು ಎಐಎಸ್, ಇನ್ನೊಂದು ಟಿಐಎಸ್ ಅಥವಾ ಟ್ಯಾಕ್ಸ್ ಪೇಯರ್ ಇನ್ಫರ್ಮೇಷನ್ ಸಮ್ಮರಿ. ಎಐಎಸ್ ನ ಮೇಲೆ ಕ್ಲಿಕ್ ಮಾಡಿದರೆ, ನಿಮಗೆ ಎರಡು ವಿಭಾಗಗಳು ಸಿಗುತ್ತವೆ ಅವುಗಳೆಂದರೆ ಎ ಮತ್ತು ಬಿ. ನೀವು ತಪ್ಪಾದ ಮಾಹಿತಿಯನ್ನ ಸೆಲೆಕ್ಟ್ ಮಾಡಿ, ಆಪ್ಷನಲ್ ಆಯ್ಕೆ ಮೂಲಕ ನಿಮ್ಮ ಫೀಡ್ ಬ್ಯಾಕ್ ಸಲ್ಲಿಸಬಹುದು. ಅಲ್ಲೂ ನಿಮಗೆ ಕೆಲವು ಆಯ್ಕೆಗಳಿರತ್ತೆ. ನಿಮ್ಮ ಪ್ರಕರಣಕ್ಕೆ ಸೂಕ್ವಾಗುವ ಆಯ್ಕೆಯನ್ನ ನೀವು ಒಕೆ ಮಾಡಬಹುದು. ನೀವು ಸಂಬಂಧಪಟ್ಟ ದಾಖಲೆಗಳನ್ನ ಸಲ್ಲಿಸಬೇಕಾಗಬಹುದು. ರಿಟರ್ನ್ಸ್ ಫೈಲ್ ಮಾಡೋಕೂ ಮೊದಲು, ತೆರಿಗೆ ಪಾವತಿದಾರರು ತಮ್ಮ ಎಐಎಸ್ ಅನ್ನ ಕಡ್ಡಾಯವಾಗಿ ಪರಿಶೀಲನೆ ಮಾಡಲೇಬೇಕು. ಹಾಗೇ ಐಟಿಆರ್ ನಲ್ಲಿ ತೋರಿಸಿರುವ ಆದಾಯಕ್ಕೂ, ನಿಮ್ಮ ಎಐಎಸ್ ಮಾಹಿತಿಗೂ ತಾಳೆಯಾಗುತ್ತಿದೆಯಾ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು. ಯಾವುದೇ ತರಹದ ಮಿಸ್ ಮ್ಯಾಚ್ ಇದ್ರೆ, ನಿಮಗೆ ನೋಟಿಸ್ ಬರಬಹುದು. ಹಾಗಾಗಿ ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವಾಗ ಈ ಎಐಎಸ್ ಚೆಕ್ ಮಾಡುವುದನ್ನು ಮರೆಯಬೇಡಿ!


Click it and Unblock the Notifications