ನಮಗೆ ವಯಸ್ಸಾದಾಗ ನಮ್ಮ ಸಹಾಯಕ್ಕೆ ಬರುವುದು ಹಣವಲ್ಲದೆ ಮತ್ತೇನು?. ಪ್ರಸ್ತುತ ಉದ್ಯೋಗ ಮಾಡುತ್ತೇವೆ, ಖರ್ಚು ನಿಭಾಯಿಸುತ್ತೇವೆ. ಆದರೆ ವಯಸ್ಸಾದಾಗ ಏನು ಮಾಡುವುದು. ಆದ್ದರಿಂದಾಗಿ ನಾವು ಈಗಲೇ ನಮ್ಮ ನಿವೃತ್ತಿಗಾಗಿ ಯೋಜನೆಯನ್ನು ರೂಪಿಸಿಕೊಳ್ಳುವುದು, ಹಣವನ್ನು ಉಳಿತಾಯ ಮಾಡುವುದು ಮುಖ್ಯವಾಗುತ್ತದೆ. ಪ್ರಸ್ತುತ ಇಂತಹ ಹಲವಾರು ಯೋಜನೆಗಳು ಇದೆ. ಇಂತಹ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿ ವೃದ್ದಾಪ್ಯದಲ್ಲಿ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.
ಇಂತಹ ಪಿಂಚಣಿ ಯೋಜನೆಗೆ ಹೂಡಿಕೆ ಮಾಡುವ ಯೋಜನೆ ನೀವು ರೂಪಿಸಿದ್ದರೆ, ನಿಮಗೆ ಉತ್ತಮ ಆಯ್ಕೆ ಎಲ್‌ಐಸಿಯ ಸರಳ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಜೀವನದುದ್ದಕ್ಕೂ ಪಿಂಚಣಿಯ ಸಹಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ಈ ಯೋಜನೆಯ ವಿಶೇಷತೆ ಏನೆಂದರೆ, ನೀವು ಪಿಂಚಣಿ ಪಡೆಯಲು 60 ವರ್ಷದವರೆಗೆ ಕಾಯಬೇಕಾಗಿಲ್ಲ. 40 ವರ್ಷದಲ್ಲೇ ನಿಮಗೆ ಪಿಂಚಣಿ ಲಭ್ಯವಾಗುತ್ತದೆ. ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಸರಳ ಪಿಂಚಣಿ ಯೋಜನೆಯ ಮಾಹಿತಿ
ಸರಳ ಪಿಂಚಣಿ ಯೋಜನೆ ಅನ್ಯೂಟಿ ಯೋಜನೆಯಾಗಿದೆ. ಪಾಲಿಸಿಯನ್ನು ಖರೀದಿ ಮಾಡಿದ ಬಳಿಕ ಶೀಘ್ರವೇ ನಿಮಗೆ ಪಿಂಚಣಿ ಲಭ್ಯವಾಗುವ ಯೋಜನೆ ಇದಾಗಿದೆ. ಅದರೆ ಈ ಯೋಜನೆಯನ್ನು ನೀವು ಖರೀದಿ ಮಾಡುವಾಗ ಒಂದು ಬಾರಿಗೆ ಅಧಿಕ ಮೊತ್ತವನ್ನು ಪ್ರೀಮಿಯಂ ಆಗಿ ಪಾವತಿಸಬೇಕಾಗುತ್ತದೆ. ಪ್ರೀಮಿಯಂ ಅನ್ನು ಪಾವತಿ ಮಾಡಿದ ಬಳಿಕವೇ ನಿಮಗೆ ಪಿಂಚಣಿ ಲಭ್ಯತೆ ಆರಂಭವಾಗುತ್ತದೆ. ಒಮ್ಮೆ ಪಿಂಚಣಿ ಆರಂಭವಾದರೆ ಜೀವನ ಪೂರ್ತಿ ಪಿಂಚಣಿ ಇರುತ್ತದೆ. ಪಾಲಿಸಿದಾರರು ಪಾಲಿಸಿ ಅವಧಿಯಲ್ಲಿ ಸಾವನ್ನಪ್ಪಿದರೆ ನಾಮಿನಿಗೆ ಡೆಪಾಸಿಟ್ ಮೊತ್ತ ಲಭ್ಯವಾಗಲಿದೆ.
ಸಿಂಗಲ್ ಲೈಫ್ ಮತ್ತು ಜಾಯಿಂಟ್ ಲೈಫ್ ಪ್ಲ್ಯಾನ್
ಸರಳ ಪಿಂಚಣಿ ಯೋಜನೆಯ ಪ್ರಯೋಜನವನ್ನು ಎರಡು ರೀತಿಯಲ್ಲಿ ತೆಗೆದುಕೊಳ್ಳಬಹುದು. ಮೊದಲನೆಯದ್ದು ಸಿಂಗಲ್ ಲೈಫ್ ಮತ್ತು ಎರಡನೇ ಜಾಯಿಂಟ್ ಲೈಫ್ ಪ್ಲ್ಯಾನ್ ಆಗಿದೆ. ಸಿಂಗಲ್ ಲೈಫ್ ಪಾಲಿಸಿಯಲ್ಲಿ ಪಾಲಿಸಿದಾರರು ಬದುಕಿರುವವರೆಗೂ ಪಿಂಚಣಿ ಪಡೆಯುವುದು ಮುಂದುವರಿಯುತ್ತದೆ. ಮರಣದ ನಂತರ, ಹೂಡಿಕೆಯ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
ಎಲ್‌ಐಸಿಯ ಸರಳ ಜೀವನ ಪಾಲಿಸಿಯ ಜಾಯಿಂಟ್ ಲೈಫ್ ಪ್ಲ್ಯಾನ್‌ನಲ್ಲಿ ಗಂಡ ಮತ್ತು ಹೆಂಡತಿ ಇಬ್ಬರು ಒಳಗೊಂಡಿರುತ್ತಾರೆ. ಇದರಲ್ಲಿ ಪ್ರಾಥಮಿಕ ಪಾಲಿಸಿದಾರರಿಗೆ ಬದುಕಿರುವವರೆಗೆ ಪಿಂಚಣಿ ನೀಡಲಾಗುತ್ತದೆ. ಮರಣದ ನಂತರ, ಅವರ ಬಾಳ ಸಂಗಾತಿಗೆ ಪಿಂಚಣಿಯ ಪ್ರಯೋಜನ ಲಭ್ಯವಾಗುತ್ತದೆ. ಇಬ್ಬರ ಮರಣದ ನಂತರ, ಠೇವಣಿ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.
ಕನಿಷ್ಠ 1000 ರೂಪಾಯಿ ಪಿಂಚಣಿ, ಗರಿಷ್ಠವೆಷ್ಟು?
ಸರಳ ಪಿಂಚಣಿ ಯೋಜನೆ ಅಡಿಯಲ್ಲಿ, ನೀವು ಮಾಸಿಕ 1000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಆದರೆ ಗರಿಷ್ಠ ಪಿಂಚಣಿಗೆ ಯಾವುದೇ ಮಿತಿಯಿಲ್ಲ. ಈ ಪಿಂಚಣಿಯು ನಿಮ್ಮ ಹೂಡಿಕೆಯ ಮೊತ್ತವನ್ನು ಅವಲಂಬಿಸಿರುತ್ತದೆ. ಇದರಲ್ಲಿ ನಾಲ್ಕು ಪಿಂಚಣಿ ಆಯ್ಕೆಗಳು ಇದೆ. ಪಿಂಚಣಿಗಾಗಿ, ನೀವು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಪಿಂಚಣಿಗಳ ಆಯ್ಕೆಯನ್ನು ಮಾಡಬಹುದಾಗಿದೆ.
ನೀವು ಪಿಂಚಣಿಗಾಗಿ ಮಾಡಿದ ಆಯ್ಕೆಗೆ ಅನುಗುಣವಾಗಿ ನಿಮಗೆ ಪಿಂಚಣಿ ನೀಡಲಾಗುತ್ತದೆ. ಎಲ್‌ಐಸಿಯ ವೆಬ್‌ಸೈಟ್ ಪ್ರಕಾರ ನೀವು 60 ನೇ ವಯಸ್ಸಿನಲ್ಲಿ 10 ಲಕ್ಷ ರೂಪಾಯಿ ಹೂಡಿಕೆಯನ್ನು ಮಾಡಿದರೆ, ನೀವು ವಾರ್ಷಿಕವಾಗಿ 58950 ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ಜಾಯಿಂಟ್ ಲೈಫ್ ಪ್ಲ್ಯಾನ್ ಯೋಜನೆ ತೆಗೆದುಕೊಳ್ಳುವುದರಿಂದ ವಾರ್ಷಿಕವಾಗಿ 58,250 ರೂಪಾಯಿ ಪಡೆಯಬಹುದು. ನೀವು ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು.
60 ವರ್ಷದವರೆಗೆ ಕಾಯಬೇಕಾಗಿಲ್ಲ!
ಈ ಯೋಜನೆಯಲ್ಲಿ, ನೀವು ಪಿಂಚಣಿ ಪಡೆಯಲು 60 ವರ್ಷ ವಯಸ್ಸಿನವರೆಗೆ ಕಾಯಬೇಕಾಗಿಲ್ಲ. ನೀವು 40 ವರ್ಷದಿಂದ 80 ವರ್ಷಗಳವರೆಗೆ ಯಾವುದೇ ಸಮಯದಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆಯ ಜೊತೆಗೆ ಪಿಂಚಣಿ ಲಾಭವನ್ನು ಪಡೆದುಕೊಳ್ಳಬಹುದು. ನೀವು 40 ನೇ ವಯಸ್ಸಿನಲ್ಲಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅದೇ ವಯಸ್ಸಿನಿಂದ ನೀವು ಪಿಂಚಣಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
ಸಾಲ ಪ್ರಯೋಜನ ಕೂಡಾ ಇದೆ!
ಎಲ್‌ಐಸಿಯ ಈ ಯೋಜನೆಯಲ್ಲಿ ನೀವು ಸಾಲದ ಸೌಲಭ್ಯವನ್ನು ಸಹ ಪಡೆಯುತ್ತೀರಿ. ಯೋಜನೆಯನ್ನು ಖರೀದಿಸಿದ 6 ತಿಂಗಳ ನಂತರ ನೀವು ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ತುರ್ತು ಪರಿಸ್ಥಿತಿಯಲ್ಲಿ, ನೀವು ಪಾಲಿಸಿಯನ್ನು ಸರೆಂಡರ್ ಮಾಡಲು ಬಯಸಿದರೆ, ಆರು ತಿಂಗಳ ನಂತರ ನೀವು ಸರೆಂಡರ್ ಮಾಡಬಹುದು.


Click it and Unblock the Notifications