ಪುಸ್ತಕ ಮುದ್ರಣವು ಉದ್ಯಮವಾಗಿ ಅದ್ಯಾವುದೋ ಕಾಲವಾಗಿದೆ. ಓದುವ ಹವ್ಯಾಸ ಕಡಿಮೆ ಆಗುತ್ತಿದೆ ಎಂದು ಏನೇ ಹಳಹಳಿಸಿದರೂ ಪುಸ್ತಕ ಪ್ರಕಾಶನ, ಮುದ್ರಣ ಹಾಗೂ ಬರವಣಿಗೆಯನ್ನು ನೆಚ್ಚಿಕೊಂಡು ಇರುವವರು ಇದ್ದೇ ಇದ್ದಾರೆ. ಮತ್ತೂ ಕೆಲವರಿಗೆ ಬರವಣಿಗೆ ಪ್ಯಾಷನ್. ಏನಿದೆ ಈ ಉದ್ಯಮದಲ್ಲಿ ಎಂದು ತಿಳಿಯುವ ಪ್ರಯತ್ನವನ್ನು ಮಾಡಲಾಗಿದೆ.
ಅದಕ್ಕಾಗಿ ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಯೊಂದರ ಲೆಕ್ಕವನ್ನು ನೋಡಿಕೊಳ್ಳುವವರು ಹಾಗೂ ಯುವ ಬರಹಗಾರರೊಬ್ಬರನ್ನು ಕನ್ನಡ ಗುಡ್ ರಿಟರ್ನ್ಸ್ ನಿಂದ ಮಾತನಾಡಿಸಲಾಗಿದೆ. ಆಸಕ್ತರು. ಪುಸ್ತಕ ಮುದ್ರಣದಲ್ಲಿ ತೊಡಗಿಕೊಳ್ಳಬೇಕು ಅಂದುಕೊಳ್ಳುವವರಿಗೆ ಇದರಿಂದ ಸಹಾಯ ಆಗಬಹುದು.
ಭೈರಪ್ಪನವರ ಪುಸ್ತಕಗಳು ಟಾಪ್ ಸೆಲ್ಲರ್
ಕನ್ನಡ ಪುಸ್ತಕಗಳ ಮಾರಾಟದ ವಿಚಾರಕ್ಕೆ ಬಂದರೆ ಕಾದಂಬರಿಕಾರರಾದ ಭೈರಪ್ಪನವರ ಪುಸ್ತಕಗಳು ಟಾಪ್ ಸೆಲ್ಲರ್. ಆ ನಂತರದ ಸ್ಥಾನಗಳು ಪತ್ರಕರ್ತ- ಲೇಖಕ ರವಿ ಬೆಳಗೆರೆ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರದು. ಅತಿ ಹೆಚ್ಚು ಮಾರಾಟ ಆಗುವ ಪುಸ್ತಕಗಳಲ್ಲಿ ಇವರದು ಅಗ್ರ ಸ್ಥಾನ. ಈ ಪೈಕಿ ರವಿ ಬೆಳಗೆರೆ ಮತ್ತು ಪೂರ್ಣಚಂದ್ರ ತೇಜಸ್ವಿ ಪುಸ್ತಕಗಳು ಬರುವುದು ಸ್ವಂತ ಪ್ರಕಾಶನದಲ್ಲಿ. ಎಸ್. ಎಲ್. ಭೈರಪ್ಪನವರ ಪುಸ್ತಕಗಳನ್ನು ಸಾಹಿತ್ಯ ಭಂಡಾರದಿಂದ ಹೊರತರಲಾಗುತ್ತಿದೆ. ಯಾವುದೇ ಪುಸ್ತಕದ ಮೊದಲ ಮುದ್ರಣದ ವೆಚ್ಚ ಹೆಚ್ಚಾಗುತ್ತದೆ. ಅದಕ್ಕೆ ಕಾರಣ ಡಿಟಿಪಿ ಮಾಡುವ ವೆಚ್ಚ, ಮುಖಪುಟ ಹಾಗೂ ಬಿಡುಗಡೆಗೆ ಆಗುವ ಖರ್ಚು ಇತ್ಯಾದಿ ಸೇರಿರುತ್ತದೆ. ಆದರೆ ಎರಡು ಮತ್ತು ಆ ನಂತರದ ಮುದ್ರಣಕ್ಕೆ ತಗುಲುವ ವೆಚ್ಚ ಕಡಿಮೆ ಇರುತ್ತದೆ. ಇನ್ನು ಪುಸ್ತಕದ ವೆಚ್ಚವು ಯಾವ ಗುಣಮಟ್ಟದ ಕಾಗದವನ್ನು ಬಳಸಲಾಗುತ್ತದೆ, ಮುಖಪುಟವನ್ನು ಮಾಡಿದ ಕಲಾವಿದರ ಸಂಭಾವನೆ ಹಾಗೂ ಲೇಖಕರ ರಾಯಲ್ಟಿ ಮೇಲೆ ಅವಲಂಬಿತವಾಗಿರುತ್ತದೆ.
35ರಿಂದ 40 ಪರ್ಸೆಂಟ್ ಲಾಭ ಮಾರಾಟಗಾರರಿಗೆ
100 ಪುಟದ ಪುಸ್ತಕವೊಂದರ 1,000 ಪ್ರತಿಗೆ 24,000 ರುಪಾಯಿ ವೆಚ್ಚವಾಗುತ್ತದೆ. ಅದೇ 3 ಸಾವಿರ ಪ್ರತಿಗೆ 22,000 ಹಾಗೂ 5,000 ಪ್ರತಿಗೆ 19,000 ರುಪಾಯಿ ವೆಚ್ಚ ಆಗುತ್ತದೆ. ಅರ್ಥಾತ್ ಪುಸ್ತಕ ಮುದ್ರಣದ ಸಂಖ್ಯೆ ಹೆಚ್ಚಾದಷ್ಟೂ ವೆಚ್ಚ ತಗ್ಗುತ್ತದೆ. ಈಗೆಲ್ಲ 350ರಿಂದ 400 ಪುಟಗಳ ಪುಸ್ತಕಕ್ಕೆ 275ರಿಂದ 350 ರುಪಾಯಿ ಮಾರಾಟ ದರವನ್ನು ನಿಗದಿ ಮಾಡಲಾಗುತ್ತಿದೆ. ಉದಾಹರಣೆಗೆ ಒಂದು ಪುಸ್ತಕದ ಬೆಲೆ 400 ರುಪಾಯಿ ಇದ್ದರೆ, 35ರಿಂದ 40 ಪರ್ಸೆಂಟ್ ಲಾಭ ಮಾರಾಟಗಾರರಿಗೆ ಸಿಗುತ್ತದೆ ಅಂದರೆ 120 ರುಪಾಯಿಯಿಂದ 160 ರುಪಾಯಿ ಲಾಭ ದೊರೆಯುತ್ತದೆ. ಪುಸ್ತಕದ ಮಾರಾಟದ ದರ 100 ರುಪಾಯಿಯಾದರೆ, ಪುಸ್ತಕದ ವೆಚ್ಚ 22 ರುಪಾಯಿ, ಮಾರಾಟಗಾರರ ಲಾಭ 35ರಿಂದ 40 ರುಪಾಯಿ, ಪ್ರಕಾಶಕರಿಗೆ 38ರಿಂದ 43 ರುಪಾಯಿ ದೊರೆಯುತ್ತದೆ. ಇದು ಮೇಲ್ನೋಟಕ್ಕೆ ಸಿಗುವ ಅಂದಾಜು ಲೆಕ್ಕಾಚಾರ.
ಲೇಖಕರಿಗೆ 5ರಿಂದ 15% ರಾಯಲ್ಟಿ ಸಿಗಬಹುದು
ಆದರೆ, ಹೊಸ ಲೇಖಕರಿಗೆ ಸಿಗುವ ರಾಯಲ್ಟಿ ಬಗ್ಗೆ ಒಳ್ಳೆ ಮಾತು ಕೇಳಿಬರುವುದಿಲ್ಲ. ಪುಸ್ತಕದ ಲೇಖಕರಿಗೆ 5ರಿಂದ 15% ರಾಯಲ್ಟಿ ಸಿಗಬಹುದು. ಕೆಲವು ಪ್ರಕಾಶಕರು ಪುಸ್ತಕ ಮಾರಾಟದ ಹೊಣೆಯನ್ನು ಲೇಖಕರಿಗೇ ವಹಿಸುವುದೂ ಉಂಟು. ಲೇಖಕರು ತಾವು ಹೋದ ಕಾರ್ಯಕ್ರಮದಲ್ಲಿ ಪುಸ್ತಕಗಳ ಮಾರಾಟದ ಬಗ್ಗೆಯೂ ಒಂದಿಷ್ಟು ಪ್ರಚಾರ ಮಾಡಬೇಕಾಗುತ್ತದೆ. ಇನ್ನು ಮೂರು ತಿಂಗಳೊಳಗೆ ಪುಸ್ತಕ ಮಾರಾಟ ಆಗದಿದ್ದಲ್ಲಿ ಅಥವಾ ನಿರ್ದಿಷ್ಟ ಅವಧಿಯಲ್ಲಿ ಪುಸ್ತಕ ಮಾರಾಟ ಆಗದಿದ್ದಲ್ಲಿ ಮುದ್ರಕರಿಗೇ ಪುಸ್ತಕವನ್ನು ಹಿಂತಿರುಗಿಸಲಾಗುತ್ತದೆ. ಪುಸ್ತಕ ಮುದ್ರಣದ ವಿಚಾರಕ್ಕೆ ಬಂದರೂ ಲೈಬ್ರರಿಗಳಿಗಾಗಿಯೇ ಪುಸ್ತಕಗಳನ್ನು ಮುದ್ರಿಸುವವರ ವರ್ಗವೇ ಬೇರೆ ಇದೆ ಎಂಬ ಮಾತು ಕೇಳಿಬರುತ್ತದೆ. ಈ ವರ್ಗದವರು ಹೇಗೋ ಲಾಬಿ ಮಾಡಿ, ಲೈಬ್ರರಿಗಳಿಗೆ ತಮ್ಮ ಮುದ್ರಣದ ಪುಸ್ತಕಗಳನ್ನು ಮಾರಿ, ಅದರಲ್ಲಿ ಲಾಭ ಮಾಡಿಕೊಳ್ಳುತ್ತಾರೆ ಎಂಬುದು ಕೇಳಿಬರುವ ಮಾತು. ಆದರೆ ಪುಸ್ತಕ ಪ್ರಕಾಶನವನ್ನು ಗಂಭೀರವಾಗಿ ಪರಿಗಣಿಸಿ, ಗುಣಮಟ್ಟದ- ಮೌಲಿಕವಾದದ್ದನ್ನು ಮುದ್ರಿಸುವವರೂ ಇದ್ದಾರೆ.
ಪುಸ್ತಕ ಮುದ್ರಣ, ಮಾರಾಟ ಸವಾಲಿನದು
ಕಥೆ, ಕಾದಂಬರಿ ಈ ಪ್ರಕಾರಗಳನ್ನು ಹೊರತುಪಡಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ನೆರವಾಗುವ ಪುಸ್ತಕಗಳು, ಎಸ್ಸೆಸ್ಸೆಲ್ಸಿ- ಪಿಯುಸಿ ಡೈಜೆಸ್ಟ್... ಈ ಥರದ ಪುಸ್ತಕಗಳಿಗೆ ಬೇಡಿಕೆ ಹೆಚ್ಚು ಎಂಬ ಮಾತು ಕೇಳಿಬರುತ್ತದೆ. ಕನ್ನಡದ ಪುಸ್ತಕೋದ್ಯಮದ ಪ್ರಸಕ್ತ ಸನ್ನಿವೇಶದಲ್ಲಿ ಇ ಬುಕ್ ಅಥವಾ ಆಡಿಯೋ ಬುಕ್ ಹೆಚ್ಚು ಪ್ರಚಾರದಲ್ಲಿ ಇಲ್ಲ. ಆದರೆ ಆ ಕಡೆಗೆ ದಿಟ್ಟವಾದ ಹೆಜ್ಜೆ ಇಡಲು ತಯಾರಿ ನಡೆದಿದೆ. ಅದರಲ್ಲಿ ಒಂದು ಮುಖ್ಯ ಪ್ರಯತ್ನ ಕೆಲ ತಿಂಗಳ ಹಿಂದೆ ಆಗಿ, ತಕ್ಕ ಮಟ್ಟಿಗೆ ಯಶಸ್ವಿ ಸಹ ಆಗಿದೆ. ಆದರೂ ಕನ್ನಡ ಪುಸ್ತಕ ಮಾರಾಟ ಲಾಭದಾಯಕ ಅಲ್ಲ ಎಂಬ ಮಾತು ಕೇಳಿಬರುತ್ತದೆ. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಸತ್ಯ ಅಲ್ಲ ಎಂಬುದು ಕೂಡ ಚರ್ಚೆಯಲ್ಲಿ ಬಂದುಹೋಗುವ ಮಾತು. ಪುಸ್ತಕ ಮುದ್ರಣ, ಮಾರಾಟ ಸವಾಲಿನದು ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಓದುಗರಿಗೆ ತಲುಪಿಸುವುದಕ್ಕೆ ಪರಿಣಾಮಕಾರಿಯಾದ ಮಾರಾಟದ ನೆಟ್ ವರ್ಕ್ ಇರಬೇಕು. ಅದು ಬೆಳೆಸಿಕೊಳ್ಳುವುದು ವರ್ಷಗಳ- ದಶಕಗಳ ಶ್ರಮ.


Click it and Unblock the Notifications