ಸಾಮಾನ್ಯವಾಗಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುವುದು ಅಪಘಾತದ ವಿಚಾರಕ್ಕೆ ಬಂದಾಗ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದರೆ ಒಡಿಶಾದ ಬಾಲಸೋರ್‌ನಲ್ಲಿ ಸುಮಾರು 300 ಜನರ ಸಾವಿಗೆ ಕಾರಣವಾದ ಮೂರು ರೈಲುಗಳ ಅಪಘಾತವು ಚಿತ್ರಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ದೇಶದಲ್ಲಿ ನಡೆದ ಅತೀ ಭೀಕರವಾದ ರೈಲು ದುರಂತ ಇದಾಗಿದೆ.
ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು 288 ಮಂದಿ ಜೀವವನ್ನು ಕಳೆದುಕೊಂಡಿದ್ದಾರೆ. ಇನ್ನು ಸುಮಾರು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸರಣಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಹಾಯ ಮಾಡಲು ಈಗಾಗಲೇ ಎಲ್‌ಐಸಿ, ಎಸ್‌ಬಿಐ ಲೈಫ್ ಮುಂದಾಗಿದೆ.

ಈ ನಡುವೆ ಭಾರತೀಯ ರೈಲ್ವೇಯು 0.35 ಪೈಸೆಯಷ್ಟು ಕಡಿಮೆ ಪ್ರೀಮಿಯಂಗೆ ರೈಲು ಪ್ರಯಾಣ ವಿಮೆಯನ್ನು ನೀಡುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ? ಈ ವಿಮೆಯನ್ನು ಗ್ರಾಹಕರು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಆಯ್ಕೆ ಮಾಡಬಹುದಾಗಿದೆ, ಈ ವಿಮೆಯ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...
ಐಆರ್‌ಸಿಟಿಸಿಯ ಪ್ರಯಾಣ ವಿಮೆಯನ್ನು ಯಾರು ಆಯ್ಕೆ ಮಾಡಬಹುದು?
ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದೆ. ರೈಲ್ವೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ವಿಮೆಯನ್ನು ಮಾಡಿಸಿಕೊಳ್ಳಬಹುದಾಗಿದೆ.
ಆದರೆ ವಿದೇಶಿಯರು ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ವಿಮೆಗೆ ಅರ್ಹರಾಗಿಲ್ಲ. ಈ ಯೋಜನೆಯು ಒಂದು ಆಯ್ಕೆಯಾಗಿದೆ. ಆದರೆ ಕೆಲವೊಂದು ಪಿಎನ್‌ಆರ್ ಸಂಖ್ಯೆಯ ಅಡಿಯಲ್ಲಿ ಬುಕ್ ಮಾಡಿದ ಎಲ್ಲಾ ಪ್ರಯಾಣಿಕರಿಗೆ ಈ ವಿಮೆ ಕಡ್ಡಾಯವಾಗಿರುತ್ತದೆ.
ಐಆರ್‌ಸಿಟಿಸಿಯ ಪ್ರಯಾಣ ವಿಮೆಯ ಪ್ರಯೋಜನಗಳು
ಐಆರ್‌ಸಿಟಿಸಿಯ ಪ್ರಯಾಣ ವಿಮಾ ಪಾಲಿಸಿಯು ರೈಲು ಅಪಘಾತ ಅಥವಾ ಅಹಿತಕರ ಘಟನೆಯ ನಂತರ ಈ ಕೆಳಗೆ ಸೂಚಿಸಲಾದ ಘಟನೆಗಳ ಸಂದರ್ಭಗಳಲ್ಲಿ ನಿರ್ದಿಷ್ಟ ಪಿಎನ್‌ಆರ್ ಅಡಿಯಲ್ಲಿ ಪ್ರತಿ ಪ್ರಯಾಣಿಕರಿಗೆ ಅನ್ವಯವಾಗುತ್ತದೆ:
* ಡೆತ್ ಬೆನಿಫಿಟ್: 10,00,000 ರೂಪಾಯಿವರೆಗೆ (ಹತ್ತು ಲಕ್ಷ ರೂಪಾಯಿ)
* ಶಾಶ್ವತ ಸಂಪೂರ್ಣ ಅಂಗವಿಕಲತೆ: 10,00,000 ರೂಪಾಯಿವರೆಗೆ (ಹತ್ತು ಲಕ್ಷ ರೂಪಾಯಿ)
* ಶಾಶ್ವತ ಭಾಗಶಃ ಅಂಗವೈಕಲ್ಯ: 10,00,000 ರೂಪಾಯಿವರೆಗೆ (ಹತ್ತು ಲಕ್ಷ ರೂಪಾಯಿ)
* ಗಾಯವಾದರೆ ಆಸ್ಪತ್ರೆಯ ವೆಚ್ಚಗಳು: 2,00,000 ರೂಪಾಯಿವರೆಗೆ (ಎರಡು ಲಕ್ಷ ರೂಪಾಯಿ)
* ಮೃತದೇಹಗಳ ಸಾಗಣೆ ವೆಚ್ಚ: 10,000 ರೂಪಾಯಿವರೆಗೆ
ಪ್ರಯಾಣ ವಿಮೆಯು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ದಾಳಿಗಳು, ದರೋಡೆ ಅಥವಾ ಡಕಾಯಿತಿ, ಗಲಭೆ, ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬೀಳುವುದು ಮುಂತಾದ ಅಹಿತಕರ ಘಟನೆಗಳನ್ನು ಸಹ ಒಳಗೊಂಡಿದೆ. ರೈಲಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿ, ರೈಲ್ವೇಯಿಂದ ವ್ಯವಸ್ಥೆಗೊಳಿಸಲಾದ ಪರ್ಯಾಯ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಕರ ಪ್ರಯಾಣದ ವೇಳೆ ಯಾವುದೇ ಅವಘಡ ಸಂಬಂವಿಸಿದರೂ ಪಾಲಿಸಿ ಅನ್ವಯವಾಗುತ್ತದೆ.
ವಿಮೆಯನ್ನು ಕ್ಲೈಮ್ ಮಾಡುವುದು ಹೇಗೆ?
ಮೊದಲು ಹೇಳಿದಂತೆ ಈ ಯೋಜನೆಯು ಐಆರ್‌ಸಿಟಿಸಿಯ ವೆಬ್‌ಸೈಟ್ ಅಥವಾ ಅಪ್ಲಿಕೇಷನ್ ಮೂಲಕ ತಮ್ಮ ಇ-ಟಿಕೆಟ್ ಅನ್ನು ಬುಕ್ ಮಾಡುವ ಭಾರತೀಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ. ಪ್ರಯಾಣಿಕರು ವಿಮೆಯನ್ನು ಆರಿಸಿಕೊಂಡರೆ, ಕ್ಲೈಮ್ ವಿಮಾದಾರ ಮತ್ತು ವಿಮಾ ಕಂಪನಿಯ ನಡುವೆ ನಡೆಯುತ್ತದೆ. ಐಆರ್‌ಸಿಟಿಸಿ ತನ್ನ ಅಧಿಸೂಚನೆಯಲ್ಲಿ ವಿಮಾ ಕಂಪನಿಗಳು ಲಿಬರ್ಟಿ ಜನರಲ್ ಇನ್ಶುರೆನ್ಸ್ ಲಿಮಿಟೆಡ್ ಮತ್ತು ಎಸ್‌ಬಿಐ ಜನರಲ್ ಇನ್ಶುರೆನ್ಸ್ ಕೋ ಲಿಮಿಟೆಡ್ ಅನ್ನು ಒಳಗೊಂಡಿದೆ ಎಂದು ಹೇಳಿದೆ.
ವಿಮೆ ಮಾಡಿದ ಸಂದರ್ಭದಿಂದ 4 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ವಿಮೆದಾರ ಅಥವಾ ಅವನ/ಅವಳ ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿಯು ಕ್ಲೈಮ್ ಫಾರ್ಮ್ ಮೂಲಕ ವಿಮಾ ಕಂಪನಿಗೆ ಲಿಖಿತವಾಗಿ ಸಲ್ಲಿಸಬೇಕಾಗುತ್ತದೆ.


Click it and Unblock the Notifications