ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಾ ಬಂದಿದೆ. ಈಗ ಡಿಸೆಂಬರ್‌ನಲ್ಲಿ ದಕ್ಷಿಣ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡುವ ಅದ್ಭುತ ಪ್ರವಾಸ ಪ್ಯಾಕೇಜ್ ಅನ್ನು ತಂದಿದೆ.
ಭಾರತ್ ಗೌರವ್ ಟೂರಿಸ್ಟ್ ರೈಲಿನ ಈ ಪ್ರವಾಸವು 11 ರಾತ್ರಿಗಳು ಮತ್ತು 12 ದಿನ ಇರಲಿದೆ. ಐಆರ್‌ಸಿಟಿಸಿ ಈಗಾಗಲೇ ಈ ಪ್ಯಾಕೇಜ್‌ಗಾಗಿ ಬುಕ್ಕಿಂಗ್ ಆರಂಭಿಸಿದೆ. ಮುಂದಿನ ತಿಂಗಳು ಚಳಿಗಾಲದ ರಜಾದಿನಗಳಲ್ಲಿ ದಕ್ಷಿಣ ಭಾರತಕ್ಕೆ ಭೇಟಿ ನೀಡಲು ನೀವು ಈ ಪ್ಯಾಕೇಜ್ ಅನ್ನು ಖರೀದಿ ಮಾಡಬಹುದಾಗಿದೆ.

ಪ್ರಯಾಣವು ಮಾಲ್ಡಾ ಟೌನ್‌ನಿಂದ ಡಿಸೆಂಬರ್ 11 ರಿಂದ ಆರಂಭವಾಗಲಿದೆ. ಈ ಪ್ರದೇಶದಲ್ಲಿರುವ ಜನರಿಗೆ ಈ ಪ್ಯಾಕೇಜ್ ಬೆಸ್ಟ್ ಆಗಿದೆ. ನೀವು ಡಿಸೆಂಬರ್ 22 ರವರೆಗೆ ಈ ಪ್ರವಾಸವನ್ನು ಮಾಡಬಹುದಾಗಿದೆ. ಈ ಪ್ಯಾಕೇಜ್ ದರವೆಷ್ಟು, ಯಾವೆಲ್ಲ ಪ್ರದೇಶಕ್ಕೆ ಭೇಟಿ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಎಲ್ಲಿ ಪ್ರವಾಸ ಮಾಡಬಹುದು?
ಈ ಪ್ರವಾಸ ಪ್ಯಾಕೇಜ್ ಪಶ್ಚಿಮ ಬಂಗಾಳದ ಮಾಲ್ಡಾ ಟೌನ್‌ನಲ್ಲಿ ಆರಂಭವಾಗುವ ಕಾರಣದಿಂದ ನೀವು ಅಲ್ಲಿಯೇ ಇದ್ದರೆ ಮಾತ್ರ ಪ್ಯಾಕೇಜ್ ಖರೀದಿಸುವುದು ಉತ್ತಮ. ಇಲ್ಲವಾದರೆ ನೀವು ಎರಡು ದಿನಗಳ ಕಾಲ ಮಾಲ್ಡಾದಲ್ಲಿ ತಿರುಗಾಡಿ ಬಳಿಕ ಅಲ್ಲಿಂದಲೇ ದಕ್ಷಿಣ ಭಾರತ ಪ್ರವಾಸ ಮಾಡಬಹುದು. ಇದರಿಂದಾಗಿ ಹಲವಾರು ರಾಜ್ಯಗಳಿಗೆ ಕೆಲವೇ ದಿನಗಳ ರಜೆಯಲ್ಲಿ ಭೇಟಿ ನೀಡಿದಂತಾಗುತ್ತದೆ.
ದಕ್ಷಿಣ ಭಾರತ ಪ್ರವಾಸದ ಈ ಪ್ಯಾಕೇಜ್ ಅಡಿಯಲ್ಲಿ, ನೀವು ಕನ್ಯಾಕುಮಾರಿ, ಕೂಡಲ್‌ನಗರ, ಮಲ್ಲಿಕಾರ್ಜುನ, ರಾಮೇಶ್ವರಂ, ರೇಣಿಗುಂಟಾ ಜಂಕ್ಷನ್ ಮತ್ತು ತಿರುವನಂತಪುರಂಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಇದು ಮಾತ್ರವಲ್ಲದೆ ಹಲವಾರು ದೇವಾಲಯಗಳಿಗೆ ಭೇಟಿ ನೀಡಬಹುದಾಗಿದೆ.
ಈ ನಗರಗಳಲ್ಲಿ ನೀವು ತಿರುಪತಿ ಬಾಲಾಜಿ ದೇವಸ್ಥಾನ, ಮೀನಾಕ್ಷಿ ಅಮ್ಮನ ದೇವಸ್ಥಾನ, ರಾಮನಾಥಸ್ವಾಮಿ ದೇವಸ್ಥಾನ, ಕನ್ಯಾಕುಮಾರಿ ದೇವಸ್ಥಾನ, ವಿವೇಕಾನಂದ ರಾಕ್, ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಮತ್ತು ಮಲ್ಲಿಕಾರ್ಜುನ ಜ್ಯೋತಿರ್‌ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಪ್ರವಾಸ ಪ್ಯಾಕೇಜ್ ರೈಲು, ಬಸ್ ಪ್ರಯಾಣ, ಆಹಾರ, ಮಾರ್ಗದರ್ಶಿ, ವಿಮೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಪ್ಯಾಕೇಜ್ ದರ ಎಷ್ಟಿದೆ?
ದಕ್ಷಿಣ ಭಾರತಕ್ಕೆ ಭೇಟಿ ನೀಡಲು ಈ ಪ್ರವಾಸ ಪ್ಯಾಕೇಜ್ ಅನ್ನು ಬುಕ್ ಮಾಡಲು ಪ್ರತಿ ವ್ಯಕ್ತಿಗೆ (ಇಕಾನಮಿ ಕ್ಲಾಸ್‌ನಲ್ಲಿ ಆರಂಭಿಕ ವೆಚ್ಚ 22,750 ರೂಪಾಯಿ ಆಗಿದೆ. ಇದಲ್ಲದೇ, ಸ್ಟ್ಯಾಂಡರ್ಡ್ ಕ್ಲಾಸ್‌ಗೆ 36,100 ರೂಪಾಯಿ ಆಗಿದೆ. ಕಂಫರ್ಟ್ ಕ್ಲಾಸ್‌ಗೆ 39,500 ರೂಪಾಯಿ ಆಗಿದೆ.
ಇದರಲ್ಲಿ, ಒಟ್ಟು 790 ಸೀಟುಗಳಿಗೆ ಬುಕಿಂಗ್ ಅವಕಾಶವಿದೆ. ಈ ಪೈಕಿ ಸುಮಾರು 580 ಸೀಟುಗಳನ್ನು ಸ್ಲೀಪರ್ ಕ್ಲಾಸ್‌ಗೆ ಮತ್ತು 210 ಸೀಟ್‌ಗಳನ್ನು ಎಸಿ 3 ಗೆ ಮೀಸಲಿಡಲಾಗಿದೆ. ನೀವು ಐಆರ್‌ಸಿಟಿಸಿ ಟೂರಿಸಂನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಪ್ಯಾಕೇಜ್ ಅನ್ನು ಆನ್‌ಲೈನ್ ಮೂಲಕ ಬುಕ್ ಮಾಡಬಹುದು.
ಯಾವ ನಿಲ್ದಾಣಗಳಲ್ಲಿ ನೀವು ಹತ್ತಬಹುದು, ಇಳಿಯಬಹುದು?
ಐಆರ್‌ಸಿಟಿಸಿಯ ಈ ಪ್ಯಾಕೇಜ್ ಅಡಿಯಲ್ಲಿ, ನೀವು ಮಾಲ್ಡಾ ಟೌನ್, ನ್ಯೂ ಫರಕ್ಕಾ, ಪಾಕುರ್, ರಾಮ್‌ಪುರಹತ್, ದುಮ್ಕಾ, ಹಂಸ್‌ದಿಯಾ, ಭಾಗಲ್‌ಪುರ್, ಸುಲ್ತಂಗಂಜ್, ಜಮಾಲ್‌ಪುರ್, ಕಿಯುಲ್, ಜಮುಯಿ, ಝಾಝಾ, ಜಸಿದಿಹ್, ಜಮ್ತಾರಾ, ಚಿತ್ತರಂಜನ್, ಕುಲ್ಟಿ, ಧಬ್‌ಬಾದ್, ಬೊಕಾರೋ, ರಾಂಚಿ, ರೂರ್ಕೆಲಾ, ಜಾರ್ಸುಗುಡಾ ರೈಲ್ವೆ ನಿಲ್ದಾಣಗಳಲ್ಲಿ ಹತ್ತಬಹುದು, ಇಳಿಯಬಹುದು. ಇದರೊಂದಿಗೆ ಸಂಬಲ್‌ಪುರ ನಿಲ್ದಾಣಗಳಲ್ಲಿ ರೈಲನ್ನು ಹತ್ತಬಹುದು ಅಥವಾ ಇಳಿಯಬಹುದು. ಬುಕಿಂಗ್ ಪ್ರಕಾರ ನೀವು ನಿಲ್ದಾಣವನ್ನು ಆಯ್ಕೆ ಮಾಡಬಹುದು.


Click it and Unblock the Notifications