ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೊಸದಾಗಿ ಯೋಜನೆಯೊಂದನ್ನು ಜಾರಿ ಮಾಡಿದೆ. ಎಲ್‌ಐಸಿಯ ಈ ಹೊಸ ಯೋಜನೆ ಧನ ವೃದ್ಧಿಯು ಉಳಿತಾಯ ಹಾಗೂ ಹೂಡಿಕೆ ಪ್ರಯೋಜನವನ್ನು ನೀಡುತ್ತದೆ. ಈ ಸಮಗ್ರವಾದ ಯೋಜನೆಯು ಹೂಡಿಕೆದಾರರಿಗೆ ವಿಮಾ ರಕ್ಷಣೆಯನ್ನು ಆಕರ್ಷಕ ಹೂಡಿಕೆ ಆಯ್ಕೆಯೊಂದಿಗೆ ನೀಡುತ್ತದೆ. ಹಾಗೆಯೇ ತಮ್ಮ ಆರ್ಥಿಕ ಭವಿಷ್ಯವನ್ನು ಕೂಡಾ ಭದ್ರಪಡಿಸುವ ಯೋಜನೆ ಇದಾಗಿದೆ.
ಇತ್ತೀಚೆಗೆ ರೆಗ್ಯೂಲೇಟರಿ ಫೈಲಿಂಗ್‌ನಲ್ಲಿ ವಿಮಾದಾರರು ಈ ವೈಯಕ್ತಿಕ ಉಳಿತಾಯ ಯೋಜನೆಯನ್ನು ನಾನ್‌ಲಿಂಕ್ಡ್ - ನಾನ್ ಪಾರ್ಟಿಸಿಪೇಟಿಂಗ್ ಎಂದು ಉಲ್ಲೇಖ ಮಾಡಲಾಗಿದೆ. ಹಣಕಾಸು ಸುರಕ್ಷತೆಯನ್ನು ಇಡೀ ಕುಟುಂಬಕ್ಕೆ ನೀಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಮೆಚ್ಯೂರಿಟಿ ವೇಳೆ ಭಾರೀ ಪ್ರಮಾಣದ ಮೊತ್ತವು ಕೂಡಾ ಈ ಯೋಜನೆಯಲ್ಲಿ ಲಭ್ಯವಾಗುತ್ತದೆ. ಇದು ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

ಎಲ್‌ಐಸಿ ಧನ ವೃದ್ಧಿ ಯೋಜನೆ ಎಂದರೇನು?
ಎಲ್‌ಐಸಿಯ ಧನ ವೃದ್ಧಿ ಯೋಜನೆಯು ಎಂಡೋಮೆಂಟ್ ವಿಮಾ ಪಾಲಿಸಿಯಾಗಿದೆ. ಪಾಲಿಸಿಯ ಆರಂಭದಲ್ಲಿ ನಾವು ಒಂದೇ ಪ್ರೀಮಿಯಂನಲ್ಲಿ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಅದಾದ ಬಳಿಕ ನಿಗದಿತ ಪ್ರಮಾಣದ ರಿಟರ್ನ್ ಮೆಚ್ಯೂರಿಟಿ ವೇಳೆ ಲಭ್ಯವಾಗುತ್ತದೆ. ಇದು ಸಿಂಗಲ್ ಪ್ರೀಮಿಯಂ, ನಾನ್‌ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ವೈಯಕ್ತಿಕ ಉಳಿತಾಯ, ಜೀವ ವಿಮಾ ಪಾಲಿಸಿಯಾಗಿದೆ.
ಈ ಯೋಜನೆಯು ವಿಮಾ ರಕ್ಷಣೆಯೊಂದಿಗೆ, ಮೊತ್ತವನ್ನು ಉಳಿತಾಯ ಮಾಡುವ ಪ್ರಯೋಜನವನ್ನು ಕೂಡಾ ನೀಡುತ್ತದೆ. ಪ್ರತಿ 1000 ರೂಪಾಯಿಗೆ 75 ರೂಪಾಯಿ ಹೆಚ್ಚುವರಿ ಗ್ಯಾರಂಟಿ ಮೊತ್ತವನ್ನು ಧನ ವೃದ್ಧಿ ಯೋಜನೆಯಲ್ಲಿ ಪಡೆಯಬಹುದಾಗಿದೆ. ಪಾಲಿಸಿದಾರನು ಪಾಲಿಸಿಯ ಅವಧಿಯ ಮುಕ್ತಾಯದಲ್ಲಿ ಆದಾಯವನ್ನು ಪಡೆಯಬಹುದು ಅಥವಾ ಈ ಯೋಜನೆಯಡಿಯಲ್ಲಿ ಪಾಲಿಸಿದಾರನ ಮರಣದ ಸಂದರ್ಭದಲ್ಲಿ ನಾಮಿನಿಯು ಆದಾಯವನ್ನು ಪಡೆಯಬಹುದು. ಆದರೆ ಪಾಲಿಸಿಯ ಪ್ರಾರಂಭದಲ್ಲೇ ಒಟ್ಟು ಪಾಲಿಸಿ ಮೊತ್ತವನ್ನು ನಾವು ಹೂಡಿಕೆ ಮಾಡಬೇಕಾಗುತ್ತದೆ.
ಯಾವೆಲ್ಲ ಪ್ರಯೋಜನಗಳು ಇದೆ ನೋಡಿ
ಮೆಚ್ಯೂರಿಟಿ ಬೆನಿಫಿಟ್: ಪಾಲಿಸಿದಾರರು ಮೆಚ್ಯೂರಿಟಿ ದಿನಾಂಕದವರೆಗೆ ಬದುಕಿದ್ದರೆ, "ಮೂಲ ವಿಮಾ ಮೊತ್ತ" ಮತ್ತು ನಿಗದಿತ ಗ್ಯಾರಂಟಿ ಬೋನಸ್ ಸೇರ್ಪಡೆ ಮಾಡಿ ಮೆಚ್ಯೂರಿಟಿ ಬೆನಿಫಿಟ್ ಅನ್ನು ಪಾವತಿ ಮಾಡಲಾಗುತ್ತದೆ.
ಡೆತ್ ಬೆನಿಫಿಟ್: ಡೆತ್ ಬೆನಿಫಿಟ್‌ನಲ್ಲಿ ರಿಸ್ಕ್‌ನ ಪ್ರಾರಂಭ ಮತ್ತು ರಿಸ್ಕ್ ಪ್ರಾರಂಭಕ್ಕೂ ಮುಂಚಿನ ಅವಧಿ ಇದೆ. ರಿಸ್ಕ್ ಅವಧಿ ಪ್ರಾರಂಭದ ನಂತರ ಪಾಲಿಸಿಯ ಅವಧಿಯೊಳಗೆ ವಿಮಾದಾರನು ಮರಣಹೊಂದಿದರೆ ಪಾಲಿಸಿಯ ನಾಮಿನಿಯು ಡೆತ್ ಬೆನಿಫಿಟ್ ಅನ್ನು ಪಡೆಯಬಹುದಾಗಿದೆ. ಈ ರಿಸ್ಕ್ ಬೆನಿಫಿಟ್‌ಗೂ ಮುನ್ನ ಪಾಲಿಸಿದಾರರು ಸಾವನ್ನಪ್ಪಿದರೆ, ತೆರಿಗೆಗಳು ಮತ್ತು ಯಾವುದೇ ಹೆಚ್ಚುವರಿ ಪ್ರೀಮಿಯಂ ಅನ್ನು ಹೊರತುಪಡಿಸಿ ಪಾವತಿಸಿದ ಏಕ ಪ್ರೀಮಿಯಂ ಅನ್ನು ಬಡ್ಡಿಯಿಲ್ಲದೆ ಪಾಲಿಸಿಯ ನಾಮಿನಿಗೆ ನೀಡಲಾಗುತ್ತದೆ.
ಯೋಜನೆಯ ಅರ್ಹತೆ ಎಷ್ಟಿದೆ?
ಆಯ್ಕೆ ಮಾಡಿದ ಪಾಲಿಸಿ ಅವಧಿಯನ್ನು ಅವಲಂಬಿಸಿ ಯೋಜನೆಯ ಪ್ರವೇಶ ಅವಧಿಯು 90 ದಿನಗಳಿಂದ 8 ವರ್ಷಗಳವರೆಗೆ ಇರುತ್ತದೆ. ಇನ್ನೊಂದೆಡೆ ಆಯ್ಕೆ ಮಾಡಿದ ಅವಧಿಯ ಆಧಾರದಲ್ಲಿ ಗರಿಷ್ಠ ವಯಸ್ಸು 32 ವರ್ಷದಿಂದ 60 ವರ್ಷಗಳವರೆಗೆ ಇರುತ್ತದೆ. ಎಲ್‌ಐಸಿಯ ಈ ಯೋಜನೆಯಲ್ಲಿ ಕನಿಷ್ಠ ಮೂಲ ವಿಮಾ ಮೊತ್ತ 1.25 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇದನ್ನು 5,000 ರೂಪಾಯಿಯ ಗುಣಕಗಳಲ್ಲಿ ಹೆಚ್ಚಿಸುವ ಆಯ್ಕೆಯನ್ನು ಹೊಂದಿದೆ.
ಸಾಲ ಸೌಲಭ್ಯವೂ ಇದೆ!
ಪ್ರಸ್ರುತ ಎಫ್‌ಡಿಯಾಗಲಿ ಅಥವಾ ಎಲ್‌ಐಸಿಯ ಹಲವಾರು ಯೋಜನೆಗಳು ಆಗಲಿ ಅದರಡಿಯಲ್ಲಿ ನಾವು ಸಾಲ ಪಡೆಯುವ ಆಯ್ಕೆ ಇದೆ. ಪಾಲಿಸಿ ಆರಂಭವಾದ ಮೂರು ತಿಂಗಳ ನಂತರದ ಅವಧಿಯಿಂದ ನಾವು ಯಾವುದೇ ಸಮಯದಲ್ಲಿಯೂ ವಿಮೆಯಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಯೋಜನೆಯನ್ನು ಖರೀದಿಸುವುದು ಹೇಗೆ?
ಈ ಪಾಲಿಸಿಯನ್ನು ನಾವು ಪ್ರತಿನಿಧಿಗಳು ಅಥವಾ ಇತರ ಮಧ್ಯವರ್ತಿಗಳ ಮೂಲಕ ಆಫ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು. ಉದಾಹರಣೆಗೆ ಪಾಯಿಂಟ್ ಆಫ್ ಸೇಲ್ಸ್ ಪರ್ಸನ್ಸ್-ಲೈಫ್ ಇನ್ಶುರೆನ್ಸ್ (POSP-LI) ಅಥವಾ ಸಾಮಾನ್ಯ ಸಾರ್ವಜನಿಕ ಸೇವಾ ಕೇಂದ್ರಗಳು-SPV, ಅಥವಾ ಆನ್‌ಲೈನ್‌ನಲ್ಲಿ www.licindia.in ವೆಬ್‌ಸೈಟ್ ಮೂಲಕವೂ ಪಡೆಯಬಹುದು.


Click it and Unblock the Notifications